ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್‌ ಎಲ್‌ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.

ಈಗ ಭಾರತೀಯ ಭಾಷೆಗಳಲ್ಲೇ ಜಾಲತಾಣದ ವಿಳಾಸಗಳನ್ನು ನೋಂದಾಯಿಸಬಹುದು. ಇದಕ್ಕೆ ನೀವು    https://www.registry.in/Accredited_Registrars#idn_registrars  ಈ ಜಾಲತಾಣಕ್ಕೆ ಹೋಗಿ ನಿಮಗೆ ಬೇಕಾದ ಡೊಮೈನ್‌ ರಿಜಿಸ್ಟ್ರಾರ್‌ ನ್ನು ಆಯ್ಕೆ ಮಾಡಿಕೊಳ್ಳಬಹುದು. ಇತರೆ ಜಾಲತಾಣಗಳನ್ನು ನೋಂದಣಿ ಮಾಡಿಸುವಂತೆ ಇಲ್ಲಿಯೂ ನಿಮ್ಮ ಆಯ್ಕೆಯನ್ನು ಸಲ್ಲಿಸಿ, ಅದು ಲಭ್ಯವಿದ್ದರೆ ಕೂಡಲೇ ನೋಂದಣಿ ಮಾಡಿಸಬಹುದು.

ಇಂಗ್ಲಿಶೇತರ ಭಾಷೆಗಳಲ್ಲೂ ಜಾಲತಾಣ ವಿಳಾಸ ಇರಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗಿದೆ. ಹಾಗೆಯೇ ಕನ್ನಡ ಲಿಪಿಯ ಜಾಲತಾಣಗಳೂ ಸಿಗುತ್ತವೆ. ಸದ್ಯಕ್ಕೆ ಡಾಟ್‌ ಭಾರತ (.ಭಾರತ) ಎಂಬ ಟಾಪ್‌ ಲೆವೆಲ್‌ಡೊಮೈನ್‌ ಇದೆ. ಮುಂದಿನ ದಿನಗಳಲ್ಲಿ ಡಾಟ್‌ ಕರ್ನಾಟಕ (.ಕರ್ನಾಟಕ) ಕೂಡಾ ಸಿಗಲಿದೆ.

ಕರ್ನಾಟಕ ಸರ್ಕಾರವೂ ಕನ್ನಡ ಜಾಲತಾಣ ವಿಳಾಸಗಳನ್ನು ಬಳಸಬೇಕು, ತನ್ಮೂಲಕ ಕನ್ನಡದ ಹೆಮ್ಮೆಯನ್ನು ಇನ್ನಷ್ಟು ಹಬ್ಬಿಸಬೇಕು ಅನ್ನೋದೇ ನನ್ನ ಮಹದಾಸೆಯೂ ಆಗಿದೆ. ಇದಕ್ಕಾಗಿ ನನ್ನ ಪ್ರಯತ್ನಗಳನ್ನು ಈ ಕೂಡಲೇ ಆರಂಭಿಸಿದ್ದೇನೆ. ಮಾನ್ಯ ಮುಖ್ಯಮಂತ್ರಿಯವರಿಗೆ ಈಗಾಗಲೇ ಈ ಕುರಿತು ಸವಿವರವಾದ ಪತ್ರವನ್ನೂ ಬರೆದು ಕೋರಿದ್ದೇನೆ. 

ಇದೂ ಅಲ್ಲದೆ ಜಾಲತಾಣಗಳ ವಿಳಾಸಗಳು ಕನ್ನಡದಲ್ಲಿ ಬಂದಮೇಲೆ ಕನ್ನಡದಲ್ಲೇ ಈಮೈಲ್‌ (ಮಿಂಚಂಚೆ) ವಿಳಾಸಗಳನ್ನೂ ರೂಪಿಸಿ ಅವನ್ನೇ ಬಳಸಬೇಕು ಎಂಬುದೂ ನನ್ನ ಆಗ್ರಹವಾಗಿದೆ. ಕೇವಲ ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ಮಾತ್ರವಲ್ಲ, ಸಮಸ್ತ ಕನ್ನಡಿಗರೂ ಕನ್ನಡ ಮಿಂಚಂಚೆಯನ್ನೇ ಬಳಸಬೇಕು, ಕನ್ನಡ ಲಿಪಿಯ ಹಿರಿಮೆಯನ್ನು ಎಲ್ಲೆಡೆ ಸಾರಬೇಕು ಎಂಬುದು ನನ್ನ ಇನ್ನೊಂದು ಆಸೆಯಾಗಿದೆ. ನಾನು ಈಗಾಗಲೇ ಪರೀಕ್ಷಾರ್ಥ ಒಂದು ಕನ್ನಡ ಲಿಪಿಯ ಮಿಂಚಂಚೆಯನ್ನು ರಚಿಸಿಕೊಂಡು ಅದನ್ನು ಯಶಸ್ವಿಯಾಗಿ ಬಳಸಿದ್ದೇನೆ (ಬೇಳೂರುಸುದರ್ಶನ@ಬೇಳೂರುಸುದರ್ಶನ.ಭಾರತ).ಈ ಬಗ್ಗೆಯೂ ನನ್ನ ಪ್ರಯತ್ನ ಆರಂಭವಾಗಿದೆ.

ಕನ್ನಡದ ಕಂಪನ್ನು ಬಿಂಬಿಸುವ ಈ ಜಾಲತಾಣ ವಿಳಾಸಗಳನ್ನೇ ಬಳಸೋಣ.

ಕನ್ನಡ ಮಾತೆಗೆ ಜಯವಾಗಲಿ!

ಜೈ ಭುವನೇಶ್ವರಿ ದೇವಿ!

– ಬೇಳೂರು ಸುದರ್ಶನ

Share.

1 Comment

  1. ಬಹಳ ಒಳ್ಳೆಯ ಪ್ರಯತ್ನ . ಸುದರ್ಶನ್ . ಈ ನಿಮ್ಮ ಎಲ್ಲಾ ಪ್ರಯೋಗಗಳು ಯಶಸ್ವಿಯಾಗಲೆಂದು ಹಾರೈಸುವ – ಮೋಹನ್

Leave A Reply Cancel Reply
Exit mobile version