ಶಬ್ದಗಳ ನಡುವೆದ್ದ ಮೌನ ಬೆಟ್ಟದ ಮೇಲೆ
ಕುಳಿತ ಹುಡುಗಿಯ ಗುರುತು ಇದೆಯೆ ನಿಮಗೆ ?
ಕೊಟ್ಟ ಹತ್ತೇ ಬೆರಳು ನೂರಾರು ಮುದ್ರೆಗಳು
ಅವುಚಿಕೊಳ್ಳುವ ಭಾವ ಬರದೆ ನಿಮಗೆ ?

ಕಣ್ಣೋಟ ಹರಿದಷ್ಟು ನೆಲ ಸಮುದ್ರದ ಹೊರಳು
ಇಲ್ಲಿರುವ ಕೊರಳದನಿ ಗೊತ್ತೆ ನಿಮಗೆ ?
ಮರಳಾಗಿ ಜಾರುತಿವೆ ನೆನಪು ನಕ್ಷತ್ರಗಳು
ನಿಶ್ಯಬ್ದಗಳ ಮೋಹವಿತ್ತೆ ನಿಮಗೆ ?

ಒಂದು ದಿನ ನಾನೂ ನಿಮ್ಮಂತೆ ಅಲೆದಾಡಿ
ಬಿದ್ದಿದ್ದೆ ಬಯಲಿನಲಿ ಭಗ್ನವಾಗಿ.
ಎತ್ತಿ ಕರೆದಳು ಅವಳು ಹಣೆಗೆ ಮುತ್ತಿಟ್ಟಳು
ಶಬ್ದವಿಲ್ಲದ ಗಳಿಗೆ – ಇತ್ತ ನಿಮಗೆ ?

ಈ ಹಾಳೆ ಈ ಪೆನ್ನು ಬರೆವ ಗೆರೆಗಳ ಸುತ್ತ
ಮೌನ ಕಟ್ಟಿದೆ ಭವ್ಯ ದಿವ್ಯ ಹುತ್ತ.
ಒಳಗೆ ಬರೊ ಬಿಸಿಗಾಳಿ ತಂಪಾಗಿ ಶಬ್ದಗಳ
ತೇವಾಂಶ ಹೆಚ್ಚಿಸಿದೆ ಬೇಕ ನಿಮಗೆ ?

ನನ್ನೆರಡು ಬೆರಳುಗಳು ಬರೆವುದಿಷ್ಟೇ ಹಾಡು
ಉಳಿದೆಂಟು ಕಾಯುತಿವೆ ಮೂಕವಾಗಿ
ಅವಳ ಅಂಗೈಯಲ್ಲಿ ಹಿತವಾಗಿ ಅಡಗಿದರೆ
ಎಂಥ ಸುಖ ಮೋಕ್ಷವಿದೆ ಉಂಟ ನಿಮಗೆ ?

ನನಗೆ – ನಿಮಗಿರುವಷ್ಟು ಅಂತರದ ನಡುವೆಯೇ
ಕೂತಿರುವ ಸತ್ಯಗಳು ಅವಳ ಆಸ್ತಿ.
ಮಾತು ಚಿಲಿಪಿಪಿಯಾಗಿ ಚೆಲ್ಲಿಹೋದರು ಕೂಡ
ನಷ್ಟ ಒಂದಿನಿತಿಲ್ಲ – ಅವಳು ನನಗೆ

Share.
Leave A Reply Cancel Reply
Exit mobile version