ಕರುಣಾಳು, ಸೂರ್ಯನ ಬೆಳಕೆ, ಬಾ ನಮ್ಮ ಕೋಣೆಯೊಳಗೆ

ದೀಪಾವಳಿಯಂದು ಪಟಾಕಿ ಸುಡುವುದರಿಂದ ಎಷ್ಟು ಪ್ರಯೋಜನವಿದೆ ಎಂದು ನೀವು ಯಾರಾದರೂ ಯೋಚಿಸಿರಬಹುದು. ನನಗಂತೂ ಹೀಗನಿಸುತ್ತದೆ:
ಪಟಾಕಿ ಸುಡುವುದರಿಂದ ಅನಿಲ, ಘನ ಮತ್ತು ಶಬ್ದಮಾಲಿನ್ಯ ಉಂಟಾಗುತ್ತದೆ. ಅಲ್ಲದೆ ಪ್ರಖರ ಬೆಳಕಿನ ದುರುಪಯೋಗವೂ ಆಗುತ್ತದೆ. ಢಂ ಢಮಾರ್ ಶಬ್ದವು ಕಿವಿಗೆ ಎಷ್ಟು ಸುಖ ಕೊಡುತ್ತದೆಯೋ, ನನಗಂತೂ ಅನುಮಾನ. ಅದರಲ್ಲೂ, ನಗರಗಳಲ್ಲಿ ಬದುಕುವವರಿಗೆ ದಿನವೂ ವಾಹನಗಳ ಗಲಾಟೆಯೇ ನಿತ್ಯದ ಸಂಗೀತವಾಗಿರುವಾಗ, ಪಟಾಕಿಯಿಂದ ಹೆಚ್ಚುವರಿ ಸುಖ ಸಿಗುವುದೆ ಎಂಬ ಅನುಮಾನ ಕಾಡುತ್ತದೆ. ಆದರೆ ಹೊಸ್ತಿಲಲ್ಲಿ, ಕಾಂಪೌಂಡಿನ ಮೇಲೆ ಹಚ್ಚಿಡುವ ಹಣತೆಗಳು, ಆಕಾಶ ಬುಟ್ಟಿಗಳು ಮಾತ್ರ ನಿಮ್ಮ ಮನಸ್ಸಿಗೆ ಮುದ ನೀಡುತ್ತವೆ; ದೀಪಾವಳಿಯೆಂದರೆ ಬೆಳಕನ್ನು ವೈಭವೀಕರಿಸುವುದಲ್ಲ; ಬೆಳಕನ್ನು ಪ್ರೀತಿಸುವುದು. ಪಟಾಕಿ ಸಿಡಿದಾಗ ಕ್ಷಣಮಾತ್ರ ಕಾಣುವ ಮಿನುಗು ನಕ್ಷತ್ರಗಳನ್ನು ನಗರದ ಬೆಳಕಿಲ್ಲದ ಕೃಷ್ಣಪಕ್ಷದಲ್ಲಿ ಎಷ್ಟು ಹೊತ್ತು ಬೇಕಾದರೂ ನೋಡಬಹುದಲ್ಲವೆ?
ಇಂಥ ಬೆಳಕಿನ ದುರುಪಯೋಗ ಮತ್ತು ಬೆಳಕಿನ ಮಾಲಿನ್ಯದ ಬಗ್ಗೆ ಐದು ವರ್ಷಗಳ ಹಿಂದೆಯೇ ಒಂದು ಲೇಖನ ಬರೆದೆ. ಒಂದಷ್ಟು ಪ್ರತಿಕ್ರಿಯೆಗಳು ಬಂದವು; ಎಲ್ಲೋ ಒಂದಷ್ಟು ಓದುಗರು ಹೌದಲ್ಲ ಎಂದರು. ಅಲ್ಲಿಗೆ ಬೆಳಕಿನ ಸದ್ಬಳಕೆಯ ಅಭಿಯಾನ ಕೊನೆಗೊಂಡಿತು.
ಇನ್ನು ನಗರಗಳಲ್ಲಿ ಮನೆ, ಕಚೇರಿಗಳಲ್ಲಿ ಸದಾ ವಿದ್ಯುದ್ದೀಪಗಳು ಉರಿಯುತ್ತಲೇ ಇರುತ್ತವೆ; ಒಂದರ ಪಕ್ಕ ಇನ್ನೊಂದರಂತೆ ಜೋಡಿಸಿರುವ ಮನೆಗಳೇ ನಗರೀಕರಣವಾಗಿರುವಾಗ, ಬೆಳಕಿಗೆ ಜಾಗವೇ ಇಲ್ಲ. ಕಚೇರಿಗಳಲ್ಲಂತೂ ಕೇಳಲೇಬೇಡಿ. ಹಾಜರಿ ಹಾಕಿದ ಕೂಡಲೇ ಮೊದಲು ಆನ್ ಮಾಡುವುದು ಟ್ಯೂಬ್‌ಲೈಟ್. ಆಮೇಲೆ ಉಳಿದ ಕೆಲಸ.
ಸೂರ್ಯನ ಪ್ರಖರ ಬೆಳಕಿನಲ್ಲಿ ಕೆಲಸ ಮಾಡುವುದು ಕಷ್ಟವೇ. ಆದರೆ ಸೂರ್ಯನ ಬೆಳಕಿನ್ನು ಕಚೇರಿ, ಮನೆಯ ಒಳಗೆ ಹಾಯಿಸಿದರೆ ಹೇಗಿರುತ್ತದೆ? ಈ ಯೋಚನೆ ನಿಮಗೂ ಬಂದಿರಬಹುದು. ಆದರೆ ಈ ತಂತ್ರಜ್ಞಾನ ಬಂದು ಒಂದೂವರೆ ದಶಕವೇ ಕಳೆದ&#326
3;
ದೆ ಎಂದು ಗೊತ್ತಾಗಿದ್ದು ಮಾತ್ರ ಈ ಅಂಕಣವನ್ನು ಬರೆಯುವ ಕೆಲವೇ ನಿಮಿಷಗಳ ಹಿಂದೆ.
ಟ್ಯೂಬುಲಾರ್ ಸನ್‌ಲೈಟ್ಸ್ ಎಂದು ಕರೆಯುವ ಈ ಸಾಧನಗಳ ಬಗ್ಗೆ ಚಿತ್ರ ನೋಡಿಯೇ ತಿಳಿಯಬಹುದು. ಸೂರ್ಯನ ಬೆಳಕನ್ನು ಬಿಸಿಯಾಗಿ ಪರಿವರ್ತಿಸದೆಯೇ ಕೋಣೆಯೊಳಗೆ ತರುವ ಕೂಲ್ ತಂತ್ರಜ್ಞಾನವಿದು ! (ಈಗ ಕೂಲ್ ಎಂದರೆ ತುಂಬಾ ಒಳ್ಳೆಯ ಸಂಗತಿ ಎಂದು ಇಂಗ್ಲಿಶಿನಲ್ಲಿ ಮಾತಾಡುವವರು ಹೇಳುತ್ತಾರೆ). ಈ ಬಗೆಯ ಸೌರಜ್ಯೋತಿ ರವಾನೆ ಸಾಧನಗಳನ್ನು ಸ್ಥಾಪಿಸಲು ಯಾವುದೇ ವಿದ್ಯುತ್ ಸಂಪರ್ಕವೂ ಬೇಡ ಎನ್ನುವುದೂ ಗಮನದಲ್ಲಿ ಇಡಬೇಕಾದ ಸಂಗತಿ.
ಸೌರಜ್ಯೋತಿಯನ್ನು ದೇಹವು ಸದಾ ಹೀರಿಕೊಳ್ಳುವುದರಿಂದ ಖಿನ್ನತೆ ದೂರವಾಗುತ್ತದಂತೆ; ಸೋಮಾರಿತನಕ್ಕೆ ಪೆಟ್ಟು ಬೀಳುತ್ತದಂತೆ; ಉತ್ಪಾದಕತೆ ಹೆಚ್ಚುತ್ತದಂತೆ. ಸಾಮಾನ್ಯ ಆರೋಗ್ಯವೂ ಸುಧಾರಿಸುತ್ತದಂತೆ ; ಹಾಗಂತ ಸಂಶೋಧನೆಗಳು ಹೇಳಿವೆ.
ಛಾವಣಿಯಲ್ಲಿ ಈ ಸೌರಜ್ಯೋತಿ ಸಂಗ್ರಾಹಕಗಳನ್ನು ಸ್ಥಾಪಿಸಿ, ವಿಶೇಷ ಪ್ರತಿಫಲಕ ಸಾಮರ್ಥ್ಯದ ಕೊಳವೆಯ ಮೂಲಕ ಬೆಳಕನ್ನು ಹಾಗೆಯೇ ನಿಮ್ಮ ದೇಹಕ್ಕೆ ತಿರುಗಿಸುವ ಈ ತಂತ್ರಜ್ಞಾನವನ್ನು ಊಹಿಸಿಕೊಂಡರೆ… ಆಹಾ…. ಎಷ್ಟು ಹಿತ! ಮೋಡ ಕವಿದಿದ್ದರೂ ಬೆಳಕಿಗೆ ಮಾತ್ರ ತಾಪತ್ರಯವಿಲ್ಲ.
೧೯೯೧ರಲ್ಲಿ ಮೊದಲು ಆಸ್ಟ್ರೇಲಿಯಾದಲ್ಲಿ ವಾಣಿಜ್ಯಿಕವಾಗಿ ಬಳಕೆಗೆ ಬಂದ ಈ ಸಾಧನಗಳು ಈಗ ಅಮೆರಿಕಾ ಮತ್ತು ಯೂರೋಪ್‌ಗಳಲ್ಲಿ ಜನಪ್ರಿಯವಾಗಿವೆಯಂತೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ವಿಭಾಗವು ಪ್ರಕಟಿಸುವ ಟೂನ್‌ಜಾ ಮ್ಯಾಗಜಿನ್‌ನ್ನು ಕಂಪ್ಯೂಟರಿನಲ್ಲೇ ತಿರುವಿ ಹಾಕುತ್ತಿದ್ದಾಗ ಈ ಮಾಹಿತಿ ಸಿಕ್ಕಿತು. ಅದರೆ ಹಿಂದೆ ಹೋದಾಗ ಹತ್ತು ಹಲವು ಪೂರಕ ಮಾಹಿತಿಗಳು ದೊರೆತವು. ಮಳೆ ನೀರು ಸಂಗ್ರಹದಷ್ಟೇ ಮುಖ್ಯವಾದ ಸೌರಜ್ಯೋತಿ ಬಳಕೆಯ ಬಗ್ಗೆ ನಾವು ಇನ್ನೂ ಗಮನ ಹರಿಸಿಲ್ಲ. ಮನೆ ಕಟ್ಟು ನಮ್ಮ ಇಂಜಿನಿಯರ್‌ಗಳು, ಸಾವಿರಾರು ಮನೆಗಳನ್ನು ಚಕಚಕನೆ ಸ್ಥಾಪಿಸುವ ಅಪಾರ್ಟ್‌ಮೆಂಟ್ ನಿರ್ಮಾಪಕರು, ವಿವಿಧ ಮಹಾನಗರಗಳ ಅಭಿವೃದ್ಧಿ ಪ್ರಾಧಿಕಾರಗಳು, ಪರಿಸರ ಇಲಾಖೆಗಳು, ಕಾ&
#324
0;ೂನು ಪಂಡಿತರು, ಪರಿಸರ ಚಳವಳಿಕಾರರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ಮುಂದಿನ ದಿನಗಳಲ್ಲಿ ಸೌರಜ್ಯೋತಿ ಬಳಕೆ ವ್ಯಾಪಕವಾಗುವುದಕ್ಕೆ ಅನುಕೂಲವಾಗುತ್ತದೆ.
ನಿಸರ್ಗದತ್ತ ಮಳೆನೀರು, ಸೂರ್ಯನ ಶಾಖ, ಬೆಳಕು, ಭರ್ರೋ ಎಂದು ಬೀಸುವ ಗಾಳಿ – ಎಲ್ಲವನ್ನೂ ಹದವಾಗಿ ಬಳಸುವ ಗಾಢಾನುರಕ್ತಿ ನಮ್ಮಲ್ಲಿ ಹೆಚ್ಚಬೇಕು. ಆಗಲೇ ದೀಪಾವಳಿಯ ಸಡಗರ ಹೆಚ್ಚುತ್ತದೆ. ಪಟಾಕಿಯಿಂದ ನೆಲ, ಗಾಳಿಯನ್ನು ಹಾಳುಗೆಡಹುವ ಬದಲು ಸೌರಕೊಳವೆಯಿಂದ ನಮ್ಮ ಮನೆಗಳಲ್ಲಿ ಬೆಳಕು ಹಬ್ಬಿಸಬೇಕು.
ಕರುಣಾಳು, ಬಾ ಬೆಳಕೆ, ಮಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆಮ್ಮನು !

Share.
Leave A Reply Cancel Reply
Exit mobile version