ವೈಫಲ್ಯದತ್ತ

ಕಳೆದ ಬೆಳಗಿನ ಝಾವಗಳನೆಲ್ಲ ಜಾರುತ್ತ
ಹಿಮದ ತುಂತುರು ಸುತ್ತ ಸುಳಿಗತ್ತಲು
ಬೆಳೆದ ಒಳಗಿನ ಮಾತುಗಳನೆಲ್ಲ ಸ್ರವಿಸುತ್ತ
ದಾರಿಯಳತೆಗಳೆಲ್ಲ ಹದಬತ್ತಲು

ನೆನಪುಗಳ ಹರಡುತ್ತ ಘಟನೆಗಳ ಕದಡುತ್ತ
ಪವನ ಪತ್ರಗಳಲ್ಲಿ ಕಡೆದ ಕಾಲ
ಪರಿಧಿಗಳ ಮೀಟುತ್ತ ಬೆದೆಗನಸು ಕಾಣುತ್ತ
ಪ್ರಥಿತ ಬದುಕಿನ ಸುತ್ತ ವ್ಯಥೆಯ ಜಾಲ

ಹೇಗೆ ಏಳಲಿ ಗೆಳೆಯ ಚಕ್ರದಂಗಳದಲ್ಲಿ
ಹರಿದಶ್ವನಿಗೂ ಕೂಡ ಅನಿವಾರ್‍ಯ ಕಾರ್ಯ
ಹೆಗ್ಗಡಲ ಹೆದ್ದೆರೆಯ ವೃತ್ತದಾಕ್ರಮಣಕ್ಕೆ
ಬೆನ್ನುಕೊಡುವುದು ಅಷ್ಟೆ – ಅಷ್ಟೆ ಸಾಧ್ಯ

ವೈಫಲ್ಯದತ್ತ ನಡೆವ ಒಡಕಿನ ಬದುಕು
ನನ್ನಾಣೆಯಿದೆ ಗೆಳೆಯ ನಿನಗೆ ಬೇಡ
ಸಾತತ್ಯ ವಿವರಗಳ ಸಾಫಲ್ಯದುರಿಯಲ್ಲಿ
ಕಾಲಗರ್ಪಣೆಯಾಗು ತಡಮಾಡಬೇಡ

Share.
Leave A Reply Cancel Reply
Exit mobile version