ಬೀಜಕ್ಕೆ

ಮೆದುಳಹೂವಿನ ಕನಸಿನೆಳೆ ಬೀಜಗಳೆ
ಇದು ಸಮಯವಲ್ಲವೀ ನೆಲತಬ್ಬಲು
ರೆಪ್ಪೆ ಕಳಚಿದ ಸಂಗತಿಗಳಿವೆ ಮೊದಲು ;
ಗೊತ್ತೇ – ಎದೆ ಮನಸುಗಳ ಸದರ ತೆರೆದೀಜಲು ?

ಭರಣಿ ಮಳೆಯೇ, ನನ್ನ ಸಖಿಯೇ…. ಬಾರೆ
ಚಕ್ಕವಾಕದ ದನಿಗೆ ಶ್ರುತಿಯ ತಾರೇ….
ಓ ದವನವೇ, ಸಂಪಿಗೆ ವನವೆ, ಜಾಜಿ ಮಲ್ಲಿಗೆಯೇ,
ಹೇ ಬೀಜವೇ ಧರೆಯೊಳಗೆ ಹೀಗೆ ಚಿಗುರು

ಹಾಗನಿಸುವುದು ನನಗೀಗ, ನನ್ನೊಳಗಿದ್ದ
ನಾನು ಬರೆಯುತ್ತಿದ್ದ ಕವನದಲ್ಲಿ
ಹಾಯೆನಿಸುವುದೂ ಹೌದು ಬರಿಯೆದೆಯಲ್ಲಿ
ಕನಸು ಬೀಜಗಳೆದ್ದ ಸಮಯದಲ್ಲಿ

ಘಟ ಸೀಳಿ ಬೆರಳೊಡೆವುದು ಸಹಜ. ಒಮ್ಮೊಮ್ಮೆ
ನಿಜವಿರಬಹುದು ನೇರವೇ ಕಂಡ ದಾರಿಯಲ್ಲಿ
ಎಲ್ಲೆಗಳ ಮೀರಿದರೆ ಅಹುದು ಬೀಜವೇ ನಿನ್ನ
ಬದುಕೂ ಚೊಕ್ಕ ; ಚುಕ್ಕೆಗಳ ನಿಶ್ಯಬ್ದ ಪರಿಧಿಯಲ್ಲಿ

Share.
Leave A Reply Cancel Reply
Exit mobile version