ಕಂಪ್ಯೂಟರ್ ಬಳಕೆಯ ಕೆಲವು ಕಿವಿಮಾತುಗಳು
ಕಂಪ್ಯೂಟರನ್ನು ಖರೀದಿಸಿದ ಮೇಲೆ ಅದನ್ನು ಬಳಸುವ, ಚೆನ್ನಾಗಿ ನಿರ್ವಹಿಸುವ ಬಗ್ಗೆ ಹಲವರಿಗೆ ಹೆಚ್ಚಿನ ಮಾರ್ಗದರ್ಶನ ಇರುವುದಿಲ್ಲ. ಕಂಪ್ಯೂಟರನ್ನು ಮಾರಿದ ವ್ಯಕ್ತಿಗಂತೂ ಬಳಕೆದಾರನ ಬಗ್ಗೆ ಒಂದಷ್ಟೂ ಕಾಳಜಿ ಇದ್ದರೆ ಅದು ಪುಣ್ಯ. ದಿನೇ ದಿನೇ ಕಂಪ್ಯೂಟರುಗಳ ಮಾರಾಟ ಹೆಚ್ಚುತ್ತಿದೆ; ಅವರಾದರೂ ಎಷ್ಟೆಂದು ಕಂಪ್ಯೂಟರ್ ನಿರ್ವಹಣೆ ಬಗ್ಗೆ ಪಾಠ ಹೇಳಿಯಾರು? ಬಳಕೆಯೇ ಗೊತ್ತಿಲ್ಲದವರ ಮನೆಗೆ ಎಷ್ಟು ಸಲ ಬಂದು ಚಿಕ್ಕಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಯಾರು?
ಆದ್ದರಿಂದ, ಕಂಪ್ಯೂಟರನ್ನು ಹೊಸದಾಗಿ ಖರೀದಿಸಿದವರಲ್ಲಿ ಅಥವಾ ಇನ್ನೇನು ಖರೀದಿಸುವೆ ಎನ್ನುವವರಲ್ಲಿ ನೀವು ಒಬ್ಬರಾಗಿದ್ದರೆ, ಕಂಪ್ಯೂಟರಿನ ಬಳಕೆಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದರೆ, ಆಫೀಸಿನಲ್ಲಿ ಕಂಪ್ಯೂಟರನ್ನು ಬಳಸುವುದಕ್ಕೆ ಶುರು ಮಾಡಿದ್ದರೆ, ಈ ಕಿವಿಮಾತುಗಳನ್ನು ಓದಿ.
ಕಂಪ್ಯೂಟರಿಗೆ ಧೂಳೆಂದರೆ ಅಲರ್ಜಿ. ದಯವಿಟ್ಟು ವಾರಕ್ಕೊಮ್ಮೆಯಾದರೂ ನಿಮ್ಮ ಕಂಪ್ಯೂಟರಿನ ವಿದ್ಯುತ್ ಸಂಪರ್ಕ ತೆಗೆದು, ಕಂಪ್ಯೂಟರನ್ನು, ಮಾನಿಟರನ್ನು (ಪರದೆ), ಕೀಲಿಮಣೆಯನ್ನು ಮತ್ತು ಮೌಸನ್ನು ಮೆದುವಾದ ಹತ್ತಿಯ ಬಟ್ಟೆಯಿಂದ ಒರೆಸಿ. ನೀವು ಸ್ಕ್ರೂ ಗಳನ್ನು ಬಿಚ್ಚಿ ಯಂತ್ರದ ಬಿಡಿಭಾಗಗಳನ್ನು ತೆಗೆದು ಜೋಡಿಸುವ ಹವ್ಯಾಸ ಇಟ್ಟುಕೊಂಡಿದ್ದರೆ (ನನ್ನಂಥ ಕೆಲವರಿಗೆ ಇದೇ ಒಂದು ಹುಚ್ಚು!) , ಒಂದೆರಡು ತಿಂಗಳಿಗೆ ಒಮ್ಮೆಯಾದರೂ ಕೀಲಿಮಣೆಯನ್ನು ಬಿಚ್ಚಿ ಗುಂಡಿಗಳಿಗೆ ತಲೆ ಸ್ನಾನ ಮಾಡಿಸಿ ಮತ್ತೆ ಜೋಡಿಸಿ. ಅನನುಭವಿಗಳಿಗೆ ಈ ಸಲಹೆ ಯೋಗ್ಯವಲ್ಲ!
ಕಂಪ್ಯೂಟರಿಗೆ ನೀಡಿದ ವಿದ್ಯುತ್ ಸಂಪರ್ಕವು ಸರಿಯಾದ ಅರ್ಥಿಂಗ್‌ನ್ನು ಹೊಂದಿರಬೇಕು. ಕಂಪ್ಯೂಟರ್ ಖರೀದಿಸುವ ಮುನ್ನವೇ ಇದನ್ನು ಪರಿಶೀಲಿಸಿಕೊಂಡರೆ ಸೂಕ್ತ. ಸರಿಯಾದ ಗ್ರೌಂಡಿಂಗ್ ಇಲ್ಲದೇ ಹೋದರೆ ಇಡೀ ಕಂಪ್ಯೂಟರೇ ವಿದ್ಯುತ್ ಪ್ರವಾಹಕ್ಕೆ ತುತ್ತಾಗುತ್ತದೆ. ಕಂಪ್ಯೂಟರ್ ಡಬ್ಬವನ್ನು ಮುಟ್ಟಿದರೆ ಜುಮ್ಮೆನ್ನುತ್ತದೆ. ಅದರ&am
p;#325
0;್ಲಿರುವ ಎಲೆಕ್ಟ್ರಾನಿಕ್ ಬಿಡಿಭಾಗಗಳು ಹಾಳಾಗುತ್ತವೆ.
ಕಂಪ್ಯೂಟರನ್ನು ನೀವು ಯಾಕೆ ಬಳಸುತ್ತಿದ್ದೀರಿ ಎಂಬುದನ್ನು ಆಧರಿಸಿ ಅದರಲ್ಲಿ ಸೂಕ್ತವಾದ ತಂತ್ರಾಂಶವನ್ನು ತುಂಬಬೇಕಾಗುತ್ತದೆ. ಕಂಪ್ಯೂಟರ್ ಮಾರಾಟಗಾರರು ನಿಮ್ಮ ಕಂಪ್ಯೂಟರಿಗೆ ತುಂಬುವ ತಂತ್ರಾಂಶ (ಸಾಫ್ಟ್‌ವೇರ್)ಗಳನ್ನು ಹತ್ತರಲ್ಲಿ ಒಂದು ಮಾತ್ರ ನೈಜ ಮಾರಾಟದ ಸರ್ಟಿಫಿಕೇಟನ್ನು ಹೊಂದಿರುತ್ತದೆ ; ಇನ್ನುಳಿದವು ಮೂಲ ತಂತ್ರಾಂಶದ ಮರುಪ್ರತಿಗಳು, ನಕಲಿಗಳು ಎಂಬುದನ್ನು ನೆನಪಿನಲ್ಲಿಡಿ. ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ, ವಿಂಡೋಸ್ ೯೮ ಮುಂತಾದವನ್ನು ಕಂಪ್ಯೂಟರ್ ಬಳಕೆಯ ಮೂಲಾಧಾರ ತಂತ್ರಾಂಶಗಳು ಮಾತ್ರವೇ ಸಾಮಾನ್ಯವಾಗಿ ಒರಿಜಿನಲ್ ಆಗಿರುತ್ತವೆ (ಇದು ನನ್ನ ನಂಬಿಕೆಯೇ ಹೊರತು ಬೇರೇನೂ ಸಾಕ್ಷಿಗಳಿಲ್ಲ ಎನ್ನಿ!) ಎಂ ಎಸ್ ಆಫೀಸ್ (ಕಚೇರಿ ಅಗತ್ಯಗಳು), ಪೇಜ್‌ಮೇಕರ್ (ಪುಸ್ತಕ ವಿನ್ಯಾಸಕ್ಕೆ), ಫೋಟೋಶಾಪ್ (ಚಿತ್ರಗಳನ್ನು ರೂಪಿಸಲು, ಸಂಪಾದಿಸಲು), ಕೋರೆಲ್ ಡ್ರಾ (ಚಿತ್ರಗಳನ್ನು ನಿರ್ಮಿಸಲು, ಜಾಹೀರಾತುಗಳನ್ನು ವಿನ್ಯಾಸಗೊಳಿಸಲು), ಟ್ಯಾಲಿ (ಲೆಕ್ಕ ಪತ್ರಗಳನ್ನು ಗಣಕೀಕರಿಸಲು), – ಹೀಗೆ ಸುಮಾರಾಗಿ ಎಲ್ಲ ಬಗೆಯ ತಂತ್ರಾಂಶಗಳೂ ಸಾಮಾನ್ಯವಾಗಿ ನಕಲಿ ಪ್ರತಿಯಾಗಿರುತ್ತವೆ ಎಂಬುದನ್ನು ಮರೆಯಬೇಡಿ. ಒರಿಜಿನಲ್ ತಂತ್ರಾಂಶವೇ ಬೇಕೆಂದರೆ ಕಂಪ್ಯೂಟರ್‌ಗೆ ಕೊಟ್ಟ ಹಣಕ್ಕಿಂತ ಮೂರು ನಾಲ್ಕು ಪಟ್ಟು ಹೆಚ್ಚು ಹಣವನ್ನು ಈ ತಂತ್ರಾಂಶಗಳಿಗೇ ಕೊಡಬೇಕಾಗುತ್ತದೆ.
ಹಾಗಾದರೆ ? ಈ ಪ್ರಶ್ನೆಗೆ ಉತ್ತರವೂ ಇದೆ. ಉಚಿತ ಹಾಗೂ ಮುಕ್ತ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳನ್ನು ನೀವು www.fsf.org ಅಥವಾ www.sourceforge.net ಈ ಜಾಲತಾಣದಿಂದ ತಿಳಿದುಕೊಂಡು ಇಂಟರ್‌ನೆಟ್ ಮೂಲಕವೇ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಬಹುದು. ಇದಕ್ಕೆಲ್ಲ ನೀವು ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿರಬೇಕು (ಕಳೆದ ವಾರದ ಈ ಅಂಕಣ ಓದಿ).
ಕಂಪ್ಯೂಟರಿಗೆ ಇಂಟರ್‌ನೆಟ್ ಸಂಪರ್ಕ ಕೊಟ್ಟಮೇಲೆ ನಿಮ್ಮ ಕಂ
;ಪ್ಯೂಟರಿಗೆ ವೈರಸ್‌ಗಳು (ಕಂಪ್ಯೂಟರಿನ ತಂತ್ರಾಂಶಗಳನ್ನು ಹಾಳುಗೆಡಹುವ ತಂತ್ರಾಂಶಗಳು) ದಾಳಿ ಇಡುತ್ತವೆ. ವೈರಸ್‌ಗಳು ಸುಮ್ಮನೇ ಬರುವುದಿಲ್ಲ. ಹೊರಗಡೆಯಿಂದ ತಂದ ಫ್ಲಾಪಿ ಡಿಸ್ಕ್‌ಗಳನ್ನು, ಕಾಂಪಾಕ್ಟ್ ಡಿಸ್ಕ್‌ಗಳನ್ನು (ಸಿಡಿ) ನಿಮ್ಮ ಗಣಕಕ್ಕೆ ಹಾಕಿದಾಗಲೂ ಅವುಗಳಲ್ಲಿ ಇರುವ ವೈರಸ್‌ಗಳು ಬರುತ್ತವೆ. ಆದ್ದರಿಂದ ನೀವು ವೈರಸ್‌ಗಳನ್ನು ಹುಡುಕುವ ಒಂದು ತಂತ್ರಾಂಶವನ್ನು ನಿಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಳ್ಳಲೇಬೇಕು. ಇಂಥದ್ದೊಂದು ಉಚಿತ ತಂತ್ರಾಂಶ : ಚಿಟಿಣiviಡಿ.
ಕಂಪ್ಯೂಟರಿನ ಹತ್ತಿರ ಚಾ ಕುಡಿಯಿರಿ; ಆದರೆ ಕೀಲಿಮಣೆಯ ಮೇಲೆ ಏನನ್ನೂ ಚೆಲ್ಲಬೇಡಿ. (ಮಾನಿಟರ್‌ನ ಪರದೆಯ ಮೇಲೆ ಚಾ ಚೆಲ್ಲುವುದು ಕಷ್ಟ!)
ಕಂಪ್ಯೂಟರಿನಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಇಡುವ ಹಾರ್ಡ್ ಡಿಸ್ಕನ್ನು ಸಾಮಾನ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿರುತ್ತಾರೆ. ಒಂದನ್ನು ಸಿ ಎಂದೂ ಇನ್ನೊಂದನ್ನು ಡಿ ಎಂದೂ ಕರೆಯುತ್ತಾರೆ. ಸಿ ವಿಭಾಗದಲ್ಲಿ ಸಾಮಾನ್ಯವಾಗಿ ಕಂಪ್ಯೂಟರಿಗೆ ಬೇಕಾದ, ನಾವು ಮುಟ್ಟಬಾರದ, ಬದಲಾಯಿಸಬಾರದ ತಂತ್ರಾಂಶಗಳೇ ಇರುತ್ತವೆ. ಆದರೆ ವಿಚಿತ್ರವೆಂದರೆ "ಮೈ ಡಾಕ್ಯುಮೆಂಟ್ಸ್" ಎಂಬ ಒಂದು ಕಡತಗಳನ್ನು ಇಡುವ ಫೋಲ್ಡರ್ ಕೂಡಾ ಸಿ ಪಾರ್ಟಿಶನ್‌ನಲ್ಲೇ ಇದೆ. ಹೊಸ ಬಳಕೆದಾರರು ಇಲ್ಲಿಯೇ ಎಲ್ಲ ಕಡತಗಳನ್ನೂ (ಫೈಲ್) ಇಡುತ್ತಾರೆ. ಇದು ತುಂಬಾ ಆಪಾಯಕಾರಿ. ಕಂಪ್ಯೂಟರ್ ಹಾಳಾದರೆ ಈ ಮೈ ಡಾಕ್ಯುಮೆಂಟ್ಸ್ ಕೂಡಾ ನಾಪತ್ತೆಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಂ ಎಸ್ ವರ್ಡ್ ತಂತ್ರಾಂಶವನ್ನು ಬಳಸುವವರು ತಮ್ಮ ಎಲ್ಲ ಕಡತಗಳನ್ನು ಡಿ ಪಾರ್ಟಿಶನ್‌ನಲ್ಲೇ ಇಡುವುದು ಅತ್ಯಂತ ಕ್ಷೇಮ.
ಕಂಪ್ಯೂಟರನ್ನು ಮೊದಲು ಕಲಿತಾಗ ಅದರ ಮೌಸ್ ಎಷ್ಟು ಸುಲಭ ಎಂದೆನಿಸುತ್ತದೆ. ಆದರೆ ಕೀಲಿಮಣೆಯ ಮೂಲಕವೇ ಮೌಸ್ ಮಾಡುವ ಹಲವು ಕೆಲಸಗಳನ್ನು ಮಾಡಬಹುದು. ಇದಕ್ಕಾಗಿ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಕಲಿಯುವ ಹವ್ಯಾಸ ಬೆಳೆಸಿಕೊಳ್ಳಿ. ಆಗ ನಿಮ್ಮ ಕಂಪ್ಯೂಟರ್ ಬಳಕೆಯ ದಕ್ಷತೆ ಹೆಚ್ಚುತ್ತದೆ. ಸಮಯ ಉಳಿತಾ&a
mp;#
3247;ವಾಗುತ್ತದೆ.
ಕಂಪ್ಯೂಟರನ್ನು ಕೊಂಡ ಮೇಲೆ ಬಳಸುವುದನ್ನು ಕಲಿಯುವುದಕ್ಕಿಂತ ಕೊಂಚ ಕಲಿತ ಮೇಲೆ ಕಂಪ್ಯೂಟರನ್ನು ಖರೀದಿಸುವುದು ಸೂಕ್ತ.
ನಿಮ್ಮ ಮನೆಯಲ್ಲಿ ಮಕ್ಕಳು ಕಂಪ್ಯೂಟರನ್ನು ಬಳಸುತ್ತಿದ್ದರೆ ಕಂಪ್ಯೂಟರಿನ ಪರದೆಯು ನಿಮಗೂ ಕಾಣುವ ಹಾಗೆ ಜೋಡಿಸಿಕೊಳ್ಳಿ. ಇಂಟರ್‌ನೆಟ್‌ನ ಬಳಕೆಯ ದುಷ್ಟರಿಣಾಮಗಳ ಬಗ್ಗೆ ನಾನು ಇಲ್ಲಿ ಕೊರೆಯುವುದಿಲ್ಲ. ವಿಶೇಷವಾಗಿ ನಗರಗಳ ಹೈಸ್ಕೂಲ್ ಮತ್ತು ಪಿಯುಸಿ ಮಕ್ಕಳ ಪಾಲಕರಿಗೆ ಇದು ಅನ್ವಯಿಸುತ್ತದೆ.
ಕಂಪ್ಯೂಟರಿಗೆ ಜೋಡಿಸಿದ ವಿದ್ಯುತ್ ಸಂಪರ್ಕಕ್ಕೇ ಇಸ್ತ್ರಿ ಪೆಟ್ಟಿಗೆ ಮುಂತಾದ ವಿದ್ಯುತ್ ಸಾಧನಗಳಿಗೆ ಸಂಪರ್ಕ ನೀಡಬೇಡಿ.
ಇದಿಷ್ಟು ನಾನು ಇಲ್ಲಿ ಕೊಡಬಹುದಾದ ತುರ್ತು ಸಲಹೆಗಳು. ಕಂಪ್ಯೂಟರನ್ನು ಬಳಸುವಾಗ ನಿಮ್ಮ ದೇಹದ ಭಂಗಿ ಹೇಗಿರಬೇಕು, ಯಾವ ಯಾವ ಸಾಧನಗಳನ್ನು ಎಲ್ಲೆಲ್ಲಿ ಸ್ಥಾಪಿಸಿರಬೇಕು ಎಂಬಿತ್ಯಾದಿ ವಿಷಯಗಳನ್ನು ನಾನು ಇನ್ನೊಮ್ಮೆ ವಿವರಿಸುತ್ತೇನೆ. ಕಂಪ್ಯೂಟರ್ ಕಲಿ-ಯುಗದಲ್ಲಿ ನೀವೇ ಕಲಿತು ಬಳಸುವ ಅಂಶಗಳೇ ಸಾಕಷ್ಟಿವೆ. ನಿಮಗೆ ಕಂಪ್ಯೂಟರ್ ಮಾರಿದವರಾಗಲೀ, ಕಂಪ್ಯೂಟರ್ ಪುಸ್ತಕಗಳಲ್ಲಾಗಲೀ ಇಂಥ ಹಲವು ಸಂಗತಿಗಳ ಉಲ್ಲೇಖ ಇರುವುದಿಲ್ಲ.
ನಿಮ್ಮ ಕಂಪ್ಯೂಟರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನನ್ನನ್ನು ಈ ಮೈಲ್ ಮೂಲಕ ಸಂಪರ್ಕಿಸಿ. ನನ್ನ ತಿಳಿವಿನ ಮಿತಿಯಲ್ಲಿ ಉಚಿತ ಸಲಹೆಗಳನ್ನು ನೀಡುವೆ!