ಸಂಸ್ಕೃತಿಯ ಚಹರೆ ಅರಿಯಲು ಮೂರು ಪುಸ್ತಕಗಳು : ಮಸ್ಟ್ ರೀಡ್ !

ಕನ್ನಡನಾಡಿನ ಮೂರು ಸೀಮೆಗಳಲ್ಲಿ ನಡೆಯುವ ಮೂರು ಕಾಲಘಟ್ಟಗಳನ್ನು ಬಿಂಬಿಸುವ ಮೂರು ಪುಸ್ತಕಗಳನ್ನು ಇಲ್ಲಿ ಪರಿಚಯಿಸಲು ಯತ್ನಿಸುವೆ. ಈ ಪುಸ್ತಕಗಳನ್ನು ಇನ್ನೂ ಓದದವರು ಕೂಡಲೇ ಖರೀದಿಸಿ ಓದಲು ವಿನಂತಿ.
೧೯೩೦ರಿಂದ ೧೯೪೭ರವರೆಗಿನ ಅವಧಿಯ ಪತ್ರಿಕೆಗಳಿಂದ ಆಯ್ದ ಕತೆಗಳ ಸಂಕಲನ `ಕರಾವಳಿಯ ಕಥೆಗಳು' – ಬಹುಶಃ ಉದಯವಾಣಿಯ ಬಹ್ವಂಶ ಓದುಗರಿಗೆ ಈಗಾಗಲೇ ಪರಿಚಿತವಾಗಿರಬಹುದು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗವು ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಈ ಪುಸ್ತಕವನ್ನು (೨೦೦೬) ಪ್ರಕಟಿಸಿದೆ (ಆದ್ದರಿಂದ ಈ ಪುಸ್ತಕವನ್ನು ಇತರೆ ಪುಸ್ತಕದ ಅಂಗಡಿಗಳಲ್ಲಿ ಹುಡುಕುವುದು ವ್ಯರ್ಥಸಾಹಸ. ನೀವೇ ಅಲ್ಲಿಗೆ ಹೋಗಿ ಖರೀದಿಸಿದರೆ ಒಳ್ಳೇದು). ೩೦ ಕತೆಗಾರರ ೪೮ ಕತೆಗಳು ಇಲ್ಲಿವೆ. ಇಪ್ಪತ್ತೊಂದನೇ ಶತಮಾನದಲ್ಲಿ ಮುಖ್ಯವಾಹಿನಿ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿರುವ ಕತೆಗಳನ್ನು ನಿವಾಳಿಸಬಲ್ಲ ಹಲವು ಕತೆಗಳು ಇದರಲ್ಲಿವೆ. ಪಡುಕೋಣೆ ರಮಾನಂದರಾಯರ `ಬಾಳ್ವೆಯ ಮಸಾಲೆ', ಕುಡ್ಪಿ ವಾಸುದೇವ ಶೆಣೈಯವರ `ಪಾಕೀಟುಗಳ ಪರ್ಯಾಯ', ಕೊರಗ ಬಿ. ಪೆರಡಾಲರ `ಎಣ್ಣೆಸೀರೆ', ಕೊರಡ್ಕಲ್ ಶ್ರೀನಿವಾಸರಾಯರ `ಸೋಲಿಲ್ಲದ ವ್ಯಾಪಾರ ನಂ. ೧' ಮತ್ತು `ಅಮಟೆಕಾಯಿ ಗೊರಟು', ವಿಠ್ಠಲ ಹೆಗ್ಡೆ ಮಟ್ಟಾರು ಅವರ `ಕಹಿ ಪಾಯಸ' ಮತ್ತು `ಹಗಲು ಹೊಲತಿ, ರಾತ್ರಿ?', – ಹೀಗೆ ಹಲವು ಕತೆಗಳು ನಿಜಕ್ಕೂ ನಮ್ಮ ಕತೆಗಾರರ ಕತಾಹಂದರದ ಸೊಗಸನ್ನು, ಸಂಸ್ಕೃತಿಯನ್ನು ಅರಿತು ಬರೆಯುವ ಬಗೆಯನ್ನು, ಹದವಾಗಿ ಗಾಳಿ ಬೀಸಿದಂತೆ ಅನುಭವಿಸಬಹುದಾದ ಶೈಲಿಯನ್ನು ಬಿಂಬಿಸುತ್ತವೆ.
ಡಾ. ಸಬೀಹಾ ಭೂಮೀಗೌಡ ಸಂಪಾದಿಸಿರುವ ಈ ಕತೆಗಳು ಕರಾವಳಿಯ ಬದುಕಿನ ಎಲ್ಲ ದೃಶ್ಯಗಳನ್ನೂ ಹೊಂದಿವೆ. ಎರಡನೇ ಮಹಾಯುದ್ಧದ ಸಿನೆಮಾ ನೋಡಿದಾಗ ಆಗುವ ನಾಸ್ಟಾಲ್ಜಿಯಾ ಇಲ್ಲಿ ಹಬ್ಬಿದೆ. ಆ ಕತೆಗಾರರು ಎಷ್ಟೆಲ್ಲ ಧೈರ್ಯದಿಂದ ಏನೆಲ್ಲ ಸಂಗತಿಗಳನ್ನು ಯಾವಾಗಲೋ ಹೇಳಿದ್ದಾರಲ್ಲ &am
p;#321
4;ಂದು ಅಚ್ಚರಿಯಾಗುತ್ತದೆ. ನಮ್ಮ ಸಂಸ್ಕೃತಿಯ ಪುಟಗಳನ್ನು ತಿಳಿಯಬಯಸುವವರಿಗೆ ಈ ಪುಸ್ತಕ ಕಡ್ಡಾಯ. ಯಾಕೆಂದರೆ ಇದು ರಸಿಕ ಓದುಗರನ್ನು ಮೊದಲ ಪುಟದಿಂದಲೇ ಸೆಳೆಯುತ್ತದೆ. ಯಾವುದೇ ಕತೆಯನ್ನಾದರೂ ನೀವು ಆರಿಸಿಕೊಂಡು ಓದಿ. ಯಾಕೆಂದರೆ ಕತೆ ಬರೆದ ಕಾಲವೂ ಇಲ್ಲಿ ಉಲ್ಲೇಖವಾಗಿದೆ. ಕತೆಗಾರರ ಕಿರುಪರಿಚಯವೂ ಇದೆ ; ಅವರ ಛಾಯಾಚಿತ್ರಗಳೂ ಇವೆ. ಸಂಪಾದಕರ ಮಾತೂ ಒಂದು ಕುತೂಹಲಕರ ಸಂಶೋಧನಾ ಲೇಖನವಾಗಿ ಓದಿಸಿಕೊಳ್ಳುತ್ತದೆ.
ಈ ಪುಸ್ತಕದ ಹಿಂದೆ ಪ್ರೊ. ಬಿ. ಎ. ವಿವೇಕ ರೈ, ಪ್ರೊ. ಶ್ರೀನಿವಾಸ ಹಾವನೂರ ಮತ್ತು ಡಾ. ಕೆ. ಚಿನ್ನಪ್ಪಗೌಡರ ಪಾತ್ರವೂ ಇದೆ.
ಇತ್ತೀಚೆಗಿನ ಪುಸ್ತಕಗಳಲ್ಲಿ ನನ್ನನ್ನು ತುಂಬಾ ತುಂಬಾ ಕಾಡಿದ ಪುಸ್ತಕ : ಡಾ. ಎಚ್. ವಿ. ರಂಗಾಚಾರ್‌ರವರ `ತರಗೆಲೆಯ ಹಾರಾಟ'. ಸಾಹಿತ್ಯ ಭಂಡಾರವು ತನ್ನ ೭೦ರ ಸಂಭ್ರಮದಲ್ಲಿ ಪ್ರಕಟಿಸಿದ (೨೦೦೫) ಈ ಪುಸ್ತಕಕ್ಕೆ ಎಣೆಯಿಲ್ಲದ ಸಾಂಸ್ಕೃತಿಕ ಮೌಲ್ಯವಿದೆ. ತಿಳಿವಳಿಕೆಯ ಪ್ರೌಢಿಮೆ, ಸಾಹಿತ್ಯದ ಸೊಗಸಾದ ಅಭಿರುಚಿ, ಎಲ್ಲರಿಗೂ ಚಿಂತನೆಗೆ ಹಚ್ಚುವ ಸಾಧ್ಯತೆಗಳಿರುವ ಖಾಸಗಿ ಅನುಭವಗಳನ್ನು ಜತನದಿಂದ ಕಾಪಿಟ್ಟುಕೊಳ್ಳುವ ಹೊಣೆಗಾರಿಕೆ – ಎಲ್ಲವನ್ನೂ ಹೊಂದಿರುವ ರಂಗಾಚಾರ್ಯರು ಬರೆದ ಹದಿನಾರು ಲಲಿತ ಪ್ರಬಂಧಗಳು ಇಲ್ಲಿವೆ. ಹಿನ್ನುಡಿಯಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು `ಇದು ಓದುಗರ ಮನಸ್ಸನ್ನು ಒಂದು ಬಗೆಯ ರಸೋಲ್ಲಾಸದಲ್ಲಿ ತೇಲಿಸುತ್ತದೆ' ಎಂದು ಬರೆದಿರುವುದು ನಿಜವೇ ಹೌದು. ಕಲಾವಿದ ಶ್ರೀಪಾದರ ಅದ್ಭುತ ಮುಖಪುಟದಿಂದ ಕಂಗೊಳಿಸುವ ಈ ಪುಸ್ತಕ ನಿಮ್ಮನ್ನು ಅಚ್ಚರಿಗೆ ಕೆಡವುತ್ತದೆ; ಆಹ್ಲಾದಕತೆಗೆ ಪಕ್ಕಾಗಿಸುತ್ತದೆ; ಒಂದಷ್ಟು ಮ್ಲಾನತೆಯನ್ನೂ ತರುತ್ತದೆ; ಮುದಗೊಳಿಸುತ್ತದೆ…. ಹೌದುರೀ.. ರಸೋಲ್ಲಾಸ ! ಎಸ್. ಎಲ್. ಭೈರಪ್ಪನವರು ಈ ಪುಸ್ತಕಕ್ಕೆ ಒಂದು ಅಪರೂಪದ ಮುನ್ನುಡಿಯನ್ನು ಬರೆದಿದ್ದಾರೆ ( ಎ.ಕೆ. ರಾಮಾನುಜಮ್ ಬಗ್ಗೆ ರಂಗಾಚಾರ್ಯರು ಬರೆದ ಘಟನೆಯನ್ನು ಮುನ್ನುಡಿಯಲ್ಲಿ ಉಲ್ಲೇಖಿಸಿರುವುದು ಗಮನಾರ್ಹ).
ಮೂವತ್ತು ವರ್ಷಗಳ ಕಾಲ ಅಮೆರಿಕಾದಲ&a
mp;#
3277;ಲಿದ್ದೂ ಕನ್ನಡದ ಸೊಗಡಿಗೆ ಎಳ್ಳಷ್ಟೂ ಭಂಗ ಬಾರದ ಹಾಗೆ, ಕನ್ನಡದ ಕಂಪಿನ ಅನುಭವಗಳನ್ನು, ಅಮೆರಿಕಾದಲ್ಲಿ ಕಂಡ ದೃಶ್ಯಗಳನ್ನು ಒರಿಜಿನಲ್ ಕನ್ನಡ ಲಲಿತ ಪ್ರಬಂಧದ ರೂಪದಲ್ಲಿ ಕೊಟ್ಟಿರುವ ರಂಗಾಚಾರ್ಯರು ತಮ್ಮ ಮಾವ ಪುತಿನರವರಿಂದ ರಸೋಲ್ಲಾಸದ ದೀಕ್ಷೆಯನ್ನು ಪಡೆದಿದ್ದಾರೋ ಎಂದು ಭಾಸವಾಗುವೂ ನಿಜ. ಆದರೆ ಪ್ರಬಂಧಗಳನ್ನು ಓದಿ ಮುಗಿಸಿದ ಮೇಲೆ ರಂಗಾಚಾರ್ಯರ ಸೂಕ್ಷ್ಮ ಒಳನೋಟದ ಅರಿವಾಗಿ, ಅವರ ಒರಿಜಿನಾಲಿಟಿಯನ್ನು ಅಹುದಹುದು ಎನ್ನಲೇಬೇಕಾಗುತ್ತದೆ. `ಕಾಡಾನೆಯ ಕನಸು' ಎಂಬ ಅದ್ಭುತ ಲಲಿತಪ್ರಬಂಧ ಇದರಲ್ಲಿದೆ. ಇದು ಈ ಸಂಕಲನದ ಬಹುಮುಖ್ಯ (ಟಾಪ್ ರೇಟೆಡ್) ಪ್ರಬಂಧ. ಪುತಿನರವರು ತಮ್ಮ ಪತ್ನಿಯೊಡನೆ ಅಮೆರಿಕಾಗೆ ಬಂದಾಗ ರಂಗಾಚಾರ್ಯರು ಕಳೆದ ದಿನಗಳನ್ನು `ಅತ್ತೆ ಮಾವಂದಿರೊಡನೆ ಕಳೆದ ಕ್ಷಣಗಳು' ಎಂಬ ಪ್ರಬಂಧದಲ್ಲಿ ದಾಖಲಿಸಿದ್ದಾರೆ. ಇದೂ ಒಂದು ಮುಖ್ಯ ಸಾಂಸ್ಕೃತಿಕ ದಾಖಲೆ. `ಕುಂಕುಮ', `ಮುಖಲಾಂಛನಗಳು', – ಈ ಎರಡು ಪ್ರಬಂಧಗಳು ಯಾವುದೋ ವಿಷಯವನ್ನು ಸಹಜವಾಗಿ ಹಿಗ್ಗಿಸಿ ಬರೆದ ಸಾಮರ್ಥ್ಯ ಪ್ರದರ್ಶನದ ಹಾಗೆ ಕಂಡರೂ, `ಶಾಸ್ತ್ರಿಯ ಇಂಡಿಯಾ' ಓದಿದಾಗ ಇವರೆಂಥ ನಗೆಚಟಾಕಿ ಲೇಖಕರು ಎಂದು ಶ್ಲಾಘಿಸಲೇಬೇಕಾಗುತ್ತದೆ. `ತರಗೆಲೆಯ ಹಾರಾಟ' ಎಂಬ ಶೀರ್ಷಿಕೆಯ ಪ್ರಬಂಧವೂ ಸಮಕಾಲೀನ ಪ್ರಬಂಧಗಳಲ್ಲಿ ಅಗ್ರಸಾಲಿಗೆ ಬರುತ್ತದೆ. ಉಳಿದವನ್ನೂ ನೀವು ಸೊಗಸಾಗಿ ಅನುಭವಿಸಬಹುದು! ಕನ್ನಡದ ಕಂಪು, ಕಂಪನ, ಇಂಪು ಎಲ್ಲವೂ ಈ ಪ್ರಬಂಧಗಳಲ್ಲಿವೆ.
ಪತ್ರಿಕೆಗಳಿವೆ, ಬರೆಯುವವರು ಕಡಿಮೆ ಎಂಬ ಮಾರುಕಟ್ಟೆ ಲೆಕ್ಕಾಚಾರದಲ್ಲಿ ಪ್ರಬಂಧಗಳನ್ನು ಬರೆಯುವ ಇಂದಿನ ಮಾರ್ಕೆಟ್ ಫೋರ್ಸ್ ಕಾಲದವರೆಗೂ ಹಾದುಬಂದಿರುವ ರಂಗಾಚಾರ್ಯರಿಗೆ ಕಡಿಮೆ ಪ್ರಬಂಧಗಳನ್ನು ಬರೆದ ಬಗ್ಗೆ ಯಾವುದೇ ಬೇಜಾರೂ ಇಲ್ಲ.
ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಡಾ. ಗುರುಪ್ರಸಾದ್ ಕಾಗಿನೆಲೆಯವರ `ಬಿಳಿಯ ಚಾದರ' ಎಂಬ ಕಾದಂಬರಿಯು ಸರಿಸುಮಾರು ಇಪ್ಪತ್ತೊಂದನೇ ಶತಮಾನಕ್ಕೆ ಬಂದು ನಿಲ್ಲುವ ಹಂದರ ಹೊಂದಿದೆ. ಡಾ. ಯು. ಆರ್. ಅನಂತಮೂರ್ತಿಯವರ ಒಂದ&amp
;#32
65; ಟಿಪ್ಪಣಿ ಆಧಾರಿತ ಮುನ್ನುಡಿ ಇದಕ್ಕಿದೆ.
ನಮ್ಮದಲ್ಲದ ಸಂಗತಿಗಳನ್ನು, ಪದಗಳನ್ನು ನಮ್ಮದಾಗಿಸುವ ಕ್ರಿಯೆ ಎಷ್ಟು ಕಿರಿಕಿರಿಯಾದದ್ದು ಎಂದು ಓದುಗರು ಓದುವಾಗಲೇ ಅನುಭವಿಸಬೇಕು ಎಂಬ ಉದ್ದೇಶವು ಇಲ್ಲಿನ ಇಂಗ್ಲಿಶ್ ಪದಗಳ ಕನ್ನಡೀಕರಣಕ್ಕಿದೆ ಎಂದು ಕಾದಂಬರಿಕಾರರೇ ಹೇಳಿದ್ದಾರೆ. ಇತ್ತೀಚೆಗೆ ಕಾದಂಬರಿ ಬರೆವಣಿಗೆಯತ್ತ ವಾಲಿರುವ ಹೊಸಬರಲ್ಲಿ ಒಬ್ಬರಾಗಿರುವ ಅಶೋಕ ಹೆಗಡೆಯವರ ತಲೆ ತುಂಬಿದ್ದರಿಂದಲೇ ಕಾದಂಬರಿ ಬರೆದೆ ಎಂದು ನೇರವಾಗಿ ಬರೆದಿರುವ ಗುರುಪ್ರಸಾದರ ಅನುಭವ ನಮ್ಮ ಕನ್ನಡಕ್ಕೇನು, ಭಾರತಕ್ಕೇ ವಿಶಿಷ್ಟವಾದದ್ದು. ಅವರ ಈ ಕಾದಂಬರಿಯು ಯಾವುದೇ ಭಾಷೆಯಲ್ಲೂ ಇಷ್ಟೇ ಪರಿಣಾಮಕಾರಿಯಾಗುತ್ತಿತ್ತು. ಐಟಿ ಕ್ರಾಂತಿ, ವೈದ್ಯಲೋಕದ ಸಂಕೀರ್ಣ ಬೆಳವಣಿಗೆ, ಬದುಕಿನ ಸಂಬಂಧಗಳ ಚಿತ್ರವಿಚಿತ್ರ ಚಹರೆಗಳು, ಬದಲಾಗುತ್ತಿರುವ ವ್ಯಕ್ತಿತ್ವದ ಬಗೆಬಗೆಯ ಉದಾಹರಣೆಗಳು, – ಹೀಗೆ `ಬಿಳಿಯ ಚಾದರ'ವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ; ಗೊಂದಲಕ್ಕೆ ಕೆಡಹುತ್ತದೆ ; ನಿಮ್ಮ ಗ್ರಹಿಕೆಗಳನ್ನೆಲ್ಲ ಪ್ರಶ್ನಿಸುತ್ತದೆ.
ಯಾವುದೇ ಪೂರ್ವಾಗ್ರಹಗಳ ಗೋಜಿಗೆ ಹೋಗದೆ ಅನ್ನಿಸಿದ್ದನ್ನು ಸಹಜವಾಗಿ ಬರೆದ ಗುರುಪ್ರಸಾದರು ತಮ್ಮ ಕತೆಗಳಲ್ಲಿ ಕಾಣಿಸುವ ಸುದೀರ್ಘ ನಿರೂಪಣೆಯ ಶೈಲಿಗಿಂತ ವಿಭಿನ್ನವಾಗಿ ಬರೆದಿದ್ದಾರೆ ಎನ್ನುವುದು ಪಕ್ಕಾ ವಿಮರ್ಶೆಯ ವರಸೆಯೆಂದು ನೀವು ತಿಳಿಯಬಹುದು.
ಬಿಳಿಯ ಚಾದರವನ್ನು ಹೊದಿಸಿದ ಶವ, ಅದಕ್ಕೊಂದು ಟ್ಯಾಗ್ – ಇದೇ ಈ ಕಾದಂಬರಿಯ ಮುಖಪುಟದ ಚಿತ್ರ. ಮನೋಹರ ಗ್ರಂಥಮಾಲೆಯ ೭೫ನೇ ವರ್ಷದ ಸಂದರ್ಭದ ಈ ಪ್ರಕಟಣೆ ನಿಮ್ಮ ಕೈಯಲ್ಲಿ ಇರಲೇಬೇಕು.
೨೦೦೫, ೨೦೦೬ ಮತ್ತು ೨೦೦೭ರಲ್ಲಿ ಪ್ರಕಟವಾದ ಈ ಮೂರು ಪುಸ್ತಕಗಳೂ ನನ್ನನ್ನು ಬಹುವಾಗಿ ಕಾಡುತ್ತಿವೆ. ನಿಮ್ಮನ್ನೂ ಈ ಕಾಡುವಿಕೆ ಆವರಿಸಲಿ ಎಂಬುದೇ ನನ್ನ ಈ ಹೊತ್ತಿನ ಆಸೆ.
(ಬೆಂಗಳೂರಿನಲ್ಲಿ ಸಿಕ್ಕಿರದ `ಕರಾವಳಿಯ ಕತೆಗಳು' ಕಳಿಸಿಕೊಟ್ಟ ಡಾ. ಕೆ. ಚಿನ್ನಪ್ಪಗೌಡರಿಗೆ ವಂದನೆಗಳು.)

Share.
Leave A Reply Cancel Reply
Exit mobile version