ಆತ ಒಬ್ಬ ಪರ್ವತಾರೋಹಿಯೂ ಅಲ್ಲ. ಪರ್ವತಾರೋಹಿಗಳಿಗೆ ವೈದ್ಯಕೀಯ ನೆರವು ನೀಡುವ ಸಹಾಯಕ. ಆದರೂ ಕೆ೨ ಪರ್ವತದ ತುತ್ತ ತುದಿ ತಲುಪಲು ಯತ್ನಿಸಿದ. ಪ್ರೀತಿಯ ತಂಗಿಯ ಕೊರಳಹಾರವನ್ನು ಆ ಶಿಖರಾಗ್ರದಲ್ಲಿ ಹುಗಿದು ಅವಳ ನೆನಪನ್ನು ಆಗಸದೆತ್ತರದಲ್ಲಿ ನೆಡುವ ಭಾವುಕ ಅಣ್ಣನೂ ಆಗಿದ್ದ ಆತ ೨೮೨೬೭ ಅಡಿ ಎತ್ತರದ, ಜಗತ್ತಿನ ಎರಡನೇ ಅತಿ ಎತ್ತರದ ಶಿಖರವನ್ನು ಹತ್ತಲು ಯತ್ನಿಸಿದ. ಆಗಲಿಲ್ಲ. ದಾರಿಯಲ್ಲಿ ಜೊತೆಗಾರರಿಂದ ತಪ್ಪಿಸಿಕೊಂಡ. ಹೇಗೋ ದಿನರಾತ್ರಿಗಳನ್ನು ಕಳೆದ. ಹಿಮಪಾತದ ಭೀಕರತೆಯಿಂದ, ಸಾವಿನ ಹೊರಳಿನಿಂದ ತಪ್ಪಿಸಿಕೊಂಡ. ಕೆಳಗಿಳಿದು ಬಂದ. ಸಹಾಯಕ ಮುಝಾಫಿರ್ ಆಲಿಯನ್ನು ಕಂಡು ಕೈ ಬೀಸಿದ.
ಮೂರು ತಿಂಗಳುಗಳ ನಂತರ ಗ್ರೆಗ್ ಮಾರ್ಟೆನ್‌ಸನ್ ಮತ್ತೆ ಹಸಿರು ನೋಡಿದ. ಮುಝಾಫಿರ್ ಕರೆದುಕೊಂಡ ಹಾದಿಯಲ್ಲೇ ನಡೆದ. ಆದರೂ ಮತ್ತೆ ದಾರಿ ತಪ್ಪಿದ. ಅಸ್ಕೊಲೆಗೆ ಹಓಗುವ ಬದಲು ಕೋರ್ಫೆ ಎಂಬ ಕುಗ್ರಾಮ ತಲುಪಿದ. ಕಾರಕೋರಮ್ ಕಣಿವೆಯಲ್ಲಿ ಇಂಥ ಹಳ್ಳಿಯೊಂದು ಇದೆ ಎಂದು ಗ್ರೆಗ್‌ಗೆ ಗೊತ್ತೇ ಇರಲಿಲ್ಲ. ಹಳ್ಳಿಯ ಮುಖ್ಯಸ್ಥ, ‘ನುರ್ಮಧಾರ್’ ಹಾಝಿ ಆಲಿ ಅವನನ್ನು ತನ್ನ ಮುಗ್ಧ ನಗುವಿನೊಂದಿಗೆ ಸ್ವಾಗತಿಸಿದ. ಮನೆಯಲ್ಲಿ ಹಾಸಿಗೆ ಹೊದಿಕೆ ಕೊಟ್ಟು ಉಪಚರಿಸಿದ. ಇಲ್ಲೇ ಇದ್ದು ಆರಾಮಾಗಿ ಹೋಗು ಎಂದು ಗದರಿಸಿದ. ಹಳ್ಳಿಯನ್ನು ಸುತ್ತಿದ ಗ್ರೆಗ್‌ಗೆ ಎಲ್ಲೆಲ್ಲೂ ತನ್ನ ಅಪಸ್ಮಾರ ಯಾತನೆ ಅನುಭವಿಸಿದ ತಂಗಿ ಕ್ರಿಸ್ತಾಳೇ ನೆನಪಾದಳು. ಇವರೆಲ್ಲ ಈ ಕುಗ್ರಾಮದಲ್ಲಿ ಹ್ಯಾಗೆ ಜೀವನ ನಡೆಸಿದ್ದಾರಲ್ಲಾ ಎಂದು ಗ್ರೆಗ್ ಅಚ್ಚರಿಪಟ್ಟ.
‘ಈ ಊರಿನ ಶಾಲೆ ಎಲ್ಲಿದೆ?’ ಗ್ರೆಗ್ ಬಲವಂತ ಮಾಡಿ ಹಾಝಿ ಆಲಿಯನ್ನು ಕರೆದುಕೊಂಡು ಊರಿನ ಶಾಲೆಗೆ ಹೋದ. ಅಲ್ಲೇನಿದೆ? ಬ್ರಾಲ್ದು ಗ್ರಾಮದಿಂದ ಎಂಟುನೂರು ಅಡಿ ಎತ್ತದ ಜಾಗ. ಮೇಲೆ ನೀಲಾಕಾಶ. ಕೆಳಗೆ ಕೊರೆವ ನೆಲ. ಅದರ ಮೇಲೆ ಎಂಬತ್ತೆರಡು ಮಕ್ಕಳು ಕೂತಿದ್ದಾರೆ. ಆ ತೆರೆದ ಶಾಲೆಗೆ ಶಿಕ್ಷಕ ಬರೋದೇ ವಾರಕ್ಕೆ ಮೂರು ದಿನ. ಉಳಿದಂತೆ ಮಕ್ಕಳೇ ಅಭ್ಯಾಸ ಮಾಡಬೇಕು. ಆದರೆ ಮಕ್ಕಳು ಛಲವಂತರು. ಅಲ್ಲೇ ಕೂತು ಸ್ಲೇಟಿನ ಮೇಲೆ ಮಣ್ಣನ್ನೇ ಶಾಯಿ ಮಾಡಿಕೊಂಡು ಕಡ್ಡಿಯಿಂದ ಲೆಕ್ಕ ಬರೆಯುತ್ತಿದ್ದಾರೆ.
ಗ್ರೆಗ್ ಕಣ್ಣಂಚಿನಲ್ಲಿ ನೀರಾಡಿತು. ಕೆ೨ದಿಂದ ಕೆಳಗಿಳಿಯುವಾಗ ದಾರಿ ತಪ್ಪಿದ ಗ್ರೆಗ್ ಇಲ್ಲೀಗ ಹಾಝಿ ಆಲಿಗೆ ಮಾತು ಕೊಟ್ಟ: ನಾನು ಇಲ್ಲಿ ಒಂದು ಶಾಲೆ ಕಟ್ತೇನೆ. ಪ್ರಾಮಿಸ್.
೧೯೯೩ರಲ್ಲಿ ನಡೆದ ಈ ಘಟನೆ ಗ್ರೆಗ್ ಮಾರ್ಟೆನ್‌ಸನ್‌ನ ಬದುಕನ್ನೇ ಬದಲಿಸಿತು. ಅವನ ಬದುಕು ಪಾಕಿಸ್ತಾನ, ಅಫಘಾನಿಸ್ತಾನದ ಸಾವಿರಾರು ಮಕ್ಕಳ ಬದುಕನ್ನೂ ಬದಲಿಸಿತು. ಭಯೋತ್ಪಾದನೆ, ಮತಾಂಧತೆಯ ಅಂಧಕಾರದ ನಡುವೆ ಗ್ರೆಗ್ ಹೊತ್ತಿಸಿದ ಈ ದೀಪಗಳು ಇಂದು ನಿಧಾನವಾಗಿ ಆ ಪ್ರದೇಶದ ಪ್ರಣತಿಗಳಾಗುತ್ತಿವೆ.
ಗ್ರೆಗ್ ಮಾರ್ಟೆನ್‌ಸನ್‌ನ ಈ ಯಶೋಗಾಥೆಯನ್ನು ವಿವರಿಸುವ ಪುಸ್ತಕ ‘ಥ್ರೀ ಕಪ್ಸ್ ಆಫ್ ಟೀ’ (ಮೂರು ಲೋಟ ಚಹಾ). ಡೇವಿಡ್ ಆಲಿವರ್ ರೆಲಿನ್ ಜೊತೆಗೂಡಿ ಗ್ರೆಗ್ ಬರೆದ ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಸತತ ೧೨೮ ವಾರ ಅಮೆರಿಕಾದ ಬೆಸ್ಟ್‌ಸೆಲ್ಲರ್ ಆಗಿದ್ದ ಪುಸ್ತಕವನ್ನು ವಾರವಿಡೀ ಓದಿ ಸಮಾಧಾನದ ಮನಸ್ಸಿನಿಂದ ಬರೆಯುತ್ತಿದ್ದೇನೆ. ಗ್ರೆಗ್ ಎಂಥ ಹುಚ್ಚುಮನಸ್ಸಿನ ವ್ಯಕ್ತಿತ್ವದವ….. ಏನೆಲ್ಲ ತಡವರಿಸಿದ, ಎಷ್ಟೆಲ್ಲ ಕನವರಿಸಿದ, ಹ್ಯಾಗೆಲ್ಲ ತತ್ತರಿಸಿದ, ಬಿಕ್ಕಳಿಸಿದ, ಏನೆಲ್ಲ ಎದುರಿಸಿದ……… ಎಲ್ಲವನ್ನೂ ಮತ್ತೆ ಮತ್ತೆ ಓದಿ ಈ ಪರಿಚಯ ಲೇಖನ ಬರೆಯುತ್ತಿದ್ದೇನೆ. ಈ ಪುಸ್ತಕವನ್ನು ನಿಮಗೆ ಪರಿಚಯಿಸೋದಕ್ಕೆ ನನಗೆ ಹೆಮ್ಮೆಯಾಗುತ್ತದೆ; ಏನೋ, ಒಳ್ಳೆಯ ಸಂಗತಿಯೊಂದನ್ನು ನಿಮ್ಮ ಜೊತೆ ಹಂಚಿಕೊಂಡ ಸಮಾಧಾನ.
ಕೋರ್ಫೆ ಗ್ರಾಮಕ್ಕೆ ಶಾಲೆ ಕಟ್ಟುವ ಭರವಸೆ ನೀಡಿ ಅಮೆರಿಕಾಗೆ ಮರಳಿದ ಗ್ರೆಗ್ ಹುಚ್ಚನ ಥರ ದಾನಕ್ಕಾಗಿ ಅಲೆಯುತ್ತಾನೆ. ೫೮೦ ಪತ್ರಗಳನ್ನು ಅಮೆರಿಕಾದ ಗಣ್ಯರಿಗೆ ಕಳಿಸಿಕೊಡುತ್ತಾನೆ. ಅದಕ್ಕಾಗಿ ಟೈಪ್‌ರೈಟರ್ ಬಾಡಿಗೆ ಪಡೆಯುತ್ತಾನೆ. ಒಂದೇ ಒಂದು ದೇಣಿಗೆ ಬರುತ್ತದೆ. ಗ್ರೆಗ್‌ನ ತಾಯಿ ಶಿಕ್ಷಕಿಯಾಗಿದ್ದ ಶಾಲೆಯ ಮಕ್ಕಳು ಪೆನ್ನೀಸ್ ಫಾರ್ ಪಾಕಿಸ್ತಾನ್’ ಎಂದು ಅಭಿಯಾನ ಮಾಡಿ ೬೨೩೪೫ ಪೆನ್ನಿಗಳನ್ನು ಸಂಗ್ರಹಿಸುತ್ತಾರೆ. ಗ್ರೆಗ್‌ನ ಸುದ್ದಿ ಕೊನೆಗೆ ಹೇಗೋ ವಿಜ್ಞಾನಿ, ಉದ್ಯಮಿ, ಪರ್ವತಾರೋಹಿ ಜೀನ್ ಹೋಯೆರ್ನಿ ಎಂಬಾತನಿಗೆ ತಲುಪುತ್ತದೆ. ಈತ ದೇಣಿಗೆ ನೀಡಬಲ್ಲ ಎಂದು ಗ್ರೆಗ್‌ಗೆ ಗೆಳೆಯ, ಉದ್ಯೋಗದಾತ ಟಾಮ್ ವಾಘನ್ ಹೇಳುತ್ತಾನೆ. ಗ್ರೆಗ್ ಹೋಯೆರ್ನಿಗೆ ಫೋನ್ ಮಾಡಿ ತನ್ನ ಯೋಜನೆಯನ್ನು ವಿವರಿಸುತ್ತಾನೆ. ‘ಅಲ್ಲಯ್ಯ, ನಿನ್ನ ಶಾಲೆ ಕಟ್ಟೋದಕ್ಕೆ ಎಷ್ಟು ಹಣ ಬೇಕು ಅಂತ ಖಚಿತವಾಗಿ ಹೆಳು’ ಎಂದು ಹೋಯೆರ್ನಿ ಗದರುತ್ತಾನೆ. ‘೧೨ ಸಾವಿರ ಡಾಲರ್’ ಎಂದು ಗ್ರೆಗ್ ಮೆತ್ತಗೆ ಉಸುರುತ್ತಾನೆ. ಹೌದ! ಅಷ್ಟರಲ್ಲೇ ಶಾಲೆ ಕಟ್ತೀಯ? ತಮಾಶೆ ಮಾಡ್ತಾ ಇಲ್ಲ ತಾನೆ?’ ಎಂದು ಹೋಯೆರ್ನಿ ಕೆಣಕುತ್ತಾನೆ. ಕೊನೆಗೆ ಗ್ರೆಗ್‌ನ ಅಂಚೆ ವಿಳಾಸ ಕೇಳಿ ಹನ್ನೆರಡು ಸಾವಿರ ಡಾಲರ್ ಕಳಿಸಿಕೊಡುತ್ತಾನೆ.
ಇಲ್ಲಿಂದ ಶುರುವಾದ ಗ್ರೆಗ್‌ನ ಶಾಲೆ ಕಟ್ಟುವ ಗಾಥೆ ೩೩೮ ಪುಟಗಳ ತುಂಬ ಹರಿದಿದೆ. ಶಾಲೆಗಾಗಿ ಹಣ ಸಂಗ್ರಹಿಸುವ ಹಾದಿಯಲ್ಲಿ ತನ್ನ ಕಾರನ್ನೇ ಗ್ರೆಗ್ ಮಾರಿ ೫೦೦ ಡಾಲರ್ ಗಿಟ್ಟಿಸಿದ್ದು, ಅವನ ಈ ಹುಚ್ಚಿಗೆ ಬೇಸತ್ತು ಅವನ ಪ್ರೇಯಸಿ ಮರೀನಾ ದೂರವಾಗಿದ್ದು, ರಾವಲ್ಪಿಂಡಿಯಲ್ಲಿ ಶಾಲಾ ಕಟ್ಟಡದ ವಸ್ತುಗಳಿಗಾಗಿ ಚೌಕಾಶಿ ಮಾಡಿದ್ದು, ಎರಡು ಡಾಲರ್ ದಿನಬಾಡಿಗೆಯ ಯಾವುದೋ ಲಾಡ್ಜಿನಲ್ಲಿ ಉಳಿದಿದ್ದು, ಸಲ್ವಾರ್ ಕಮೀಜ್ ಹರಿದುಹೋಗಿ ಅದನ್ನೇ ಹೊಲೆದುಕೊಂಡು ದಿನ ಕಳೆದಿದ್ದು….. ಗ್ರೆಗ್‌ನ ಕಥೆಯನ್ನು ಓದುತ್ತಿದ್ದರೆ ನಿಲ್ಲಿಸುವ ಮನಸ್ಸಾಗಲೇ ಇಲ್ಲ.
ಕೋರ್ಫೆಗೆ ಹೋಗುವ ಹಾದಿಯಲ್ಲಿ ಸ್ಕಾರ್ದುನಲ್ಲೇ ಎಲ್ಲ ಸಾಮಾನು ಇಳಿಸುವ ಅನಿವಾರ್ಯತೆಗೆ ಸಿಲುಕಿದ ಗ್ರೆಗ್ ಕೊನೆಗೆ ಹಾಝಿ ಆಲಿ ಮನೆಗೆ ಹೋಗಿ ಉದ್ವೇಗದಿಂದ ಉಸುರುತ್ತಾನೆ. ‘ ನಾನು ಶಾಲೆ ಕಟ್ಟಲು ಬಂದಿದೇನೆ.’
ಆದರೆ ಹಾಝಿ ಆಲಿಯ ಉತ್ತರ ಸಿದ್ಧವಾಗಿರುತ್ತೆ. ಅದೆಲ್ಲ ಸರಿ, ಈ ಸಾಮಾನನ್ನೆಲ್ಲ ಹ್ಯಾಗೆ ಈ ನದಿ ದಾಟಿಸಬೆಕು ಅಂತಿದೀಯ? ಮೊದಲು ಇಲ್ಲಿಗೆ ಒಂದು ಸೇತುವೆ ಆಗಬೇಕು. ಅದಾದ ಮೇಲೆ ಶಾಲೆ! ಸೇತುವೆಯ ಮಾತು ಕೇಳಿ ಗ್ರೆಗ್ ಹೌಹಾರುತ್ತಾನೆ. ಮತ್ತೆ ಸೇತುವೆಯ ಲೆಕ್ಕಾಚಾರ ಶುರುವಾಗುತ್ತೆ. ಮತ್ತೆ ಅಮೆರಿಕಾಗೆ ಮರಳಿದ ಗ್ರೆಗ್‌ಗೆ ಹೋಯೆರ್ನಿಯನ್ನು ಕೇಳದೆ ದಾರಿಯಿಲ್ಲ. ‘ಎಷ್ಟು ಬಜೆಟ್?’ ಎಂದು ಹೋಯೆರ್ನಿ ಪ್ರಶ್ನೆ. ಸುಮಾರು ೧೦ ಸಾವಿರ ಡಾಲರ್. ‘ಅರೆ, ನನ್ನ ಮಾಜಿ ಪತ್ನಿಯರ ವೀಕೆಂಡ್ ಖರ್ಚಿಗಿಂತ ಕಡಿಮೆ’ ಎಂದು ಹೋಯೆರ್ನಿ ತಮಾಶೆ ಮಾಡುತ್ತಾನೆ. ಸೇತುವೆಯ,ಶಾಳೆಯ ಫೋಟೋಗ್ರಾಫ್ ಬೇಕು ಎಂದು ಷರತ್ತು ಹಾಕಲು ಮರೆಯುವುದಿಲ್ಲ.
ಕೋರ್ಫೆಯ ಶಾಲೆ ಕಟ್ಟುವಾಗ ಎದುರಾದ ತಾಪತ್ರಯಗಳನ್ನು ನೀವು ಓದಬೇಕು. ಪಕ್ಕದ ಹಳ್ಳಿಯ ಮೌಲ್ವಿಯೊಬ್ಬ ಗ್ರೆಗ್ ವಿರುದ್ಧ ಫತ್ವಾ ಹೊರಡಿಸುವ ಘಟನೆಯೂ ನಡೆಯುತ್ತದೆ. ಆದರೆ ಹಾಝಿ ಆಲಿ ಎಂಬ ನುರ್ಮಧಾರ್‌ನ ಗಟ್ಟಿ ಬೆಂಬಲ ಮತ್ತು ಸಾಂತ್ವನ, ಅನುಭವದ ಮಾತುಗಳು ಗ್ರೆಗ್‌ನಿಗೆ ಶಕ್ತಿ ತುಂಬುತ್ತವೆ. ಇನ್ನೊಬ್ಬ ಮತಾಂಧನಿಗೆ ಊರಿನ ಒಂದು ಡಜನ್ ಕೋಣಗಳನ್ನು ಲಂಚ ಕೊಡುವಾಗ ಹಾಝಿ ಆಲಿ ನಗುತ್ತಾನೆ:’ಅವರಿಗೆ ಕೋಣಗಳು ಒಂದಷ್ಟು ದಿನದ ಆಹಾರ. ನಮಗೋ ಶಾಲೆ ಸಿಕ್ಕಿತಲ್ಲ, ಅದರಿಂದ ನಮ್ಮ ಮಕ್ಕಳಿಗೆ ಚಿರಂತನ ಶಿಕ್ಷಣ ಸಿಗುತ್ತಲ್ಲ… ಸಾಕು ಬಿಡು’ ಎನ್ನುತ್ತಾನೆ. ಈ ಅಜ್ಜನ ಅಪಾರ ಅನುಭವದ ಮುಂದೆ ಗ್ರೆಗ್ ತಲೆಬಾಗುತ್ತಾನೆ.
ಬಾಲ್ಟಿಸ್ತಾನದ ಈ ಜನ ಎಷ್ಟು ನಂಬುಗಸ್ತರು ಎನ್ನುವುದಕ್ಕೆ ಹಾಝಿ ಆಲಿ ಒಂದು ಸಲ ಗ್ರೆಗ್‌ಗೆ ಬಣ್ಣಿಸುವುದು ಹೀಗೆ.
“The first time you share with a Balti, you are a stranger. The second time you share a cup of tea, you are an honoured guest. The third time you share a cup of tea, you become family, and for our family, we are prepared to do anything, even die,” he said, laying his hand warmly on Mortenson’s own. “Doctor Greg, you must make time to shae three cups of tea. We may be uneducated. But we are not stupid. We have lived and survived here for a long time.”
ಅವನ ಈ ಮಾತೇ ಪುಸ್ತಕದ ಶೀರ್ಷಿಕೆಯಾಗಿದೆ.
ಶಾಲೆ ಕಟ್ಟೊಣ ವಿಳಂಬವಾದಾಗ ಗ್ರೆಗ್‌ಗೆ ಗಾಬರಿಯಾಗುತ್ತೆ. ಆಗ ಹಾಝಿ ಆಲಿ ಹೇಳುವುದಿಷ್ಟೆ:
“I Thank all-merciful Allah for all you have done. But the people of Korphe have been here without a school for six hundred years,’’ he said, smiling. “What is one winter more?”
ಖುರಾನ್ ಓದಲೂ ಬರದ ಹಾಝಿ ಆಲಿ ಒಮ್ಮೆ ಗ್ರೆಗ್‌ನಿಗೆ ಖುರಾನ್ ಪುಟಗಳನ್ನು ತಿರುವಿ ಹೇಳುವ ಮಾತಿದು:
“I can’t read it,” he said. “I can’t read anything. This is the great sadness in my life. I’ll do anything so the children of my village never have to know this feeling. I’ll pay any price so they have education they deserve.”
ಶಾಲೆಯನ್ನು ಕಟ್ಟಿದ ಮೇಲೆ ಹಾಝಿ ಆಲಿ ಮನೆಗೆ ಕರೆದುಕೊಂಡು ಹೋಗಿ ನಿರ್ಮಾಣದ ಖರ್ಚುವೆಚ್ಚಗಳ ಪುಸ್ತಕವನ್ನು ಗ್ರೆಗ್‌ಗೆ ತೋರಿಸುತ್ತಾನೆ. ಅದನ್ನು ನೋಡಿ ಗ್ರೆಗ್ ಹೃದಯ ತುಂಬಿ ಬರುತ್ತದೆ.
“The village had accounted for every rupee spent on the school, adding up the cost of every brick, nail, and board, and the wages paid to put t hem together. They used the old British colonial accounting method. And they did a much better job of it than I ever could have.”
ಇದು ಕೋರ್ಫೆ ಶಾಲೆಯ ಕಥೆ. ಈ ಶಾಲೆಯನ್ನು ಕಟ್ಟುವ ಶ್ರಮದ ದಿನಗಳಲ್ಲೇ ಗ್ರೆಗ್ ಮತ್ತೆ ಮತ್ತೆ ಅಮೆರಿಕಾಗೆ ಬರುತ್ತಾನೆ. ದೇಣಿಗೆಗಾಗಿ ಉಪನ್ಯಾಸ ನೀಡುತ್ತಾನೆ…. ಹೋಯೆರ್ನಿಯ ಆರೋಗ್ಯ ಕೆಡುತ್ತದೆ. ಆತನ ಕೊನೆಯ ದಿನಗಳಲ್ಲಿ ಗ್ರೆಗ್ ಹೋಯೆರ್ನಿಯ ದಾದಿಯಾಗಿ ದಿನ ಕಳೆಯುತ್ತಾನೆ. ಆಸ್ಪತ್ರೆಯ ರೂಮಿನಲ್ಲಿ ಹಾಸಿಗೆ ಎದುರೇ ಕೋರ್ಫೆ ಶಾಲೆಯ ಫೋಟೋ ನೇತುಹಾಕುವ ಹಟ ಹೋಯೆರ್ನಿಯದು. ಆಸ್ಪತ್ರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಆದರೆ ಹೋಯೆರ್ನಿ ಬಿಡಬೇಕಲ್ಲ….. ಇಡೀ ಆಸ್ಪತ್ರೆಯನ್ನೇ ನಾನು ಕೊಳ್ಳಬಲ್ಲೆ ಹುಷಾರ್….. ಈ ಚಿತ್ರ ಮಾತ್ರ ನನ್ನ ಎದುರಿಗೆ ಇರ್‍ಲೇಬೇಕು ಎಂದು ಅಬ್ಬರಿಸುತ್ತಾನೆ.
ಸಾವಿನ ಮನೆಗೆ ಹತ್ತಿರವಾದ ಬಗ್ಗೆ ಹೋಯೆರ್ನಿಗೆ ಸುಳಿವು ಸಿಕ್ಕಿರುತ್ತೆ.
ಅಷ್ಟು ಹೊತ್ತಿಗೆ ಸೆಂಟ್ರಲ್ ಏಶಿಯನ್ ಇನ್‌ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಕಟ್ಟು ಎಂದು ಹೋಯೆರ್ನಿಯೇ ಗ್ರೆಗ್‌ಗೆ ಹೇಳಿದ್ದ. ಈ ಸಂಸ್ಥೆಗೆ ಹೋಯೆರ್ನಿ ತನ್ನ ಮರಣಪತ್ರದಲ್ಲಿ ಒಂದು ಮಿಲಯ ಡಾಲರ್ ಹಣವನ್ನು ದತ್ತಿಯಾಗಿ ನೀಡುತ್ತಾನೆ. ಸೆಮಿಕಂಡಕ್ಟರ್ ಕ್ರಾಂತಿಯ ಪ್ರಮುಖ ಹರಿಕಾರ, ಇಂಟೆಗ್ರೇಟೆಡ್ ಸರ್ಕೂಟ್‌ನ ಸಿದ್ಧಾಂತವನ್ನು ಮಂಡಿಸಿ ಇಂದಿನ ಐಟಿ ಯುಗಕ್ಕೆ ನಾಂದಿ ಹಾಡಿದ ಹೋಯೆರ್ನಿಗೆ ಸಮಾಧಾನ ಸಿಕ್ಕಿದ್ದು ಕೋರ್ಫೆ ಶಾಲೆ ಕಟ್ಟಿದಾಗಲೇ. ಕೊನೆಗಾಲದಲ್ಲಿ ಸ್ವೀಡನ್ನಿನ ಗೆಳೆಯನಿಗೆ ಫೋನ್ ಮಾಡಿದ ಹೋಯೆರ್ನಿ ಅವನನ್ನು ಕೆಣಕುತ್ತಾನೆ: ನೋಡು, ಕಾರಕೋರಮ್ ಕಣಿವೆಯಲ್ಲಿ ನಾನು ಒಂದು ಶಾಲೆ ಕಟ್ಟಿಸಿದ್ದೇನೆ ಕಣೋ…. ಈ ಐವತ್ತು ವರ್ಷ ನೀನು ಏನು ಮಾಡಿದೀಯ?
ಕೋರ್ಫೆ ಶಾಲೆಯೊಂದಿಗೆ ಇನ್ನೂ ಹಲವು ಶಾಲೆಗಳು ತಲೆಯೆತ್ತುತ್ತವೆ. ಹಳ್ಳಿಗಳಲ್ಲಿ ವೈದ್ಯಕೀಯ ನೆರವಿಗೂ ಗ್ರೆಗ್ ಮುಂದಾಗುತ್ತಾನೆ. ಈ ಮಧ್ಯೆ ಗ್ರೆಗ್‌ಗೆ ತಾರಾ ಬಿಶಪ್ ಎಂಬ ಸಂಗಾತಿ ಸಿಗುತ್ತಾಳೆ. ಆರೇ ದಿನಗಳ ಪರಿಚಯದಲ್ಲಿ ಅವರ ಮದುವೆ.
ಪರಿಚಯವಿಲ್ಲದ ಪಾಕಿಸ್ತಾನಿ ಗುಡ್ಡಗಾಡು ಪ್ರದೇಶಕ್ಕೆ ಹೋದ ಗ್ರೆಗ್ ಅಪಹರಣಕ್ಕೊಳಗಾಗಿದ್ದು, ಶಾಲೆ ಕಟ್ಟುವ ಅಭಿಯಾನಕ್ಕೆ ಉತ್ತರ ಪಾಕಿಸ್ತಾನದ ಶಿಯಾ ಮುಸ್ಲಿಮ್ ಸಮುದಾಯದ ನಾಯಕ ಸೈಯದ್ ಅಬ್ಬಾಸ್‌ನ ಭದ್ರ ಬೆಂಬಲ ಸಿಕ್ಕಿದ್ದು, 9/೧೧ರ ನ್ಯೂಯಾರ್ಕ್ ಅವಳಿ ಕಟ್ಟಡ ಧ್ವಂಸ, ಪಾಕಿಸ್ತಾನದ – ಅಫಘಾನಿಸ್ತಾನದ ರಾಜಕೀಯ ಅಲ್ಲೋಲಕಲ್ಲೋಲಗಳು, – ಎಲ್ಲದರ ನಡುವೆಯೂ ಗ್ರೆಗ್ ತನ್ನ ಯೋಜನೆಯನ್ನು ಮುಂದುವರೆಸುತ್ತಾನೆ. ಈಗಲೂ ಗ್ರೆಗ್ ಈ ಕೆಲಸದಲ್ಲೇ ಮಗ್ನ.
ಥ್ರೀ ಕಪ್ಸ್ ಆಫ್ ಟೀ’ – ತಾಲಿಬಾನ್, ಅಲ್ ಖೈದಾನಂಥ ಉಗ್ರಗಾಮಿ, ಹಿಂಸಾವಾದೀ ಸಂಘಟನೆಗಳು ಬೆಳೆದ ಸಂದರ್ಭದಲ್ಲೇ ಚಿಗುರಿದ ಅಭಿಯಾನದ ಕಥೆ. ಅದರಲ್ಲೂ ಈ ಚಳವಳಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೇ ಹೆಚ್ಚು ಒತ್ತು. ಗಂಡುಮಕ್ಕಳು ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಾರೆ. ಹೆಣ್ಣುಮಕ್ಕಳು ಮಾತ್ರ ಹಳ್ಳಿಯಲ್ಲೇ ಇದ್ದು ಕುಟುಂಬಗಳ ಮೂಲಾಧಾರವಾಗುತ್ತಾರೆ ಎಂಬ ಸರಳ ವಾದವೇ ಈ ಆದ್ಯತೆಗೆ ಹಿನ್ನೆಲೆ. ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನೀ ಹಳ್ಳಿಗರು ಪಟ್ಟ ಪಾಡಿನ ವಿವರಣೆಯೂ ಪುಸ್ತಕದಲ್ಲಿದೆ. ಭಾರತವಿರಲಿ, ಪಾಕಿಸ್ತಾನವಿರಲಿ, ಯುದ್ಧವೆಂದೂ ಜನರ ಕಣ್ಣೀರು ಒರೆಸುವುದಿಲ್ಲ ಎಂಬ ಉದಾತ್ತ ಭಾವ ನಿಮ್ಮನ್ನು ಆವರಿಸಿದರೆ ಅಚ್ಚರಿಯಿಲ್ಲ.
ಪಾಕಿಸ್ತಾನದ ಆಂತರಿಕ ಸಮರದ ಬಗ್ಗೆ ವರದಿ ಬರೆಯಲು ಬಂದಿದ್ದ ಫೆಡಾರ್ಕೋ ಒಮ್ಮೆ ಗ್ರೆಗ್ ಜೊತೆಗೆ ಕೋರ್ಫೆಗೆ ಹೋಗುತ್ತಾನೆ. ಅಲ್ಲಿ ಎಲ್ಲ ಗಂಡಸರೇ ತುಂಬಿದ್ದ ಸಭೆಯಲ್ಲಿ ಜಹಾನ್ ಎಂಬ ಯುವತಿ (ಈಕೆ ಕೋರ್ಫೆ ಶಾಲೆಯಲ್ಲೇ ಓದಿ ಬೆಳೆದಿದ್ದು) ಮುಂದೆ ನುಗ್ಗಿ ಬಂದು ಗ್ರೆಗ್, ನೀವು ನನ್ನ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡ್ತೀನಿ ಅಂದಿದ್ರಿ. ಈ ವಾರಾನೇ ನಾನು ವೈದ್ಯಕೀಯ ಶಿಕ್ಷಣ ಕೋರ್ಸ್ ಸೇರ್‍ಕೋಬೇಕು… ನಂಗೆ ಈಗ್ಲೇ ೨೦ ಸಾವಿರ ರೂಪಾಯಿ ಬೇಕು ಎಂದು ಪಟ್ಟು ಹಿಡಿದದ್ದನ್ನು ನೋಡಿ ಫೆಡಾರ್ಕೋ ತಬ್ಬಿಬ್ಬಾಗುತ್ತಾನೆ. ಪರಂಪರೆಯ ಹದಿನಾರು ವೃತ್ತಗಳನ್ನು ದಾಟಿ ಬಂದ ಈ ಹದಿನಾರರ ಹುಡುಗಿ ಹೀಗೆ ದಿಟ್ಟೆಯಾಗಿ ಮಾತನಾಡಿದ್ದನ್ನು ನೋಡಿ ನನಗೆ ತುಂಬಾ ಅಚ್ಚರಿಯಾಯ್ತು. ಆಗಲೇ ನಾನು ಗ್ರೆಗ್‌ಗೆ ಹೇಳಿದೆ: ‘ನಾನು ವರದಿ ಮಾಡೋದಕ್ಕೆ ಬಂದಿದ್ದೇನೋ ಹಿಂಸೆಯ ಬಗ್ಗೆ. ಆದರೆ ಅದೆಲ್ಲ ಕ್ಷುಲ್ಲಕ ಅಂತನ್ನಿಸಿದೆ. ಈ ಘಟನೆಯೇ ನನಗೆ ಮುಖ್ಯ. ನಾನು ವರದಿ ಮಾಡೋದಿದ್ರೆ ಇದನ್ನೇ!’
ಅದರ ಫಲವಾಗಿ ‘ಪೆರೇಡ್’ ಪತ್ರಿಕೆಯಲ್ಲಿ ಗ್ರೆಗ್ ಮಾರ್ಟೆನ್‌ಸನ್‌ನ ಶಾಲಾ ಅಭಿಯಾನದ ಬಗ್ಗೆ ಮುಖಪುಟ ವರದಿ ಪ್ರಕಟವಾಗುತ್ತೆ. ಇರಾಖಿನ ಬಾಗ್ದಾದ್ ಹೊರವಲಯದಲ್ಲಿ ಅಮೆರಿಕಾದ ಪಡೆಗಳು ಸದ್ದಾಮ್ ಹುಸೇನ್ ಮೇಲೆ ಆಕ್ರಮಣ ಮಾಡಲು ಕೊನೆಗಳಿಗೆಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಂದ ಈ ಮುಖಪುಟ ಲೇಖನದ ಶೀರ್ಷಿಕೆ : He fights terror with books. ಇನ್ನೇನು ಬೇಕು? ಗ್ರೆಗ್‌ಗೆ ಪೆರೇಡ್ ಪತ್ರಿಕೆಯ ಓದುಗರಿಂದ ದೇಣಿಗೆಯ ಸುರಿಮಳೆ.
ಈಗ? ಗ್ರೆಗ್‌ನ ಸೆಂಟ್ರಲ್ ಏಶ್ಯಾ ಇನ್‌ಸ್ಟಿಟ್ಯೂಟ್‌ನಿಂದ ಪಾಕಿಸ್ತಾನದಲ್ಲಿ ೧೦೩ ಮತ್ತು ಆಫಘಾನಿಸ್ತಾನದಲ್ಲಿ ೭೬ ಶಾಲೆಗಳು ತಲೆಯೆತ್ತಿವೆ. ಸೌದಿ ಹಣದ ಥೈಲಿಯಿಂದ ಸಾವಿರಾರು ಮದ್ರಸಾಗಳು ಕಣಿವೆಯ ತುಂಬ ತಲೆಯೆತ್ತಿ ಗ್ರೆಗ್‌ನ ಶಾಂತಿ ಯತ್ನಕ್ಕೆ ಸವಾಲಾಗಿವೆ. ಆದರೂ ಗ್ರೆಗ್ ತನ್ನ ಯತ್ನವನ್ನು ಬಿಟ್ಟಿಲ್ಲ. ಸೆಲ್ವಾರ್ ತೊಟ್ಟು ಮಕ್ಕಳ ಜೊತೆ ಅಡ್ಡಾಡುತ್ತ, ತನ್ನ ನಿಷ್ಠ ಟೀಮ್ ಜೊತೆಗೆ ಚರ್ಚಿಸುತ್ತ ಇನ್ನೆಲ್ಲಿ ಶಾಲೆ ಕಟ್ಟೋಣ ಎಂದು ನಕಾಶೆ ಹಿಡಿದು ಕೂರುತ್ತಾನೆ.
ಕೆ೨ ಪರ್ವತದ ಶಿಖರಾಗ್ರವನ್ನೂ ಮೆಟ್ಟಿ ಮತ್ತೆಲ್ಲೋ ಉತ್ತುಂಗ ತಲುಪುತ್ತಿರುವ ಅನೂಹ್ಯ ಸುಖ ಗ್ರೆಗ್‌ನ ಎದೆಯಾಳದಲ್ಲಿ ಪಸರಿಸಿದೆ. ನಿಜಕ್ಕೂ ಆತ ದಾರಿ ತಪ್ಪಿದನೆ? ಅಥವಾ ಕೋರ್ಫೆ ಕುಗ್ರಾಮದ ಹಾಝಿ ಆಲಿಯೆಂಬ ಎನಿಗ್ಮಾ ಅವನನ್ನು ಸೆಳೆಯಿತೆ?
ಗ್ರೆಗ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆ ಇದ್ದರೆ ಇಲ್ಲಿ ಕೆಲವು ವೆಬ್ ಕೊಂಡಿಗಳಿವೆ. ಭೇಟಿ ಕೊಡಿ.
ಜೀನ್ ಹೋಯೆರ್ನಿಯ ಇಂಟೆಗ್ರೇಟೆಡ್ ಸರ್ಕೂಟ್ (ಐಸಿ) ಸಂಶೋಧನೆ ಕುರಿತ ವಿಜ್ಞಾನ ಲೇಖನಕ್ಕಾಗಿ ಇ-ಜ್ನಾನ ಬ್ಲಾಗ್‌ಸ್ಪಾಟ್‌ಗೆ ಭೇಟಿ ಕೊಡಿ.
ಚಿತ್ರಕೃಪೆ: ಗ್ರೆಗ್ ಮಾರ್ಟೆನ್‌ಸನ್ ಮತ್ತು ಅವರ ಸಂಸ್ಥೆಯ ವೆಬ್‌ಸೈಟ್
1 Comment
Pingback: ಹಲ್ಕಟ್ಗಿರಿ ಸ್ಟೋರಿಗೆ ಹೈದರ್ರೇ ಯೋಗ್ಯ! | ಬೇಳೂರು ಸುದರ್ಶನ