ಸ್ವಾರ್ಥಿಯೊಬ್ಬನ ಸ್ವಗತ
೨೧-೧೦-೮೫ ದಾವಣಗೆರೆ
ಶಬ್ದನಿಶ್ಶಬ್ದಗಳ ನಡುವೆ ಹೇಗಿದ್ದೀತೋ ಹಾಗಿರುವಾಸೆ
ಮಾತು ಮೌನದ ನಡುವೆ ಗಿಡವರಳಿದಂತೆ
ಬಿದ್ದ ಮಂಜಿನ ಹನಿಗೆ, ಅಪರೂಪಕ್ಕೆ ಕುಳಿತ ಚಿಟ್ಟೆಗೆ
ತುಟಿಕೊಡುವ ಎಲೆಯಾದರೂ ಸಾಕು; ನನಗೆ ನಾನು.
ಪ್ರೀತಿಸಿದ ಹುಡುಗಿ ಕೆನ್ನೆಯ ಬೆವರ ಹನಿಯಾದರೂ ಸರಿಯೆ –
ಬಿದ್ದರವಳೆದೆಯಲ್ಲೇ ಮೋಕ್ಷ ಕಾಣುವೆನು.
ನಿನ್ನ ಕಾಡುತ್ತಿರುವ ನೂರಾರು ಪ್ರಶ್ನೆಗಳ ನನ್ನೆದೆಯಲ್ಲಿ
ಕರಗಿಸುವೆಯಾ? ಪ್ರಿಯ ಓದುಗ, ನಾನೊಬ್ಬ ಸೂರ್ಯ
ಆದರೂ ಆದೆ, ದಯವಿಟ್ಟು ನೀನು ಮಾತ್ರ ಚಂದ್ರನಾಗಿ
ಅಥವಾ ಎದುರುಗನ್ನಡಿಯಾಗದಿರು; ನನಗೆ ನಾನೇ.
ಈ ಆಸೆಗಳು ಮಾತುಗಳಾಗುವ ಮುನ್ನ ಶಾಯಿ
-ಯಾಗಿದ್ದವೇನೋ… ಈಗ ಕಾಗದಕ್ಕಂಟಿರುವ ಇವು
ನನ್ನ ಬಿಟ್ಟಿರಲೂ ಬಹುದೆ? ಇದ್ದೇನು, ನನಗೆ ನಾನು.
ಸ್ವಾರ್ಥಿಯೊಬ್ಬನ ಸ್ವಗತವಿದು; ಸ್ವಾರ್ಥಿಗಳು ಓದಬಹುದು
ಕನಸಿನ ರೆಕ್ಕೆಬಿಚ್ಚುತ್ತ ಮುಸ್ಸಂಜೆಗಳು ಕಳೆಯುವ ಮೊದಲು
ಸ್ವಚ್ಛಂದ ಹಾರಬಹುದು