ಬೆರಳಿನಲಿ ತೆರೆದಿಟ್ಟ ಪ್ರೀತಿಯರಳಿತು ನನ್ನ
ಕನಸುಗಳ ತೊಟ್ಟಿಲಿಗೆ ತುಟಿಯ ಮುದ್ರೆ
ಎದೆ ಕಟಾಂಜನದಲ್ಲಿ ನಿನ್ನ ಕಣ್ಣಿನ ಹಣತೆ
ಅರ್ಥವಾಗದ ಗಳಿಗೆ ಮುರಿಯುತ್ತಿದೆ.
ಜುಮುರು ಮಂಜಿನ ಹೊರಗೆ ಜಿಗಿದ ಬೆಕ್ಕಿನ ವರಸೆ
ಪುಟ್ಟ ಮಕ್ಕಳ ಹಾಡು, ಕೊನೆಗೆ ವಾರ್ತೆ.
ಶಬ್ದಲೋಕದ ಭ್ರಮೆಗೆ ಸೋತ ನನ್ನೆದುರಿನಲಿ
ಕಾಫಿ ಬಟ್ಟಲು, ನೀನಲ್ಲಿ ಕಂಡುಬರುವೆ.
ಈ ಜಗತ್ತಿನ ಸರ್ವ ಸರಹದ್ದುಗಳ ಮೀರಿ
ನಮ್ಮ ಸಂಬಂಧಗಳು ಸಿಡಿಯುತ್ತಿವೆ.
ನೂರು ಯುದ್ಧಗಳಿಲ್ಲಿ ನನ್ನೊಳಗೆ ಕುದಿಯುತಿವೆ
ರಣಹದ್ದುಗಳು ರೆಕ್ಕೆ ಬಡಿಯುತ್ತಿವೆ.
ರಸ್ತೆಗಳಲ್ಲಿ ನಡುಗಿದ ನನ್ನ ಹೆಜ್ಜೆಗಳೆಲ್ಲ
ಎಲ್ಲಿಗೋ ತಲುಪಿ ಉಸ್ಸೆಂದಿವೆ.
ನೂರಾರು ಮನುಷ್ಯರನ್ನು ಮುಟ್ಟಿ ಬೆರಳುಗಳೆಲ್ಲ
ಗೀರು ಕಾಣದ ಹಾಗೆ ಸವೆದಂತಿವೆ.
ಪ್ರೀತಿ ಮಾತುಸುರಿದ್ದು ನಿಜ ಹುಡುಗಿ. ನಿನ್ನಲ್ಲಿ
ಒಪ್ಪಿಸಿಕೊಂಡೆ ಹುಡುಗುತನವನ್ನು
ಬಹಳ ಹೇಳುವುದಕ್ಕೆ ಸಮಯ ತಪ್ಪಿದೆ ಈಗ
ನಿರ್ಧಾರಗಳ ಮಾತು ತಿಳಿಸಲೇನು?
ನಿನ್ನ ಸ್ನೇಹದ ಜತೆಗೆ ಸಂಧಾನವಾಗಲಿಕೆ
ನನ್ನಲ್ಲಿ ಹೊತ್ತುರಿವ ಪ್ರೇಮ ಸೂರ್ಯ
ಒಪ್ಪಲಾರ ಎಂಬ ಉಸಿರುಕಟ್ಟುವ ಸತ್ಯ
ಹೇಳುತ್ತಿರುವೆ ಕ್ಷಮಿಸಿ ಬಿಡು ನನ್ನ.
ಮುಖದ ದುಃಖದ ಜತೆಗೆ ಮಾತುಕತೆ ನಡೆಸಿರುವ
ನಿನ್ನ ತುಟಿ ಬೆವರಿಗಿದೋ ನನ್ನ ನಮನ
ಮುತ್ತುಗಳ ಬರೆದಿಟ್ಟ, ನೆನಪುಗಳ ಒರೆಸಿಟ್ಟ
ಚಳಿಬಿದ್ದ ಎದೆಯಲ್ಲಿ ಸುಪ್ತಕದನ.
ಹೃದಯಮಾರ್ದವದಲ್ಲಿ ಮಿಂದ ನೆನಪುಗಳೀಗ
ವರ್ತಮಾನದ ಬಿಸಿಲು ಕಾಯುತ್ತಿವೆ
ನೆಲಕ್ಕಿಳಿದ ಭೂತಾಂಶಗಳ ಹೀರಿದ ನನ್ನ
ಭವಿಷ್ಯದ ಬೇರು ಚಿಗುರುತ್ತಿದೆ.
೧೯೮೮ / ಬೆಂಗಳೂರು