ಜಲಪಾತದ ಶಬ್ದ
೧೯-೬-೮೫
ಸಾಗರ

ನೀ ಅಭಗ್ನ ನೀ ತೆರೆದ ನಯನ
ನೀ ಜಲಪಾತದ ಶಬ್ದ
ನನ್ನ ತುಟಿ ಮೇಲೆ ನೀನೇ ಮಂಜುಹನಿ
ನಾ ಬರಿ ಅಪಘಾತದ ಲಬ್ದ

ಓ ರಾಣೀ ಈ ಶಬ್ದದಂಗಳಕೆ
ಯಾಕೆ ನನ್ನ ತಂದೆ?
ನನ್ನ ಕಣ್ಣ ಹನಿ ನಿನಗೆ ನಗು ತಂದು
ತಿವಿಯಿತಲ್ಲ ಹಿಂದೆ?

ನಿನ್ನ ದನಿಗೆ ಬರಗಾಲದ ಉಸಿರೂ
ಕೆನೆಯ ಕಟ್ಟಿತಂತೆ
ಹಬ್ಬಿದ ನಸುಕನು ತಬ್ಬಿ ತಂಗಾಳಿ
ತೆನೆಯ  ಬಿಟ್ಟಿತಂತೆ

ಎದೆಯ ಏರಿ ಕೊರಳುಬ್ಬಿಸಿ ಬಂದಿಹ
ಅಪರೂಪದ ಅಳುವೇ,
ಬೇಡ ನಡೆದು ಬಿಡು ಸಾಕು ಎರಡು ಹನಿ
ರೆಪ್ಪೆಯಲ್ಲೆ ನಗುವೆ

ಜಾರಿ ಬಿದ್ದ ಹನಿ  ನಾನು ತಳದಲ್ಲಿ
ನೀರಿನೊಳಗೆ ಲೀನ
ಏರಿಬಂದ ಲಘು ಮೋಡದ ನಡುವೆಯೆ
ಕಳೆದ ಕಾಲಮಾನ

ನಾ ಕಳೆದ ಹಲವರ್ಷಗಳಾದವು
ಹುಡುಕಿಕೊಟ್ಟೆ ನೀನು
ಉಳಿದ ಚಣಹೊತ್ತು ಮಾತನಾಡಿಸದೆ
ಹೊರಟು ಬಿಡುವಿಯೇನು?

ನಿನ್ನ ಎತ್ತರಕೆ ಅಥವಾ ಹತ್ತಿರಕೆ
ಎಂದು ನನ್ನ ಪಯಣ?
ಕೃತಕ ದಾರಿಯಲಿ ಹೆಜ್ಜೆ ನೆಡಲೊಲ್ಲೆ
ಅಲ್ಲೆ ನನ್ನ ಹರಣ.

Share.
Leave A Reply Cancel Reply
Exit mobile version