ಹರಿವ ನದಿಗಿದೆ ಜೀವ
೧೪-೧೨-೮೮ 
ಬೆಂಗಳೂರು

ಶತಶತಾಬ್ದಿಗಳಾಗಿ ಸರಿದುಹೋಗಿದೆ ಕಾಲ
ಸವೆಯಲಾರದ ನೆಲ. ನೀರಿನ ಸೆಲೆ
ಬತ್ತದಂತೆ ಮಳೆ ಹೊಯ್ದೀಗ
ಅಣುಸ್ಥಾವರಕ್ಕೆ ಹಲೋ ಎಂಬ ಸಮಯ.

ಜೀವಲೋಕಕ್ಕೆ ಸ್ನೇಹದ ಕಕ್ಷೆ
ಭಯ ಕುತೂಹಲ ಕಳೆವ ಮಮತಾರಕ್ಷೆ
ಎದೆಮನಸುಗಳಲ್ಲಿ ಸಂಬಂಧಗಳ ಭಾಷೆ
ಕಲಿತೆವೋ ಮರೆತೆವೋ ತಿಳಿಯೆವು.

ದೃಷ್ಟಿಗಿದೆ ಬೇಜಾರು ಕೊಡುವ ದಾರಿಗಳು
ವೇದನೆಗೆ ಕಿಚ್ಚಿಡುವ ಸಿಗ್ನಲುಗಳು
ಬದುಕಿಗಿದೆ ದಿಕ್ಕು, ದರಿದ್ರ ಕನಸುಗಳು
ಸಂದೇಹಗಳು, ನನ್ನ ಗುರಿಯೆತ್ತ?

ಭಿಕ್ಷೆಯಾಗಿದೆ ಪ್ರೇಮ ನಕ್ಷೆಯಾಗಿದೆ ದೇಶ
ಖಾಲಿಯಾಗಿದೆ ಮೆದುಳ ಭಾವಕೋಶ
ತತ್ತರಿಸಿ ತಡವರಿಸಿ ನಿಂತೆ ನೀರವದಲ್ಲಿ
ದಯವಿರದ ದುಷ್ಟ ನಿಶ್ಶಬ್ದದಲ್ಲಿ.

ಕಲ್ಲು ರಸ್ತೆ ಕಮಾನು ಸೇತುವೆ ಕಟ್ಟಿದ್ದಾರೆ
ಸುದ್ದಿ ಹಂಚಲು ಹುಡುಗರಿದ್ದಾರೆ
ದೂರವಾಣಿ, ತಂತಿ, ವಿದ್ಯುತ್ತಿನಲ್ಲಿ ಶಕ್ತಿ
ನಾನು ಬಳಲಿದ್ದೇನೆ ಬೃಂದಾವನ ಸುತ್ತಿ.

ಬರೆದೆ ಸಾವಿರ ಸಾಲು ಖುಷಿಗೆ
ಮಾತುಸುರಿದ್ದೆ ಅವರಿವರಿಗೆ ಖಾಸಗಿಯಾಗಿ
ಅರಳಿದವ ನಾನಾಗಿ ಹರಡಿದ ದುಃಖ
ಸುಖವನ್ನು ಕದಡಿದೆ.

ತೆರೆದ ಬಾಗಿಲಿನಲ್ಲಿ ದಾಳಿಯಿಟ್ಟಿದೆ ನೋವು
ಯೋಜನೆಗಳತ್ತ ರಣಹದ್ದು ಕಿಚ್ಚಿಟ್ಟಿದೆ
ಗೆರೆಯಂಚಿಗಿರುವಂಥ ಹಗುರಬಿಂದುವಿನಂತೆ
ನನ್ನುಸಿರು ಮಾತ್ರ ಸುಟವಾಗಿದೆ.

ಆಗಸಕ್ಕಿರುವಂಥ ಅದೃಶ್ಯ ಸೀಮೆಗಳು
ಅಡಕವಾಗಿವೆ ನನ್ನ ಭುಜದ ಸುತ್ತ
ನಾನು ಬಂದಿದ್ದಿಲ್ಲಿ ಅನಾಥನಾಗಿ ಬೀಗುತ್ತ
ಬೆಳೆಸಿದೆ ನನ್ನ ಒಂಟಿತನದ ಹುತ್ತ.

ಇಲ್ಲಿ ನಾನಿಷ್ಟು ಹೇಳುವವರೆಗೆ ಅದರ
ಮಟ್ಟಿಗೆ ಸಿದ್ಧಾರ್ಥನಾಗಿದ್ದೇನೆಂಬ ಜಂಬ
ಬಂದು ಬುದ್ಧನನ್ನು ಕೇಳಿದೆ : ಅಯ್ಯಾ
ನೀನು ಯಾರು? ನನಗೆ ನಾನು ಯಾರು?

ಶತಾಬ್ದಿಗಳ ಮಾತು ಇದುವರೆಗೆ ಎಳೆತಂದು
ಬರಿಯ ತರ್ಕಗಳಲ್ಲಿ ಹೂತುಹೋಗಿ
ನೀರೆರೆದ ನೆಲಚಿಗುರಿ ಎತ್ತರವಾಗಿ
ವಿಕಿರಣವಾಗಿ ಜೀವ ತೂಕಡಿಸಿದೆ.

ಸುಖದ ಬಟ್ಟಲಿನಲ್ಲಿ ಕನಸು ತೊಟ್ಟಿಲಿನಲ್ಲಿ
ಕರಗಿ ಹೋಗುವ ಮೊದಲು ಕೊನೆಯ ಮಾತು
ಹರಿವ ನದಿಗಿದೆ ಜೀವ, ಸಮುದ್ರ&#3221
;&
#3277;ಕೂ ಒಂದು
ಧೀಮಂತ ಹೃದಯ ಉಪ್ಪು ಹೊರತು.

Share.
Leave A Reply Cancel Reply
Exit mobile version