ತಾರಾಲೋಕದ ಅನಾಥ ಹುಡುಗ
೨೦-೨-೮೭
ಬೆಂಗಳೂರು
ಸುದ್ದಿ : ತಾರಾಲೋಕದ ಅನಾಥ ಹುಡುಗ
ಮರೆತಿದ್ದಾನೆ ಮನೆಯನ್ನು
ಅಪ್ಪ ಅಮ್ಮ ಅಣ್ಣ ತಂಗಿ
ಗೆಳೆಯರ ಸ್ನೇಹದ ತೆನೆಯನ್ನು
ತಾರಾಲೋಕದ ಅನಾಥ ಹುಡುಗ
ಹುಡುಕುತ್ತಾನೆ ಹೊಸದಾರಿ
ರಮ್ಯಗನಸುಗಳು ಕರಗಿದ ಹಾಗೇ
ವಾಸ್ತವದೆಡೆ ಜಾರಿ
ತಾರಾಲೋಕದ ಅನಾಥ ಹುಡುಗ
ತುಡಿಯುತ್ತಾನೆ ಪ್ರೇಮಕ್ಕೆ
ಪುಟ್ಟ ಹುಡುಗಿಯರು ಸರಿಯುತ್ತಾರೆ
ಭವ್ಯ ಸೌಧಗಳ ಬಾಗಿಲಿಗೆ
ಜನ : ಜಡಿಮಳೆಯಲ್ಲಿ ತೋಯುವ ಹುಡುಗ
ಸುಡಿಬಿಸಿಲಲ್ಲಿ ನೋಯುವ ಹುಡುಗ
ಅನಾಥ ಹುಡುಗ ಅನಾಥ ಹುಡುಗ
ತಾರಾಲೋಕದ ಹುಡುಗ
ರಸ್ತೆ : ತಾರಾಲೋಕದ ಅನಾಥ ಹುಡುಗ
ಕತ್ತಲು ಜಾರದಿರು
ರಸ್ತೆ ದೀಪಗಳ ಕಣ್ಣುಮುಚ್ಚಾಲೆ
ಬೆಳಕನು ನಂಬದಿರು
ಹೂವಿನ ಹಾಗೆ ಮಗುವಿನ ಹಾಗೆ
ಯಾರೂ ಅರಳೋದಿಲ್ಲ
ಕವನದ ಹಾಗೆ ಕಥನದ ಹಾಗೆ
ಏನೂ ನಡೆಯೋದಿಲ್ಲ
ದಿಕ್ಕು ತಪ್ಪುವುದು ಸುಳ್ಳನೊಪ್ಪುವುದು
ನಿಜವಾಗ್ಯೂ ನಿಜ ಹುಡುಗಾ
ಸವಲತ್ತಿನ ಜತೆ ಸೂಳೆಗಾರಿಕೆ
ನಿಜವಾಗಿಯೂ ನಿಜ.
ಅನಾಥ ಹುಡುಗಾ ಅಳದಿರು ಪುಟ್ಟಾ
ಯಾರೋ ಬರಬಹುದು
ಎದೆಯ ಏಕಾಂಗಿತನದ ಭಯಬೇಡ
ನಿನ್ನನೊಪ್ಪಬಹುದು
ಜನ : ಅನಾಥ ಹುಡುಗ ಅನಾಥ ಹುಡುಗ
ತಾರಾಲೋಕದ ಹುಡುಗ
ಸುದ್ದಿ : ಕೆಲವು ಸಂಜೆಗಳು ಹಲವು ಮುಂಜಾನೆ
ಹುಡುಗನ ಲೆಕ್ಕಕ್ಕೆ
ಕಳೆದಿರುವಂತೇ ಉಳಿದಿವೆಯಂತೆ
ಹುಡುಗನ ದುಃಖಕ್ಕೆ
*
ತಾರಾಲೋಕದ ಅನಾಥ ಹುಡುಗ
ಬಿಕ್ಕುತ್ತಾನೆ ಬಯಲಲ್ಲಿ
ಯಾರೂ ಇಲ್ಲದ ಎಲ್ಲೂ ಸಲ್ಲದ
ಅನಂತ ಸೀಮೆಯ ಸುಖದಲ್ಲಿ