ರಾತ್ರಿ
ರಾತ್ರಿ ಮಲ್ಲಿಗೆಯ ಹೂವುಗಳು, – ನೆನಪುಗಳು,
ರಾತ್ರಿರಾಣಿಯ ಪುಷ್ಪ, ಸ್ನೇಹದೊರತೆ
ರಾತ್ರಿಯಾಕಾಶ – ಬದುಕು, ಮತ್ತೇನಿಲ್ಲ
ರಾತ್ರಿ ಅಪ್ಪಿದ ಮಣ್ಣು – ಕಾಮದೊರತೆ
ರಾತ್ರಿ ಮಿನುಗುವ ಕಣ್ಣುಗಳು ಗೊತ್ತೇನೇ ?
ನೀನು ನುಡಿಸಿದ ರಾಗಗಳ ಗಾನ
ರಾತ್ರಿ ಬೀಸುವ ಗಾಳಿಯ ಮೂಲ ಗೊತ್ತೇನೇ ?
ಅದು ಮತ್ತೆ,……. ಸುಳಿವ ಉಸಿರ ತಾನ.
ರಾತ್ರಿಗನಸುಗಳು, ನಿನ್ನ ನೋಟಗಳು,
ರಾತ್ರಿ ಕನವರಿಕೆ, ಹುಸಿಯಾಟ, ಕಾಟ
ರಾತ್ರಿ ಹೊರಳಿದ್ದು, ಗೊತ್ತಾ, ತಿರುವುಗಳ ತಡಕಿ
ರಾತ್ರಿ ನರಳಿದ್ದು, ಗೊತ್ತಲ್ಲ ಬತ್ತಿದೊಡಲಿಗೆ ಮಿಡುಕಿ.
ರಾತ್ರಿ ಸವೆಯುವುದು, ಬದುಕೆಲ್ಲ ಸತ್ತಹಾಗೆ
ರಾತ್ರಿಯಿಲ್ಲದ ದಿನವೆಲ್ಲ, ಏನೂ ಕಳಕೊಂಡ ಹಾಗೆ
ಮುದದಿಂದ ನಾಚುತ್ತ, ರಾತ್ರಿ ಕಾಲಿರಿಸಿದ್ದೇ
ನೂರಾರು ಮಿಂಚುಗಳ ಗೊಂಚಲೆರಗಿದ ಹಾಗೆ.