ರೂಪಾಂತರ
೧೪-೧೨-೮೮ 
ಬೆಂಗಳೂರು

ಎದೆಯ ಬಯಲಿದು ಸಮಶೀತೋಷ್ಣ ವಲಯ
ಬರದಲ್ಲಿಯೂ ನಿತ್ಯ ಹರಿದ್ವರ್ಣ ಹೃದಯ
ನೆನಪುಗಳ ಹುಲ್ಲುಗಾವಲು ಕಣ್ಣಿನಲಿ
ಬಿರುಗಾಳಿ ರಭಸವಾಗಿದೆ ಎದೆಕವಾಟಗಳಲ್ಲಿ
ಮೋಡಗಳೀಗ ಹೆಪ್ಪಾಗಿ ಮೆದುಳಾಗಿ
ಮಾತುಗಳು ಜಡಿಮಳೆಯಾಗಿ ಸುರಿಯುತ್ತಿವೆ
ಕ್ಷಮಿಸಿ ಹವಾಮಾನ ಸರಿಯಿಲ್ಲವಾದರೂ
ಗಂಟಲಿನೊಳಗೆ ನಿಶ್ಶಬ್ದ ನದಿಯಾಗಿದೆ

ಇದೀಗ
ಹಣೆಯಿಂದ ಹಿಮಪಾತವೂ
ಕಿವಿಗಳಲ್ಲಿ ಭೂಕಂಪನವೂ
ಜರುಗುತ್ತಿವೆ

ಮಳೆ ನಿಂತಿದೆ

ದುಃಖವನ್ನಡಿಗಿಸಿದೆ ಹಿಮಪಾತ
ಅನುಭವಗಳನ್ನು ನಡುಗಿಸಿದೆ ಭೂಕಂಪನ

ಹುಲ್ಲುಗಾವಲಿಗೆ ಬೆಂಕಿ
ನದಿಗೊಂದು ಅಣೆಕಟ್ಟು

ಚಳಿ ಹರಡಿದೆ ಎದೆವರೆಗೂ
ಹೃದಯ ಮಾತ್ರ ಹಸಿರಾಗಿದೆ.

Share.
Leave A Reply Cancel Reply
Exit mobile version