ಭೇಟಿ
೨೮-೩೧-೮೫
ದಾವಣಗೆರೆ

ಭೇಟಿ
೨೮-೩೧-೮೫
ದಾವಣಗೆರೆ

ಮುಜುಗರದ ನಡುವೆ ಅಪರಿಚಿತ ಹಾಡಿದ್ದೆ;
ನಾನೊಬ್ಬ ಹಾಡುಗಾರ
ಎದೆಬಟ್ಟಲ ಪ್ರಾಂಗಣದಲ್ಲಿ
ನಡುಗಂಭ…. ಮೌನ; ಗಾಢಾಂಧಕಾರ.

ಒಂದಷ್ಟು ಕಾಲದ ಕೆಳಗೆ
ಇಂಥದೇ ಮನೆಯೊಳಗೆ
ನನ್ನ ಹುಡುಗುತನ ಕಳೆದಿತ್ತೆಂಬ ಅನುಮಾನ
ಹೌದು ಇವರೇ, ನೆನಪಿಸಿದ್ದೀರಿ… ನಿಜ
ಈಗ ಜತೆಗಿದ್ದೀರಲ್ಲ – ಅದೇ ಸಮಾಧಾನ.

ಒಂದೇ ನೆಲದ ಬಿತ್ತಿದೆದೆಗಳು ನಾವು… ಅಲ್ಲವೇ
ಪರಿಚಯವೆಲ್ಲ ಬೇರಿನಲ್ಲಿ?
ಇಲ್ಲಿ ದಿಕ್ಕುಗಳಲ್ಲಿ ಚೆದುರಿಹೋದರು ಕೂಡ
ಹೀಗೆ ಅಚಾನಕ ಭೇಟಿ; ಗುಡಿಯ ಸೂರಿನಲ್ಲಿ.

ನನ್ನ ಸಖಿ, ಇಲ್ಲಿ ಜಾರು ಬಯಲಲ್ಲಿ
ಬಿಂದಿಗೆ ಹಿಡಿದು ನಿಂತಿರುವಾಗ ಅನಿಸಿದ್ದು;
ನಿಮ್ಮ ಜತೆ ಕಥೆ ಕವನ ಜೋಕುಗಳ ಹಂಚುತ್ತ
ನಾನಷ್ಟು ಹಗುರಾಗಬೇಕು.

ಮತ್ತೊಮ್ಮೆ ಬರುವೆ ಕಾಯುವಿರೇನು
ಪರಿಪೂರ್ಣ ಹೊಸ ಹಾಡುಗಳ ಹೊಸೆದು?
ಮತ್ತೊಮ್ಮೆ ನಿಮ್ಮ ಬಿಚ್ಚು ನಗೆಗಾಗಿ ಬರುವೆ
ಒಬ್ಬಂಟಿ ಕಾಲುದಾರಿಯ ಮೇಲೆ ನಡೆದು.

Share.
Exit mobile version