ಅಸಂಗತ
೧೯೮೫
ಗೆಜ್ಜೇನಹಳ್ಳಿ

ಹಗಲುಗರಿ ಬಿದ್ದು ಸಂಜೆ ಟಿಸಿಲೊಡೆದದ್ದು
ಸತ್ಯ. ಟಾರು ರಸ್ತೆಯ ಶಾಖ ಕಾಲುಗಳಿಗೆ
ಮೋರಿ ಕಟ್ಟೆಯ ಮೇಲೆ ಕುಳಿತ ನನ್ನೆದುರಲ್ಲಿ
ನದಿಯ ನರ್ತನ, ಖುಷಿಯ ಗಲಿಬಿಲಿ ನನ್ನ ಬೆರಳುಗಳಿಗೆ.

ಎದೆಯ ಕಟೆಕಟೆಯಲ್ಲಿ ನಿಂತ ನಿರ್ಧಾರಗಳು
ಗುಡ್ಡಬೆಟ್ಟಗಳಂಚಿನಸ್ತಮಾನ
ನೇತ್ರ ಜಾಲರಿಯೀಚೆ ಇಣಕು ವಿಶ್ವಾಸಗಳು
ಎರಡು ದಡಗಳ ಮಾತು… ಮತ್ತೆಲ್ಲ ಮೌನ.

ಈ ಗಳಿಗೆವರೆಗೂ ಲಕ್ಷನಕ್ಷತ್ರಗಳ
ಹಾಡು ಕೇಳಿದ್ದೆಲ್ಲ ಆಕಾಶ ಮಾತ್ರ
ಪ್ರಶ್ನಾರ್ಥಗಳ ವ್ಯಾಖ್ಯೆ ಆಖ್ಯಾನಗಳ ಹುಡುಕಿ
ರಾಗಗಳ ಉಡಿಸಿದ್ದು ಸಿದ್ಧಸೂತ್ರ.

ಕೆಸರುಗದ್ದೆಗಳಲ್ಲಿ ಕೆರೆದಡದ ಮಣ್ಣಲ್ಲಿ
ಪಾತಾಳ ಹುಡುಕುತ್ತ ಯೋಚನೆಗಳು
ನಿನ್ನೆಗಳ ನೆರಿಬಿಚ್ಚಿ ತೆರೆದ ನಾಳೆಗಳಲ್ಲಿ
ಗೊಂದಲದ ಸುಳಿಬಿಡುವ ಸೂಚನೆಗಳು.

ಗಗನದಂಚಿನ ಸೂರ್ಯನಣಕು ಮಾತುಗಳಲ್ಲಿ
ಅಡಗಿರುವ ಅಲೆಮಾರಿ ಯೋಜನೆಗಳು
ಬೀದಿಬದಿ ದೀಪಗಳು, ಲಾರಿಗಳು, ಬಸ್ಸುಗಳು
ಎದೆಸುಟ್ಟು ಹೊರಬರುವ ವೇದನೆಗಳು.

Share.
Leave A Reply Cancel Reply
Exit mobile version