ಕರ್ನಾಟಕದ ವಿಧಾನಸಭಾ ಚುನಾವಣೆಗಳ ನಡುವೆಯೇ ತೂರಿಬಂದ ಐ ಪಿ ಎಲ್ ಟಿ೨೦ ಕ್ರಿಕೆಟ್ ಪಂದ್ಯಾವಳಿಗಳ ವರದಿಗಳಲ್ಲಿ , ಛಾಯಾಚಿತ್ರಗಳಲ್ಲಿ ಕಂಡುಬಂದಿದ್ದು ದಾಂಡಿಗರಲ್ಲ; ಚೀರು ಚಿಂಗಾರಿಯರು! ಅರ್ಥಾತ್ ಚೀರ್‌ಗರ್ಲ್ಸ್. ಪಂದ್ಯದಲ್ಲಿ ಸ್ಕೋರ್ ಮಾಡಿದವರಿಗಿಂತ ಈ ಚಿಂಗಾರಿಯರ ಚಿತ್ರಗಳೇ ಪತ್ರಿಕೆಗಳಲ್ಲಿ ರಾರಾಜಿಸಿದವು. ಇವರೆಲ್ಲ ಚೀರಿದ್ದಕ್ಕೇ ನಮ್ಮ ಕ್ರಿಕೆಟ್ ಕಲಿಗಳು ರನ್ ಗಳಿಸಿದರು ಎಂಬಂತೆ, ಸೇರಿದ್ದ ಜನಸಮೂಹಕ್ಕೂ ಈ ಚಿಂಗಾರಿಯರೇ ಸ್ಫೂರ್ತಿ ತುಂಬಿದರು ಎನ್ನುವಂತೆ ವರದಿಗಳು ಬಂದವು.
ಈ ಚಿಂಗಾರಿಯರ ಪೈಕಿ ಎಲ್ಲಿಶಾನ್ಯೂಟನ್ ಮತ್ತು ಶೆರೀನ್ ಆಂಡರ್‌ಸನ್ ಎಂಬುವರು ಭಾರತದಲ್ಲಿ ತಮ್ಮ ಬಗ್ಗೆ ಜನಾಂಗೀಯ ವಿದ್ವೇಷದಿಂದ ನೋಡಿಕೊಳ್ಳಲಾಯಿತು ಎಂದು ದೂರಿದ್ದು ಇದೀಗ ದೊಡ್ಡ ಸುದ್ದಿಯಾಗುತ್ತಿದೆ. ಈ ಚಿಂಗಾರಿಯರನ್ನು ಕರಾರಿನ ಮೇಲೆ ಭಾರತಕ್ಕೆ ಕಳಿಸಿದ್ದ ವಿಝ್‌ಕ್ರಾಫ್ಟ್ ಇಂಟರ್‌ನ್ಯಾಶನಲ್ ಎಂಟರ್‌ಟೈನ್‌ಮೆಂಟ್ ಎಂಬ ಸಂಸ್ಥೆಯು ತಮ್ಮನ್ನು ಜನಾಂಗೀಯವಾಗಿ ನಿಂದಿಸಿದೆ. ಮೇ ೧೯ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕಪ್ಪು ಬಣ್ಣದ ತಮ್ಮನ್ನು ಪಂದ್ಯದ ಚೀರುಕಾಯಕದಿಂದ ದೂರ ಇಡಲಾಯಿತು ಎಂದು ಈ ಚಿಂಗಾರಿಯರು ದೂರಿದ್ದರ ಬಗ್ಗೆ ವಿಝ್‌ಕ್ರಾಫ್ಟ್ ಸಂಸ್ಥೆಯೇ ಕಿರುಚಾಡುತ್ತಿದೆ.
ಇಂಗ್ಲೆಂಡಿನ ಈ ಸಂಸ್ಥೆಯ ಕರಾರನ್ನು ಭಾರತದಲ್ಲಿ ಹಿಡಿದವರು ಫೀಯರ್ಸ್ ಪರ್ಫಾರ್ಮೆನ್ಸ್ ಪ್ರೊಡಕ್ಷನ್ ಎಂಬ ಸಂಸ್ಥೆಯವರು. ಈ ಸಂಸ್ಥೆಯ ಆಲ್ಡಾನಾ ಹೇಳುವಂತೆ ದೂರು ನೀಡಿದ ಚಿಂಗಾರಿಯರು ಸ್ಟೇಡಿಯಂ ಹೊರಗೆ ಬಂದು ಬಿಕ್ಕುತ್ತಿದ್ದರಂತೆ. ಇಂಗ್ಲೆಂಡಿಗೆ ವಾಪಸು ಹೋಗುವುದಕ್ಕೂ ಅವರ ಬಳಿ ಹಣ ಇರಲಿಲ್ಲವಂತೆ. ಅದಿರಲಿ, ವಿಝ್‌ಕ್ರಾಫ್ಟ್ ಸಂಸ್ಥೆಯು ಈಗ ಈ ಇಬ್ಬರ ಮೇಲೂ ಮಾನನಷ್ಟ ಮೊಕದ್ದಮೆಯನ್ನು ಹೂಡುತ್ತಿದೆಯಂತೆ ಎಂಬುದು ತಾಜಾ ಸುದ್ದಿ. ಅಲ್ಲದೆ ಈ ದೂರಿನ ಬಗ್ಗೆ ತನಿಖೆ ನಡೆಸುವುದಕ್ಕೆ ಬಿಸಿಸಿಐ ಕೂಡಾ ಮುಂದೆ ಬಂದಿದೆ ಎನ್ನುವುದನ್ನೂ ನೀವು ಗಮನದಲ್ಲಿಡಬಹುದು. ಹಣ ಎಗರಿಸುವುದಕ್ಕೇ ಅಲ್ಡಾನಾ ಈ ದೂರಿನ ಆಟ ಆಡುತ್ತಿದ್ದಾನೆ ಎಂದು ವಿಝ್‌ಕ್ರಾಫ್ಟ್ ಈಗ ಹೇಳುತ್ತಿದೆಯಂತೆ. ಅಲ್ಡಾನಾ ಈ ಬಗ್ಗೆ ರಾಜಿ ಮಾಡುವುದಕ್ಕೆ ೪ ಲಕ್ಷ ರೂ.ಗಳನ್ನು ಕೇಳಿದನಂತೆ; ಮೌಖಿಕ ಚರ್ಚೆಯಲ್ಲಿ ಈ ಮೊತ್ತ ಇನ್ನೂ ಹೆಚ್ಚಾಗಿದೆಯಂತೆ.
ಕ್ರಿಕೆಟ್ ಆಡುವಾಗ ಗುಚ್ಚಗಳನ್ನು ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಲೇ ಕಾಲ ಕಳೆಯುವ ಈ ಚೀರುಚಿಂಗಾರಿಯರ ಬಗ್ಗೆ ಇರುವ ಟೀಕೆಗಳಿಗೆ ಅರ್ಥವಿಲ್ಲ ಎಂದು ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್‌ನ ಸಿ ಇ ಓ ಚಾರು ಶರ್ಮ ಹೇಳಿದ್ದರು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಅವರು ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದರು. ಈಗ ಚಾರು ಶರ್ಮನ ಮಾತುಗಳನ್ನು ಯಾರೂ ಕೇಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ತಂಡದಲ್ಲಿ ಚಾರು ಶರ್ಮ ಇದ್ದರೆ ತಾನೆ?
ಆಟಕ್ಕೆ ಮಜಾ ತರುವುದಕ್ಕೆಂದೇ ಅಮೆರಿಕಾದ ಈ ಚೀರು ಚಿಂಗಾರಿಯರ ವ್ಯವಸ್ಥೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆಯಂತೆ. ಹಾಗೆ ನೋಡಿದರೆ ಪಶ್ಚಿಮ ಬಂಗಾಳ ಸರ್ಕಾರದ ಕ್ರೀಡಾ ಸಚಿವ ಸುಭಾಶ್ ಚಕ್ರವರ್ತಿ ಈ ಚಿಂಗಾರಿ ಸಂಸ್ಕೃತಿಯನ್ನು ಬಲವಾಗಿ ವಿರೋಧಿಸಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಇಂಥ ಪಾಶ್ಚಾತ್ಯೀಕರಣ ಸಲ್ಲದು ಎಂದು ಅವರು ಹೇಳಿದ್ದಾರೆ. ಚಿಂಗಾರಿಯರು ತುಂಡುಡುಗೆಯ ಬದಲಿಗೆ ಒಳ್ಳೆಯ ಮೈಮುಚ್ಚುವ ದಿರಿಸು ಹಾಕಿಕೊಂಡರೆ ಸರಿ, ಇಲ್ಲವಾದರೆ ಅವರನ್ನು ನಿಷೇಧಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಪೊಲೀಸರು ಗೊಣಗಿದ್ದೂ ಇದೆ. ಚಿಂಗಾರಿಯರು ಕ್ರಿಕೆಟನ್ನೇ ಅಣಕಿಸುತ್ತಿದ್ದಾರೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದರು ಎಂಬುದನ್ನೂ ನೀವು ನೆನಪಿನಲ್ಲಿಡಬಹುದು.
ಇಷ್ಟೆಲ್ಲ ಸುದ್ದಿ ಹೇಳಿದ ಕಾರಣವಿಷ್ಟೆ: ಚೀರು ಚಿಂಗಾರಿಯರು ಭಾರತಕ್ಕೆ ಬಂದಿದ್ದು, ಡ್ಯಾನ್ಸ್ ಮಾಡಿದ್ದು, ಟೀಕೆ ಮಾಡಿದ್ದು, ಅತ್ತು – ಕರೆದದ್ದು, ಹತ್ತಾರು ಪದ್ಯಗಳಲ್ಲಿ ಚಿಂಗಾರಿಯರು ಮಾಡಿದ ಗೊಡ್ಡು ನರ್ತನವನ್ನೇ ಟಿವಿ ಚಾನೆಲ್‌ಗಳು ಪ್ರಸಾದ ಎಂಬಂತೆ ಪ್ರಸಾರ ಮಾಡಿದ್ದು – ಎಲ್ಲವೂ ಈಗ ಇತಿಹಾಸವೇ. ಇವೆಲ್ಲ ಈಗ ದಾಖಲಾಗಿದೆ.
ಕ್ರಿಕೆಟ್ ಆಟವನ್ನು ಇನ್ನಷ್ಟು ಸರಕಾಗಿಸಲು ಮಾಡಲು ಹೊರಟ ಬಿಸಿಸಿಐಗೆ ಈ ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಮಹಾನ್ ನೈತಿಕ ಕಾರಣಗಳು ಬೇಕಾಗಿರಲಿಲ್ಲ. ಆಟಗಾರರೇ ಮಾರಾಟಕ್ಕೆ ಸಿಕ್ಕಿದ ಮೇಲೆ ಬಂಡವಾಳ ಹೂಡುವವರಿಗೆ ಚೀರುಚಿಂಗಾರಿಯರು ಏನು ಹೆಚ್ಚು? ಅವರನ್ನು ಖರೀದಿ ಮಾಡುವುದಕ್ಕೆ ಎಷ್ಟು ಮಹಾ ಹಣ ಬೇಕು? ನಮ್ಮ ಬೆಂಗಳೂರಿನ ಖಯಾಲಿ ದೊರೆ ವಿಜಯ್ ಮಲ್ಯರವರು ಪ್ರತಿವರ್ಷ ಖ್ಯಾತ ಮಾಡೆಲ್‌ಗಳನ್ನು ಇಟ್ಟುಕೊಂಡೇ ಕ್ಯಾಲೆಂಡರ್ ಮಾಡುವುದಿಲ್ಲವೆ?
ಆದ್ದರಿಂದ ಬಿಸಿಸಿಐಯನ್ನು ದೂರುವ ಮೊದಲು ನೀವು – ನಾವು ನಮ್ಮ ಕ್ರಿಕೆಟ್ ಎಷ್ಟೆಲ್ಲ ಮಾರಾಟದ ಸರಕಾಗಿದೆ ಎಂಬುದನ್ನು ಗಮನಿಸಬೇಕು. ಆಟಗಾರರ ಜಾಹೀರಾತಿನ ಸಮಯ ಹೆಚ್ಚಿದಂತೆಲ್ಲ ಓವರುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬುದನ್ನು ಗಮನಿಸಬೇಕು. ನಮ್ಮ ಭಾಂಗ್ರಾ ನೃತ್ಯವು ಚೀರುಚಿಂಗಾರಿಯರ ಸಮಕ್ಕೆ ಬರುವುದಿಲ್ಲ; ನಮ್ಮ ಭರತನಾಟ್ಯವು ಮನರಂಜನೆಯನ್ನು ಒದಗಿಸುವುದಿಲ್ಲ; ನಮ್ಮ ಪಂಜಾಬಿ ನೃತ್ಯವೂ ಅಂಥ ಮಜಾ ತರುವುದಿಲ್ಲ; ಮಹಿಳೆಯರೇ ನಿರ್ವಹಿಸುವ ನಗಾರಿ-ಡೊಳ್ಳು ಮೇಳ ಬೇಕಾಗಿಲ್ಲ. ವೀರಗಾಸೆ ನೃತ್ಯದಲ್ಲಿ ಬರೀ ಗಂಡಸರು. ನಮ್ಮ ಕಲೆ – ಸಂಸ್ಕೃತಿ ಪರಂಪರೆಯನ್ನು ಧಿಕ್ಕರಿಸಿ ಪಾಶ್ಚಾತ್ಯ ಹೆಣ್ಣುಗಳ ತುಂಬುದೇಹದ ತುಂಡು ಲಂಗದ ನೃತ್ಯವೇ ನಮ್ಮ ಕ್ರಿಕೆಟಿಗೆ ಮೆರಗನ್ನು ತರುತ್ತದೆ ಎಂಬ ವಾದವನ್ನು ಬಇಸಿಸಿಐ ಮತ್ತು ಅದರ ಬೆಂಬಲಿಗರು ಮುಂದಿಡುತ್ತಿದ್ದಾರಲ್ಲ – ಇವರನ್ನು ಯಾರು ಕಟ್ಟಿಹಾಕಬೇಕು? ಯಾಕೆಂದರೆ ನಮಗೆ ಕ್ರಿಕೆಟ್ ಬೇಕು ; ಆದ್ದರಿಂದ ಚಿಂಗಾರಿಯರು ಹೇಗೇ ಇದ್ದರೂ ನಾವು ಸಹಿಸಿಕೊಳ್ಳುತ್ತೇವೆ ಎಂಬ ಊಹೆ ಬಿಸಿಸಿಐಗೆ ಇದ್ದಂತಿದೆ. ನಿಜವೇ ಇರಬಹುದೇನೋ?
ಈ ಚಿಂಗಾರಿಯರಿಗೆ ಸೀರೆ ಉಡಿಸಿದರೆ ಹೇಗೆ ಎಂಬ ಮಾತೂ ಬಂದಿದೆ. ಆದರೆ ಸೀರೆಯನ್ನೇ ಉಡುವುದಾದರೆ ಅವರನ್ನು ಅಷ್ಟೆಲ್ಲ ದೂರದಿಂದ ಯಾಕೆ ಕರೆಸಬೇಕಿತ್ತು? ಇಲ್ಲಿಯವರೇ ಸಾಕಾಗುತ್ತಿರಲ್ಲ? ಉಹು. ಹಾಗಾಗಕೂಡದು. ದೂರದ ಊರಿಂದ ಬಂದವರಿಂದಲೇ ಮನರಂಜನೆ ಸಿಗುತ್ತದೆ. ತುಂಡು ಕ್ರಿಕೆಟಿಗೆ ತುಂಡು ಲಂಗವೇ ಸಾಟಿ ಎಂದು ಬಿಸಿಸಿಐ ಭಾವಿಸಿದೆ.
ಹೈಸ್ಕೂಲು ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಕೊಡಿ ಎಂದು ಬೇಡಿಕೊಂಡರೂ ಸಂಸ್ಕೃತಿ ಪರಂಪರೆ ಇತ್ಯಾದಿ ಸಬೂಬು ಹೇಳಿಕೊಂಡು ಬರುವ ನಮ್ಮ ವ್ಯವಸ್ಥೆಯಲ್ಲಿ ವಿದೇಶಿ ಹೆಣ್ಣುಗಳ ಮೈಪ್ರದರ್ಶನವು ಯಾವ ಭಾರೀ ಪ್ರತಿಭಟನೆಯೂ ಇಲ್ಲದೆ ನಡೆದುಹೋಗುತ್ತದೆ. ಆಮೇಲೆ ಹೆಣ್ಣುಮಕ್ಕಳು ಕಾಮಪ್ರಚೋದಕ ಉಡುಗೆ ತೊಟ್ಟು ನಮ್ಮನ್ನು ಆಕರ್ಷಿಸಿದರು ; ಅದಕ್ಕೇ ಅತ್ಯಾಚಾರಗಳು ಹೆಚ್ಚಿವೆ ಎಂದೂ ಹೇಳುವ ಪ್ರಭೃತಿಗಳು ನಮ್ಮ ನಡುವೆ ಇದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಹೆಣ್ಣುಗಳು ಮಾತ್ರವೇ ಹೊಣೆಯಾಗುವುದಾದರೆ, ಈ ತುಂಡುಲಂಗಿಗಳನ್ನು ತಂದವರ ಬಗ್ಗೆ ಏನು ಹೇಳಬೇಕು? ಇವರನ್ನು ಎಗ್ಗಿಲ್ಲದೆ ಪ್ರದರ್ಶಿಸುವ ಟಿವಿ ಚಾನೆಲ್‌ಗಳ ಬಗ್ಗೆ, ಪತ್ರಿಕೆಗಳ ಬಗ್ಗೆ ಏನು ಹೇಳಬೇಕು?
ಕ್ರಿಕೆಟ್ ಆಟದ ಹೆಸರಿನಲ್ಲಿ ಮೊದಲು ಕ್ರಿಕೆಟಿಗರನ್ನು ಮಾರಲಾಯಿತು; ಈಗ ಕ್ರಿಕೆಟಿಗೆ ಮನರಂಜನೆಯ ಪಸೆಯನ್ನು ಲೇಪಿಸುವ ನೆಪದಲ್ಲಿ ಚೀರುಚಿಂಗಾರಿಯರನ್ನು ಕಡ ತರಲಾಗುತ್ತಿದೆ. ವಿಚಿತ್ರವೆಂದರೆ ಅವರೂ ಶೋಷಿತರು ಎಂದು ದೂರುಗಳು ಕೇಳಿಬಂದಿವೆ. ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿದ್ದರೆ, ಭಾರತವನ್ನು ? ಭಾರತದ ಸಹಜ ಸಂಸ್ಕೃತಿ, ಹಬ್ಬದ ಆಚರಣೆ – ಎಲ್ಲದಕ್ಕೂ ಟಾಟಾ ಹೇಳುವ ಪರಿಸ್ಥಿತಿ ಈಗ ಬಂದಿದೆ. ಕಾಮನ ಹಬ್ಬಕ್ಕಿಂತ ಹೆಚ್ಚಿನ ಚೀರುವಿಕೆ ಈ ಲಲನೆಯರಿಂದ ಸಾಧ್ಯ ಎಂದು ಬಿಸಿಸಿಐ ನಂಬಿದ್ದರೆ, ಅದನ್ನು ಜನರೂ ನಂಬಿ ಚಪ್ಪಾಳೆ ಹೊಡೆದರೆ ನಾವು ಮಾಡುವುದಾದರೂ ಏನು?
ಇಂಥದ್ದೊಂದು ತುಂಡು ಪ್ರತಿಭಟನೆ!
(ಚೀರುಲಲನೆಯರು ಎಂದು ನಾನು ಕನ್ನಡೀಕರಿಸಿದ್ದ ಪದವನ್ನು ಚೀರುಚಿಂಗಾರಿಯರು ಎಂದು ತಿದ್ದಿದ್ದು ಮಿತ್ರ ಮಾಲತೀಶ ಭಟ್)