ನಿಮ್ಮೊಳಗಿನ ಬೆಳಗು ಹೆಚ್ಚಲಿ… ಹರಡಲಿ…
ನಮ್ಮ ಸಂಸ್ಕೃತಿ ಪರಂಪರೆಯ ಮಾತಿರಲಿ, ವೈeನಿಕವಾಗಿಯೇ ಅತ್ಯಂತ ಕಾಲಬದ್ಧವಾದ ಹೊಸವರ್ಷದ ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮಕರ ಸಂಕ್ರಮಣದ ಈ ಸಂದರ್ಭದಲ್ಲಿ ನಿಮ್ಮ ಜೊತೆ ನಾನೂ ಬೆಳಕಿನ ಕುರಿತಾಗಿಯೇ ನಿಮ್ಮಲ್ಲಿ ಒಂದಷ್ಟು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿರುವೆ. ಈ ಅರ್ಧ ವರ್ಷವಿಡೀ ಹೆಚ್ಚಾಗಲಿರುವ ಬೆಳಕು ನಿಮ್ಮ ಮನಸ್ಸನ್ನು ಹಿತ ಕೊಡುವ ಮುದ ತರುವ ಬೆಳಕಿನತ್ತ ತಿರುಗಿಸಲಿ ಎಂದು ನಿರೀಕ್ಷಿಸುವೆ.
ಜನವರಿ ೯ರಂದು ಈ ಸುದ್ದಿ ಬಂದಿದೆ: ಹರ್‍ಯಾನಾ ರಾಜ್ಯದಲ್ಲಿ ವಿದ್ಯುತ್ತಿನ ತೀವ್ರ ಅಭಾವದಿಂದಾಗಿ ಗುರ್‌ಗಾಂವ್‌ನ ಎಲ್ಲಾ ಕೊಳವೆಬಾವಿ ಬಳಕೆದಾರರು ಇನ್ನುಮುಂದೆ ಸಿ ಎಫ್ ಎಲ್ ಬಲ್ಬುಗಳನ್ನೇ ಬಳಸಬೇಕು ಎಂದು ಅಲ್ಲಿನ ರಾಜ್ಯ ಸರ್ಕಾರ ಫರ್ಮಾನು ಹೊರಡಿಸಿದೆ. ಇಂಥ ಮೂರು ಲಕ್ಷ ಮನೆಗಳು ಆ ರಾಜ್ಯದಲ್ಲಿವೆ. ಫೆಬ್ರುವರಿ ೧ರ ನಂತರ ಯಾವುದೇ ರೈತರು ಸಾಂಪ್ರದಾಯಿಕ ಬಲ್ಬುಗಳನ್ನು ಬಳಸಿದ್ದು ಕಂಡುಬಂದರೆ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಲಾಗುವುದೆಂದು ದಕ್ಷಿಣ ಹರ್‍ಯಾನಾ ಬಿಜಲಿ ವಿತರಣ ನಿಗಮವು ಎಚ್ಚರಿಸಿದೆ. ಫರೀದಾಬಾದ್, ಸಿರ್ಸಾ, ಫತೇಬಾದ್, ಹಿಸಾರ್, ಭಿವಾನಿ, ಮಹೇಂದ್ರಗಢ ಮತ್ತು ಮೇವಾತ್ ಜಿಲ್ಲೆಗಳಲ್ಲೂ ಈ ನಿಯಮವು ಜಾರಿಗೆ ಬಂದಿದೆ. “ಹೀಗೆ ವಿದ್ಯುತ್ ಉಳಿಸಿದರೆ ಇನ್ನೂ ೪೩೦೦ ಹೆಚ್ಚುವರಿ ಕೊಳವೆಬಾವಿಗಳನ್ನು ಸ್ಥಾಪಿಸಬಹುದು" ಎಂದು ನಿಗಮ ಹೇಳುತ್ತಿದೆ. ಸಿ ಎಫ್ ಎಲ್ ಬಲ್ಬುಗಳಿಂದಾಗಿ ಶೇ. ೭೦ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ .
ಜನವರಿ ೧೦ರಂದು ಬೆಂಗಳೂರಿನಿಂದ ಹೊರಟ ಸುದ್ದಿ ಹೀಗೆ ಹೇಳಿದೆ: ರೇಡಿಯೋ ಮಿರ್ಚಿಯ ಸಿಬ್ಬಂದಿಗಳು ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕ ಬಲ್ಬುಗಳನ್ನು ಸಿ ಎಫ್ ಎಲ್ ಬಲ್ಬುಗಳನ್ನು ಹಾಕಿದ್ದಾರಂತೆ. ವಿದ್ಯುತ್ ಉಳಿಸುವ ಬಗ್ಗೆ ರೇಡಿಯೋದಲ್ಲಿ ಶ್ರೋತೃಗಳಲ್ಲಿ ಸ್ಪರ್ಧೆ ನಡೆಸಲಾಗಿದೆ. ಗೆದ್ದವರಿಗೆ ನಾಲ್ಕು ಸಿ ಎಫ್ ಎಲ್ ಬಲ್ಬುಗಳಿರುವ ಉಡ
;&
#3265;ಗೊರೆ ಚೀಲ ಕೊಡಲಾಗಿದೆ. ೧೫೦ಕ್ಕೂ ಹೆಚ್ಚು ಮನೆಗಳಲ್ಲಿ ಈ ಕಾರ್ಯಕ್ರಮದಿಂದಾಗಿಯೇ ಸಿ ಎಫ್ ಎಲ್ ಬಲ್ಬುಗಳು ಬಂದಿವೆಯಂತೆ.
ಐರ್‍ಲೆಂಡಿನಿಂದ ಈಗಷ್ಟೇ (ಜನವರಿ ೧೧) ಬಂದ ಸುದ್ದಿ ಹೀಗೆ ಬಿತ್ತರಿಸಿದೆ: ಮುಂದಿನ ವರ್ಷದಿಂದ ಸಾಂಪ್ರದಾಯಿಕ ಬಲ್ಬುಗಳ ಮಾರಾಟವನ್ನೇ ರದ್ದು ಮಾಡಲಾಗುವುದು. ಕಡಿಮೆ ಇಂಧನ ಬಳಸುವ ಸಿ ಎಫ್ ಎಲ್ ಬಲ್ಬುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಅಲ್ಲಿನ ಪರಿಸರ ಸಚಿವ ಜಾನ್ ಗೋರ್ಮ್‌ಲೇ ಹೇಳಿದ್ದಾರೆ. ಅವರ ಈ ಕ್ರಮಕ್ಕೆ ಐರೋಪ್ಯ ಸಮುದಾಯದ ದೃಢ ಹೆಜ್ಜೆಯೇ ಕಾರಣ. ಇದರಿಂದಾಗಿ ಐರ್‍ಲೆಂಡ್ ದೇಶಕ್ಕೆ ೨೬.೩ ಕೋಟಿ ಡಾಲರ್ ಹಣ ಉಳಿತಾಯವಾಗುತ್ತದೆ.
ಕ್ಯಾಲಿಫೋರ್ನಿಯಾದಿಂದ ಜನವರಿ ೧೦ರಂದು ಬಂದ ಇನ್ನೊಂದು ಸುದ್ದಿಯನ್ನೂ ಓದಿ: ಅಲ್ಲಿ ಸಬ್ಸಿಡಿ ದರದಲ್ಲಿ ಸಿ ಎಫ್ ಎಲ್ ಬಲ್ಬುಗಳನ್ನು ಮಾರಲಾಗುತ್ತಿದೆ. ಕಳೆದ ವರ್ಷ ಪಿಜಿ ಎಂಡ್ ಇ ಎಂಬ ಸಂಸ್ಥೆಯೊಂದೇ ೭೬ ಲಕ್ಷ ಬಲ್ಬುಗಳನ್ನು ಕಡಿಮೆ ಬೆಲೆಗೆ ಮಾರಿದೆ ; ಈ ವರ್ಷ ೨ ಕೋಟಿ ಬಲ್ಬುಗಳನ್ನು ಮಾರುವ ನಿರೀಕ್ಷೆಯಲ್ಲಿದೆ.
ನೋಡಿ: ಎಲ್ಲೆಲ್ಲೂ ಸಿ ಎಫ್ ಎಲ್ ಬಲ್ಬುಗಳ ಬಗ್ಗೆಯೇ ಪ್ರಚಾರ, ಜನಜಾಗೃತಿ ನಡೆದಿದೆ. ನಿಮ್ಮ ಮನೆಯಲ್ಲಿ ಸಿ ಎಫ್ ಎಲ್ ಬಲ್ಬುಗಳಿವೆಯೆ? ಇಲ್ಲದಿದ್ದರೆ ದಯಮಾಡಿ ಒಂದಾದರೂ ಬಲ್ಬನ್ನು ಹಾಕಿ. ಬೇಕಾದಷ್ಟು ಬೆಳಕು ಪಡೆದು ಹಣ ಉಳಿಸಿ. ವಿದ್ಯುತ್ ಅಪವ್ಯಯ ತಪ್ಪಿಸಿ. ನಾನೇನೂ ವಿದ್ಯುತ್ ಸರಬರಾಜು ಸಂಸ್ಥೆಗಳ ವಕ್ತಾರನಲ್ಲ; ಆದರೆ ಈ ವಿಷಯವನ್ನು ಸದರಿ ಇಲಾಖೆಗಳು ಮಾತ್ರವೇ ಹೇಳಬೇಕೆಂದಿಲ್ಲ. (ದಶಕಗಳ ಹಿಂದೆ ಎಂಡೋಸಲ್ಫಾನ್ ಸಿಂಪಡಣೆಯ ಬಗ್ಗೆ ದಿನವೂ ಉಪದೇಶ ನೀಡಿದ ಕೃಷಿ ಇಲಾಖೆ, ಆಕಾಶವಾಣಿಗಳೇ ಇವತ್ತು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಿವೆ ಎಂಬುದನ್ನು ಗ ಮನಿಸಿ).
ಬೆಳಕಿನ ಬಗ್ಗೆ ಬರೆಯಬೇಕೆಂಬ ತುಡಿತಕ್ಕೆ ಕೊನೆಯೇ ಇಲ್ಲ. ಬೆಳಕೆಂಬ ಬೆಳಕಿನ ಬಗ್ಗೆ ಹೊಸ ಹೊಸ ಶೋಧಗಳು ನಡೆಯುತ್ತಲೇ ಇವೆ ಎ ಂಬುದನ್ನೂ ನೀವು ಗಮನಿಸಬಹುದು. ಈ ಭೂಮಿಯನ್ನು ಸದಾ ಹಾಯುತ್ತಿರುವ ಕಾಸ್ಮಿಕ್ ಕಿರಣಗಳು ಬೆಳಕನ್ನೂ ಮೀರಿಸುವ ವೇಗವನ್
ನು ಹೊಂದಿವೆ ಎಂಬುದು ಈಗ ವಿeನಿಗಳಿಗೆ ಎಂದೋ ಮನದಟ್ಟಾಗಿದೆ. ಈ ಕಾಸ್ಮಿಕ್‌ಕಿರಣಗಳ ಮೂಲವನ್ನು ಹುಡುಕುವತ್ತ ಈ ವಾರವಷ್ಟೇ ವಿeನಿಗಳು ಹೊಸ ಹೆಜ್ಜೆ ಇಟ್ಟಿದ್ದಾರಂತೆ. ಆಕಾಶಗಂಗೆಯ ನಿಗೂಢ ಸ್ಥಾನಗಳಿಂದ ಈ ಕಿರಣಗಳು ಬರುತ್ತಿವೆ ಎಂಬುದನ್ನು ವಿeನಿಗಳು ಗಮನಿಸುತ್ತಿದ್ದಾರೆ. ಈಗಷ್ಟೇ ಇವುಗಳ ಮೂಲವನ್ನು ಹುಡುಕುವ ವಿಧಾನದ ಬಗ್ಗೆ ಸಮಾಧಾನಕರ ಸಂಶೋಧನೆಗಳು ನಡೆದಿವೆಯಂತೆ. ಈ ವಿಷಯವೂ ಈಗಷ್ಟೇ ಬಿತ್ತರಗೊಂಡಿದೆ.
——
ಈ ಸಂಕ್ರಾಂತಿಯನ್ನು ಮತ್ತೆ ಮತ್ತೆ ಸವಿಯುತ್ತಿದ್ದಂತೆ ನನ್ನ ಕಚೇರಿಯೊಳಕ್ಕೆ ಮೂವತ್ತರ ಹರೆಯದ ಕಲಾವಿದನೊಬ್ಬ ಬಂದಿದ್ದಾನೆ. ಮುಖದಲ್ಲಿ ನಸುನಗು ಇದೆ. ಕೆಲಸ ಕೊಡಿ ಎಂದು ತನ್ನ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾನೆ. ಈಗ ಇರುವ ಕೆಲಸವನ್ನು ಯಾಕೆ ಬಿಡುತ್ತಿದ್ದೀ ಎಂದು ಕೇಳಿದರೆ… ನಿಧಾನವಾಗಿ ಹೇಳುತ್ತಾನೆ: “ಸರ್, ನನ್ನನ್ನೂ ಸೇರಿಸಿಕೊಂಡು ಎಪ್ಪತ್ತು ಜನರನ್ನು ಈ ಸಂಸ್ಥೆ ನಿನ್ನೆ ತಾನೇ ಹೊರಗೆ ಹಾಕಿದೆ. ನಾಲ್ಕು ತಿಂಗಳುಗಳ ಹಿಂದಷ್ಟೇ ನಾನು ನನ್ನ ಗರ್ಭಿಣಿ ಪತ್ನಿಯೊಡನೆ ಪುಣೆಯಿಂದ ಬೆಂಗಳೂರಿಗೆ ಬಂದು ಮನೆ ಮಾಡಿದೆ. ಈಗ ಹಠಾತ್ತಾಗಿ ನಮ್ಮಿಂದಲೇ ರಾಜೀನಾಮೆ ಪತ್ರ ಬರೆಸಿಕೊಂಡು ಹೊರಗೆ ಹಾಕಿದ್ದಾರೆ. ನಾನೇನೋ ಇಷ್ಟು ಉತ್ಸಾಹ ಕಟ್ಟಿಕೊಂಡು ನಿಮ್ಮೆದುರು ಕೂತಿದ್ದೇನೆ. ನನ್ನಂತೆ ಸಂಸಾರದೊಂದಿಗೆ ಪುಣೆಯಿಂದ ಬಂದ ಇನ್ನಿಬ್ಬರು ಮನೆಯಿಂದ ಹೊರಗೆ ಮುಖ ತೋರಿಸಲೂ ಆಗದಷ್ಟು ನಿತ್ರಾಣರಾಗಿದ್ದಾರೆ; ಖಿನ್ನತೆಯೇ ಅವರ ದಿನಚರಿಯಾಗಿದೆ. ಬದುಕಿನಲ್ಲಿ ಇಂಥ ಸಂದರ್ಭ ಬರಬಹುದೆಂದು ನನ್ನ ಅಪ್ಪ ಹಿಂದೊಮ್ಮೆ ಎಚ್ಚರಿಸಿದ್ದು ಈಗ ನಿಜವಾಗಿದೆ. ಇನ್ನೂ ಯಾರಿಗೂ ಈ ವಿಷಯ ತಿಳಿಸಿಲ್ಲ. "
ಸಂಕ್ರಾಂತಿಯಂದು ಈ ಕಲಾವಿದ ಹೇಗೆ ದಿನ ಕಳೆಯುತ್ತಾನೆ ; ಅವನಂತೆಯೇ ಕೆಲಸ ಕಳೆದುಕೊಂಡ ಇನ್ನೂ ಅರವತ್ತೊಂದು ಹುಡುಗರು ಹೇಗಿರುತ್ತಾರೆ ಎಂದು ಕಲ್ಪಿಸಿಕೊಳ್ಳಲು ನನಗಾಗುತ್ತಿಲ್ಲ. ಆ ಕಲಾವಿದನ ವಿಷಾದದ ನಗೆ ನನ್ನೊಳಗೆ ಗೀರಿಬಿಟ್ಟಂತಿದೆ.
ಸಂಜೆ ಬಂದ ಇನ್ನೊಬ್ಬ ಗೆಳೆಯರಿಗೆ ಈ ವಿಷಯ ಹೇಳಿ&a
mp;#
3238;ರೆ ಅವರು ಉಸುರುತ್ತಾರೆ: “ಈಗ ಕೆಲವು ಸಂಸ್ಥೆಗಳಲ್ಲಿ ಕೆಲಸಗಾರರನ್ನು ಹೊರಹಾಕಲೆಂದೇ ಕೆಲವು ಅಧಿಕಾರಿಗಳನ್ನು ನೇಮಿಸಿರುತ್ತಾರೆ. ಅವರ ಕೆಲಸವೇ ಏನಾದರೂ ನೆಪ ಹೇಳಿ ಕೆಲಸಗಾರರನ್ನು ತೆಗೆಯುವುದು."
ಸಂಕ್ರಮಣದ ಗಳಿಗೆಯಲ್ಲಿ ಈ ಹುಡುಗರಿಗೆಲ್ಲ ಒಳ್ಳೆಯ ಕೆಲಸ ಸಿಗಲಿ ಎಂದು ನಾವೆಲ್ಲರೂ ಹಾರೈಸುವುದೊಂದೇ ದಾರಿ. ಕೆಲವೊಮ್ಮೆ ಒಳ್ಳೆಯ ಹಾರೈಕೆಗಳೂ ಪರಿಣಾಮ ಬೀರುತ್ತವಂತೆ ಅಲ್ಲವೆ?