ಗಂಗೆಯ ತಟದಲ್ಲಿ ರಮೇಶ್, ಗುವಾಹಟಿಯಲ್ಲಿ ಮನೀಷಾ

ನಿನ್ನೆಯಷ್ಟೆ ನನ್ನ ಹಳೆಯ ಗೆಳೆಯನೊಬ್ಬನಿಗೆ ಕರೆ ಮಾಡಿದ್ದೆ. ಹಂಪಿಯ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಈತನಿಗೆ ಒಬ್ಬ ವಿಲಕ್ಷಣ ಎನ್ನಬಹುದಾದ ವ್ಯಕ್ತಿಯ ಪರಿಚಯವಿದೆ.  ಆತ ನನ್ನ ಗೆಳೆಯನಿಗೆ ಗಂಗಾನದಿಯ ತಟದಿಂದ ಫೋನ್ ಮಾಡಿದ್ದನಂತೆ. ನದಿಯ ಜುಳುಜುಳು ನಾದವನ್ನು ಕೇಳಿಸಿ ಮಾತನಾಡಿದನಂತೆ. ಸ್ವಲ್ಪ ದಿನ ಇಲ್ಲಿ ಇರುತ್ತೀನಿ, ಅದಕ್ಕೇ ಬಂದೆ ಎಂದನಂತೆ.
ಆರು ವರ್ಷಗಳ ಹಿಂದೆ ಒಮ್ಮೆ ನಾನೂ ಈ ಗೆಳೆಯನೊಂದಿಗೆ ಅವನನ್ನು ನೋಡಲು ಹೋಗಿದ್ದೆ. ಹಂಪಿಯ ಗಾಣಗಿತ್ತಿ ದೇಗುಲದ ಪ್ರಾಂಗಣದಲ್ಲಿ ಕುಳಿತು ನಾವು ಮೂರು ತಾಸು ವಿವಿಧ ದೈವಗಳ ಬಗ್ಗೆ ಮಾತನಾಡಿದ್ದೆವು. ನನಗೆ ಎಂದೂ ಗೊತ್ತಿಲ್ಲದ ಆಸ್ಟ್ರಲ್ (ಸ್ತರಗಳಂತೆ) ಗಳ ಕುರಿತು ಆ ವ್ಯಕ್ತಿ ಮಾತನಾಡಿದ್ದ.
ಇಪ್ಪತ್ತೆರಡು ವರ್ಷಗಳ ಹಿಂದೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಮಾಡುತ್ತಿದ್ದ ಈ ವ್ಯಕ್ತಿ (ಆತನನ್ನು ರಮೇಶ್ ಎಂದು ಕರೆಯೋಣ) ಹಠಾತ್ತಾಗಿ ಸಿಂಧೂ ಮುದ್ರಿಕೆಗಳ ಬಗ್ಗೆ ತೀವ್ರ ಆಸಕ್ತಿ  ಬೆಳೆಸಿಕೊಂಡ. ಅದೇ ತನಗೆ ಮುಳುವಾಯಿತು  ಎಂದು ಆತ ಹೇಳುತ್ತಿದ್ದ. ಉಳಿಯುವುದೇ ಆ ಪ್ರಾಂಗಣದಲ್ಲಿ. ಹಳ್ಳಿ ಜನರಿಗೆ ಭವಿಷ್ಯ ಹೇಳುವುದೇ ಹೊಟ್ಟೆಗೆ ಪರಿಹಾರ. ಸ್ಥಳೀಯ ಗಿಡವೊಂದರ ಕಷಾಯ ಮಾಡುವುದನ್ನೂ ಕಲಿತಿದ್ದ ಆತನಿಗೆ ಹೊಟ್ಟೆಯ ಹಸಿವಿಗಿಂತ ಆಧ್ಯಾತ್ಮಿಕತೆಯ ಹಸಿವೇ ಹೆಚ್ಚು. ಸಾಕಷ್ಟು ಚೆನ್ನಾಗಿಯೇ ಇಂಗ್ಲಿಶ್ ಮಾತನಾಡುತ್ತಿದ್ದ ರಮೇಶ್ ಎಂದೂ ತನ್ನ ನಗುವನ್ನು ಹತ್ತಿಕ್ಕಿಲ್ಲ. ಸದಾ ಬದುಕನ್ನು ಬಂದ ಹಾಗೆ ಸ್ವೀಕರಿಸುವೆ ಎಂಬ ದೃಢವಾದ ನಗು ಅದು.
ಕೈ ಬೀಸಿಕೊಂಡು, ಜೋಳಿಗೆಯೊಂದನ್ನೇ ಲಗೇಜು ಮಾಡಿಕೊಂಡು ಬದುಕುವ ಇಂಥ ಹಲವು ವ್ಯಕ್ತಿಗಳನ್ನು ನಮ್ಮ ನಡುವೆ ನೋಡಬಹುದು. ಅವರೇನು ಕಾವಿ ಉಟ್ಟುಕೊಂಡಿರುವುದಿಲ್ಲ. ಆದರೆ ಬದುಕಿನ ಬಗ್ಗೆ ಖಚಿತ ನಿಲುವನ್ನು ಇಟ್ಟುಕೊಂಡಿರುತ್ತಾರೆ. ಯಾರ ಜೊತೆಗಾದರೂ ಮಾತನಾಡುತ್ತಾರೆ. ಇನ್ನೂ ಏನನ್ನೋ ಕಲಿಯುತ್ತಿದ್ದೇನೆ ಎನ್ನುತ್ತಾರ&#327
0;
. ಹಂಪಿಯಿಂದ  ಗಂಗೆಯ ತಟಕ್ಕೆ ಹೋಗುತ್ತಾರೆ.
ಆದರೆ ಕಲಿಯುವುದನ್ನು ಮರೆತುಬಿಡಲು ವಿದೇಶಗಳಿಂದ ಭಾರತದ ಪರಂಪರೆಯ ಕೇಂದ್ರಗಳಿಗೆ ಜನ ಬರುತ್ತಾರೆ! ಎಲ್ಲವನ್ನೂ ಮರೆತು ಭಾರತದ ಯಾವುದೋ ಬೀದಿಯ ಬದಿಯಲ್ಲಿ ಕುಳಿತು ಗಾಂಜಾ ಸೇವಿಸುವುದರಲ್ಲೇ ಅವರಿಗೆ ಸಮಾಧಾನ.
ಈಗ ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗಿ ಕಲಿಯುವುದನ್ನು ಬಿಟ್ಟು ಹಲವಾರು ನೂರು ಯುವಕರು ಕಾಲ್ ಸೆಂಟರ್ ಸೇರಿದ್ದಾರೆ. ಅವರ ಪ್ರಕಾರ ಬದುಕುವುದೇ ಕಲಿಕೆ. ಸಂಪಾದಿಸುವುಕ್ಕೆ ಬಂದರೆ ಬದುಕಿನ ಪಾಠ ಕಲಿತಂತೆಯೇ ಅಲ್ಲವೆ?
ಜೂನ್ – ಜುಲೈ ತಿಂಗಳುಗಳಲ್ಲಿ ಕಲಿಯುವುದಕ್ಕೆ ನೂರಾರು ಕಾಲೇಜುಗಳಲ್ಲಿ ನೂಕು ನುಗ್ಗಲು. ಡೊನೇಶನ್ ಹೊಳೆ ಹರಿಯುತ್ತದೆ. ತೊಂಬತ್ತೈದು ಪರ್ಸೆಂಟ್‌ಗೆ ಕಟ್ ಆಫ್. ಅದಕ್ಕಿಂತ ಕೆಳಗೆ ಅಂಕ ಪಡೆದವರು ಏನು ಮಾಡುತ್ತಾರೆ? ಎಂಬತ್ತೈದು ಪರ್ಸೆಂಟ್ ಪಡೆದವರೂ ದಡ್ಡರಾಗಿಬಿಟ್ಟರೆ? ತೊಂಬತ್ತೈದು ಪಡೆದವರು ತೊಂಬತ್ತೆಂಟು ಪಡೆಯುವುವಂತೆ ಕಠಿಣ ಪರಿಶ್ರಮ ಹಾಕುವುದರಲ್ಲಿ  ಯಾವ ಅಗ್ಗಳಿಕೆ ಇದೆ? ಐವತ್ತೈದು ಪಡೆದ ಹುಡುಗರು – ಹುಡುಗಿಯರನ್ನು ಎಪ್ಪತ್ತೈದು ಪಡೆಯುವಂತೆ ಯಾರಾದರೂ ಶಾಲೆ / ಕಾಲೇಜು ತೆರೆದಿದ್ದಾರೆಯೆ? ಹಾಗಾದರೆ ಅವರೆಲ್ಲ ಕಾಲ್ ಸೆಂಟರ್  ಸೇರುವುದು ಸರಿಯಿದೆ ತಾನೆ? ಅಥವಾ ನಮ್ಮ ರಮೇಶ್  ತನಗೆ ತಾನೇ ಗುರುವಾಗಿರುವುದೂ ಸರಿಯೇ ಇರಬಹುದೆ?
ಹೋಗಲಿ, ಹೀಗೆ ಉಚ್ಚಸ್ತರದ ಕಾಲೇಜುಗಳಲ್ಲಿ ಕಲಿತು ನೂರಕ್ಕೆ ನೂರು ಅಂಕ ಪಡೆದವರ ಹೆಸರುಗಳಾದರೂ ನಮಗೆ ನೆನಪಿದೆಯೆ? ಇಂಥ ಎಷ್ಟು ಜನರು ಸಮಾಜದಲ್ಲಿ ಸೇವೆ ಸಲ್ಲಿಸಿಯೋ, ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೋ ಜನಪ್ರಿಯರಾಗಿದ್ದಾರೆಯೆ?
ನಾನು ಪ್ರತಿಭೆಯನ್ನು ಹಳಿಯುತ್ತಿಲ್ಲ. ಆದರೆ ನೂರಕ್ಕೆ ನೂರು ಅಂಕ ಪಡೆದವರೇ ಬುದ್ಧಿವಂತರು ಎಂಬ ಹೊಸ ವಾದವನ್ನು ಖಂಡಿಸುತ್ತಿದ್ದೇನೆ. ನಮ್ಮ ಹಲವು ಪಾಲಕರು ಶಿಕ್ಷಣ ವ್ಯವಸ್ಥೆಯ ಬಗ್ಗೆ ದೂರುತ್ತಾರೆ; ಯಾಕೆಂದರೆ ಅವರ ಮಕ್ಕಳಿಗೆ ಸೀಟು ಸಿಕ್ಕಿರುವುದಿಲ್ಲ! ಸಿಕ್ಕಿದ್ದರೆ ಅವರೂ ಸುಮ್ಮನೆ ಇರುತ್ತಿದ್ದರು.
ಎಸೆಸೆಲ್&
#325
6;ಿ ಪರೀಕ್ಷೆಗೆ ತಯಾರಾಗುತ್ತಿದ್ದ ಮಕ್ಕಳ ಪಾಲಕರ ಸಭೆಗೆ ನಾನೊಮ್ಮೆ ಹೋಗಿದ್ದೆ. ಎಲ್ಲ ತಾಯಂದಿರಲ್ಲೂ ಆತಂಕದ ಛಾಯೆ. ಮಕ್ಕಳು ಗಾಬರಿಯಾಗಿದ್ದಾರೆ, ಏನಾದ್ರೂ ಮಾಡಿ ಅವರು ಬೆಳಗ್ಗೆ ಬೇಗ ಎದ್ದು ಓದುವಂತೆ ಮಾಡಿ ಎಂಬ ಒತ್ತಡದ ವಿನಂತಿ.
ಶಿಕ್ಷಣ ವ್ಯವಸ್ಥೆಯ ಬಗ್ಗೆ ದೂರುವ ಹಲವು ಲೇಖನಗಳ ಹಾಗೆಯೇ ನಾನೂ ಈಗಿನ ವ್ಯವಸ್ಥೆಯನ್ನು ಖಂಡಿಸುವೆ. ಆದರೆ ಪಾಲಕರೂ ಇದಕ್ಕೆ ನೇರ ಹೊಣೆ ಎಂಬುದನ್ನು ನೆನಪಿಸುವೆ.
——–
ಇತ್ತ ಗುವಾಹತಿಯಿಂದ ಮನೀಷಾ ಕರೆ ಮಾಡಿದ್ದಾಳೆ. ಸರ್, ಮಾಸ್ ಕಮ್ಯುನಿಕೇಶನ್ ಸ್ನಾತಕೋತ್ತರ ಪದವಿ ಸೇರಿದ್ದೇನೆ, ಜರ್ನಲಿಸ್ಟ್ ಆಗೋದು ಹೇಗೆ? ಅರ್ಧ ಗಂಟೆ ನಾನು ಅವಳಿಗೆ ಪತ್ರಿಕೋದ್ಯಮದ ಪಾಠವನ್ನು ದೂರವಾಣಿ ಮೂಲಕ ನೆನಪಾದ ಹಾಗೆ ಹೇಳಿದ್ದೇನೆ. ನಿಮ್ಮ ಊರಿನಲ್ಲಿ ಪ್ರಭಾತ್ ಶರ್ಮ ಅಂತ ಒಬ್ಬ ಖ್ಯಾತ ಕಲಾವಿದರು ಇದ್ದಾರಲ್ಲ ॒ಗೊತ್ತ? ಗೊತ್ತಿಲ್ಲ ಸರ್. ಮನೀಷಾಳದ್ದು ತಪ್ಪಿಲ್ಲ. ಅವಳು ಬೆಳೆದ ಬಗೆಯಲ್ಲಿ ತಪ್ಪಿದೆ. ನಾನು ಈ ಅಂಕಣದಲ್ಲಿ ಕಳೆದ ವಾರ ಬರೆದ ಹಾಗೆ ಕಲಿಯುವ ರೀತಿಯಲ್ಲೇ ಸಂಕುಚಿತತೆ ಮನೆ ಮಾಡಿದೆ.
ಕಳೆದ ವರ್ಷ ಅಕಸ್ಮಾತ್ ನಾನು ಗುವಾಹಟಿಗೆ ಹಠಾತ್ತಾಗಿ ಹೋಗಿದ್ದರಿಂದ ನನಗೆ ಪ್ರಭಾತ್ ಶರ್ಮರ ಪರಿಚಯವಾಯಿತು. ಅವರು ನಮ್ಮ ಹರಿಪ್ರಸಾದ್ ಚೌರಸಿಯಾ ಸ್ತರದ ಮಹಾನ್ ಬಾನ್ಸುರಿ ಕಲಾವಿದರು. ಆದರೆ ಅವರ ಒಂದು ಆಲ್ಬಮ್ ಕೂಡಾ ಇವತ್ತು ಬಂದಿಲ್ಲ. ಅದೊಂದು ಸುದ್ದಿಯೇ. ಮನೀಷಾಗೆ ಅವರ ಬಗ್ಗೆಯೇ ಒಂದು ಸುದ್ದಿಕಥೆ ಮಾಡಲು ಹೇಳಿದ್ದೇನೆ.
ಕಲಿಯುವ ಮನಸ್ಸುಗಳಲ್ಲಿ ಹೇಗಾದರೂ ಕಲಿಯುವ ಛಲ ಇರುತ್ತದೆ. ಗುವಾಹಟಿಯಿಂದ ಕರೆ ಮಾಡಿ ಕಲಿಯುವುದು ಹೇಗೆ ಎಂದು ಕೇಳುವ ಮುಗ್ಧತೆ ಮತ್ತು ಶ್ರದ್ಧೆ ಎಲ್ಲರಿಗೂ ಬರಲಿ. ಹಾಗೆ ಕಲಿಯುವವರಿಗೆ ತಿಳಿಹೇಳುವ ಸಹೃದಯ ಮನಸ್ಸುಗಳ ಸಂಖ್ಯೆಯೂ ಹೆಚ್ಚಲಿ ಎಂದು ಆಶಿಸುತ್ತೇನೆ.
—- —-

 

Share.
Leave A Reply Cancel Reply
Exit mobile version