ನನ್ನಂಥ ಕ್ರಿಯಾಶೀಲ ವ್ಯಕ್ತಿಗಳ ದಿನಚರಿ ಯಾಕೆ ಯಾವಾಗಲೂ ಬೆಳಗಿನಿಂದಲೇ ಆರಂಭವಾಗಬೇಕು ಎಂಬ ಹುಚ್ಚು ಆಲೋಚನೆ  ಬಂದಕೂಡಲೇ ನಮ್ಮ ರಾಮಣ್ಣ ಅವತ್ತು ಹಗಲಿಡೀ ಮಲಗೇ ಇದ್ದ.
ಎಷ್ಟು  ಹೊತ್ತು ಅಂತ ಮಲಗ್ತಾನೆ..!
ಅವನೇನು ರಾತ್ರಿ ಮನೆ ಕಾಯೋ ನಾಯಿ ಅಲ್ವಲ್ಲ!!

ರಾತ್ರಿ ಎಂಟು ಗಂಟೆ ಆದಕೂಡಲೇ ಎದ್ದ. ಇನ್ನೂ ತಡರಾತ್ರಿ ಆದರೆ ದರ್ಶಿನಿಗಳಲ್ಲಿ ಇಡ್ಲೀನೂ ಸಿಗಲ್ಲ ಅನ್ನೋದು ಅವನಿಗೆ  ಯಾವಾಗಲೇ ಖಾತ್ರಿ ಆಗಿದೆ.
ಎದ್ದ ಕೂಡಲೇ ಹಲ್ಲುಜ್ಜಿದ. ಹೇಗೂ ಸೋಲಾರ್ ಹೀಟರ್ ಇದ್ದದ್ದರಿಂದ ನೀರು ಕಾಯಿಸಬೇಕಿರ್‍ಲಿಲ್ಲ. ಆರಾಮಾಗಿ ಶವರ್ ಬಾತ್ ಮಾಡಿದ. ಎಂಟೂ ಮುಕ್ಕಾಲಿಗೆ ಸರಿಯಾಗಿ ಕನ್ನಡಿ ಮುಂದೆ ನಿಂತ.

ಇನ್ನು ಈ ಮನುಷ್ಯನ ಕ್ರಿಯೇಟಿವ್ ಸ್ಪಿರಿಟ್‌ಗಳೆಲ್ಲ ಹ್ಯಾಗೆ ಎದ್ದು ಕುಣೀತದೆ ನೋಡಿ ಎಂದು ತನ್ನಷ್ಟಕ್ಕೆ ತಾನೇ ಗುನುಗಿಕೊಂಡ. ಕನ್ನಡಿಯಲ್ಲಿ ಕಂಡಾತ ತಾನೇ ಎಂಬೋ ಗ್ಯಾರಂಟಿಯೊಂದಿಗೆ ನಸುನಗುತ್ತ ಪ್ಯಾಂಟು ಏರಿಸಿದ. ಕೆಂಪುಬಣ್ಣದ ಹಾಫ್ ಜುಬ್ಬಾ ಧರಿಸಿ ಹೊರಬಿದ್ದ.
ತಾನೊಬ್ಬನೇ ಹೀಗೆ ರಾತ್ರಿ ಹೊರಡುವವನಲ್ಲ ಅಂತ ಅವನಿಗೆ ಗೊತ್ತು.  ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು, ನ್ಯೂಸ್‌ಪೇಪರ್ ಕಚೇರಿಗಳಲ್ಲಿ ದುಡಿಯುವವರು  ತನ್ನಷ್ಟು ಕ್ರಿಯೇಟಿವ್ ಅಲ್ಲದಿದ್ದರೂ ರಾತ್ರಿ ಕೆಲಸ ಮಾಡ್ತಾರೆ ಎಂಬುದು ರಾಮಣ್ಣನಿಗೆ ಗೊತ್ತು.
ಆದ್ರೂ ತನ್ನಷ್ಟು ಸೃಜನಶೀಲ ವ್ಯಕ್ತಿ ಈ ಹೊತ್ತಿನಲ್ಲಿ ಹೀಗೆ ಫ್ರೆಶ್ ಆಗಿ ರಸ್ತೆಗೆ ಇಳಿಯೋದನ್ನ ಕಂಡಿದೀರ?
ಬುದ್ಧಿಜೀವಿಗಳು ಈ ಹೊತ್ತಿಗೆ ಎಲ್ಲೋ ಕುಡಿಯುತ್ತ, ದೇಶದ ಬಗ್ಗೆ ವೃಥಾ ಗೊಣಗುತ್ತ ಕೂತಿರ್‍ತಾರೆ. ಪತ್ರಕರ್ತರು ಎಲ್ಲ ಥರದ ಸುದ್ದಿಗಳನ್ನು ಪೇರಿಸಿಕೊಂಡು ನಾಳೆಯೊಳಗೆ ಈ ಸುದ್ದಿಗಳನ್ನೆಲ್ಲ ಪತ್ರಿಕೆ ತುಂಬಾ ರಾಚಿ ಮನೆಗೆ ಹೋಗಿ ಬಿದ್ದುಕೊಳ್ಳೋಣ ಎಂಬ ವಿಚಿತ್ರ ತವಕದಲ್ಲಿರ್‍ತಾರೆ.
ಟಿವಿ ಚಾನೆಲ್‌ಗಳ ರಿಪೋರ್ಟರ್‌ಗಳ? ಛಿ… ಬಿಡ್ತು ಅನ್ನಿ… ಅವರ ಮುಖ  ನೋಡಿ… ಎಷ್ಟು ಕುಸಿದು ಹೋಗಿರುತ್ತೆ….
ರಾಮಣ್ಣ ತನ್ನೊಳಗೇ ಚರ್ಚೆ ಮಾಡಿಕೊಳ್ಳುತ್ತ, ತನಗೆ ತಾನೇ ಅಂಕ ಕೊಟ್ಟುಕೊಳ್ಳುತ್ತ ನಡೆದ. ಕದಂಬಂ ಮುಚ್ಚಿದೆ… ಅಲ್ಲಿ ಶಾಂತಿಸಾಗರವೂ ಮುಚ್ಚಿದೆ. ಕಾಂತಿ ಸ್ವೀಟ್ಸ್ ಬಾಗಿಲು ಹಾಕ್ತಾ ಇದಾರೆ.
ಹೋಗ್ಲಿ ಅಂದ್ರೆ ಚುಂಗ್ಸ್ ಅನ್ನೋ ಚೀನೀ  ಹೋಟೆಲ್‌ನವ್ರೂ ಬಾಗಿಲು ಮುಚ್ತಾ ಇದಾರೆ.
ರಾಮಣ್ಣನ ಹತ್ರ ಬೈಕ್ ಇರೋದ್ರಿಂದ ಚಕಚಕ ಅಂತ ಅವ್ನು ಎಲ್ಲಾ ಹೋಟೆಲ್‌ಗಳನ್ನು ಸ್ಕ್ಯಾನ್ ಮಾಡ್ತಾನೆ. ಯಾವ ಹೋಟೆಲ್‌ಗೆ ಯಾವಾಗ ರಜೆ, ಯಾವಾಗ ಇಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತು.
ಎಷ್ಟೋ ಜನ ಮಾಣಿಗಳನ್ನು ಅವ್ನು ಥಿಯೇಟರಿನಲ್ಲೆ ಗುರುತು ಹಿಡಿದು ಮಾತಾಡ್ಸಿದಾನೆ. ಎಷ್ಟೋ ಮ್ಯಾನೇಜರ್, ಕ್ಯಾಶಿಯರ್‌ಗಳನ್ನು ಅವನು ಬರ್ಮಾ ಬಜಾರಿನಲ್ಲಿ ನೋಡಿದಾನೆ.
ಯಾಕಂದ್ರೆ ಅವನೂ ಹೋಟೆಲ್ ಕಾರ್ಮಿಕರ  ಹಾಗೇ ತಿರುಗ್ತಾನೆ. ಆದ್ರೂ  ತಾನೇನು ಅವರಿಗಿಂತ ಕಮ್ಮಿ ಇಲ್ಲ.
ಯಾಕೆ ಇವತ್ತು ಇಷ್ಟು ಬೇಗ ಹೋಟೆಲ್‌ಗಳು ಮುಚ್ತಾ ಇವೆ… ಇನ್ನೂ ಒಂಬತ್ತಾಗಿದೆ ಅಷ್ಟೆ ಎಂದು ರಾಮಣ್ಣನಿಗೆ ಅನುಮಾನವಾಗಿದೆ. ಹೋಗಿ ಚುಂಗ್ಸ್ ಮ್ಯಾನೇಜರ್ ಹತ್ರ ಕೇಳಿದಾನೆ…. ಯಾಕೆ ಮಾರಾಯ್ರೆ… ನೀವು  ಹೀಗೆ ಮಾಡ್ತಿದೀರ…
ಇಲ್ಲ ಇವತ್ತು ಈ ರೋಡ್ ಬ್ಲಾಕ್ ಮಾಡಿ ಟಾರ್ ಹಾಕ್ತಾರಂತೆ. ಮೊದ್ಲೇ ಹೇಳಿದ್ರು…. ಅದಕ್ಕೇ ಮುಚ್ತಾ ಇದೀವಿ…
ಮುಚ್ಕೊಂಡು ಹೋಗಿ ಸೂ.. ಮಕ್ಕಳಾ ಎನ್ನಬೇಕೆನಿಸಿತು ರಾಮಣ್ಣನಿಗೆ. ಹಾಗೆ ಕ್ಷಣಮಾತ್ರದಲ್ಲಿ ರಾಮಣ್ಣ ಸೃಜನಶೀಲವಾಗಿ ಮಾತಾಡಬಲ್ಲ. ಆದ್ರೆ ಇವತ್ತು ಯಾಕೋ ಅವನಿಗೆ ತನ್ನ ದಿನಚರಿ ಹೀಗೆ ಆಗಬಹುದು ಎಂಬ ಲೆಕ್ಕಾಚಾರ ಇರ್‍ಲಿಲ್ಲ.
ಪರವಾಯಿಲ್ಲ.
ಈ ಬೆಂಗ್ಳೂರಲ್ಲಿ ಹೀಗೇನೆ.
ಯಾವಾಗ್ಲೋ ಫ್ಲೈ ಓವರ್ ಕೆಲಸ ಶುರುವಾಗುತ್ತೆ. ಯಾವುದೋ ಒಂದು ರಸ್ತೆ ಇವತ್ತು ಬರೋ ಒನ್ ವೇ ಆಗಿದ್ರೆ ನಾಳೆ ಹೋಗೋ ಒನ್ ವೇ ಆಗುತ್ತೆ ಅಥವಾ ಬ್ಲಾಕೇ ಆಗಿಬಿಡಬಹುದು.
ನಾನು ಬೆಂಗ್ಳೂರಿಗೆ ಅಡ್ಜಸ್ಟ್ ಆಗ್ಬೇಕೇ ವಿನಃ ಅದು ನನಗೆ ಅಡ್ಜಸ್ಟ್ ಆಗುತ್ತ? ಖಂಡಿತ ಇಲ್ಲ. ನಾನು ಮನುಷ್ಯ.
ಬೆಂಗಳೂರು ಒಂದು ನಗರ. ಅದಕ್ಕೆ ಜೀವ ಇಲ್ಲ.
ಅದು ಒಂಥರ ಮ್ಯಾಟ್ರಿಕ್ಸ್ ಸಿನೆಮಾದ ಕಂಪ್ಯೂಟರ್ ಹುಳದ ಹಾಗೆ.ಜೀವ ಇರೋರ ಥರ ಹರೀತಾ ಇರುತ್ತೆ. ಆದ್ರೆ ಯಂತ್ರ.
ಜೀವ ಇದ್ದೇ ಇದೆ ಅನ್ನೋ ಹಾಗೆ ಚಲಿಸುತ್ತೆ. ಟ್ರಾಫಿಕ್  ಜಾಮ್ ಆಗೋದು ಅಂದ್ರೆ ಏನು ಮತ್ತೆ?
ರಾಮಣ್ಣನಿಗೆ ಗೊತ್ತು…. ಕಂಪ್ಯೂಟರ್ ಹ್ಯಾಂಗ್ ಆಗಲ್ವ? ಹಾಗೇ ಬೆಂಗ್ಳೂರೂ ಹ್ಯಾಂಗ್ ಆಗುತ್ತೆ.
ನಮ್ಮನ್ನೆಲ್ಲ ನೇಣಿಗೆ ಹಾಕುತ್ತೆ!  ಹ್ಯಾಂಗ್. ಹ್ಯಾಂಗ್. ಹ್ಯಾಂಗ್.
ಹೌದಪ್ಪ… ಇದು ಕ್ರಿಯೇಟಿವಿಟಿ…….
ರಾಮಣ್ಣ ಅಲ್ಲಿಂದ ಸೀದಾ ಮಲ್ಲೇಶ್ವರಕ್ಕೆ ದಾಳಿ ಇಟ್ಟ. ಅಲ್ಲಿ ಈಗ ಕೂತುಕೊಂಡು ತಿನ್ನೋ ಹೋಟೆಲ್‌ಗಳು ಜಾಸ್ತಿ ಇಲ್ಲ.  ಆದ್ರೆ ಮೂರ್‍ನೇ ಕ್ರಾಸಿನಲ್ಲಿ ಹಳ್ಳಿಮನೆ ಇದೆ. ತಡ ಆದ್ರೆ ನಾನು ಅಲ್ಲೇ ಹೋಗೋದು. ಅಲ್ಲೇ ಬುದ್ಧಿವಂತರಿಗೂ ಒಂದು ರೂಮಿದೆ. ಅಲ್ಲಿ ನಾನೇನೂ ಕೂತ್ಗಳಲ್ಲ. ಯಾಕಂದ್ರೆ ನಾನು ಬರೀ ಬುದ್ಧಿಜೀವಿ ಅಲ್ಲ… ಕ್ರಿಯೇಟಿವ್. ಮಾಡೋದು ಫೈನಾನ್ಸ್ ಬ್ಯುಸಿನೆಸ್ ಆದ್ರೂ ನಂಗೂ ಸಾಮಾಜಿಕ ವಿಚಾರ ಗೊತ್ತು… ಪಾಲಿಟಿಕ್ಸ್ ಗೊತ್ತು… ನರ್ಮದಾ ಬಚಾವೋ ಗೊತ್ತು..
ರಾಮಣ್ಣ ಯೋಚಿಸುತ್ತ ಮಲ್ಲೇಶ್ವರ ಸರ್ಕಲ್ಲಿಗೆ ಬಂದ. ಅಲ್ಲಿಂದ ಮುಂದೆ ಲಿಂಕ್ ರೋಡಿನಲ್ಲಿ ತೀರಾ ಬಲ ಹರಿವು ತೆಗೆದುಕೊಂಡು ಮೂರನೇ ಕ್ರಾಸಿನಲ್ಲಿ ಬಲಕ್ಕೆ ತಗೊಂಡ್ರೆ ಹಳ್ಳಿಮನೆ ಕಾಣ್ಸುತ್ತೆ. ಮೊದ್ಲು ಇಲ್ಲಿ ಒಂದು ಕಾಫಿ ಹೋಟೆಲ್ ಇತ್ತಲ್ವೆ? ಅಲ್ಲಿ ದಿನಾಲೂ ಒಂದು ಕೊಟೇಶನ್ ಬರ್‍ದು ಹಾಕ್ತಾ ಇದ್ರು…
ಸರಿ ಇಲ್ಲಿ ದೋಸೆ ತಿಂದೇ ದಿನಚರಿ  ಶುರು ಮಾಡುವಾ ಮಾರಾಯ್ರೆ ಎಂದು  ಒಳಗೆ ಹೊಕ್ಕರೆ ಏನಂತೀರಿ… ಎಂದಿನಂತೆ ಜನ  ತುಂಬ್ಕೊಂಡಿದಾರೆ… ಜನರಿಗೆ ತಿನ್ನಲಿಕ್ಕೆ ಏನಾದ್ರೂ ಸಿಕ್ಕರೆ ಸಾಕಲ್ಲ ಎಂಬಂತೆ ಪರಿಸ್ಥಿತಿ ಬಿಗುವಾಗಿದೆ.
ಆದ್ರೂ ನಿಯಂತ್ರಣದಲ್ಲಿದೆ.
ಒಳಗೆ ಹೋಗಿ ಎರಡು ಇಡ್ಲಿ ಒಂದು ವಡೆ ತಗೊಂಡು ಬಂದ ರಾಮಣ್ಣ ಅಲ್ಲೇ ನಿಂತು ತಿನ್ನತೊಡಗಿದ.
ಸರಿ.
ಇವತ್ತು ದಿನಚರಿ ಬದಲಾಗ್ತಾ ಇದೆ. ಹ್ಯಾಗೂ ನಾನು ಈಗಷ್ಟೇ ಎದ್ದಿದೀನಿ. ಮುಂದೆ ಏನು ಕೆಲಸ ಮಾಡಬೇಕು ಅನ್ನೋದನ್ನ ಈಗಲೇ ಕಾಫಿ ಕುಡಿಯೋದ್ರೊಳಗೆ ನಿರ್ಧರಿಸಬೇಕು ಎಂದು ರಾಮಣ್ಣ ಯೋಚಿಸಿದ.
ಆದ್ರೆ ನಾನು ಮಾಡೋ ಕೆಲಸಕ್ಕಾಗಿ ಯಾರಾದ್ರೂ ಸಿಗದೇ ಹೋದ್ರೆ ಈ ದಿನಚರಿ ಬದಲಿಸಿ ಏನು ಬಂತು? ನಿಜಕ್ಕೂ ಕ್ರಿಯೇಟಿವ್ ಪ್ರಶ್ನೆ ಕಣಯ್ಯಾ ಎಂದು ರಾಮಣ್ಣ ತನ್ನಲ್ಲೇ ಮೆಚ್ಚುಗೆ ಸೂಸಿಕೊಂಡ.
ರಾಮಣ್ಣನ ಕೆಲಸ ಏನು ಹಾಗಾದ್ರೆ ?
ಅಲ್ಲಿ ವಡೆ ಮುಕ್ತಾ ಇದಾನಲ್ಲ ರಾಮಣ್ಣ ಅವನ್ನೇ ಕೇಳಬಹುದಿತ್ತು. ರಾಮಣ್ಣನಿಗೆ ತನ್ನ ಕೆಲಸ ಏನು ಅಂತ ಸುಮಾರಾಗಿ
ಗೊತ್ತಿಲ್ಲ.
ನಿನ್ನೆವರೆಗೆ ರಾಮಣ್ಣ ಹಣಕಾಸು ಕನ್ಸಲ್ಟಂಟ್ ಆಗಿದ್ದ. ಅಂದ್ರೆ ಎಲ್ಲೆಲ್ಲಿ ಹಣ ಹೂಡಬೇಕು… ಎಲ್ಲೆಲ್ಲಿಂದ ಹಣ ತರಬೇಕು… ಹೀಗೆ ರಾಮಣ್ಣ ಸಹಾಯ ಮಾಡ್ತಿದ್ದ. ಅಲ್ಲಿ ಇಲ್ಲಿ ಮೀಟಿಂಗ್ ಮಾಡಿ ಇಬ್ಬರಿಂದ್ಲೂ ಕಮಿಶನ್ ಪಡೀತಿದ್ದ.
ಇವತ್ತು ಅದನ್ನು ಮಾಡೋ ಹಾಗಿಲ್ಲ.
ಯಾಕೆ?
ಅವನು ಹಾಗಂತ ನಿರ್ಧಾರ ಮಾಡಿದಾನೆ…. ಅಷ್ಟೆ.
ಯಾಕೆ?
ದುರದೃಷ್ಟವಶಾತ್… ಆವನಿಗೆ  ಗೊತ್ತಿಲ್ಲ.
ಈ ರಾಮಣ್ಣನಿಗೆ ವಡೆ ತಿನ್ನಬೇಕಾದ್ರೇನೇ ಅನ್ನಿಸ್ತಾ ಇದೆ… ಹೀಗೆ ನಾನು ನಿರ್ಧಾರಾನೇ ಯಾಕೆ ಅಂತ ಗೊತ್ತಿಲ್ಲದೆ ತಗೊಳ್ಳೋದು ತನ್ನ  ಕ್ರಿಯೇಟಿವಿಟಿಯ ಭಾಗವೇ ಅಥವಾ ನನ್ನ ನಿಶ್ಶಕ್ತಿಯ ಫಲವೆ?
ಅಥವಾ ನಾನು ನಿರ್ಧಾರ ತಗೊಂಡಿದೀನಾ ಇಲ್ವ?
ಇರ್‍ಲಿ.. ಕಾಫೀ ಕುಡೀತಾ ಹಿಂದಿನ, ಮುಂದಿನ ನಿರ್ಧಾರಗಳನ್ನು  ನಾನೇ ಚರ್ಚೆ ಮಾಡಿಕೊಳ್ತೇನೆ ಎಂದು ರಾಮಣ್ಣ ಮತ್ತೆ ಅತ್ತಿತ್ತ ಬರುವ ತರಹೇವಾರಿ ತಿಂಡಿಪೋತರನ್ನು ನೋಡುತ್ತ ವಡೆಯನ್ನು ಕಬಳಿಸಿದ. ಇಡ್ಲಿಗಳನ್ನು ಕತ್ತರಿಸಿದ.
ಕಾಫಿ ಕುಡಿಯುತ್ತ ರಾಮಣ್ಣ ಯೋಚಿಸಿದ. ನಾಳೆಯಿಂದ ನಾನು ದಿನಚರಿ ಶುರು ಮಾಡೋದೇ ಸಂಜೆಯಾದ ಮೇಲೆ. ಸಂಜೆ ಐದೂವರೆಗೆ ಕಾಫಿ, ತಿಂಡಿ.
ಆಮೇಲೆ ರಾಮೋತ್ಸವ ಸಂಗೀತ ಕಚೇರಿ. ಅದು ಇರೋವರೆಗೆ ಅಥವಾ ನನಗೆ ಆಸಕ್ತಿ ಇರೋವರೆಗೆ.
ಆಮೇಲೆ ಸ್ನೇಹಿತರ ಭೇಟಿ. ಮಾತುಕತೆ, ಚಹಾ…
ಆಮೇಲೆ… ಆಮೇಲೆ… ಕೆಲಸ…… ಮಾಡೋದಕ್ಕೆ ಇದ್ರೆ…..
ಯಾವ ಕೆಲಸ ಮಾಡಬೇಕು… ರಾಮಣ್ಣ ಮತ್ತೆ ಮತ್ತೆ ಯೋಚಿಸಿದ. ಕಾಫಿ ಮುಗೀತ ಬಂದಿದೆ. ಇನ್ನು ಈ ಹೋಟೆಲಿನಲ್ಲಿ ಹೆಚ್ಚು ಹೊತ್ತು ಕೂತುಗೊಳ್ಳೋದಕ್ಕೆ ಆಗಲ್ಲ.
ಹೌದು.. ನಾನು ಯಾಕೆ ಈ ಕೆಲಸ ಮಾಡಬಾರದು ಅಂದ್ಕೊಂಡಿದೀನಿ?
ಫೇಲ್ಯೂರೆ? ಅವಮಾನವೆ? ಅಥವಾ ಮಾರ್ಜಿನ್ ಕಡಿಮೆ ಇದೆ ಅಂತ್ಲಾ?
ರಾಮಣ್ಣನಿಗೆ ಗೊತ್ತು. ತಾನು ಹೀಗೆ ಕ್ರಿಯೇಟಿವ್ ಆಗಿ ಯೋಚನೆ ಮಾಡಿಯೇ ಕೆಟ್ಟಿದ್ದು.
ಯಾಕಂದ್ರೆ ಅವನು ಈ ಕೆಲಸ ಬಿಡಬೇಕು ಅಂದ್ಕೊಂಡಿರೋದು ಅವನಿಗಾಗಿ ಅಲ್ಲ.
ಅವನು ಈಗತಾನೇ ಅಪಾರವಾಗಿ ಪ್ರೀತಿಸಲು ಆರಂಭಿಸಿರೋ ಹುಡುಗಿಗಾಗಿ.
ಅವಳು ತನ್ನ ಸ್ನೇಹಿತ ಪ್ರಕಾಶನ ಆಫೀಸಿನಲ್ಲಿ ಸ್ಟೆನೋ, ಫ್ರಂಟ್ ಆಫೀಸ್ ಮ್ಯಾನೇಜರ್,  ರಿಸೆಪ್ಷನಿಸ್ಟ್ ಎಲ್ಲವೂ ಆಗಿದಾಳೆ.
ರಾಮಣ್ಣನಿಗೆ ಕ್ರಿಯೇಟಿವಿಟಿ ಹೆಚ್ಚಾಗಿ ಅವನು ಅವಳನ್ನು  ಪ್ರೀತಿಸಿದಾನೆ. ಆದ್ರೆ ತನ್ನ ಕೆಲಸ, ವರಮಾನ ಯಾವುದೂ ಈ ಮದುವೆಗೆ ಅರ್ಹತೆ ಆಗಲ್ಲ ಅನ್ನೋ ಪ್ರe ಅವನಿಗೆ ಇದೆ. ಅವಳು ಸ್ಟೆನೋ ಆಗಿರಬಹುದು.
ಆದ್ರೆ ಅವಳನ್ನು ಮದುವೆಯಾದ ಮೇಲೆ ನಾನು ಚೆನ್ನಾಗಿ ಕಾಣಿಸ್ಕೋಬೇಕು.
ಎಲ್ಲಿರಬಹುದು ಅವಳು ಈಗ? ಮನೆಗೆ ಹೋಗಿರ್‍ತಾಳೆ.. ಟಿವಿ ಸೀರಿಯಲ್ ನೋಡ್ತಾ ಇರಬಹುದು… ಹಾಡು ಕೇಳ್ತಾ ಇರಬಹುದು.. ಅಥವಾ ಬಾಯ್‌ಫ್ರೆಂಡ್‌ಗೆ ಎಸ್ ಎಂ ಎಸ್ ಕಳಿಸ್ತಾ ಇರಬಹುದು…
ಅವಳಿಗೆ ಬೇರೆ ಬಾಯ್‌ಫ್ರೆಂಡ್ ಇದಾರಾ?
ಯಾವೋನೋ… ನನಗೇನು ಗೊತ್ತು…
ಇದ್ದರೂ ಇದ್ದುಕೊಳ್ಳಲಿ… ನಾನು ಲವ್ ಮಾಡೋದು ಏನಾರಾ ತಪ್ಪಿದೆಯ?
ರಾಮಣ್ಣ ಹೋಟೆಲಿನಿಂದ ಹೊರಬಂದ. ಬೆಂಗಳೂರು ಹಠಾತ್ತಾಗಿ ತಣ್ಣಗಾಗಿದೆ. ಮೇಲೆ ಮೋಡ ಕವುಚಿ ಇನ್ನೇನು ಭಾರೀ ಜುಮುರುಮಳೆ ಬರೋ ಹಾಗಿದೆ. ಗಾಳೀನೂ ಬಿಸ್ತಾ ಇದೆ.. ಧೂಳು ಮತ್ತು ಮಲ್ಲೇಶ್ವರದ ಮರದ ಎಲೆಗಳು ಹಾರಿ ಬರುತ್ತಿವೆ.
ಕರುಗಳು, ಬಸ್ಸುಗಳು ಭರಭರ ಸಿಗ್ನಲುಗಳನ್ನು ದಾಟ್ತಾ ಇವೆ. ಜನ ಅಲ್ಲಿ ಬೆಣ್ಣೆ ಗುಲ್ಕನ್ ಅಂಗಡಿಗೂ ದಾಳಿ ಇಟ್ಟಿದಾರೆ.
ಫ್ರೂಟ್ ಜ್ಯೂಸ್ ಸ್ಟಾಲ್‌ನಲ್ಲೂ  ಜನಸಾಂದ್ರತೆ.
ಎಲ್ಲಿರಬಹುದು ಅವಳು?ಈಗ ಏನು ಮಾಡ್ತಾ ಇರಬಹುದು?
ನಾನು ಬೇರೆ ಕೆಲಸ ಹಿಡಿದ ಮೇಲೆ ಅವಳನ್ನು ಮದುವೆಯಾಗು ಅಂತ ಕೇಳಬಹುದ?
ನಾನು ಒಳ್ಳೆ ಸಂಬಳದ ಕೆಲಸಕ್ಕೇ ಸೇರಿದೆ ಅಂತಾದ್ರೆ ಅವಳಿಗೆ ಹೇಳಬಹುದ?
ರಾಮಣ್ಣ ಹಾಗೇ ಬೈಕ್ ಚಾಲೂ ಮಾಡುತ್ತ ಯೋಚಿಸಿದ. ಈಗ ಎಲ್ಲಿಗೆ ಹೋಗಬೇಕು… ಯಾರು ತನ್ನ ದಿನಚರಿಗೆ ಸರಿಯಾಗಿ ಸಿಗ್ತಾರೆ? ರಾತ್ರಿಯ ದಿನಚರಿಯನ್ನು ಒಂದಿನ ಎರಡು ದಿನ ಮಾಡಬಹುದೇನೋ.. ದಿನಾಲೂ  ಮಾಡೋದಾದ್ರೆ  ನಾನು ಸಜ್ಜನರಾವ್ ಸರ್ಕಲ್ಲಿಗೆ ಬರೋ ವ್ಯಾಪಾರಸ್ಥರ ಥರ ಶ್ರೀಮಂತ ಆಗಿರ್‍ಬೇಕಷ್ಟೆ…
ಹೌದಲ್ವ? ಸಜ್ಜನರಾವ್ ಸರ್ಕಲ್ಲಿಗೆ ಹೋದ್ರೆ  ಹಗಲೇ ರಾತ್ರಿ ಥರ ಕಾಣ್ಸುತ್ತೆ. ಆದ್ರೆ ಅಲ್ಲಿ ರಾತ್ರಿ ಕೆಲಸ ಮಾಡೋರು ಹೋಟೆಲಿನವ್ರು ಮಾತ್ರ. ಉಳಿದವರೆಲ್ಲ ಅವತ್ತು ಅಲ್ಲಿ ದೋಸೆ, ಇಡ್ಲಿ, ಚಾಟ್ಸ್, ಬೇಬಿ ಕಾರ್ನ್ ಇತ್ಯಾದಿ ತಿಂದು ರಾತ್ರಿ ಮನೆಗೆ ಹೋಗಿ ಗಡದ್ದು ನಿದ್ದೆ ಹೊಡೆಯೋರೆ!
ಹಾಗಾದ್ರೆ ಇಗ ಏನು ಮಾಡೋದು ಎಂದು ರಾಮಣ್ಣ ತಲೆ ಕೆಡಿಸಿಕೊಂಡ. ಹೊಸ ಕೆಲಸಕ್ಕೆ ಸೇರಬೇಕು ಅಂದ್ರೆ ತಾನು ಯೋಚಿಸಲೇಬೇಕು. ಹಾಗೆ ಯೋಚಿಸಲೇಬೇಕು ಅಂದ್ರೆ ತಾನು ರಾತ್ರಿ ಏಕಾಂತದಲ್ಲಿ ಕೂತುಗೊಳ್ಳಬೇಕು.
ಟೆರೇಸಿನಲ್ಲಿ ಮಂದನೆ ಗಾಳಿ ಬೀಸ್ತಾ ಇರಬೇಕು.
ಆಕಾಶದಲ್ಲಿ ಸೋಡಿಯಂ ವೇಪರ್ ಲ್ಯಾಂಪಿನಿಂದ ಮಬ್ಬಾದ ನಕ್ಷತ್ರಗಳು ಕಷ್ಟಪಟ್ಟು ಮಿನುಗ್ತಾ ಇರಬೇಕು.
ಚಂದ್ರನೂ ಪೊಲ್ಯುಶನ್‌ಗೆ  ಮುಖ ಒಣಗಿಸಿಕೊಂಡು ಕಾಣಿಸಿಕೊಳ್ಳಬೇಕು.
ವಿಮಾನಗಳು ರೊಯ್ಯೋ ಎಂದು ಕಿರುಚಾಡಿದರೂ ಹಾಗೇ  ತೆಪ್ಪಗೆ ದೂರದ ಕ್ಷಿತಿಜದ ಅಂಚಿನಿಂದಲೇ ತಪ್ಪಿಸಿಕೊಳ್ಳಬೇಕು.
ನಾನು ಹಾಗೇ ಒಂದು ಗುಡಾರ ಹೊದ್ದುಕೊಂಡು ಮಲಗಿರಬೇಕು.
ಮೇಲೆ ಆಕಾಶ ನೋಡುತ್ತ…… ಥತ್ ಈ ಗಾಳಿಗೆ ಕನ್ನಡಕ ಹಾಕ್ಕೋಳ್ಲೇ ಬೇಕಲ್ವ…
ರಾಮಣ್ಣನಿಗೆ ಕನ್ನಡಕ ಹಾಕಿಕೊಳ್ಳೋದು ಅಂದ್ರೆ  ಬೋರು. ಕಣ್ಣು ಸರಿಯಿದ್ದೂ ಕನ್ನಡಕ ಹಾಕಿಕೊಳ್ಳೋದು ಯಾಕೆ  ಅನ್ನೋದು ಅವನ ಪ್ರಶ್ನೆ.
ಕಣ್ಣಿದ್ದವರೆಲ್ಲ ಕುರುಡರೇ ಆಗಿರಲ್ವ? ಹಾಗೇ. ರಾಮಣ್ಣನ ತಲೆ ಬಿಸಿಯಾಗ್ತಾ ಇದೆ. ಗಾಳಿಯ ಥಂಡಿ ಹೆಚ್ಚಿದಷ್ಟೂ ರಾಮಣ್ಣನ  ಕ್ರಿಯೇಟಿವಿಟಿ ಹೆಚ್ಚಾಗ್ತಾ ಇದೆ.
ರಾಮಣ್ಣ  ಬೈಕಿನ ವೇಗವನ್ನು ಕುಗ್ಗಿಸಿದ.
ಮಲ್ಲೇಶ್ವರದಿಂದ ಸೀದಾ ಸೆಂಟ್ರಲ್. ಆಲ್ಲಿಂದ ಓಕಳಿಪುರ ಹಾದು ರಾಜಾಜಿನಗರ ಎಂಟ್ರೆನ್ಸ್‌ನ ಹೊಸ ಗ್ರೇಡ್ ಸೆಪರೇಟರ್ ಬೈಕನ್ನು ನುಗ್ಗಿಸಿದ.
ಭಾಷ್ಯಂ ಸರ್ಕಲ್ಲಿಗೆ ಬಂದಮೇಲೆ ಮತ್ತೆ ಗೊಂದಲ ಶುರುವಾಯ್ತು.
ಸೀದಾ ಮುಂದೆ ಹೋಗ್ಲ? ಅಥವಾ ಪ್ರಸನ್ನ ಕಡೆಗೆ ಹೋದರೆ? ಈ ಎಸ್ ಐ ಕಡೆ ಹೋಗೋದೆಲ್ಲ ವೇಸ್ಟ್. ಅಲ್ಲಿ ಎಂಥ ಮಜಾನೂ ಇಲ್ಲ.
ಬೇಡ. ಇವತ್ತು ಹೇಗೂ ರಾತ್ರಿಯಲ್ಲೇ ದಿನ ಆರಂಭವಾಗಿದೆ. ರಾಮಣ್ಣ  ಪಶ್ಚಿಮ ಕಾರ್ಡ್ ರಸ್ತೆಗೆ ಬಂದ. ಹೋದ ವರ್ಷದ ವಿಚಿತ್ರ ಮಳೆಗೂ ಬಗ್ಗೆ ಈ ರಸ್ತೆ ಬಗ್ಗೆ ಒಂದು ಪತ್ರಿಕೆಯವರೂ ಸುದ್ದಿ ಬರೀಲೇ ಇಲ್ಲ ಎಂದು ರಾಮಣ್ಣ ಅಬ್ಸರ್ವ್ ಮಾಡಿದ್ದಾನೆ. ಯಾಕಂದ್ರೆ ಇಡೀ ಬೆಂಗಳೂರು ಎಕ್ಕುಟ್ಟಿಹೋದಾಗ ಈ ರಸ್ತೆ ಮಾತ್ರ ಥಳ ಥಳ ಹೊಳೀತಾ ಇತ್ತು.
ರಾಮಣ್ಣ ಅಲ್ಲೇ ಸೈಡಿಗೆ ಬೈಕ್ ಒರಗಿಸಿ ನಿಂತ. ಕೂತುಕೊಳ್ಳೋದಕ್ಕೆ ಜಾಗ ಇಲ್ಲದಿದ್ದರೇನು.. ತನ್ನ ಬೈಕ್  ಏನು ಕಡಿಮೆ…
ರಾಧಾ.
ಯಾಕೆ ರಾಧಾ ಅಂದ್ರೆ ಅಷ್ಟು ಇಷ್ಟವಾಗಿಹೋದಳು ತನಗೆ..
ಅವಳ ದೇಹವೆ? ಅವಳ ಆತ್ಮವೆ? ಅವಳಿಗೆ ಹೃದಯ ಇದೆ  ಅನ್ನೋ ಭಾವವೆ? ಅವಳು ಮೊನ್ನೆ ಯಾವುದೋ ಫೋನ್ ಕಾಲ್‌ನ್ನು ನನಗೆ ಕೊಡುತ್ತ ಬೆನ್ನಿಗೆ ಆತುಕೊಂಡ ಹಾಗೆ ಅನ್ನಿಸಿತ್ತು ಆಂತಾನಾ?
ಅವಳು ತನಗೆ ಆಪರಿಚಿತಳೇನಲ್ಲ.
ಅವಳ ಅಪ್ಪನೂ ನನಗೆ ಪರಿಚಯ. ಅವ್ರು ಎಲ್ಲೋ ಯಶವಂತಪುರದಲ್ಲಿ ಕೆಲಸ ಮಾಡ್ತಿದ್ರು… ಒಂದ್ಸಲ ಅವರಿಗೆ ಆ ಕಡೆಗೆ ಹೋಗುವಾಗ ಡ್ರಾಪ್ ಕೊಟ್ಟಿದ್ದೆ.  ಎರಡು ವರ್ಷದ ಹಿಂದೆ.
ಅವರು ಯಾವಾಗ್ಲೋ ತೀರಿಕೊಂಡ್ರಂತೆ.. ನನಗೆ ಗೊತ್ತಾಗಿದ್ದೇ ಇತ್ತೀಚೆಗೆ.
ರಾಧಾಳ ಆಕ್ಕನೂ ಸಿಕ್ಕಿದಾಗ ಎಷ್ಟು ಚಲೋ ಮಾತಾಡಿಸಿದ್ದಳು…
ಈ ಪ್ರೇಮಕ್ಕಾಗಿ  ನಾನು ಕೆಲಸ ಬದಲಿಸಬೇಕೆ? ಈಗೇನು ಅನಾಹುತವಾಗಿದೆ… ನಾನು ಸಂಪಾದನೆ ಮಾಡ್ತಾ ಇಲ್ವೆ?
ಹಾಗಲ್ಲ. ತನಗೆ ಈ  ಥರ ಕನ್ಸಲ್ಟನ್ಸಿ ಕೆಲ್ಸ ಬೇಡ ಅನ್ನಿಸ್ತಾ ಇದೆ.
ಹುಡುಗಿಯರು ಸೆಕ್ಯುರಿಟಿ ಬದುಕನ್ನೇ ಇಷ್ಟಪಡ್ತಾರೆ  ಅಂತ ಯಾರು ಹೇಳಿದ್ದು?
ಹರೀಶ್. ಅಲ್ಲೇ ಕೆಲಸ ಮಾಡ್ತಾ ಇರೋ  ಸಖತ್ ಮಜಾ ಮನುಷ್ಯ. ಸಿನಿಮಾ ನೋಡೋದೇನು…. ಬ್ಲೂಫಿಲ್ಮ್ ಹಾರಿಸೋದೇನು…. ಚಾಟ್ ಮಾಡೋದೇನು… ಎಂಥ ರಸಿಕ…
ಆದ್ರೆ ಜವಾಬ್ದಾರೀನೂ ಇದೆ ಮನುಷ್ಯನಿಗೆ. ಮೂರು ಜನ ಮಕ್ಕಳು..  ಬೈಕಿನಲ್ಲೇ ಕೂರಿಸಿಕೊಡು ಹೆಂಡತಿಯನ್ನೂ ಬ್ಯಾಲೆನ್ಸ್ ಮಾಡಿಕೊಂಡು ಅರಮನೆ ಮೈದಾನದಲ್ಲಿ ನಡೀತಾ ಇದ್ದ ರೇಷ್ಮೆ ಎಕ್ಸಿಬಿಶನ್‌ಗೆ ಹೋಗಿದ್ದನ್ನು ನೋಡಿದರೆ ಇವ ಮನುಷ್ಯನೋ ಅಥವಾ ಇನ್ನಾವುದೋ ಗ್ರಹದ  ಜೀವಿಯೋ ಅನ್ನಿಸಿತ್ತು. ಮಾತೆಲ್ಲ ಪೋಲಿ. ಬದುಕು ಮಾತ್ರ ಶಿಸ್ತಿನದು.
ಅವನ ವಿಷ್ಯ ಯಾಕೆ… ನಾನು ಈಗ  ರಾಧಾಳನ್ನು ಹೇಗೆ ಮಾತಾಡಿಸಬೇಕು… ನಾಳೆಯಿಂದ ಎಲ್ಲಿ ಕೆಲಸಕ್ಕೆ ಸೇರಬೇಕು?
ರಾಮಣ್ಣನಿಗೆ ಕೆಲಸದ ಆಫರ್ ಕೂಡಾ ಇದೆ. ಎರಡು ದೊಡ್ಡ ಖಾಸಗಿ  ವಿಮಾ ಸಂಸ್ಥೆಗಳು ಅವನನ್ನು  ಕೆಲಸ ಕೊಡ್ತೇವೆ ಎಂದು ಕರೆದಿವೆ. ರಾಮಣ್ಣ ಇನ್ನೂ ನಿರ್ಧರಿಸಿಲ್ಲ. ಟೀಂ ಲೀಡರ್ ಅಂತೆ. ಅಂದ್ರೆ ಕುರಿ ಕಾಯೋ ಥರ ಎಲ್ಲರನ್ನೂ  ಬೆನ್ನುಹತ್ತಿ ಟಾರ್ಗೆಟ್  ಮುಟ್ಟಬೇಕು.  ಒಳ್ಳೆ ಸಂಬಳಾನೂ ಇದೆ. ಕಮಿಶನ್ ಕೂಡಾ ಇರುತ್ತೆ. ಇನ್ಸೆಂಟಿವ್ ಇದ್ದೇ ಇದೆ.
ರಾಧಾ ಈ ಕೆಲಸಾನ ಒಪ್ತಾಳಾ? ನಾನು ಹೀಗೆ ಹೊಸ ಕೆಲಸಕ್ಕೆ ಸೇರಿ ಅವಳನ್ನು ಇಂಪ್ರೆಸ್ ಮಾಡಬಹುದ?  ಅವಳನ್ನು ಯಾಕೆ? ಯಾನ್ನು ಬೇಕಾದರೂ ಇಂಪ್ರೆಸ್ ಮಾಡಬಹುದು.. ಬೆಂಗಳೂರಲ್ಲಿ ಹುಡುಗೀರಿಗೆ ಭದ್ರತೆ ಇದ್ರೆ ಸಾಕು…. ಸರಸರ ಹಿಂದೆ ಬರ್‍ತಾರೆ. ಅದೇನು ತಪ್ಪಲ್ಲ.
ಬದುಕಿನಲ್ಲಿ ಸೆಕ್ಯೂರಿಟಿ ಬಯಸೊದು ತಪ್ಪ? ಒಳ್ಳೆ ಕೆಲಸದಲ್ಲಿ ಇರೋ ಗಂಡ ದಿನಾಲೂ ಮಲ್ಲಿಗೆ  ದಂಡೆ ತಂದು ಕೊಟ್ಟರೆ ಎಷ್ಟು ಚಂದ…ನಾನಂತೂ ಹಾಗೆ  ಮಾಡೇ ಮಾಡ್ತೇನೆ ಎಂದು  ರಾಮಣ್ಣ ನಕ್ಕ.
ಆ ಕತ್ತಲಲ್ಲಿ, ಆ ವಿಶಾಲವಾದ ರಸ್ತೆಯಲ್ಲಿ ಬೈಕ್‌ನಲ್ಲಿ ಕೂತ ರಾಮಣ್ಣನ ನಗುವಾಗಲೀ, ಅವನ ಒಳಗಡೆ ಕುದೀತಾ ಇರೋ ಮಾತುಗಳಾಗಲೀ ಅಲ್ಲಿ  ಪಾಸ್ ಆದ ಯಾವ ಬೈಕ್ ಸವಾರರಿಗೂ,ಕಾರ್ ಮಾಲೀಕರಿಗೂ ಅರ್ಥವಾಗಲಿಲ್ಲ.
ಹಾಗಂತ ನನಗೇನು ಅವರ ಸುಖ ದುಃಖ ಅರ್ಥವಾಯ್ತ? ಇಲ್ಲ.
ಏನೋ,ಅಂಬ್ಯುಲೆನ್ಸ್‌ಗಳು  ಸೈರನ್ ಕೂಗ್ತಾ ಹೋಗ್ತಾ ಇದ್ರೆ ಮಾತ್ರ  ಅದರಲ್ಲಿ ಯಾರೋ ಜೀವನ್ಮರಣದ ಹೋರಾಟ ಮಾಡ್ತಾ ಇದಾರೆ ಅಂತ ಗೊತ್ತಾಗುತ್ತೆ.
ಫೋರ್ಡ್ ಐಕನ್ ಒಳಗೆ ಅಳೋ ಹುಡುಗಿಯರ ಬಗ್ಗೆ ನನಗೇನು ಗೊತ್ತು? ಹೆಲ್ಮೆಟ್ ಒಳಗೇ ಕಣ್ಣೀರು ಹಾಕುವ ಪಡ್ಡೆ ಹುಡುಗರ ಬಗ್ಗೆ ನನಗೇನು ಗೊತ್ತು?
ಈ ಬೆಂಗ್ಳೂರಲ್ಲಿ ಯಾರು ಯಾವಾಗ ಖುಷಿಯಾಗಿರ್‍ತಾರೆ….. ಗರುಡ ಮಾಲ್‌ಗೆ ಬಂದ ಎಲ್ಲ ಸಂಸಾರಸ್ಥರೂ ಸುಖಜೀವಿಗಳೆ? ಐನಾಕ್ಸ್ ಥಿಯೇಟರಿನಲ್ಲಿ ಸಿನೆಮಾ ನೋಡೋರೆಲ್ಲ ಆದರ್ಶ ದಂಪತಿಗಳೆ?
ತಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು…  ರಾಮಣ್ಣ ಮತ್ತೆ ಮತ್ತೆ ತನ್ನೆಲ್ಲ ಯೋಚನೆಗಳನ್ನು ರಾಧಾಳ ಬಗ್ಗೆಯೇ ಕಾನ್ಸಂಟ್ರೇಟ್ ಮಾಡೋದಕ್ಕೆ ಪ್ರಯತ್ನಿಸಿದ.
ಆಗುತ್ತೆ. ಒಂದು ಒಳ್ಳೆ ಕೆಲಸ ಸಿಕ್ಕಿದ ಕೂಡಲೇ ಎಲ್ಲ ರೆಡಿ ಮಾಡ್ಕೊಳ್ಳೋದು. ಮಿಡ್ಲ್‌ಕ್ಲಾಸ್ ಬದುಕಿನ ಬಗ್ಗೆ ವರಿ ಮಾಡ್ಕೊಳ್ಳದೇನೇ ಇರೋದು. ಸಾಧ್ಯವಾದ್ರೆ ಕುಣಿಗಲ್ ಸೈಡ್‌ನಲ್ಲಿ ಒಂದು ಸೈಟ್ ತಗೊಳ್ಳೋದಕ್ಕೆ ಪ್ರಯತ್ನಿಸೋದು.
ರಾಧಾಳ ಮನೆಗೆ ಹೋದ್ರೆ ಹ್ಯಾಗೆ?
ಇಲ್ಲ. ಅವಳು ಇರೋದೇ ಲಕ್ಕಸಂದ್ರದ ಯಾವುದೋ ಬೀದಿಯಲ್ಲಿ. ಕೊನೆಗೆ ಅವಳ ಮನೇಲಿ ಏನು ತಿಳ್ಕೋತಾರೋ…. ಈ ರಾತ್ರೀಲಿ ಹೋಗಿ ಯಾಕೆ ಬಂದೆ ಅಂತ ಕಾರಣ ಕೊಡ್ಲಿ?
ರಾಮಣ್ಣನಿಗೆ ಮತ್ತೆ ಗೊಂದಲ. ತಾನು ತನ್ನ ಬಗ್ಗೆ ಯೋಚಿಸ್ತಿದೇನಾ ಅಥವಾ ರಾಧಾ ಬಗ್ಗಾ?
ಕೆಲಸದ ಬಗ್ಗೆ ಯೋಚಿಸಿದರೆ ಅದು ನನ್ನ ಬಗ್ಗೆ ಯೋಚಿಸಿದ ಹಾಗೇ ಕಂಡರೂ ಅದರಲ್ಲಿ ರಾಧಾಳ ಪಾತ್ರವೂ ಇದೆ ಅನ್ಸುತ್ತೆ.
ಎರಡು ಘಟನೆಗಳಲ್ಲಿ ನನಗೆ  ರಾಧಾಳೂ ನನ್ನ ಇಷ್ಟಪಡ್ತಾಳೆ ಅನ್ನಿಸಿದೆ.
ಮೊದಲ ಘಟನೆ ನಡೆದಾಗ ತಾನು ಅವಳನ್ನು ನೋಡಿದ್ದೇ ಮೊದಲ್ನೇ ಸಲ. ಅವಳು ಆಗತಾನೇ ಕೆಲಸಕ್ಕೆ ಸೇರಿದ್ದಳು ಅಂತ ಕಾಣುತ್ತೆ. ನನ್ನ ಮುಖಪರಿಚಯವೂ ಇರಲಿಲ್ಲ. ನಾನು ಹೋಗಿ ಸೀದಾ ಗೆಳೆಯನ ಚೇಂಬರ್‌ನಲ್ಲಿ ಇಣುಕಿದಾಗ ಸರ್, ನಿಮಗೆ ಯಾರು ಬೇಕು ಎಂದು ಭಯಮಿಶ್ರಿತ ದನಿಯಲ್ಲಿ ವಿಚಾರಿಸಿದ್ದಳು. ಇವನೇ ಕಣ್ರೀ ಎಂದು ತಮಾಷೆ ಮಾಡಿದ್ದೆ. ಕೊನೆಗೆ ಅವಳು ಅವನ ಮೊಬೈಲ್‌ಗೆ ಫೋನ್ ಮಾಡಿ `ಸರ್, ನಿಮ್ಮ ಕ್ಲೋಸ್ ಫ್ರೆಂಡ್ ಯಾರೋ ಬಂದಿದಾರೆ.. ಹಾ … ಹಾ .. ಬರ್‍ತಿದೀರಾ ಸರ್ ಓಕೆ…’ ಎಂದಿದ್ದಳು.. ಬಾಸ್ ಈಗ ಬರ್‍ತಾರೆ ಕೂತ್ಗೊಳ್ಳಿ ಸರ್ ಎಂದು ಹೇಳಿ ಮತ್ತೆ ಫೋನ್ ಮಾಡಿ  ಆರೆಂಜ್ ಜ್ಯೂಸ್ ತರಿಸಿದ್ದಳು.
ಇನ್ನೊಂದ್ಸಲ ಅವಳು ನಾನು ಹೋದಕೂಡ್ಲೇ ಯಾವುದೋ ಮ್ಯಾಗಜಿನ್ ಓದ್ತಾ ಇದ್ದವಳು ಎದ್ದು ನಿಂತು ಬನ್ನಿ ಸರ್.. ಬಾಸ್ ಇನ್ನೇನು ಬಂದುಬಿಡ್ತಾರೆ ಆಂತ ಹೇಳಿ ನಕ್ಕಿದ್ದಳು.
ಆಮೇಲೆ ಎಲ್ಲಿ?
ಅವಳು ಎಷ್ಟೊ ಸಲ ನಾನು, ಗೆಳೆಯ ಮಾತಾಡ್ತಾ ಇರೋವಾಗ ಬಂದು ಅವನಿಗೆ ಯಾವುದೋ ಫೈಲು ತೋರಿಸಿ ಹೋಗಿದಾಳೆ.
ಅವಳು ಎಷ್ಟೋ ಸಲ ತನಗೆ  ತನಗೆ ಇಷ್ಟವಾದ ಆರೆಂಜ್ ಜ್ಯೂಸನ್ನು  ತರಿಸಿಕೊಟ್ಟಿದಾಳೆ.
ಅವಳು ಎಷ್ಟೋ ಸಲ  ತನ್ನನ್ನು ಮಾತನಾಡಿಸಿದ್ದಾಳೆ. ನನ್ನ ಕೆಲಸ ಏನು ಎಂದು ಎಲ್ಲೂ ಕೇಳಿಲ್ಲ.
ಹಾಗಾದ್ರೆ ನಾನಾದ್ರೂ ಯಾಕೆ ಭಯ ಬೀಳ್ಬೇಕು…
ರಾಮಣ್ಣ ಭಯ ಬೀಳೋದಕ್ಕೆ ನಿನ್ನೆ  ನಡೆದ ಘಟನೆಯೇ ಕಾರಣ ಎಂದು ಎಲ್ಲರಿಗೂ ಗೊತ್ತು.
ಈಗ  ರಾಮಣ್ಣನಿಗೆ ಅದನ್ನು ನೆನಪಿಸಿಕೊಳ್ಳೋಕೆ ಹಿಂಜರಿಕೆ… ನಾಚಿಕೆ.
ಆಗಿದ್ದಿಷ್ಟೆ: ರಾಮಣ್ಣ ಅಲ್ಲಿಗೆ ಹೋದವ ಪೇಪರ್ ಓದ್ತಾ ಕೂತಿದ್ದ. ರಾಧಾ ಹೊರಗಿನಿಂದ ಬಂದವಳು ಇವನನ್ನು ದಾಟಿ ತನ್ನ ಟೇಬಲ್ಲಿಗೆ ಹೋಗಬೇಕು.. ಅಷ್ಟರಲ್ಲಿ ರಾಮಣ್ಣ ಕಾಲಿನ ಮೇಲೆ ಕಾಲು ಹಾಕಿಕೊಳ್ಳಲು ಹೋಗಿದ್ದಾನೆ.
ರಾಧಾ ಬಿದ್ದಿದ್ದಾಳೆ. ಆದ್ರೂ ಸಾವರಿಸಿಕೊಂಡು ಎದ್ದು ತನ್ನ ಕುರ್ಚಿಯತ್ತ ಧಾವಿಸಿಹೋಗಿ ಕೂತಿದ್ದಾಳೆ.
ರಾಧಾಗೆ ಬೇಜಾರಾಗಿಲ್ಲ. ಸಾರಿ ಸರ್ ಎಂದು  ಕೂತಿದ್ದಾಳೆ. ರಾಮಣ್ಣನಿಗೆ ಮುಜುಗರವಾಗಿದೆ.
ತತ್ತರಿಸಿ ಬಿಳ್ತಾ ಇದ್ದ ಅವಳನ್ನು  ಹಿಡಿದು ನಿಲ್ಲಿಸಲು ರಾಮಣ್ಣ ಹೋಗಿಲ್ಲ. ಆದ್ರೆ ಹಾಗೆ ನಿಲ್ಲಿಸಬಹುದಾಗಿತ್ತು…
ಯಾಕೆ ತಾನು ಹಾಗೆ ಮರದ ಹಾಗೆ ಸುಮ್ಮನೇ ನೋಡ್ತಾ ನಿಂತಿದ್ದೆ…… ರಾಮಣ್ಣ ಇಲ್ಲೂ ಮರದ ಹಾಗೆಯೇ ಕೂತು ಯೋಚಿಸಿದ.
ಆಮೇಲೆ ಪ್ರಕಾಶ ಬಂದ. ಚೆಂಬರಿನಲ್ಲಿ ಇಬ್ಬರೂ ಮಾತಾಡ್ತಾ ಇದ್ದೆವು.  `ಏನೋ ರಾಧಾಳನ್ನ ಮದ್ವೆಯಾಗೋ ಪ್ಲಾನ್ ಇದೆಯ?’  ಅಂತ ಪ್ರಕಾಶ್ ಕೇಳಿಬಿಟ್ಟಿದಾನೆ.
ಈ ಮಹಾರಾಯನಿಗೆ ಹೇಗೆ ಗೊತ್ತಾಯ್ತು ನಾನು ರಾಧಾನ್ನ ಇಷ್ಟಪಡ್ತೀನಿ ಅಂತ?
ಟ್ರಾಫಿಕ್ ಕಡಿಮೆಯಾಗ್ತಾ ಇದೆ. ಹೀಗೇ ನಿರ್ಜನ ರಸ್ತೇಲಿ ಕೂತಿದ್ದರೆ ತನ್ನನ್ನು ಸಂಶಯಾಸ್ಪದ ವ್ಯಕ್ತಿ ಅಂತ ಪೊಲೀಸರು ಹಿಡಿಯಬಹುದು.
ಸಂಶಯಾಸ್ಪದ ವ್ಯಕ್ತಿಯೇನೋ ಹೌದಲ್ವೆ …
ರಾಮಣ್ಣನಿಗೆ ನಗುವೇ ಬಂತು.
ಮತ್ತೆ ಹೆಲ್ಮೆಟನ್ನು ಏರಿಸಿ ಹೊರಟ… ಈಗ ಸೀದಾ ಎಂ ಜಿ ರಸ್ತೆಗೆ ಹೋಗಿ ಯಾವುದಾದ್ರೂ ಹಾಲಿವುಡ್ ಸಿನಿಮಾನ ಅರ್ಧ ನೋಡಿ ಬಂದುಬಿಡಬೇಕು. ಆಮೇಲೆ ಪ್ರಯಾರಿಟಿಯ ಆಧಾರದಲ್ಲಿ ಕೆಲಸಗಳನ್ನು  ಪಟ್ಟಿ ಮಾಡಬೇಕು. ಆಮೇಲೆ  ನಾಳೇನೇ ಎಲ್ಲ  ವಿಮಾ ಕಂಪೆನಿಗಳನ್ನು ಸುತ್ತಾಡಿ ಒಳ್ಳೆ ಆಫರ್ ಯಾರದ್ದು ಎಂದು  ಲೆಕ್ಕ ಹಾಕಬೇಕು.
ನಾಳೆಯಿಂದ ಹೊಸ ಕೆಲಸಕ್ಕೆ ಸೇರಬೇಕು.
ರಾಧಾ…. ಅವಳಿಗೆ ಯಾವಾಗ ಹೇಳಬೇಕು…
ಏನು ಹೇಳಬೇಕು.. ಯಾರಿಂದಲಾದರೂ ಹೇಳಿಸಬೇಕೆ? ನನ್ನ ಪ್ರಿಯ ದೋಸ್ತ  ಪ್ರಕಾಶ  ಸಹಾಯ ಮಾಡ್ತಾನೋ ಇಲ್ಲವೇ ಅಡ್ಡಿಗಾಲಾಗ್ತಾನೋ…
ಏನಾಗ್ತಾನೋ ನಂಗೇನು ಗೊತ್ತು.. ಇಷ್ಟು ದಿನವಂತೂ ಒಳ್ಳೇಯವನಾಗೇ ಇದ್ದಾನೆ. ಅದಕ್ಕೇ ಅಲ್ವ ತಾನು ಅವನನ್ನು ಫ್ರೆಂಡ್ ಮಾಡಿಕೊಂಡಿದ್ದು.
ಏನಾದ್ರೂ ಆಗ್ಲಿ ನಾನು ಈ ರಾತ್ರೀನೆಲ್ಲ ಯೋಚಿಸ್ತಾನೇ ಕಳೀಬೇಕು… ಬೇಕಾದ್ರೆ ಹಾಗೇ ಮೈಸೂರು  ರಸ್ತೇಲಿ ಅಡ್ಡಾಡಿ ಬರಬಹುದು. ಬೆಂಗಳೂರನ್ನು ತುಂಬಾ ಬೇಗ ದಾಟಬೇಕು ಅಂದ್ರೆ ಸದ್ಯ ವಸೂರು ರಸ್ತೆ ಒಂದೇ ಅಂತ ಕಾಣುತ್ತೆ. ಈ ಕಾಂಕ್ರೀಟ್ ಕಾಡಿನಿಂದ ತಪ್ಪಿಸಿಕೊಂಡು ಹೋಗೋದಕ್ಕೆ ಬೇರೆ ರೂಟ್ ಇದೆಯ ಅಂತ ನನಗೇನು ಗೊತ್ತು?
ನಾನೇನು ಬೆಂಗಳೂರನ್ನು ಸರ್ವೆ ಮಾಡ್ತೀನ? ಬೆಂಗಳೂರಿಗೆ ಬಂದು ಬೀಳೋ ಜನಕ್ಕೆಲ್ಲ ನೋಡಿ ಇಲ್ಲಿಂದ ತಪ್ಪಿಸ್ಕೊಂಡು ಹೋಗ್ಬಹುದು ಆಂತ ಹೇಳ್ತೀನಾ?
ಬೇಕಾದವ್ರು ಬಂದು ಕೇಳಿದ್ರೆ ಹೇಳ್ತೀನಿ… ನೋಡಿ ಸ್ವಾಮಿ… ಹೀಗೆ ಹೀಗೆ ಈ ದಾರೀಲಿ ಹೋದ್ರೆ ಬೆಂಗಳೂರಿಂದ ಹೊರಗೆ ಬರ್‍ತಿದೀವಿ ಅನ್ಸುತ್ತೆ. ಇನ್ನುಮುಂದೆ ನಿಮಗೆ ಬಿಟ್ಟಿದ್ದು.
ಬೆಂಗಳೂರಿಂದ ಹೊಸೂರಿಗೆ ಬಂದು ಕೆಲಸ ಮಾಡೋ ಜನವಂತೂ ವಿಚಿತ್ರ. ಬೆಳಗ್ಗೆ ಎಲ್ಲ ಬೆಂಗಳೂರಿಂದ ತಪ್ಪಿಸಿಕೊಂಡಿರ್‍ತಾರೆ..ರಾತ್ರಿ ಮತ್ತೆ ಸಿಕ್ಕಿಹಾಕೋತಾರೆ!
ಮೈಸೂರು ರೋಡಲ್ಲಿ ಅಂಥ ಟ್ರಾಫಿಕ್ ಇಲ್ಲ.
ಕೆಂಗೇರಿ ಉಪನಗರದಲ್ಲೇನಾದ್ರೂ ಸೈಟ್ ನೋಡಿದ್ರೆ ಹ್ಯಾಗೆ…
ಮೊದ್ಲು  ರಾಧಾ… ಕೆಲಸ…
ರಾಮಣ್ಣ ಕೂಲ್ ಆದ. ಇನ್ನುಮುಂದೆ ತಾನು ನಿಶಾಚರಿ ಆಗೋದೇನೂ ಬೇಕಿಲ್ಲ ಅನ್ನಿಸತೊಡಗಿತು. ಏನೋ ಒಂದಿನ ಎರಡ್ ದಿನ ಹೀಗೆ ರಾತ್ರಿ  ಅಡ್ಡಾಡಬಹುದು…
ರಾಮಣ್ಣ ಬೈಕ್ ವೇಗವನ್ನು ಹೆಚ್ಚಿಸುತ್ತ  ಮೈಸೂರು ರಸ್ತೆಯಲ್ಲಿ ಸಲೀಸಾಗಿ ಜಾರಿದ. ಕೆಂಗೇರಿ ದಾಟಿದ. ಬಿಡದೀನೂ ಬಂತು… ರಸ್ತೆ ಇಷ್ಟು ಚೆನ್ನಾಗಿದ್ರೆ ಮೈಸೂರಿಗೇ ಹೋಗಿ ಬರಬಹುದೇನೋ ಈ ರಾತ್ರಿ ಅಂದುಕೊಂಡ. ಪೆಟ್ರೋಲ್ ಹಾಕಿಸಿಲ್ಲ… ಇಲ್ಲೆಲ್ಲಿ ಎ ಟಿ ಎಂ ಇರುತ್ತೋ ಗೊತ್ತಿಲ್ಲ.
ಅರೆ… ಮೊಬೈಲ್ ಗಲಗಲ ಅಲುಗ್ತಿದೆ… ಇಷ್ಟು ಹೊತ್ತು ಸುಮ್ನೆ ಇತ್ತಲ್ಲ. ವೈಬ್ರೇಟ್ ಆಯ್ತು… ಯಾರ ಕಾಲ್…
ನಂಬರ್ ಗೊತ್ತಿಲ್ಲ. ಎಲ್ಲೋ ಡಬಲ್ ರೋಡ್ ಕಡೇದು ಅನ್ಸುತ್ತೆ.  ೨೨೨೨ ಅಂತ ಶುರುವಾಗ್ತಾ ಇದೆ..
`ನೀವು ರಾಮಚಂದ್ರ ಅನ್ನೋರ ಸರ್?’
ಯಾರಪ್ಪ ಇದು ಈ ಸರಿಹೊತ್ತಲ್ಲಿ ಕನ್ಸಲ್ಟನ್ಸಿಗೆ ಬಂದಿದಾರೆ ಎಂದು ರಾಮಣ್ಣ ಕಕ್ಕಾಬಿಕ್ಕಿಯಾದ.
`ಹೌದು  ಸಾರ್, ನಾನೇ ರಾಮಚಂದ್ರ. ಫೈನಾನ್ಸ್ ಕನ್ಲಸ್ಟಂಟ್. ತಾವು?’
`ನಿಮಗೆ ರಾಧಾ ಗೊತ್ತಲ್ವ? ನಿಮ್ ಫ್ರೆಂಡ್ ಪ್ರಕಾಶ್ ಆಫೀಸಲ್ಲಿ ಇರ್‍ತಾಳೆ..’
ಅರೆ! ಇದೇನು… ಇವರ್‍ಯಾಕೆ ನನ್ನ ಈ ಥರ ಕೇಳ್ತಿದಾರೆ…. ರಾಧಾಂಗೆ ಇವ್ರು ಏನಾಗ್ಬೇಕು… ಏನಾದ್ರೂ ಎಡವಟ್ಟಾಯ್ತ ಹ್ಯಾಗೆ?
`ಹೌದು ಸರ್. ಅವ್ರು ಗೊತ್ತು. ಆದ್ರೆ ತಾವು ಯಾರು ಅಂತ ತಿಳೀಲಿಲ್ಲ…’
`ನಾನು ಅವಳ ಚಿಕ್ಕಪ್ಪ ರಾಮಚಂದ್ರ  ಅವರೆ…. ತಮ್ಮ ಹತ್ರ ಒಂದ್ ವಿಷ್ಯ  ಅರ್ಜೆಂಠಾಗಿ ಮಾತಾಡ್ಬೇಕಿತ್ತು…’
`ಏನು ಹೇಳಿ ಸರ್…. ಪರವಾಗಿಲ್ಲ… ರಾತ್ರಿ ಹತ್ತೂವರೆ ಆಗಿದೆಯಲ್ಲ… ರಾಧಾಂಗೆ ಏನಾದ್ರೂ…. ‘
`ಹಾಗೇನಿಲ್ಲ ರಾಮಚಂದ್ರ ಅವರೆ… ಇವತ್ತು ರಾಧಾ ಮನೆಗೆ ಬಂದವಳೇ ಅಮ್ಮನ ಹತ್ರ ನಿಮ್ಮ ವಿಷಯ ಹೇಳಿದಾಳೆ. ಅವಳ ಅಪ್ಪ ಇಲ್ಲ ನೋಡಿ… ನನಗೆ ಫೋನ್ ಬಂತು. ನಾನು ರಾಧಾ ಹತ್ರ ಮಾತಾಡ್ದೆ. ನಿನ್ನೆ  ಏನೋ ಪ್ರಕಾಶ್ ಆಫೀಸಲ್ಲಿ ಸಣ್ಣ ಇನ್ಸಿಡೆಂಟ್ ನಡೀತಂತೆ… ನೀವೂ ಇದ್ರಂತೆ’
ಆ ತಂಗಾಳಿಯಲ್ಲಿ, ಆ ರಾತ್ರಿಯಲ್ಲಿ, ಆ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿದ್ದ  ರಾಮಣ್ಣ ಸಣ್ಣಗೆ ಬೆವರಿಬಿಟ್ಟ.
`ಹೌದು ಸರ್.. ರಾಧಾ ಮೇಡಂ ನನ್ನ ಕಾಲಿಗೆ ಎಡವಿ ಬಿದ್‌ಬಿಟ್ರು…. ನಾನು ಹಾಗೆ ಕಾಲು ಚಾಚಬಾರ್‍ದಿತ್ತು… ಸಾರಿ ಸರ್… ನಾನು ಉದ್ದೇಶಪೂರ್ವಕ ಹಾಗೆ ಮಾಡ್ಲಿಲ್ಲ… ರಾಧಾ ಅವ್ರು ತುಂಬಾ ಬೇಜಾರು ಮಾಡ್ಕೊಂಡ ಹಾಗೆ ಕಾಣ್ಸುತ್ತೆ….’
`ನಾನು ಹೇಳೋದು ಕೇಳಿ ರಾಮಚಂದ್ರ ಅವ್ರೆ… ನಿಮ್ದೇ ಮಾತು ಆಡಬೇಡಿ. ಒಂದ್ ನಿಮಿಷ ನಾನು ಹೇಳೋದನ್ನ ಕೇಳ್ತೀರ?’
`ಹೇಳಿ ಸರ್…’
ರಾಮಣ್ಣ ಸಿದ್ಧನಾದ.
`ರಾಮಚಂದ್ರ ಅವ್ರೆ… ನಿಮ್ಮನ್ನು ರಾಧಾ ತುಂಬಾ ದಿನದಿಂದ  ಅಬ್ಸರ್ವ್ ಮಾಡಿದಾಳಂತೆ. ಯಾವುದೇ ಕಾರಣಕ್ಕೂ ನೀವು ಅವಳಿಗೆ ಗೌರವ  ಕೊಟ್ಟೇ ಮಾತಾಡಿದ್ದು, ಯಾವತ್ತೂ ಅವಳನ್ನು ನೇರವಾಗಿ ನೋಡದೇ ವ್ಯವಹರಿಸಿದ್ದು ಎಲ್ಲ ಅಬ್ಸರ್ವ್ ಮಾಡಿದಾಳಂತೆ. ನಿನ್ನೆ ಅವ್ಳು ಬಿದ್ದಾಗ ನೀವು ಅವಳನ್ನು ತಡೀಬಹುದಿತ್ತು.. ಆದ್ರೂ ನೀವು ಸುಮ್ನೆ ಇದ್ರಂತೆ… ನೋಡು ಚಿಕ್ಕಪ್ಪ ಅವ್ರುದ್ದು ಎಂಥ  ಒಳ್ಳೆ ಗುಣ….  ನನಗೇನೂ ಅಂಥ ಗಾಯ ಆಗಲ್ಲ ಅಂತ ಗೊತ್ತಿತ್ತಲ್ವ… ನನ್ನ ಮುಟ್ಟಲೂ ಇಲ್ಲ. ಇನ್ನಾರಾರೂ ಆಗಿದ್ರೆ ಅದೇ ಚಾನ್ಸ್ ಅಂತ ನನ್ನ ಸಿನಿಮಾ ಸ್ಟೈಲ್‌ನಲ್ಲಿ ಹಿಡ್ದುಬಿಡೋರು. ರಾಮಚಂದ್ರ ಹಾಗೆ ಮಾಡದೇ ಸುಮ್ನೆ ಬೆಚ್ಚಿ ಕೂತಿದ್ರು… ನಂಗೆ ಅವರ ಗುಣ ತುಂಬಾ ಇಷ್ಟ ಆಗಿದೆ. ನೀವು ಬೇರೆ ಯಾರಿಗೋ ನನ್ನನ್ನು ಮದುವೆ ಮಾಡಿಕೊಡೋ ಬದಲು ರಾಮಚಂದ್ರ ಅವರನ್ನೇ  ಮೊದಲು ಕೇಳಿ ಅಂತ ಹೇಳಿದಾಳೆ. ಮತ್ತೆ ನಾನು ಹೋದಮೇಲೆ ಈ ಕಥೆ ಎಲ್ಲ ಬಿಡಿಸಿ ಹೇಳಿದಾಳೆ. ಈಗ ಹೇಳಿ…. ನಿಮಗೆ ಈ ಪ್ರಪೋಸಲ್ ಓಕೇನಾ?’
ಅರೆ…. ರಾಮಣ್ಣನಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ…..
`ನೋಡಿ… ರಾಧಾನ ನಾನು ಬಿಡಿಸಿ ಬಿಡಿಸಿ ಕೇಳಿದೇನೆ. ನೀವು ಬೆಂಗಳೂರಿನ ಬಗ್ಗೆ ಜೋಕ್ ಮಾಡೋದು, ಯಾವಾಗ್ಲೂ ಒಳ್ಳೆ ಮ್ಯಾಗಜಿನ್ ಓದೋದು, ಪ್ರಕಾಶ್ ಹತ್ರ ಯಾವಾಗ್ಲೂ ನಗುನಗುತ್ತ ಇರೋದು ಎಲ್ಲಾನೂ ಅವ್ಳು ಅಬ್ಸರ್ವ್ ಮiಡಿದಾಳೆ. ಅದಕ್ಕೇ ನಾನು ಪ್ರಕಾಶ್ ಹತ್ರಾನೂ ಮಾತಾಡ್ದೆ. ನಿಮ್ಮ ಬಗ್ಗೆ ಅವರಿಂದ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಇನ್ನು ನಿಮ್ಮ ಒಪಿನಿಯನ್ ಬೇಕಲ್ವ? ನೀವೇ ಒಪ್ಪದೆ ಇದ್ರೆ ಮದುವೆ ಆಗೋದಕ್ಕೇ ಸಾಧ್ಯ ಇಲ್ಲವಲ್ರೀ….’ ರಾಧಾಳ ಚಿಕ್ಕಪ್ಪ ನಗ್ತಾ ಇದಾರೆ…
ರಾಮಣ್ಣ ಆ ಕತ್ತಲಿನಲ್ಲೂ ಮೈಸೂರು ರಸ್ತೆಯುದ್ದಕ್ಕೆ ದೃಷ್ಟಿ ಹರಿಸಿದ. ಜಜ್ಜಿಹೋದ  ಹೆಬ್ಬಾವಿನಂತೆ ಮಲಗಿದ್ದ ರಸ್ತೆಯೂ ಅವನಿಗೆ ಮೆದು ಕಾಲುಹಾದಿಯ ಹಾಗೆ ಕಾಣಿಸಿತು.

Share.
Leave A Reply Cancel Reply
Exit mobile version