ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ


ಆತ ಒಂದು ಸಾಫ್ಟ್‌ವೇರ್ ಕಂಪನೀಲಿ ಕೆಲಸ ಮಾಡ್ತಾ ಇದ್ದ. ಒಳ್ಳೆ ಕಲಾವಿದ. ಒಳ್ಳೇ ಸಂಬಳ. ಸರಿ, ಮದುವೆ ಆಗೋಣ ಅದ್ಕೊಂಡ. ದೂರದ ಊರಿಗೆ ಹೆಣ್ಣು ನೋಡಿ ಒಪ್ಪಿಕೊಂಡು ಬಂದ. ಫೆಬ್ರವರೀಲಿ ಮದುವೆ ಅಂತ ನಿಶ್ಚಯ ಆಯ್ತು.
ಊರಿಂದ ಬಂದು ಕೆಲಸಕ್ಕೆ ಹೋದ್ರೆ ಏನಿದೆ ಅಲ್ಲಿ ? ಅವನನ್ನು ಕೆಲಸದಿಂದ ತೆಗೆದು ಹಾಕಿದ್ದರು. ನಮ್ಮ ಕಂಪನಿ ನಷ್ಟದಲ್ಲಿದೆ, ನೀವು ಇನ್ನು ಮುಂದೆ ಬರೋದು ಬೇಡ ಅನ್ನೋ ಕಾರಣ. ಅವನ ಹಾಗೇ ಹಲವು ಸಿಬ್ಬಂದಿಗಳನ್ನು ತೆಗೆದುಹಾಕಿದ್ದರು ಅನ್ನಿ.
ಇದು ಒಂದು ಕಂಪೆನಿಯ ದೃಶ್ಯವಲ್ಲ. ಬೆಂಗಳೂರಿನ ಹಲವು ಕಂಪೆನಿಗಳಲ್ಲಿ ಈ ಬೆಳವಣಿಗೆ ಸಾಮಾನ್ಯ ಅನ್ನೋ ಮಟ್ಟಿಗೆ ನಡೆಯುತ್ತಿದೆ. ಯಾರೂ ಈ ಬಗ್ಗೆ ಗಮನ ಕೊಡ್ತಾ ಇಲ್ಲ. ಇಂಜಿನಿಯರುಗಳು, ಸೇಲ್ಸ್ ಎಕ್ಸಿಕ್ಯೂಟಿವ್‌ಗಳು, ಕಲಾವಿದರು, ಪತ್ರಕರ್ತರು, ಕಾರಕೂನರು, ಅಟೆಂಡರ್‌ಗಳು, ಸ್ವಾಗತಗಾರ್ತಿಯರು… ಎಲ್ಲರೂ ಈ ರೀತಿ ಕೆಲಸ ಕಳಕೊಂಡಿದಾರೆ. ಅವರಲ್ಲಿ ನೀವೂ ಒಬ್ಬರಾಗಿರಬಹುದು.

ಯುವಮನಸ್ಸಿನಲ್ಲಿ ನಿರುದ್ಯೋಗದ ನೋವಿಗಿಂತ ಇದ್ದ ಕೆಲಸ ಹೋಯಿತಲ್ಲ ಎಂಬ ದುಃಖ ಹೆಚ್ಚು. ಹಾಗಾದರೆ ಕೆಲಸ ಕಳಕೊಂಡವರು ಏನು ಮಾಡಬೇಕು?

ಭಯ ಬೇಡ. ನೀವು ಇದ್ದ ಕೆಲಸ ಕಳೆದುಕೊಂಡಿದ್ದರೆ ಹೀಗೆ ಮಾಡಿ :

ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದವರಿಗೆ ಹಾಗೆ ತೆಗೆದು ಹಾಕಿದ್ದಕ್ಕೆ ಸ್ವೀಕೃತ ಪತ್ರ ಕೊಡಲು ತಿಳಿಸಿ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ನಿಮ್ಮ ಕಾರ್ಯದಕ್ಷತೆ ತೃಪ್ತಿಕರವಾಗಿರಲಿಲ್ಲ ಎಂದು ಸಬೂಬು ಹೇಳುವುದೇ ಹೆಚ್ಚು. ಕಳೆದ ವರ್ಷ ಒಂದು ಡಾಟ್‌  ಕಾಮ್‌ ನಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಸಂಬಳ ಜಾಸ್ತಿ ಮಾಡಿದ ವಾರದೊಳಗೆ ಕಾರ್ಯದಕ್ಷತೆ ನೆಪ ಒಡ್ಡಿ ಅವಳನ್ನು ಹೊರಗೆ ಕಳಿಸಲಾಗಿತ್ತು. ನಿಮ್ಮ ವಿಷಯದಲ್ಲಿ ಹಾಗಾಗದಂತೆ ನೋಡಿಕೊಳ್ಳಿ. ಕಂಪನಿಯ ದುಃಸ್ಥಿತಿ ಗೊತ್ತಾಗಬಾರದು ಎಂದು ಹೀಗೆ ನಿಮ್ಮ ಮೆಲೆ ಆರೋಪ ಹೊರಿಸುವ ಯತ್ನ ನಡೆಯುತ್ತದೆ. ಅದನ್ನು ಬಲವಾಗಿ ವಿರೋಧಿಸಿ. ಯಾಕೆಂದರೆ ಬೇರೆ ಕಂಪನಿಯಲ್ಲಿ ಕೆಲಸ ಕೇಳಲು ಈ ಕಂಪನಿಯ ಪತ್ರವೂ ಅಗತ್ಯ ಬೀಳುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.

ನಿಮ್ಮನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದರೆ, ನೀವು ಸಂಸ್ಥೆಯ ಕರಾರಿನನ್ವಯ ಸಾಮಾನ್ಯವಾಗಿ ಮುಂದಿನ ಎರಡು ತಿಂಗಳುಗಳ ಸಂಬಳವನ್ನು ಪರಿಹಾರವಾಗಿ ಕೇಳಬಹುದು.

ನಿಮ್ಮನ್ನು ಕೆಲಸದಿಂದ ತೆಗೆದ ದಿನದವರೆಗಿನ ಸಂಬಳ ಮತ್ತಿತರ ಭತ್ಯೆಗಳನ್ನು ಎರಡು ದಿನಗಳ ಒಳಗೆ ಇತ್ಯರ್ಥ ಮಾಡಿ ನೀಡಬೇಕಾದದ್ದು ಸಂಸ್ಥೆಯ ಕರ್ತವ್ಯ. ಇದನ್ನು ಸಂಸ್ಥೆಗೆ ನೆನಪಿಸಿ. ಅಕಸ್ಮಾತ್ ಇಲ್ಲಿ ತಡವಾದರೆ ನಿಮ್ಮ ಸಂಬಳ ಸಿಗುವುದು ಅನುಮಾನ.
ನಿಮ್ಮ ಭವಿಷ್ಯನಿಧಿ ಸಂಖ್ಯೆಯನ್ನು ನಿಮ್ಮ ವೇತನಪತ್ರದಲ್ಲಿ ನಮೂದಿಸಿರುತ್ತಾರೆ. ಈ ನಿಧಿ ಪಾವತಿಯಾಗಿದೆಯೇ ಎಂದು ಪ್ರಶ್ನಿಸಿ. ಬೆಂಗಳೂರಿನ ಹಲವು ಸಂಸ್ಥೆಗಳು ಈ ನಿಯನ್ನು ಹಲವು ತಿಂಗಳುಗಳಿಂದ ಪಾವತಿ ಮಾಡಿಲ್ಲ. ಇದರಲ್ಲಿ ಸಾರ್ವಜನಿಕ ಉದ್ದಿಮೆಗಳ ಪಾಲಿನಷ್ಟೇ ಖಾಸಗಿ ಸಂಸ್ಥೆಗಳ ಪಾಲೂ ಇದೆ. ಕೆಲಸ ಬಿಟ್ಟ ೬೦ ದಿನಗಳ ನಂತರ ನಿಮ್ಮ ಭವಿಷ್ಯನಿ ಹಿಂಪಾವತಿ ಅರ್ಜಿಯನ್ನು ತುಂಬಿ ಬಿಟ್ಟ ಸಂಸ್ಥೆಯ ಮುಖ್ಯಸ್ಥನಿಂದ ಸಹಿ ಹಾಕಿಸಿಕೊಳ್ಳಬೇಕು. ಈ ಅರ್ಜಿಗೆ ಸಹಿ ಹಾಕುವ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಬಿಡಿ, ಸಂಸ್ಥೆಯೇ ಇರುವುದು ಸಂಶಯಾಸ್ಪದ ! ಆದ್ದರಿಂದ ಈ ಅರ್ಜಿಗೆ ಮೊದಲೇ ಸಹಿ ಹಾಕಿ ಕೊಡಿ ಎಂದು ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ.

ಇವೆಲ್ಲ ನೀವು ಯಾಂತ್ರಿಕವಾಗಿ ಇಡಬೇಕಾದ ಹೆಜ್ಜೆಗಳು. ಆದರೆ ಕೆಲಸ ಬಿಟ್ಟ ಮೇಲೆ ನೀವು ಮಾಡಬೇಕಾದ ಸೃಜನಶೀಲ ಕೆಲಸಗಳ ಪಟ್ಟಿ ತುಂಬಾ ದೊಡ್ಡದು !

ನಿಮ್ಮ ಮನೆಯಲ್ಲಿ ನೀವು ಈ ಕೆಲಸದಿಂದ ಹೊರಗೆ ಬಂದ ಸಂದರ್ಭವನ್ನು ನಿಧಾನವಾಗಿ, ಸರಳವಾಗಿ ತಿಳಿಸಿ. ಇದಕ್ಕೆ ನಿಮ್ಮ ಸ್ನೇಹಿತರ ನೆರವನ್ನು ತೆಗೆದುಕೊಂಡರೆ ತಪ್ಪಿಲ್ಲ. ನಿಮ್ಮ ಮನೆಯಲ್ಲಿ ನೀವು ನಿರುದ್ಯೋಗಿ ಎಂಬ ಚಿಂತೆ ಮನೆ ಮಾಡದಂತೆ ನೋಡಿಕೊಳ್ಳಿ. ಹೊಸ ಕೆಲಸ ಹುಡುಕಿ. ಜೊತೆಗೇ ಮನೆಯಲ್ಲಿ ಕುಳಿತು ಪುಸ್ತಕ ಓದಿ. ಅಡುಗೆ ಮಾಡಿ. ಸಂಗೀತ ಕೇಳಿ. ಲೇಖನ, ಕವನ ಬರೀರಿ. ಕಾರ್ಯಕ್ರಮಗಳಿಗೆ ಹೋಗಿ. ಮ್ಯಾಜಿಕ್ ಶೋ ನೋಡಿ. ಅಲ್ಪ ನಿದ್ದೆಯನ್ನೂ ಮಾಡಿ ! ಯಾವುದಕ್ಕೂ ನಿರುದ್ಯೋಗಿ ಎಂಬ ಖಿನ್ನತೆ ಬೇಡ. ನಿಮ್ಮ ಅನರ್ಹತೆಯಿಂದ ಕೆಲಸ ಹೋಗಲಿಲ್ಲ. ಸಂಸ್ಥೆಯ ಕೆಟ್ಟ ನಿರ್ವಹಣೆಯಿಂದ ಹೀಗಾಗಿದ್ದು.

ಕೆಲಸ ಹುಡುಕಿ. ಹಿಂದಿನ ಕಂಪನೀಲಿ ಹೀಗಾಯ್ತು ಅಂತ ಹೇಳೋ ಸಂದರ್ಭ ಬಂದ್ರೆ ಪ್ರಾಮಾಣಿಕವಾಗಿ ಹೇಳೋದಕ್ಕೆ ಸಂಕೋಚ ಬೇಡ. ಪ್ರಾಮಾಣಿಕತೇನೇ ನಿಮಗೆ ಕೆಲಸ ಕೊಡುತ್ತೆ. ನಿಮ್ಮ ಶೈಕ್ಷಣಿಕ ಅರ್ಹತೆಗಳು, ಬೇರೆ ಬೇರೆ ಕೌಶಲ್ಯಗಳು ಎಲ್ಲವನ್ನೂ ಖುಷಿಯಿಂದ ವಿವರಿಸೋದರ ಜೊತೆಗೆ ನಿಮ್ಮ ಗುಣಗಳ ಬಗ್ಗೇನೂ ಮಾತನಾಡಿ. ಅತಿ ಮಾತು ಬೇಡ.

ಕೆಲಸ ಸಿಗೋದಕ್ಕಿಂತ ಮೊದಲ ದಿನಗಳಲ್ಲಿ ಬೇರೆ ಯಾವುದಾದ್ರೂ ಚಿಕ್ಕ ಪುಟ್ಟ ಬಿಡಿ ಕೆಲಸ ಸಿಕ್ಕರೆ ಖಂಡಿತ ಮಾಡಿ. ಒಂದು ಕಾರ್ಯಕ್ರಮ ಸಂಘಟಿಸಲಿಕ್ಕೆ ನಿಮ್ಮ ನೆರವು ಕೇಳಬಹುದು. ಅಥವಾ ಒಂದು ಮದುವೇಲಿ ನಿಮ್ಮ ಜವಾಬ್ದಾರಿ ಹೆಚ್ಚು ಇರಬಹುದು. ಭಾಗವಹಿಸಿ. ಅನುಭವ ತಗೊಳ್ಳಿ. ಅದೇ ನಿಮ್ಮನ್ನು ಉತ್ಸಾಹಭರಿತವಾಗಿಡುತ್ತೆ. ಜೀವನ ಅಂದ್ರೆ ಬರೀ ಕೆಲಸ ಮಾಡೋದೇ ಅಲ್ಲ. ಕೆಲಸಕ್ಕೆ ಸೇರೋದು ಇದ್ದಿದ್ದೆ. ಆದರೆ ಎರಡು ಕೆಲಸಗಳ ನಡುವಿನ ಬಿಡುವು ಯಾವಾಗ್ಲೂ ಸಿಗಲ್ಲ. ಅದನ್ನು ಪಾಸಿಟಿವ್ ಥಿಂಕಿಂಗ್‌ಗೆ ಬಳಸಿಕೊಳ್ಳೋದೇ ಜಾಣತನ. ಹೊಸ ಕೆಲಸ ಸೇರಿದಾಗ ನಿಮ್ಮ ಉತ್ಸಾಹ ನೋಡಿ ನೀವೇ ಬೆರಗಾಗ್ತೀರ!

ಕೊನೆಯಲ್ಲಿ ಒಂದು ಉದಾಹರಣೆ ಕೊಡ್ತೀನಿ. `ಔಟ್‌ಲುಕ್’ ಅನ್ನೋ ಮ್ಯಾಗಜಿನ್ ಇದೆ ಗೊತ್ತಲ್ಲ ? ಅದರ ಸಂಪಾದಕ ವಿನೋದ್ ಮೆಹ್ತಾ ಈವರೆಗೆ ೧೮ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಹಾಗಂತ ಅವರ ಸೃಜನಶೀಲತೆಗೇನೂ ಕಡಿಮೆ ಇಲ್ಲ. ಹೆಸರೂ ಅಷ್ಟೇ ಪ್ರಸಿದ್ಧ.

ಕೆಲಸಕ್ಕೆ ಸೇರೋದು ಎಷ್ಟು ಮುಖ್ಯಾನೋ ಕೆಲಸ ಬಿಟ್ಟಾಗ ಮುಂಜಾನೆಯ ಆಹ್ಲಾದಕತೆಯನ್ನು ಅನುಭವಿಸೋದು, ಸಂಜೆಯ ಮೋಡಗಳ ಬಣ್ಣಗಳನ್ನು ಎಣಿಸೋದು ಕೂಡಾ ಮುಖ್ಯ. ಬೆಳಿಗ್ಗೆ ಕಂಡ ಜಾಹೀರಾತಿಗೆ ಮಧ್ಯಾಹ್ನದೊಳಗೆ ಅರ್ಜಿ ಹಾಕಿ ಸೈಬರ್‌ಕೆಫೆ ಪಕ್ಕದ ಕ್ಯಾಂಟೀನಿನಲ್ಲಿ ಚಾ ಹೀರೋದೂ ಮುಖ್ಯಾನೇ!

Share.
Leave A Reply Cancel Reply
Exit mobile version