ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ.  ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು  ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿ, ತೇಜಸ್ವಿ ನಮ್ಮನ್ನು ಬಿಟ್ಟುಹೋಗಿದ್ದಾರೆ. ಮೂಡಿಗೆರೆಯ ವಿಶಿಷ್ಟ ಹಕ್ಕಿ ಗುಡ್ಡ, ಬೆಟ್ಟ ದಾಟಿ ದೂರ ದೂರ ಹಾರಿಹೋಗಿದೆ.  ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಗೆ ಈಗ ಖಾಲಿತನವೊಂದೇ ಸಂಗಾತಿ.

ಹಾಗೆ ನೋಡಿದರೆ ಪೂಚಂತೇಯವರದು ತೇಜಸ್ವೀ ಬರವಣಿಗೆ; ಮೊದಲಿನಿಂದಲೂ ಅವರು ಬರೆದದ್ದೆಲ್ಲ ಮಾಯಾಲೋಕವೇ. ಚಿದಂಬರ ರಹಸ್ಯವಿರಲಿ, ಕರ್ವಾಲೋ ಇರಲಿ, ಜುಗಾರಿ ಕ್ರಾಸ್‌ನಂಥ ಫಾಸ್ಟ್ ಪೇಸ್‌ನ ಕಥೆ ಇರಲಿ, ಪೂಚಂತೇಯವರ ಲವಲವಿಕೆಯ ಬರವಣಿಗೆಯನ್ನು ಮೆಚ್ಚದವರು ವಿರಳ. ಕಥಾಪಾತ್ರಗಳ ಡೈಲಾಗ್‌ಗಳನ್ನಂತೂ ಮತ್ತೆ ಮತ್ತೆ ಓದಿ ಆಸ್ವಾದಿಸಬಹುದು; ಅಷ್ಟು ಸ್ವಾರಸ್ಯಕರ. ಕೃಷ್ಣೇಗೌಡನ ಆನೆಯ ಕತೆ, ಕಿರಗೂರಿನ ಗಯ್ಯಾಳಿಗಳು….. ಮತ್ತೆ ಮತ್ತೆ  ಪಟ್ಟಿ ಮಾಡುವುದೇ ಬೇಡ. ಪೂಚಂತೇ ಕನ್ನಡದ ಅತಿ ಲವಲವಿಕೆಯ ಬರಹಗಾರ. ಹಾಗೇ ಅತ್ಯಂತ ಹರಿತ ಮಾತುಗಾರ.
ಮಾಹಿತಿ ತಂತ್ರeನ ಎಂದರೆ ಎಲ್ಲರೂ ಕಣ್ಣುಬಿಡುತ್ತಿದ್ದ ಹೊತ್ತಿಗೆ ತೇಜಸ್ವಿಯವರು ಕಂಪ್ಯೂಟರ್ ಹಾಕಿಕೊಂಡು ಚಿತ್ರ ಬರೆದರು. ಕನ್ನಡ ತಂತ್ರಾಂಶದ ಬಗ್ಗೆ ರಚನಾತ್ಮಕ ತಗಾದೆ ಎತ್ತಿದರು.  ಕೊನೆಗೆ ಯಾರ್‍ಯಾರೋ ತನ್ನನ್ನೂ ಬಳಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಂದ ಹೊತ್ತಿಗೆ ಕೊಂಚ ಮೌನ ವಹಿಸಿದರು. ಹಂಪಿ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಕುವೆಂಪು ಕನ್ನಡ ತಂತ್ರಾಂಶಕ್ಕೆ ಅವರ ಹಾರ್ದಿಕ ಬೆಂಬಲವಿತ್ತು.
ತೇಜಸ್ವಿಯವರ ಮಾಹಿತಿ ಸಾಹಿತ್ಯವಂತೂ ಕಾರಂತರ ನಂತರದ ಮಹತ್ವದ ಮಾಹಿತಿಕ್ರಾಂತಿಗೆ ನಾಂದಿ ಹಾಡಿತು. ಅವರ ಮಿಲೆನಿಯಮ್ ಸರಣಿಯ ಪುಸ್ತಕಗಳು ಈಗಲೂ ಗಮನಾರ್ಹವಾಗಿ ಮಾರಾಟವಾಗುತ್ತವೆ. ಆದರೆ ಈ ಪುಸ್ತಕಗಳು ಎಷ್ಟೇ ವಿಶಿಷ್ಟವೆನಿಸಿದರೂ, ಅವುಗಳಲ್ಲಿ ಧಾರಾಳವಾಗಿ ತಪ್ಪುಗಳು ನುಸುಳಿದ್ದು, ಐದನೇ ಮರುಮುದ್ರಣದ ನಂತರವೂ ಅವು ಉಳಿದುಕೊಂಡಿದ್ದು ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತದೆ. ಯಾಕೋ ತೇಜಸ್ವಿಯವರು ಮಾಹಿತಿಯನ್ನು ಸಂಗ್ರಹಿಸಲು ಪಟ್ಟ ಶ್ರಮವನ್ನು ತಪ್ಪುಗಳಿಲ್ಲದೆ ಪ್ರಕಟಿಸುವಲ್ಲಿ  ತೋರಲಿಲ್ಲ. ಅವರು ಕಣ್ಮರೆಯಾದಾಗಲೇ ಈ ಮಾತು ಯಾಕೆ ಹೇಳಿದಿರಿ ಎಂದು ನೀವು ಕೇಳಬಹುದು. ಆದರೆ ನಾನು ಇತ್ತೀಚೆಗೆ ಈ ಮಿಲೆನಿಯಮ್ ಪುಸ್ತಕಗಳನ್ನು ಸಂಗ್ರಹಿಸಿ ವಿಮರ್ಶೆಗೆ ಸಿದ್ಧನಾಗುತ್ತಿದ್ದೆ. ಈಗ ಈ ವಿಮರ್ಶೆ ಬರೆಯುವುದಿಲ್ಲ. ನನ್ನ ವಿಮರ್ಶೆಯನ್ನು ಓದಲು ಪೂಚಂತೇ ಇಲ್ಲದ ಮೇಲೆ ಬರೆದರೆಷ್ಟು, ಬಿಟ್ಟರೆಷ್ಟು? ಇಷ್ಟಕ್ಕೂ ನಾನು ಅವರನ್ನು ಮೆಚ್ಚಿಕೊಂಡೇ ಈ ವಿಮರ್ಶೆ ಬರೆಯುತ್ತಿದ್ದೆ. `ಮಯಾಲೋಕ – ೧`ನ್ನು ನಾನು ವಿಮರ್ಶೆ ಮಾಡಿದಾಗ, ಅದರ ಕೆಲವು ಅಂಶಗಳನ್ನು ಟೀಕಿಸಿದಾಗ ತೇಜಸ್ವಿ ಅದನ್ನು ಓದಿದ್ದರು ಎಂಬುದು ನನ್ನ ಮಾಹಿತಿ. ಆದರೆ ಎಂದೂ ಅವರು ಈ ಬಗ್ಗೆ ಮಾತೆತ್ತಿದ ಬಗ್ಗೆ  ನನಗೆ ತಿಳಿದುಬಂದಿಲ್ಲ. ಯಾಕೆ ಈ ಮಾತು ಹೇಳುತ್ತಿದ್ದೀನಿ ಎಂದರೆ, ನಾನು `ಆವರಣ’ದ ಬಗ್ಗೆ ಬರೆದ ಇನ್‌ಸ್ಟಂಟ್ ಸುದ್ದಿಕಥೆಯನ್ನು ಎಸ್.ಎಲ್.ಭೈರಪ್ಪನವರು ಮೆಚ್ಚಿಕೊಳ್ಳಲಿಲ್ಲ  ಎಂದು ಕೇಳಿದೆ. `ಯಾಕೆ ಪುಸ್ತಕ ಬ್ಯಾನ್ ಆಗುತ್ತದೆ ಎಂಬ ಶೀರ್ಷಿಕೆ ಕೊಟ್ಟಿದ್ದು , ಯಾಕೆ ನಾನು ರಾಮಾಜೋಯಿಸರು, ಹಾರ್‍ನಹಳ್ಳಿ ಅಶೋಕ್ ಹೆಸರುಗಳನ್ನು ಉಲ್ಲೇಖಿಸುವ ಮೂಲಕ ಕೇವಿಯೆಟ್ ಹಾಕಿದ್ದೇನೆ ಇತ್ಯಾದಿಯಾಗಿ ಬರೆದಿದ್ದಾರೆ?’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ ಎಂದು ಇಬ್ಬರು ಸ್ನೇಹಿತರು ನನಗೆ ತಿಳಿಸಿದರು. ನನ್ನದು `ಆವರಣ’ದ ಸಂಪೂರ್ಣ ವಿಮರ್ಶೆಯಲ್ಲ. ಅದಿನ್ನೂ ಬಾಕಿ ಇದೆ. ನಾನು ಬರೆದದ್ದು ಆ ಕ್ಷಣದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಹಿನ್ನೆಲೆಯ ಸುದ್ದಿಕಥೆಯಷ್ಟೆ.
ಹೀಗೆ ಹೇಳಿ ನಾನು ಭೈರಪ್ಪನವರನ್ನು ತೆಗಳುತ್ತಿದ್ದೇನೆಂದೋ, ತೇಜಸ್ವಿಯವರನ್ನು ಹೊಗಳುತ್ತಿದ್ದೇನೆಂದೋ ತಿಳಿಯದಿರಲು ವಿನಂತಿ. ಯಾಕೆಂದರೆ ನಾನು ಈ ಲೇಖಕರನ್ನು ಹತ್ತಿರದಿಂದ ಗಮನಿಸಿದ್ದೇನಾದರೂ ಅವರು ನನ್ನನ್ನು ಒಬ್ಬ ಲೇಖಕನೆಂದು ಗಮನಿಸಬೇಕೆಂದೇನೂ ಇಲ್ಲವಲ್ಲ?
ನನ್ನ ಪ್ರಕಟಣೆ , ನರೇಂದ್ರ ರೈ ದೇರ್ಲರ `ಎಂಟುಲೋಕ’ವನ್ನು ತೇಜಸ್ವಿಯವರು ಪುತ್ತೂರಿನಲ್ಲಿ ಬಿಡುಗಡೆ ಮಾಡಿದ್ದರು. ಅಂದು ಅವರು ಹೇಳಿದ ಬಾಳೆಗೊನೆಯ ಜೋಕ್ ಇವತ್ತಿಗೂ ನೆನಪಾಗಿ ನಗು ಬರುತ್ತದೆ. ಅಂದು ಅವರೊಂದಿಗೆ ನಾನೂ ವೇದಿಕೆ ಹತ್ತಿದ್ದೆ ಎಂಬ ಧನ್ಯತಾಭಾವ ನನ್ನಲ್ಲಿ ಈಗಲೂ ಮನೆಮಾಡಿದೆ. ನನ್ನ ಆದರ್ಶದ ಲೇಖಕರಲ್ಲಿ ಒಬ್ಬರಾದ ತೇಜಸ್ವಿಯವರೊಂದಿಗೆ ವೇದಿಕೆಯಲ್ಲಿ ಕುಳಿತದ್ದೇ ನನ್ನ ಭಾಗ್ಯ.
ತೇಜಸ್ವಿ ವಿವಾದಗಳಿಗೆ ಎಂದೂ ಕಡಿಮೆ ಮಾಡಿಕೊಳ್ಳಲಿಲ್ಲ. ಜೊತೆಗೇ ಅವರು ಎಂದೂ ನಮ್ಮ ಇಂದಿನ ಕೆಲವು ಪ್ರಖ್ಯಾತ ಲೇಖಕರ ಹಾಗೆ ಹೊಗಳುಭಟ್ಟಂಗಿತನವನ್ನು ಎಂದೂ ಪ್ರದರ್ಶಿಸಲಿಲ್ಲ. ಲೇಖಕರ ಗುಂಪುಗಳನ್ನು ಮೊದಲು ಕೊಂಚ ಬೆಂಬಲಿಸಿದ್ದರೂ ಕೊನೆಕೊನೆಗೆ ಇಂಥ ಗುಂಪುಗಳನ್ನೂ ಅವರು ಬೆಳೆಸಲಿಲ್ಲ. ಹಾಗಂತ ಅವರ ಫ್ಯಾನ್‌ಗಳಿಗೆ ಏನೂ ಕೊರತೆಯಿಲ್ಲ.
ವಿಷಾದ ಎಂದರೆ ತೇಜಸ್ವಿಯವರ ಈ ಕ್ರಿಯಾಶೀಲತೆ, ನವೋನವ ಅನ್ವೇಷಕ ಗುಣಗಳು ಅವರ ಫ್ಯಾನ್ ಲೇಖಕರಿಗೆ ಇಳಿಯಲೇ ಇಲ್ಲ. ತೇಜಸ್ವಿಯವರ ಬಹುಮುಖ ವ್ಯಕ್ತಿತ್ವದ ಕೆಲವಾದರೂ ಅಂಶಗಳನ್ನು ಬೆಳೆಸಿಕೊಳ್ಳುವ ಕಡೆಗೆ ಈ ಲೇಖಕರು ಹೋಗಿಲ್ಲ. ಈಗಲೂ ವಯಸ್ಸು ಮಿಂಚಿಹೋಗದ ಈ ಲೇಖಕರು ತೇಜಸ್ವಿ ಬಿಟ್ಟುಹೋದ ಕ್ರಿಯಾಶೀಲ, ಲವಲವಿಕೆಯ ಮಾರ್ಗವನ್ನು ಅನುಸರಿಸಿದರೆ ಏನೂ  ತಪ್ಪಿಲ್ಲ.
ಮೂಡಿಗೆರೆಯಲ್ಲಿದ್ದುಕೊಂಡೇ ನಗರೀಕರಣದ ವಿಚಿತ್ರ ಆಯಾಮಗಳನ್ನು ಚಿತ್ರಿಸುವಲ್ಲಿ, ಸಂಬಂಧಗಳನ್ನು  ಚಿತ್ರವತ್ತಾಗಿ ಕಟ್ಟಿಕೊಡುವಲ್ಲಿ ಸದಾ ನಗರದ ಲೇಖಕರಿಗಿಂತ ಒಂದೆರಡು ಹೆಜ್ಜೆ ಮುಂದೆಯೇ ಇರುತ್ತಿದ್ದ ತೇಜಸ್ವಿಯವರು ಇನ್ನೂ ಸಾಕಷ್ಟು ಬರೆಯುತ್ತಾರೆ ಎಂಬ ನಮ್ಮ ಹಲವರ ನಿರುಮ್ಮಳತೆಗೆ ಶಾಕ್ ಕೊಟ್ಟು ಹೋಗಿದ್ದಾರೆ. ಅವರು ತಮ್ಮ ಕಥೆಗಳಲ್ಲಿ ವಿಚಿತ್ರ ತಿರುವುಗಳನ್ನು ಕಟ್ಟಿಕೊಡುತ್ತಿದ್ದರು; ನಮ್ಮನ್ನು ಮಧುರವಾದ ಅಚ್ಚರಿಗೆ ತಳ್ಳುತ್ತಿದ್ದರು.
ಈಗ ಅವರು ನಮ್ಮನ್ನು ಅತ್ಯಂತ ಬೇಜಾರಿನ ಅಚ್ಚರಿಗೆ ತಳ್ಳಿದ್ದಾರೆ. ಈ ಬೇಜಾರು ನಮ್ಮನ್ನು ಹೆಚ್ಚೆಚ್ಚು ಬರೆಯುವಂತೆ ಮಾಡಲಿ.

Share.
Leave A Reply Cancel Reply
Exit mobile version