ಪರಮಾಣುಶಕ್ತಿಯ ಬಳಕೆ ಮಾಡುತ್ತ ಈಗಾಗಲೇ ಅರ್ಧ ಶತಮಾನ ಕಳೆದಿದ್ದೇವೆ. ವಿಶ್ವದ ಬಲಾಢ್ಯ ದೇಶಗಳಲ್ಲಿ ಪರಮಾಣು ಸ್ಥಾವರಗಳಿವೆ. ಭಾರತವೂ ಇಂಥ ಶಕ್ತಿಯುತ ದೇಶಗಲ್ಲೊಂದು. ಎಲ್ಲ ಸರಿ. ಆದರೆ ಪರಮಾಣು ಕಸವನ್ನು ಎಲ್ಲಿ ಎಸೆಯುತ್ತಿದ್ದಾರೆ? ಕಸದ ಬುಟ್ಟಿ ಎಲ್ಲಿದೆ? ಪರಮಾಣು ಶಕ್ತಿಯ ಸದ್ಬಳಕೆಯೋ, ದುರ್ಬಳಕೆಯೋ ಏನಾದರಾಗಲಿ, ಕಸವಂತೂ ಹುಟ್ಟಿಕೊಳ್ಳುತ್ತದೆ. ಪರಮಾಣು ಸ್ಥಾವರಗಳಲ್ಲಿ ಬಳಸುವ ಕಸಬರಿಗೆ, ಮೇಜು, ಕುರ್ಚಿಗಳಿಂದ ಹಿಡಿದು ಎಲ್ಲ ಬಗೆಯ ಕಸವನ್ನೂ ಸುಮ್ಮನೆ ಕಸದ ಗುಂಡಿಗೆ ಎಸೆಯುವಂತಿಲ್ಲ. ಅವೆಲ್ಲ ಪರಮಾಣು ವಿಕಿರಣಕ್ಕೆ ತುತ್ತಾಗಿವೆ. ಅವುಗಳಲ್ಲಿರೋ ವಿಕಿರಣ ನಿಲ್ಲೋದಕ್ಕೆ ಸಾವಿರಾರು, ಲಕ್ಷಗಟ್ಟಳೆ ವರ್ಷಗಳೇ ಬೇಕು.
ಪರಮಾಣು ಯುಗದ ಅವಾಂತರವೇ ಇದು: ಕಸದ ಬುಟ್ಟಿಯನ್ನು ಹುಡುಕುತ್ತಲೇ ಐವತ್ತು ವರ್ಷಗಳು ಕಳೆದಿವೆ. ಅರ್ಥಾತ್, ಪರಮಾಣು ಸ್ಥಾವರಗಳು ಹುಟ್ಟಿದ ದಿನದಿಂದ ಈವರೆಗೂ ಎಲ್ಲ ದೇಶಗಳ ಸರ್ಕಾರಗಳು ಪರಮಾಣು ಕಸವನ್ನು ಸ್ಥಾವರಗಳಲ್ಲೋ, ಇನ್ನಾವುದೋ ರಹಸ್ಯತಾಣಗಳಲ್ಲೋ ಇಟ್ಟುಕೊಂಡೇ ಬಂದಿವೆ. ಈ ತಾಣಗಳಲ್ಲಿ ಭೂಕಂಪವಾದರೆ, ನೆರೆ ಬಂದರೆ, ಉಗ್ರಗಾಮಿಗಳು ಆರ್ ಡಿ ಎಕ್ಸ್ ತುಂಬಿದ ಟ್ರಕ್ಕನ್ನು ತೂರಿಸಿದರೆ, ಪರಮಾಣು ಶಕ್ತಿಯ ಭವ್ಯ ಕಥೆ, ಪುರಾಣ ಹೇಳುವ, ಕೇಳುವ ನಾವೆಲ್ಲರೂ ಕ್ಷಣಮಾತ್ರದಲ್ಲಿ ಪರಮಾತ್ಮನಲ್ಲಿ ಲೀನವಾಗುತ್ತೇವೆ!
ಈ ಕಥೆ ಕೇಳಿ:
ಅಮೆರಿಕಾದಲ್ಲಿ ೩೯ ರಾಜ್ಯಗಳ ೧೩೧ ಸ್ಥಳಗಳಲ್ಲಿ ಈ ಕಸವನ್ನು ಪೇರಿಸಿಟ್ಟಿದ್ದಾರೆ. ಇಂಗ್ಲೆಂಡಿನಲ್ಲಿ ಹತ್ತು ರಹಸ್ಯ ಕಸತಾಣಗಳನ್ನು ಗುರುತಿಸಿದ್ದನ್ನು ಪತ್ರಿಕೆಗಳು ಪತ್ತೆ ಹಚ್ಚಿವೆ. ಸ್ವೀಡನ್‌ನಂಥ ಶಾಂತಿಪ್ರಿಯ ದೇಶವೂ ಈ ಕಸವನ್ನು ನೆಲದೊಳಕ್ಕೆ ಹೂತುಬಿಡುವ ಕೆಲಸಕ್ಕೆ ಕೈ ಹಾಕಿದೆ. ಭಾ
ರತದಲ್ಲಿ? ಪಿಂಗಾಣಿ ಮತ್ತು ಗಾಜಿನಿಂದ ಮಾಡಿದ ಭೂತಗೊಳವೆಗಳಲ್ಲಿ ಈ ಕಸವನ್ನು ತುಂಬಿಡುತ್ತಿದ್ದಾರೆ. ಕೋಲಾರದಲ್ಲಿ ಬರಿದಾದ ಚಿನ್ನದ ಗಣಿಗಳಲ್ಲಿ ಈ ಕಸವನ್ನು ಹೂತುಬಿಡುವ ಬಗ್ಗೆ ಗಂಭೀರ ಚಿಂತನೆ ನಡೆದಿತ್ತು. ಆದರೆ ಅಲ್ಲಿ ನೀರು ತುಂಬಿದ್ದರಿಂದ ಈ ಯೋಚನೆಗೆ ಕಲ್ಲುಬಿತ್ತು.
೨೦೦೦ದ ಹೊತ್ತಿಗೆ ಭಾರತದಲ್ಲಿ ೨೬೦೦ ಟನ್ ವಿಕಿರಣ ಕಸ ಇತ್ತು ಎಂಬುದು ಒಂದು ಅಂದಾಜು. ಅಮೆರಿಕಾದಲ್ಲಿ? ೧೦ ಕೋಟಿ ಗ್ಯಾಲನ್‌ಗಳಷ್ಟು ವಿಕಿರಣ ಕಸ ಅಲ್ಲಿದೆ; ೨೫೦೦ ಟನ್‌ಗಳಷ್ಟು ಬಳಸಲಾಗದ ಇಂಧನವಿದೆ.
ಅಮೆರಿಕಾದ ವಿಕಿರಣಪೂರಿತ ಕಸದ ನಾಗರಿಕ ನಿರ್ವಹಣೆ ಕುರಿತ ಕಚೇರಿಯೇ ಹೀಗೆ ಹೇಳಿದೆ:
ವಿಕಿರಣಯುತ ಕಸವನ್ನು ಈಗಿನಂತೆ ಇದ್ದಲ್ಲೇ ಬಿಟ್ಟರೆ ಹತ್ತಿರದ ಜನತೆಗೆ ಮತ್ತು ಪರಿಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಿನ ಬಹುತೇಕ ಕಸತಾಣಗಳು ಜನವಸತಿಯ ಹತ್ತಿರದಲ್ಲೇ ಇವೆ. ಪರಮಾಣು ಶಕ್ತಿ ಬಳಕೆಗೆ ಭರಪೂರ ನೀರು ಬೇಕು. ಆದ್ದರಿಂದ ಇವು ನದೀತಟದಲ್ಲೇ ಇರುತ್ತವೆ. ಆದರೆ ಈ ಕಸ ಮಾತ್ರ ನೀರಿಗೆ ತಾಗುವಂತಿಲ್ಲ. ಅಕಸ್ಮಾತ್ ಹೀಗಾದರೆ ಅಮೆರಿಕಾದ ಎಲ್ಲಾ ಸಮುದ್ರತಟ ಮತ್ತು ೨೦ ಪ್ರಮುಖ ನದಿಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತದೆ.
ಸಮುದ್ರತಟದಲ್ಲಿ ಹೂತರೆ?ಬೇಕಾದಾಗ, ಬೇರೆ ಕಡೆಗೆ ಸಾಗಿಸಲು ಈ ತ್ಯಾಜ್ಯವನ್ನು ಮರಳಿ ಪಡೆಯುವುದೇ ದೊಡ್ಡ ಸವಾಲು. ಅಲ್ಲದೆ ಲಂಡನ್ ಕನ್ವೆನ್‌ಶನ್ ಒಪ್ಪಂದದ ಪ್ರಕಾರ ೨೦೧೮ರವರೆಗೆ ಸಮುದ್ರತಟದಲ್ಲಿ ವಿಕಿರಣ ಕಸವನ್ನು ಸಮುದ್ರತಟದಲ್ಲಿ ಹೂಳುವಂತಿಲ್ಲ.
೧೦ ಸಾವಿರ ಮೀಟರುಗಳ ಆಳದ ಗುಂಡಿಗಳಲ್ಲಿ ಕಸವನ್ನು ಹೂಳಬಹುದೆ? ಉಹು. ಅಂತರ್ಜಲದ ಮಟ್ಟಕ್ಕಿಂತ ಕೆಳಗೆ ಬರುವ ಈ ಗುಂಡಿಗಳ ಸುತ್ತ ಇರುವ ಕಲ್ಲುಗಳು ಎಂಥ ವಿಕಿರಣದ ಸ್ಥಿತಿಯಲ್ಲೂ ತೆಪ್ಪಗೆ ಇರುತ್ತವೆಯೇ ಎಂಬುದು ಗೊತ್ತಿಲ್ಲ. ವಿಕಿರಣಕಸವು ಇಂಥ ಒತ್ತಡದ ಆಳದಲ್ಲಿ ( ಭೂಮಿಯ ಕೆಳಗೆ ಹೋದಂತೆ ಒತ್ತಡ ಹೆಚ್ಚುತ್ತದೆ ತಾನೆ?) ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಿಲ್ಲ.
ಹಾಗಾದರೆ ಕಸವನ್ನು ಆಕಾಶಕ್ಕೆ ಎಸೆದು ಹಾಯಾಗಿರಬಹುದೆ? ಅದೂ ಸಾಧ್ಯವಿಲ್ಲ. ಕಸವನ್ನು ಚಿಮ್ಮಿಸುವಾಗ ಅಪಘಾತವಾದರೆ ಪರಿಣಾಮ ಊಹಾತೀತ. ಅಲ್ಲದೆ ಟನ್ನುಗಟ್ಟಳೆ ಕಸವನ್ನು ಆಕಾಶಕ್ಕೆ ಚಿಮ್ಮಿಸಲು ನೂರಾರು ಉಡಾವಣೆಗಳಾಗಬೇಕು. ನಮ್ಮ ಭೂಮಿಯನ್ನು ಹಾಳುಗೆಡವಲು ಒಂದು ಅಪಘಾತವಾದರೂ ಬೇಕಾದಷ್ಟಾಯಿತು!
ಭೂಮಿಯ ಧ್ರುವತಾಣಗಳಲ್ಲಿ ಇರುವ ಮಂಜುಗಡ್ಡೆಗಳ ನಡುವೆ ಕಸವನ್ನು ಹೂತುಬಿಟ್ಟರೆ? ಜನವಸತಿ ಇರೋದಿಲ್ಲ ಎಂಬುದು ಒಂದು ಅನುಕೂಲವೇ. ಆದರೆ ಆಮೇಲೆ ಕಸದ ಗತಿ ಏನಾಯಿತು ಎಂದೇ ತಿಳಿಯುವುದಿಲ್ಲ. ಕಸವನ್ನು ಮತ್ತೆ ಹಿಂತೆಗೆಯಲು ಬರೋದಿಲ್ಲ. ಜಾಗತಿಕ ತಾಪಮಾನ ಹೆಚ್ಚು ಕಡಿಮೆಯಾದರೆ ಕಸದ ಗತಿಯೂ ಏರುಪೇರಾಗುತ್ತದೆ. ಬಹುದೂರಕ್ಕೆ ಕಸವನ್ನು ಒಯ್ಯಬೇಕು; ಕಠಿಣ ಹವಾಮಾನವನ್ನು ತಾಳಿಕೊಳ್ಳಬೇಕು. ೧೯೫೯ರ ಆಂಟಾರ್ಕಟಿಕಾ ಒಪ್ಪಂದದ ಪ್ರಕಾರ ಆಂಟಾರ್ಕಟಿಕಾದಲ್ಲಿ ವಿಕಿರಣ ಕಸವನ್ನು ಎಸೆಯುವುದಕ್ಕೆ ನಿರ್ಬಂಧವಿದೆ.
ಯಾವುದಾದರೂ ಏಕಾಂಗಿ ದ್ವೀಪದಲ್ಲಿ ಹೂತರೆ? ಕಸವನ್ನು ಸಮುದ್ರದಲ್ಲಿ ಅಷ್ಟು ದೂರ ಒಯ್ಯುವುದೇ ಒಂದು ಕಷ್ಟದ ಕೆಲಸ. ಸಾಮಾನ್ಯವಾಗಿ ಇಂಥ ದ್ವೀಪಗಳು ಭೂಕಂಪ ಮತ್ತು ಅಗ್ನಿಪರ್ವತದ ಲಾವಾ ಚಿಮ್ಮುವಿಕೆಯ ಘಟನೆಗಳನ್ನು ಅನುಭವಿಸುತ್ತಿರುತ್ತವೆ. ದ್ವೀಪಗಳಲ್ಲಿ ನೀರು ನುಗ್ಗುವುದು ಸಾಮಾನ್ಯ. ಅಲ್ಲದೆ ಹತ್ತಿರದ ದೇಶಗಳ ವಿರೋಧ ಕಟ್ಟಿಕೊಳ್ಳಬೇಕು.
ಸರಿ, ಹಾಗಾದರೆ ಈ ಒತ್ತಡದಲ್ಲಿರುವ ದ್ರವೀಕೃತ ಕಸವನ್ನು ೫ ಸಾವಿರ ಮೀಟರುಗಳ ಕೆಳಗೆ ಇಂಜೆಕ್ಷನ್ ಥರ ತೂರಬಹುದೆ? ಅದೂ ಸಾಧ್ಯವಿಲ್ಲ. ಕೆಳಗೆ ಹೋದ ಈ ದ್ರವವು ಪರಿಸರಕ್ಕೆ ಲೀಕ್ ಆಗಬಹುದು.
ಅದಕ್ಕೇ ಕೊನೆಗೆ ಅಮೆರಿಕಾವು ಒಂದು ನಿರ್ಧಾರಕ್ಕೆ ಬಂದಿದೆ: ನೆವಡಾ ರಾಜ್ಯದಲ್ಲಿರುವ ಯುಕ್ಕಾ ಪರ್ವತ ಶ್ರೇಣಿಯಲ್ಲಿ ಈ ಎಲ್ಲ ಕಸವನ್ನೂ ಶೇಖರಿಸಿ, ಭೂತಗೊಳವೆಗಳಲ್ಲಿ ತುಂಬಿ ಹೂತುಬಿಡೋದು! ಲಾಸ್ ವೇಗಾಸ್‌ನಿಂದ ಕೇವಲ ೮೦ ಮೈಲಿಗಳ ದೂರದಲ್ಲಿರುವ ಯುಕ್ಕಾ ಪರ್ವತ ಶ್ರೇಣಿಯಲ್ಲಿ ೧.೩೫ ಲಕ್ಷ ಟನ್ನುಗಳಷ್ಟು ವಿಕಿರಣ ಕಸವನ್ನು ಹೂಳಲು ಯೋಜನೆ ನಡೆದಿದೆ. ಇದಕ್ಕಾಗಿ ಪ್ರತ್ಯೇಕ ರೈಲುಮಾರ್ಗವನ್ನೇ ನಿರ್ಮಿಸಲಾಗುವುದು. ೨೦೧೪ರ ಹೊತ್ತಿಗೆ ರೈಲುಮಾರ್ಗ ಸಿದ್ಧವಾದರೆ ೨೦೧೭ರ ಹೊತ್ತಿಗೆ ಕಸವನ್ನು ತರುವ ಕಾರ್ಯ ಆರಂಭವಾಗುತ್ತದೆ. ಮುಂದಿನ ಒಂದು ಲಕ್ಷ ವರ್ಷಗಳವರೆಗೂ ಯುಕ್ಕಾ ಪರ್ವತದಲ್ಲಿ ಈ ಥರ ಕಸವನ್ನು ಹೂಳುವ ಯೋಜನೆಯನ್ನು ಅಮೆರಿಕಾ ಸರ್ಕಾರ ಮಂಡಿಸಿದೆ. ಯುಕ್ಕಾ ಯೋಜನೆಗೆ ಭಾರೀ ವಿರೋಧವೂ ಕಂಡುಬಂದಿದೆ; ಹೋರಾಟ ನಡೆದಿದೆ. ಅಮೆರಿಕಾವು ಹೇಳಿದ ಕವಚಲೋಹವನ್ನು ಯುಕ್ಕಾದಲ್ಲಿ ಹೂತಿಟ್ಟ ಕೆಲವೇ ಗಂಟೆಗಳಲ್ಲಿ ಅದು ತುಕ್ಕುಹಿಡಿದಿದ್ದನ್ನು ಜನ ಕಂಡಿದ್ದಾರೆ. ಯುಕ್ಕಾದ ಮಾತಿರಲಿ, ಐವತ್ತು ವರ್ಷ ಕಾದಿಟ್ಟ ಕಸವನ್ನು ಇನ್ನೂ ನೂರು ವರ್ಷ ಹೀಗೆಯೇ ಕಾಪಿಡೋಣ; ಅಮೇಲೆ ಹೊಸ ತಂತ್ರಜ್ಞಾನ ಹೊಳೆಯಬಹುದು; ಕಸದ ವಿಲೇವಾರಿ ಸುಲಭವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಕೇಳುವವರು ಯಾರು?
ಮೊನ್ನೆ ತಾನೇ ಜಪಾನಿನಲ್ಲಿ ಜಿ-೮ ದೇಶಗಳ ಶೃಂಗಸಭೆ ನಡೆಯಿತು; ಆದರೆ ಈ ದೇಶಗಳ ನಾಯಕರು ಹಿರೋಶಿಮಾ – ನಾಗಾಸಾಕಿಗೆ ಭೇಟಿ ನೀಡಲಿಲ್ಲ; ಜಪಾನ್ ಕೂಡಾ ಆಹ್ವಾನ ನೀಡಲಿಲ್ಲ. ನಿಜ ಹೇಳಬೇಕೆಂದರೆ ಪರಮಾಣು ಬಳಕೆಯನ್ನು ನಿಲ್ಲಿಸುವ ಶಕ್ತಿ ಜಪಾನಿಗೆ ಮಾತ್ರ ಇದೆ. ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ ತಡೆಯಲು ಜಪಾನ್ ಮುಂಚೂಣಿಗೆ ಬರುವುದೊಂದೇ ದಾರಿ ಎಂಬ ಮಾತಿದೆ.
ಅಮೆರಿಕಾದಲ್ಲಿ ಎಲ್ಲ ವಿದ್ಯುತ್ತೂ ಪರಮಾಣು ಸ್ಥಾವರಗಳಿಂದಲೇ ಬಂದರೆ ಪ್ರತಿ ನಾಗರಿಕನೂ ವರ್ಷಕ್ಕೆ ೩೯.೫ ಗ್ರಾಮುಗಳಷ್ಟು ಪರಮಾಣು ಕಸವನ್ನು ಉತ್ಪಾದಿಸಿದಂತಾಗುತ್ತದಂತೆ.
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ)ಯ ಜಾಲತಾಣದಲ್ಲಿ ದೊರೆತ ಹತ್ತಾರು ವಿಕಿರಣ ಕಸವನ್ನು ಎಷ್ಟು ಸುರಕ್ಷಿತವಾಗಿ ಇಡಬೇ
ಕು ಎಂಬ ಕಾನೂನಿದೆಯೇ ಹೊರತು ಹೇಗೆ ಮತ್ತು ಎಲ್ಲಿ ಇಡಬೇಕು ಎಂಬ ವಿವರಣೆ ನನಗಂತೂ ಕಾಣಲಿಲ್ಲ.
“ಪರಮಾಣು ತಂತ್ರಜ್ಞಾನ ಮನುಷ್ಯನ ವಿವೇಕವನ್ನಲ್ಲ, ಮೊಂಡು ಧೈರ್ಯವನ್ನು ಬೇಡುತ್ತದೆ” ಎನ್ನುತ್ತಾರೆ ನಮ್ಮ ಹಿರಿಯ ಪತ್ರಕರ್ತ ನಾಗೇಶ ಹೆಗಡೆ, “ಚೆರ್ನೋಬಿಲ್ ಚಂಡಿಯ ರುಂಡಮಾಲೆ’ ಲೇಖನದಲ್ಲಿ. ಪರಮಾಣು ಅಡುಗೆ ಮಾಡಿದ ಮೊದಲ ದಿನದಿಂದಲೂ ಕಸವನ್ನು ಎಸೆಯಲಾಗದೆ ಬೆಳೆಸುತ್ತ ಹೋದ ಮನುಕುಲಕ್ಕೆ ಭಂಡ ಧೈರ್ಯವೇ ಇದೆ ಎನ್ನಬಹುದೆ?
ಭಾರತ – ಅಮೆರಿಕಾ ಪರಮಾಣು ಒಪ್ಪಂದದ ಬಗ್ಗೆ ಇಷ್ಟೆಲ್ಲ ಹುಯಿಲೆದ್ದಿರುವಾಗ ಪರಮಾಣು ಕಸದ ಬಗ್ಗೆ ಒಂದಷ್ಟಾದರೂ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಇಷ್ಟೆಲ್ಲ ಬರೆಯಬೇಕಾಯಿತು.
ಗಮನಿಸಿ: ಪಿ೨ಪಿ ಕಡತ ಹಂಚಿಕೆ ಬಗ್ಗೆ ಕಳೆದ ವಾರ ಬರೆದ ಲೇಖನದ ಇನ್ನೊಂದು ಕಂತು ಮುಂದಿನ ವಾರ ಪ್ರಕಟವಾಗಲಿದೆ.