ನೆಲವಾಗಿ ಹಬ್ಬಿದವಳಿಗೆ
ವಿದಾಯದ ತುತ್ತತುದಿಯನ್ನು ದಾಟಿಯೂ
ಸ್ನೇಹಿತನ ಹದವಾಗಿ ತಬ್ಬಿದವಳೆ
ನಡೆದು ನಡೆದು ಬಹುದೂರಕೆ ಬಂದರೂ
ರಕ್ಷಣೆಯ ನೆಲವಾಗಿ ಹಬ್ಬಿದವಳೆ
ಧನ್ಯವಾದ. ಕೈ ಹಿಡಿದ ಮಾತುಕತೆಗಳು ಮುಗಿದು
ಹೊರಡುವ ಗತಿಗೆ ಜೋಡಿಸುವೆಯಾ
ವಿಶ್ವಾಸದ ಬಿಂದುಗಳನ್ನು ಮುಟ್ಟಿಮುಟ್ಟಿ
ಭರವಸೆಯ ನಾಳೆಗಳ ಕೂಡಿಸುವೆಯಾ ?
ಎಂಬ ಎರಡೇ ಎರಡು ಪ್ರಶ್ನೆಗಳ ಮಟ್ಟಿಗೆ
ಉತ್ತರಿಸುವಿಯಾಗಿ ಕಾದಿರುವೆ ಹೆಜ್ಜೆ
ಮುಂದಿಟ್ಟು ಹೋಗಿಬಿಟ್ಟರೆ ಮಟಾಮಾಯವಾಗೋ
ಬಾಗಿಲು ಕಿಟಕಿ ಗಾಜು ಗವಾಕ್ಷಿಗಳ ಹಿಂದೆ
ಮಬ್ಬಾಗಿ ಬಿಡುವೆ ಇಬ್ಬನಿಯಂತೆ ತಣ್ಣಗೆ
ಕೂತುಬಿಟ್ಟರೂ ನನಗೆ ದಿವ್ಯಸುಖವೆ.
ಹುಲ್ಲುಗಾವಲಿನಲ್ಲಿ ಕಂಡ ನೆನಪು
ಸುಡುತ್ತಿದೆ ನನ್ನ ಹಣೆಯನ್ನು ಎಂಬುದನ್ನೂ ಮರೆವೆ.
ಸರಿಯುತ್ತಿವೆ ದುಃಖದ ಹೊಸಿಲುಗಳು ಬೇಲಿಯಂಚಿಗೆ
ಸರಿಯುತ್ತಿವೆ ಸುಖದ ಟಿಸಿಲುಗಳು ನೀಲಿ ಪರದೆಗೆ
ನಾನು ಬರೆಯುತ್ತಿದ್ದೇನೆ ಎರಡೇ ಎರಡು
ಪ್ರಶ್ನೆಗಳ ಪಟ್ಟಿ ; ದುಃಖ ಸುಖಗಳ ಗತಿಗೆ ಬೆಚ್ಚಿ
ನೀನೇ ಈಗ ವಿಶ್ವಾಸದ ಬಿಂದು.
ದಯಮಾಡಿ ದಾರಿಕೊಡು.
ಲ್ಥ
ಬರೆದದ್ದು : ೨೬.೧೧.೧೯೯೨ / ಶಿರಸಿ
ತಿದ್ದಿದ್ದು : ೨೦.೪.೨೦೦೨ / ಬೆಂಗಳೂರು