ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ? 

 

ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ? 

 

ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ? 

 

ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು ಹೇಳುತ್ತಾರೆ.

 

ಹಾಗಾದರೆ ವಾಸ್ತವ ಏನು? ಭಾರತದಲ್ಲಿ ದಾರಿದ್ರ್ಯ ಇಲ್ಲವೆ? ಭ್ರಷ್ಟಾಚಾರ ಇಲ್ಲವೆ? ಅದನ್ನೆಲ್ಲ ಒಪ್ಪಿಕೊಳ್ಳಲೇಬೇಕಲ್ಲವೆ? – ಹಾಗಂತ ಇನ್ನೊಂದು ಬಣ ವಾದಿಸುತ್ತದೆ. 

 

ಎಲ್ಲಕ್ಕಿಂತ ಮುಖ್ಯ ವಾದ ಎಂದರೆ ವಿದೇಶಗಳಲ್ಲಿ ಭಾರತವನ್ನು ಕೆಟ್ಟ ದೇಶ ಎಂದು ಚಿತ್ರಿಸಬಾರದು ಎನ್ನುವುದು. ಇದನ್ನು ಅಪ್ಪಟ ಭಾರತೀಯತೆ ಎಂದೇ ಒಪ್ಪೋಣ. 

 

ಭಾರತೀಯರ ಸಾಧನೆಗಳನ್ನು ಮಾತ್ರ ಹೊರಗಡೆ ಬಿಂಬಿಸಬೇಕು ಎಂಬುದು ಮೂಲಭೂತವಾದ ಎಂದೇ ನನ್ನ ಅನಿಸಿಕೆ. ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆಯೋ, ಆಂತರಿಕ ಸುರಕ್ಷತೆ ವಿಷಯಗಳ ಬಗ್ಗೆಯೋ ಬಹಿರಂಗವಾಗಿ ಚರ್ಚೆಯಾಗಬಾರದು ಎಂಬುದಷ್ಟೇ ನನ್ನ ಕಾಳಜಿ. 

 

ಇವತ್ತು ನಮ್ಮ ಬಾಲಿವುಡ್, ಹಾಲಿವುಡ್ ಕಲ್ಪನೆಗಳೇ ಜುಜುಬಿ ಎನ್ನುಂತೆ ವಾಸ್ತವ ಘಟನೆಗಳು (ನವೆಂಬರಿನ್ ಮುಂಬಯಿ ಭಯೋತ್ಪಾದನೆ ಘಟನೆ, ೯/೧೧ ವಿಶ್ವ ಟ್ರೇಡ್ ಸೆಂಟರ್‌ಗೆ ವಿಮಾನಗಳ ಡಿಕ್ಕಿ) ನಡೆದಿರುವಾಗ, ಈ ಸಿನೆಮಾಗಳಲ್ಲಿ ದಾರಿದ್ರ್ಯವನ್ನು ವೈಭವೀಕರಿಸಲಾಗಿದೆ ಎಂದೋ, ಪುಸ್ತಕದಲ್ಲಿ ಭಾರತೀಯರನ್ನು ಹೀಗಳೆಯಲಾಗಿದೆ ಎಂದೋ ವಾದಿಸುವುದು ಮೂರ್ಖತನ. ಭ್ರಷ್ಟಾಚಾರದಲ್ಲಿ ಭಾರತ ಎಷ್ಟು ಮುಂದಿದೆ ಎಂದೋ, ಕರ್ನಾಟಕದಲ್ಲಿ ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದೋ ವರದಿಗಳು ವಿಶ್ವಸಂಸ್ಥೆಯಿಂದ ಹಿಡಿದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಕಟವಾಗುತ್ತವೆ. ಅವನ್ನೆಲ್ಲ ನಾವು ಬಹಿಷ್ಕರಿಸಲಾದೀತೆ? ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಈ ವರದಿಗಳನ್ನು (ಅವುಗಳಲ್ಲಿ ಹಲವು ಖಾಸಗಿ ಅಂತಾರಾಷ್ಟ್ರೀಯ ಸಂಸ್ಥೆಗಳು) ಬಾಯಿ ಚಪ್ಪರಿಸಿಕೊಂಡು ಬರೆಯುತ್ತವೆ. ಭ್ರಷ್ಟಾಚಾರ: ಭಾರತಕ್ಕೆ ಇಷ್ಟನೇ ಸ್ಥಾನ ಎಂದು ಹೆಡಿಂಗ್ ನೀಡುತ್ತವೆ. ಆಗ ಮಾತ್ರ ನಮ್ಮ ಭಾರತೀಯತೆಯ ಭ್ರಷ್ಟತೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ!

 

ಇಷ್ಟಕ್ಕೂ ಸ್ಲಮ್‌ಡಾಗ್ ಮಿಲಿಯನೇರ್ ಸಿನೆಮಾವನ್ನು ನಾನೂ ನೋಡಿದೆ. ಮೊದಲು ನನಗೆ ಇದೊಂದು ಬಾಲಿವುಡ್ ನಿರ್ಮಾಣ ಎಂದೇ ಅನ್ನಿಸಿತ್ತು. ಆದರೆ ಬ್ರಾಂಡ್ ಮಾತ್ರ ಅಂತಾರಾಷ್ಟ್ರೀಯ. ಹಾಗೆ ನೋಡಿದರೆ ಈ ಸಿನೆಮಾದಲ್ಲಿ ಭಾರತದ ಮುಂಬಯಿಯ ದೃಶ್ಯಾವಳಿಗಳನ್ನು ಕಟ್ಟಿಕೊಡಲಾಗಿದೆ ಎನ್ನುವುದು ವಾಸ್ತವ. ಪ್ರಮೋದ್ ಮಹಾಜನ್‌ನಂಥ ರಾಜಕಾರಣಿಯ ದುರಂತ ಕಥೆಯೇನೂ ಅಲ್ಲಿಲ್ಲ; ನತದೃಷ್ಟ ಹುಡುಗರ ಅನಿವಾರ್ಯ ಕ್ರೌರ್ಯದ ಕಥೆಯಿದೆ. ಅದಕ್ಕಿಂತ ಹೆಚ್ಚಾಗಿ ಮಿಲಿಯನೇರ್ ಆದ ಹುಡುಗ ಹೇಗೆ ಉತ್ತರಗಳನ್ನು ಮೊದಲೇ ಕಂಡುಕೊಂಡಿದ್ದ ಎಂಬ ಸಸ್ಪೆನ್ಸ್ ಕೂಡಾ ಹಾಲಿವುಡ್ ಶೈಲಿಯಲ್ಲಿ ಚಿತ್ರಣಗೊಂಡಿದೆ. ರಹಮಾನ್ ಸಂಗೀತ ನನಗಂತೂ ‘ಎಂದಿನಂತೆ’ ಅನಿಸಿತ್ತು. ಆದರೆ ಸಿನೆಮಾ ನೋಡಿದ ಮರುದಿನವೇ ಪತ್ರಿಕೆಯಲ್ಲಿ ಅವರು ಗೋಲ್ಡನ್ ಗ್ಲೋಬ್ ಪಡೆದ ಸುದ್ದಿಯಿತ್ತು! ಇರಲಿ ಬಿಡಿ, ಹೇಗೂ ರಹಮಾನ್ ಅಂಥ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹವಾಗಿದ್ದರು ತಾನೆ?

 

ನಮ್ಮಲ್ಲಿ ಈಗ ರಾಷ್ಟ್ರೀಯತೆ ಕೂಡಾ ಒಂದು ಸರಕು. ಅದನ್ನು ಮಾರುವವರ ದೊಡ್ಡ ಪಡೆಯೇ ಇದೆ. ನೈಜ ರಾಷ್ಟ್ರೀಯ ವಿಚಾರ ಮಾಡುವರೇ ಬೇರೆ; ಸಮಾಜದಲ್ಲಿ ಇಂಥ ದಾರಿದ್ರ್ಯವನ್ನು ಹೋಗಲಾಡಿಸಲು ಯತ್ನಿಸುವವರೂ ಬೇರೆ; ಆದರೆ ರಾಷ್ಟ್ರೀಯತೆಯನ್ನು ಹೇಗೆ ಬಿಂಬಿಸಬೇಕು ಎಂದು ನಮಗೆ ಪಾಠ ಹೇಳಿಕೊಡುವವರ ಒಂದು ದೊಡ್ಡ ಸ್ವಯಂಘೋಷಿತ ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜ್‌ಮೆಂಟ್ ಮಾಡೋವಂಥಾ ಗುರುಗಳು ನಮ್ಮಲ್ಲಿ, ಅದರಲ್ಲೂ ವಿಶೇಷವಾಗಿ ಮಾಧ್ಯಮದಲ್ಲಿ ಹುಟ್ಟಿಕೊಂಡಿದ್ದಾರೆ. 

 

ಉದಾಹರಣೆಗೆ ನೋಡಿ: ‘ಕನ್ನಡಪ್ರಭ’ ಪತ್ರಿಕೆಯು ಪ್ರತೀ ವರ್ಷ ಆರಿಸುವ ವರ್ಷದ ವ್ಯಕ್ತಿಗಳನ್ನೇ ಗಮನಿಸಿ: ಹಾಜಬ್ಬ, ಕೊಂಬಳಿ, ಪಾರ್ವತಮ್ಮ, ಭೀಮರಾವ್ ಗಸ್ತಿ, ರಾಮು ಮಾಸ್ತರ – ಎಲ್ಲರೂ ಸಮಾಜದಲ್ಲಿ ಸಾಮಾನ್ಯರಾಗೇ ಇದ್ದುಕೊಂಡು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದಾರೆ. ವರ್ಷದ ವ್ಯಕ್ತಿ ಆದ ಮಾತ್ರಕ್ಕೆ ಅವರೆಂದೂ, ಈಗಲೂ ಜನಪ್ರಿಯ ವ್ಯಕ್ತಿಗಳಾಗೇನೂ ಮೆರೆಯುತ್ತಿಲ್ಲ. ತಮ್ಮ ಕೆಲಸವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಇವರೆಲ್ಲರೂ ರಾಷ್ಟ್ರೀಯತೆಯ ಪದ ಹೇಳದೇ ಇರಬಹುದು; ಆದರೆ ಸಮಾಜದಲ್ಲಿ ಅಭ್ಯುಯವಾಗಬೇಕು ಅನ್ನೋ ಆಶಯವಿಟ್ಟುಕೊಂಡೇ ಕೆಲಸ ಮಾಡಿದವರಲ್ಲವೆ? ಗಸ್ತಿಯವರ ಆತ್ಮಕತೆಯನ್ನು ನೀವು ಓದಬೇಕು; ಕಣ್ಣಲ್ಲಿ ಎರಡು ಹನಿ ಮೂಡದೇ ಇದ್ದರೆ ಕೇಳಿ…… ಆದರೆ ಇವರೆಲ್ಲ ಒಂದು ಪತ್ರಿಕೆ ಆರಿಸಿದ ವ್ಯಕ್ತಿಗಳು. ಉಳಿದ ಪತ್ರಿಕೆಗಳಿಗೆ ಈ ವ್ಯಕ್ತಿಗಳನ್ನು ಸಂದರ್ಶಿಸುವ ಸೌಜನ್ಯವೂ ಇಲ್ಲ! (ಹೊಸದಿಗಂತ ದಿನಪತ್ರಿಕೆಯೇ ಹಾಜಬ್ಬನವರನ್ನು ಕನ್ನಡಪ್ರಭಕ್ಕಿಂತ ಮೊದಲು ಗುರುತಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ).

 

ಇನ್ನೊಂದು ಬಣ ಇದೆ. ಇವರಿಗೆ ನಮ್ಮ ಸಮಾಜದಲ್ಲಿ ಎಂಥ ವ್ಯಕ್ತಿಗಳು ಹೇಗೆ ಭ್ರಷ್ಟರು, ನೈತಿಕತೆಯನ್ನೆಲ್ಲ ಕಳೆದುಕೊಂಡು ಮಾನವನ್ನೆಲ್ಲ ಹರಾಜು ಹಾಕಿಕೊಂಡು ಇರುವ ದುಷ್ಟರು ಎಂದು ಹೆಸರು ಹೇಳಿ ಜರೆಯುವ ಧೈರ್ಯ ಮತ್ತು ಈ ಧೈರ್ಯವನ್ನು ಪ್ರಕಟಿಸುವ ಮಾಧ್ಯಮ ವೇದಿಕೆಯೂ ಇದೆ. ಇಂಥ ಹಲವರಿಗೆ ರಾಷ್ಟ್ರೀಯತೆ ಒಂದು ಕಮಾಡಿಟಿ; ಓದುಗರಿಗೆ ಬಿಕರಿ ಮಾಡುವ ವಾರದ ಸರಕು. ಯಾಕೆಂದರೆ ಇದನ್ನೇ ಬರೆದರೆ ಜನ ಓದುತ್ತಾರೆ; ಶಭಾಷ್, ಎಷ್ಟು ಚೆನ್ನಾಗಿ ಝಾಡಿಸಿದ್ದಾರೆ ಎಂದು ಹೊಗಳುತ್ತಾರೆ. 

 

ಬೈಯ್ಯುವುದು ಸುಲಭ; ಹಾಜಬ್ಬನ ಥರ ಶಾಲೆ ಕಟ್ಟುವುದು ಇದೆಯಲ್ಲ, ರಾಮು ಮಾಸ್ತರನ ಥರ ಶಾಲೆಗೆ ಮಕ್ಕಳನ್ನು ತರೋದಿದೆಯಲ್ಲ, ಪಾರ್ವತಮ್ಮನ ಥರ ಧೈರ್ಯವಾಗಿ ಮಹಿಳೆಯನ್ನು ಸಂಘಟಿಸೋದು ಇದೆಯಲ್ಲ, ಗಸ್ತಿ ಥರ ದಲಿತರಲ್ಲಿ ಬದಲಾವಣೆಯ ಕಿಡಿ ಹತ್ತಿಸೋದಿದೆಯಲ್ಲ…… ಕೊಂಚ ಕಷ್ಟ! 

 

ಝಾಡಿಸಿ ಬೈಯ್ಯುವುದು ಮತ್ತು ಈ ವ್ಯಕ್ತಿಗಳ ಥರ ಕೆಲಸ ಮಾಡುವುದು – ಎರಡೂ ದೇಶ ಕಟ್ಟುವ ಕೆಲಸವೇ ಎಂದು ನೀವು ಭಾವಿಸಿದರೆ ನನಗೇನೂ ಅಡ್ಡಿಯಿಲ್ಲ. ಆದರೆ  ನಾನು ಹೇಳಬೇಕಾದ್ದು ಇನ್ನೂ ಇದೆ. 

 

ದೇಶದ ಬಗ್ಗೆ ಹೊರಗೆ ಒಳ್ಳೆಯ ಚಿತ್ರಣ ಕೊಡಬೇಕು ಎಂದು ಹೇಳುವ ವರ್ಗವೊಂದಿದೆಯಲ್ಲ, ಈ ಬಗ್ಗೆ ನನ್ನ ಕೆಲವು ಪ್ರಶ್ನೆಗಳಿವೆ: ದೇಶದಲ್ಲಿ ಎಲ್ಲವೂ ಸುರಳೀತವಾಗಿದೆ ಎಂದು ಹೇಳಿದ ಮಾತ್ರಕ್ಕೆ ವಿಶ್ವಬ್ಯಾಂಕ್, ವಿಶ್ವಸಂಸ್ಥೆ ವರದಿಗಳಲ್ಲಿ ಬದಲಾವಣೆ ಆಗುವುದಿಲ್ಲ; ಅಥವಾ ಸಮಸ್ಯೆ ಬಗೆಹರಿಯುವುದೂ ಇಲ್ಲ. ಹಾಗೆ ಹೊರದೇಶಗಳಲ್ಲಿ ಒಳ್ಳೆಯ ಚಿತ್ರಣವನ್ನು ಕೊಡುವುದರಿಂದ ಯಾವ ರಹಸ್ಯ ರಕ್ಷಣೆಯೂ  ಆಗುವುದಿಲ್ಲ; ಇವತ್ತು ಭಾರತ ಹೇಗಿದೆ ಎಂದು ತಿಳಿಯುವುದಕ್ಕೆ, ಒಳ್ಳೆಯ ಚಿತ್ರಣವನ್ನೇ ಕೊಡಬೇಕು ಎಂದು ಬರೆಯುವವರ ಬಚ್ಚಲುಮನೆಯನ್ನೂ ಗುರುತಿಸುವುದಕ್ಕೆ ಉಪಗ್ರಹಗಳು ಗರಗರ ತಿರುಗುತ್ತಲೇ ಇವೆ. ಮಾಹಿತಿಸ್ಫೋಟದ ದಶಕವೇ ಕಳೆದುಹೋಗಿದೆ. ದಿನಕ್ಕೆ ನೂರು ಎಸ್ ಎಂ ಎಸ್‌ಗಳನ್ನು ಕಳಿಸುವ ಸ್ಕೀಮ್‌ಗಳು ಬಂದು ವರ್ಷಗಳಾಗಿವೆ. ನಿಮ್ಮ ಕೈಯಲ್ಲಿ ಇರುವ ಮೊಬೈಲ್‌ನಿಂದಲೇ ನಿಮ್ಮ ಸಂಪೂರ್ಣ ಜಾತಕ ಪರರ ಪಾಲಾಗುತ್ತಿದೆ. ಪಾಲಾಗಿದೆ. ಇವತ್ತು ನಮ್ಮವರು ಬರೆದಿರೋ ಬ್ಲಾಗ್‌ಗಳಲ್ಲಿ ಇರುವ ಮಾಹಿತಿಯೇ ಸಾಕು, ವೈಟ್ ಟೈಗರ್‌ನಂಥ ಕಾದಂಬರಿ ಯಾಕೆ ಬೇಕು? ಸ್ಲಮ್‌ಡಾಗ್ ಸಿನೆಮಾದಿಂದಲೇ ಮಾನ ಹರಾಜಾಯಿತು ಎಂದು ಅಳುತ್ತ ಕೂತರೆ ನನಗೆ ನಗು ಬರುತ್ತದೆ! 

 

ಇಷ್ಟಕ್ಕೂ ಹೀಗೆ ಒಳ್ಳೆಯ ಚಿತ್ರಣ ಕೊಡುವುದಾಗಲೀ, ಕೆಟ್ಟ ಚಿತ್ರಣವನ್ನು ತಡೆಯುವುದಾಗಲೀ, ಪ್ರಜಾತಂತ್ರದಲ್ಲಿ ಎಳ್ಳಷ್ಟೂ ಸರಿಯಲ್ಲ; ಇದ್ದದ್ದನ್ನು ಇದ್ದ ಹಾಗೆ  ಒಪ್ಪಿಕೊಳ್ಳುವುದೇ ಪ್ರಜಾತಂತ್ರ ಸ್ವಾಮಿ; ಕೇವಲ ಕಮ್ಯುನಿಸಂನಲ್ಲಿ ಮಾತ್ರ ಅಳುವಿಗೆ, ನಗುವಿಗೆ ರೇಶನ್ ಇರುತ್ತೆ! ಭಾರತದಲ್ಲಿ ಹೀಗೇ ಬರೆಯಬೇಕು, ಹೀಗೇ ಹೇಳಬೇಕು ಎಂದು ಕರಾರು ಹಾಕುವುದು ಕಮ್ಯುನಿಸಂ ಆಯಿತು ಮಾರಾಯ್ರೆ…

 

ನಮಗೆ ಇಂಥ ಗೊಂದಲ ಯಾಕೆ ಮೂಡುತ್ತೆ ಅಂದ್ರೆ ಇನ್ನೂ ನಮ್ಮ ಮಾಧ್ಯಮಗಳು ಬುದ್ಧಿಜೀವಿಗಳ ಥರ ಪೋಸ್ ಕೊಡುತ್ತ ನಗರಕೇಂದ್ರಿತ ಚರ್ಚೆಗಳನ್ನೇ ಮಾಡ್ತಾ ಕೂತಿವೆ. ಒಂದು ಸಿನೆಮಾದಿಂದ, ಒಂದು ಪುಸ್ತಕದಿಂದ  ನಮ್ಮ ದೇಶದ ಮಾನ ಮೂರಾಬಟ್ಟೆ ಆಯ್ತು ಅಂತ ಅಳೋದಕ್ಕಿಂತ ನೂರು ಹಳ್ಳಿಗಳ ಸಮಸ್ಯೆಯ ಬಗ್ಗೆ ಗಮನ ಸೆಳೆದು ಕೆಲಸ ಆಗೋ ಹಾಗೆ ನೋಡಿಕೊಳ್ಳೋದು ವಾಸಿ ಅಲ್ವೆ? ಆದ್ರೆ ಪ್ರಜಾತಂತ್ರ ನೋಡಿ, ಈ ಸಮಸ್ಯೆಗಳೆಲ್ಲ ಎಷ್ಟು ರೊಟೀನ್ ಆಗಿಹೋಗಿವೆ ಅಂದ್ರೆ ಇವತ್ತು ಲೋಡ್‌ಶೆಡಿಂಗ್ ಬಗ್ಗೆ ಯಾರಿಗೂ ಬೇಜಾರಾಗೋದೇ ಇಲ್ಲ. 

 

ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾದ ಜೊತೆಗೇ ಈಗ ಭಾರತಕ್ಕೆ ‘ಚೇಂಜ್‌ಲಿಂಗ್’ ಅನ್ನೋ ಸಿನೆಮಾ ಬಂದಿದೆ. ಅದರಲ್ಲಿ ಇರೋ ಕಥೆ ಕೇಳಿ: ಈ ಸಿನೆಮಾದಲ್ಲಿ ಅಮೆರಿಕಾದಲ್ಲಿ ೧೯೨೮ರ ದಿನಗಳಲ್ಲಿ ನಡೆದ ವ್ಯವಸ್ಥೆಯ ಘೋರ ಚಿತ್ರಣದ ಅಮಾನುಷ ವಾಸ್ತವದ ದೃಶ್ಯಗಳಿವೆ. ಲಾಸ್‌ಏಂಜಲಿಸ್ ಪೊಲೀಸರ ಬೇಜವಾಬ್ದಾರಿಯ ದೃಶ್ಯಗಳಿವೆ. ಒಂದು ವ್ಯವಸ್ಥೆ ಎಷ್ಟು ಕ್ರೂರವಾಗಿರಬಹುದು ಎಂಬ ಹೃದಯಂಗಮ ನೋಟವಿದೆ. ನಿಜಕ್ಕೂ ಈ ಚಿತ್ರದ ಪ್ರಮುಖ ಪಾತ್ರಧಾರಿ ಏಂಜೆಲಿನಾ ಜೂಲೀ ತನ್ನ ಜೀವಿತದ ಅತ್ಯುತ್ತಮ ನಟನೆ ನೀಡಿದ್ದಾಳೆ. ಖಂಡಿತಾ ಈ ಚಿತ್ರ ನೋಡಿ. ಇಂದಷ್ಟೇ ಈ ಸಿನೆಮಾ ನೋಡಿದ ನನ್ನ ಮನಸ್ಸಿನಲ್ಲಿ ಇನ್ನೂ ಆ ಚಿಗುರುಗಣ್ಣಿನ ಹುಡುಗ ವಾಲ್ಟರ್ ಎಲ್ಲಿ ಹೋದ ಎಂಬ ಪ್ರಶ್ನೆ ಶತಪಥ ಹಾಕುತ್ತಿದೆ. 

 

ರಾಷ್ಟ್ರೀಯತೆಯ ಚರ್ಚೆಯಲ್ಲಿ ಯಾಕೆ ಈ ಚಿತ್ರ ಬಂತು? ಅಮೆರಿಕಾದಲ್ಲಿ, ಯೂರೋಪಿನಲ್ಲಿ, ಅಥವಾ ಹಲವು ಪಾಶ್ಚಾತ್ಯ ದೇಶಗಳಲ್ಲಿ ತಮ್ಮ ದೇಶದ ಅವ್ಯವಸ್ಥೆಯನ್ನೇ ಚಿತ್ರಿಸಿರೋ ನೂರಾರು ಸಿನೆಮಾಗಳು ಬಂದಿವೆ. ನನಗಂತೂ ಈ ಚಿತ್ರಗಳ ಬಗ್ಗೆ ಅಮೆರಿಕನ್ನರೋ, ಆಯ ದೇಶದ ಪ್ರಜೆಗಳೋ ದಂಗೆಯೆದ್ದ ಸುದ್ದಿ ಸಿಕ್ಕಿಲ್ಲ. ಬದಲಿಗೆ ಇಂಥ ಚಿತ್ರಗಳು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತವೆ. ಈ ಸಲ ಏಂಜೆಲಿನಾಗೂ ಪ್ರಶಸ್ತಿ ಬರೋ ಚಾನ್ಸ್ ಇದೆ.

 

ಅಮೆರಿಕಾದ ನೀತಿ ನಿಯಮಗಳನ್ನು ವಿರೋಧಿಸುವ ಹಲವು ಬುದ್ಧಿಜೀವಿ, ಸಾಮಾಜಿಕ ಸಂಘಟನೆಗಳನ್ನು ಭೇಟಿ ಮಾಡಲು ಅಮೆರಿಕಾ ಸರ್ಕಾರವೇ ಭಾರತೀಯ ಪತ್ರಕರ್ತರನ್ನು ಕಳಿಸಿಕೊಟ್ಟಾಗ, ಅಮೆರಿಕಾ – ಇಂಗ್ಲೆಂಡಿನ ಪರಿಸರ ವಿರೋಧಿ ಕೃತ್ಯಗಳನ್ನು ಗ್ರೀನ್‌ಪೀಸ್ ಕಾರ್ಯಕರ್ತರು ವಿರೋಧಿಸಿ ಹಡಗೇರಿದಾಗ ……  ನಮಗೆ ಏನೂ ಅನ್ನಿಸುವುದಿಲ್ಲವೆ? ರಾಷ್ಟ್ರೀಯತೆಯನ್ನು ಮೀರಿದ ಒಂದು ವಸ್ತುನಿಷ್ಠತೆ ಈ ಕ್ರಿಯೆಗಳಲ್ಲಿ ಇಲ್ಲವೆ? 

 

ಇಷ್ಟೆಲ್ಲ ಬರೆದ ಮೇಲೆ ಈ ಮನುಷ್ಯ ನಿಜಕ್ಕೂ ರಾಷ್ಟ್ರದ್ರೋಹಿಯೇ ಎಂದು ನಿಮ್ಮಲ್ಲಿ ಕೆಲಸವು ತೀರ್ಮಾನಿಸಿಬಿಡಬಹುದು; ಪರವಾಗಿಲ್ಲ. ಆದರೆ ನನ್ನ ಒಂದು ಮಾತು ಕೇಳಿಬಿಡಿ:

 

ರಾಷ್ಟ್ರೀಯತೆ, ದೇಶಭಕ್ತಿ – ನಿಮ್ಮಂತೆ, ನನ್ನ ಆಸ್ತಿಯೂ ಹೌದು. ವಿಶ್ವದಲ್ಲೇ ಅತ್ಯಂತ ಉತ್ಕೃಷ್ಟ ನಾಗರಿಕತೆಗೆ ತೊಟ್ಟಿಲಾದ ಈ ಭಾರತದ ಮಡಿಲಿನಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಕೇವಲ ಧ್ಯಾನಮಾತ್ರದಿಂದಲೇ ಶ್ರುತಿಯ ತರಂಗಾಂತರಗಳನ್ನು ಹುಡುಕಿ ತೆಗೆದ ಯೋಗಿಗಳ ಬಗ್ಗೆ ನನಗೆ ಇನ್ನಿಲ್ಲದ ಗೌರವವಿದೆ. ಮೌಖಿಕವಾಗಿಯೇ ವೇದ ಉಪನಿಷತ್ತುಗಳನ್ನು ಈ ಕ್ಷಣದವರೆಗೆ ಹರಿಸಿದ ವಿಶಿಷ್ಟ ಸಂಸ್ಕೃತಿಶೈಲಿಯ ಬಗ್ಗೆ ನನಗೆ ಅಚ್ಚರಿಯಿದೆ. ಚಂಡಾಲನ ಬಗ್ಗೆ ಗೌರವ ತಳೆದ ಶಂಕರ, ಸಮಾಜದಲ್ಲಿ ಇಂದಿಗೂ ತರಲಾಗದ ಬದಲಾವಣೆಯನ್ನು ತನ್ನ ಮಿತಿಯಲ್ಲಿ ತಂದು, ಇಂದಿಗೂ ಕನ್ನಡ ಸಾಹಿತ್ಯದಲ್ಲೇ ಆತ್ಯುತ್ಕೃಷ್ಟವಾದ ಸಾಹಿತ್ಯ ರಚಿಸಿದ ಬಸವಣ್ಣ, – ಎಂಥ ಕ್ರಾಂತಿವಂತ ದೇಶ ನನ್ನದು ಎಂಬ ರೋಚಕ ಭಾವ ನನ್ನೊಳಗಿದೆ. 

 

ಆದರೆ ರಾಷ್ಟ್ರೀಯತೆಯನ್ನು ಕೇವಲ ಮಾರುಕಟ್ಟೆ ಸರಕಿನ ಹಾಗೆ ಪ್ಯಾಕೇಜ್ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ. 

 

ಧಾರಾವಿಯ ಬಗ್ಗೆ ಕಾಮೆಂಟ್ ಮಾಡುವುದು ಸುಲಭ; ಧಾರಾವಿಯಲ್ಲಿ ಬದುಕುವುದು ಕಷ್ಟ ಎಂಬ ಭಯ ನನಗಿದೆ ಎಂದಷ್ಟೆ ಇಲ್ಲಿ ಹೇಳಬಲ್ಲೆ. ಧಾರಾವಿ ವಾಸ್ತವ; ಧಾರಾವಿಯ ಬಗ್ಗೆ ಹೇಳಬಾರದು, ಚಿತ್ರಿಸಬಾರದು ಎಂಬುದೆಲ್ಲ ಬರಿಯ ಒಣನಂಬಿಕೆಗಳು, ಅವಾಸ್ತವ ತರ್ಕ ಎಂದಷ್ಟೆ ಇಲ್ಲಿ ಬರೆಯಬಲ್ಲೆ. 

 

 

 

 

 

Share.

2 Comments

  1. A good piece of article. “White Tiger” or “Slumdog Millionaire” both would be manifesting India’s unfortunate reality. Both were (written) produced keeping in mind the huge market for them inside and outside India. These market driven “creations” might hurt the sensitivities more, than, if they were written or produced for understanding the issues. The issue of Nationalism enters here. Show India’s hard realities and win awards. I feel this would lead to the unrest among nationalists.

Leave A Reply Cancel Reply
Exit mobile version