ನಮ್ಮಲ್ಲಿ ಡೆಸ್ಕ್‌ಟಾಪ್ ಪಬ್ಲಿಶಿಂಗ್ (ಡಿಟಿಪಿ) ಬಂದು ಸುಮಾರು ಇಪ್ಪತ್ತು ವರ್ಷಗಳಾದವು. ಆಗಿನಿಂದಲೂ ಪುಸ್ತಕಗಳ ಪುಟವಿನ್ಯಾಸ ಮಾಡಲು ಪೇಜ್‌ಮೇಕರ್ ಎಂಬ ತಂತ್ರಾಂಶವನ್ನು ಬಳಸುತ್ತಲೇ ಇದ್ದೇವೆ. ಇದರೊಂದಿಗೇ ಇನ್ನಷ್ಟು ತಂತ್ರಾಂಶಗಳನ್ನೂ ನಾವು ಬಳಸಿಕೊಳ್ಳಬಹುದು. ನನ್ನ ಅನುಭವದಲ್ಲಿ ಕಂಡ ಕೆಲವು ತಂತ್ರಾಂಶಗಳನ್ನು ಇಲ್ಲಿ ನಮೂದಿಸುತ್ತಿದ್ದೇನೆ. ಪೇಜ್‌ಮೇಕರ್ ಬಿಟ್ಟರೆ ಉಳಿದೆಲ್ಲವೂ ಹೆಚ್ಚು ಬಳಕೆಯಲ್ಲಿ ಇಲ್ಲ. ದಿನಪತ್ರಿಕೆಗಳು ಸಾಮಾನ್ಯವಾಗಿ ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು ಅಡೋಬ್ ಇನ್‌ಡಿಸೈನ್ ತಂತ್ರಾಂಶವನ್ನು ಹೆಚ್ಚಾಗಿ ಬಳಸುತ್ತವೆ.

ಪೇಜ್‌ಮೇಕರ್
ಅಡೋಬ್ ಸಂಸ್ಥೆಯ ಈ  ತಂತ್ರಾಂಶವು ಈಗ ಕರ್ನಾಟಕದಲ್ಲಿ ಬಹುವಾಗಿ ಬಳಕೆಯಾಗುತ್ತಿರುವ ಪೇಜಿನೇಟಿಂಗ್ ತಂತ್ರಾಶ. ಈ ತಂತ್ರಾಂಶದ ಜೊತೆಗೇ ಅಡೋಬ್ ಟೇಬಲ್ ತಂತ್ರಾಂಶವೂ ಸ್ಥಾಪಿತವಾಗಿರುತ್ತದೆ.
ಪೇಜ್‌ಮೇಕರ್‌ನ ಹಲವು ಅನುಕೂಲಗಳು ಹೀಗಿವೆ:
ಇಲ್ಲಿ ಒಂದು ಪುಟದಲ್ಲಿ ಯಾವುದೇ ನಕ್ಷೆಯನ್ನು ನೀವು ಕೈಯಿಂದಲೇ (ಮೌಸ್ ಬಳಸಿ) ಬಿಡಿಸಬೇಕು. ಗೆರೆ, ಚೌಕಗಳು, ಆಯತಾಕಾರಗಳು, ವೃತ್ತಗಳು, ಎಲ್ಲವನ್ನೂ ಬರೆಯುವುದಕ್ಕೆ ಬೇಕಾದ ಟೂಲ್ ಬಾಕ್ಸ್‌ನ್ನು ನೀವು ಬಳಸಬಹುದು.
ಯಾವುದೇ ಚಿತ್ರಕ್ಕೆ ಒಳಗೆ ಅಥವಾ ಅದರ ಚೌಕಟ್ಟಿಗೆ ವಿವಿಧ ಬಣ್ಣಗಳನ್ನು ಹಾಕಬಹುದು.
ವಿವಿಧ ಚಿತ್ರಗಳು  ಅಲುಗಾಡದಂತೆ, ಪರಸ್ಪರ ಹೊಂದಿಕೊಂಡಿರುವಂತೆ ಮಾಡಲು ಗ್ರೂಪ್ ಮಾಡುವ ಸೌಲಭ್ಯವಿದೆ.
ಕಂಪ್ಯೂಟರಿನಲ್ಲಿ ಉಳಿಸಿಕೊಂಡ ಯಾವುದೇ ಛಾಯಾಚಿತ್ರವನ್ನು, ಕ್ಲಿಪ್ ಆರ್ಟ್‌ನ್ನು  ನೀವು ಪೇಜ್‌ಮೇಕರ್ ಫೈಲಿನಲ್ಲಿ ಪ್ಲೇಸ್ ಆಯ್ಕೆಯ ಮೂಲಕ ತಂದು ಹಾಕಬಹುದು. ಅವುಗಳ ಗಾತ್ರವನ್ನು ಹೆಚ್ಚು ಕಡಿಮೆ ಮಾಡಬಹುದು.
ಒಂದು ಪುಟದಲ್ಲಿ ಹಾಕಿದ ಯಾವುದೇ ಚಿತ್ರವನ್ನು ಇನ್ನೊಂದು ಪುಟಕ್ಕೆ ಸಾಗಿಸುವಾಗ ಅದನ್ನು ಪುಟದ ಬದಿಯಲ್ಲಿ ಇರಿಸಿಕೊಳ್ಳುವ ಸಾಧ್ಯತೆ ಪೇಜ್‌ಮೇಕರಿನಲ್ಲಿದೆ. ಆದರೆ ಈ ಸೌಲಭ್ಯವು ವರ್ಡ್‌ನಲ್ಲಿ ಇಲ್ಲ. ಇದು ಈ ಎರಡೂ ತಂತ್ರಾಂಶಗಳ ನಡುವೆ ಇರುವಪ್ರಮುಖವಾದ ವ್ಯತ್ಯಾಸ.
ಇಲ್ಲಿ ಪುಟಗಳು ಒಂದರ ಪಕ್ಕ ಒಂದರಂತೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಪ್ರತಿಯೊಂದು ಪುಟವೂ ಪ್ರತ್ಯೇಕವಾಗಿ ಕಾಣಿಸುತ್ತದೆ. ವರ್ಡ್‌ನಲ್ಲಿ ಎಲ್ಲಾ ಪುಟಗಳೂ ಒಂದರ ಕೆಳಗೆ ಒಂದರಂತೆ ಜೋಡಣೆಯಾಗಿರುತ್ತವೆ.
ಪೇಜ್‌ಮೇಕರಿನಲ್ಲಿ ಒಂದು ಪ್ಯಾರಾ ಅಥವಾ ಹಲವು ಪ್ಯಾರಾಗಳನ್ನು ಒಂದು ಫ್ರೇಮ್ ರೂಪದಲ್ಲಿ ಉಳಿಸಿಕೊಂಡು ಅವುಗಳನ್ನು ಎಲ್ಲಿದ ಎಲ್ಲಿಗೆ ಬೇಕಾದರೂ ಸ್ಥಳಾಂತರಿಸಬಹುದು. ಆದರೆ ವರ್ಡ್‌ನಲ್ಲಿ ಈ ಸಾಧ್ಯತೆ ಇಲ್ಲ. ನೀವು ಪಠ್ಯವನ್ನೇ ಸೆಲೆಕ್ಟ್ ಮಾಡಿಕೊಂಡು ಕಟ್ ಮಾಡಿ ಬೇಕಾದ ಸ್ಥಳದಲ್ಲಿ ಪೇಸ್ಟ್ ಮಾಡಬೇಕಷ್ಟೆ.
ಕ್ವಾರ್ಕ್ ಎಕ್ಸ್‌ಪ್ರೆಸ್
ಈ ತಂತ್ರಾಂಶವು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೆ ಪೇಜಿನೇಶನ್ / ಪುಟ ವಿನ್ಯಾಸ ಮಾಡಲು ತುಂಬಾ ಅನುಕೂಲಗಳಿರುವ ತಂತ್ರಾಂಶವಿದು. ಪೇಜ್‌ಮೇಕರ್‌ನಂತೆಯೇ ಕಾಣುವ ಈ ತಂತ್ರಾಂಶದಲ್ಲಿ ಪೇಜ್‌ಮೇಕರ್‌ಗಿಂತ ಹೆಚ್ಚಿನ ಅನುಕೂಲಗಳು ಇವೆ. ಉದಾಹರಣೆಗೆ ಆಟೋ ಸೇವ್ ಅನುಕೂಲ. ಅಂದರೆ ನೀವು ಅಕ್ಷರ ವಿನ್ಯಾಸ ಮಾಡುತ್ತಿದ್ದಂತೆ ಅದು ಸ್ವಯಂ ಚಾಲಿತವಾಗಿ ನಿಮ್ಮ ಫೈಲನ್ನು ಸೇವ್ ಮಾಡಿಕೊಳ್ಳುತ್ತದೆ.
ಅಲ್ಲದೆ ನೀವು ನಿಮ್ಮ ಫೈಲಿನ ಬ್ಯಾಕಪ್ ಪ್ರತಿಯನ್ನೂ ಸ್ವಯಂಚಾಲಿತವಾಗಿ ಮಾಡಿಟ್ಟುಕೊಳ್ಳಬಹುದು.
ಇದಲ್ಲದೆ ಈ ತಂತ್ರಾಂಶದಲ್ಲಿ ಒಂದು ಪಠ್ಯವನ್ನು  ಬೇಕಾದ ಸಂಖ್ಯೆಯ ಕಾಲಂಗಳಿಗೆ  ಹಾಳೆಯ ಮೇಲೆ ಮೂಡಿಸಬಹುದು. ನೀವು ಹೇಗೆ ಎಳೆದರೂ ಅದು ನೀವು ಸೂಚಿಸಿದ ಕಾಲಂಗಳಲ್ಲೇ ಬದಲಾಗುತ್ತದೆಯೇ ಹೊರತು  ಬೇರಾವ ಸಂಖ್ಯೆಯ ಕಾಲಂಗಳಿಗೂ ಬದಲಾಗುವುದಿಲ್ಲ. ಈ ಅನುಕೂಲವು ಪೇಜ್‌ಮೇಕರಿನಲ್ಲಿ ಇಲ್ಲ. ಅಲ್ಲಿ ನೀವು ಸ್ವತಃ ಕಾಲಂಗಳಲ್ಲಿ ಪಠ್ಯವನ್ನು ಹಾಕಬೇಕು. ಪೇಜ್‌ಮೇಕರಿನಲ್ಲಿ ಅಳತೆಯನ್ನು ಬದಲಾಯಿಸುವುದೂ ನಿಮ್ಮಿಂದಲೇ ಆಗಬೇಕು.
ಅಡೋಬ್ ಇನ್ ಡಿಸೈನ್
ಅಡೋಬ್ ಸಂಸ್ಥೆಯದೇ ಆದ ಈ ಇನ್ನೊಂದು ತಂತ್ರಾಂಶವು ಮೂಲತಃ ಹೆಚ್ಚು ಚಿತ್ರಗಳಿರುವ ದಾಖಲೆಗಳನ್ನು ರೂಪಿಸಲು ಬಳಕೆಯಾಗುತ್ತದೆ.
ಇದು ಮತ್ತು ಕೆಳಗೆ ಪಟ್ಟಿ ಮಾಡಿದ ಕೋರೆಲ್‌ಡ್ರಾ ತಂತ್ರಾಂಶಗಳ ವಿಶೇಷ ಎಂದರೆ ಇವುಗಳನ್ನು ಪಠ್ಯ ಹಾಗೂ ಚಿತ್ರಗಳನ್ನು ಬೇಕಾದ ಹಾಗೆ ಬದಲಿ ಹಾಕಲು ಬಳಸಬಹುದು.
ಪೇಜ್‌ಮೇಕರ್ ಅಥವಾ ಕ್ವಾರ್ಕ್‌ನಲ್ಲಿ  ಚಿತ್ರಗಳನ್ನು ನಿಮಗೆ ಬೇಕಾದ ಹಾಗೆ ಬದಲಿಸಲು, ಜೋಡಿಸಲು, ತಿದ್ದಲು ಅವಕಾಶಗಳು ತುಂಬಾ  ಸೀಮಿತ ಎಂಬುದನ್ನು ನೀವು ಮರೆಯಬಾರದು.
ಕೋರೆಲ್ ಡ್ರಾ
ಕೋರೆಲ್ ಡ್ರಾವನ್ನು  ವೆಕ್ಟರ್ ಬೇಸ್ಡ್ ತಂತ್ರಾಂಶ ಎಂದು ಕರೆಯುತ್ತಾರೆ. ವೆಕ್ಟರ್ ಎಂದರೆ ದಿಕ್ಸೂಚಿ. ಒಂದು ಉದಾಹರಣೆಯೊಂದಿಗೆ ಈ ಬಗ್ಗೆ ವಿವರಣೆ ನೀಡಿದರೆ ಚೆನ್ನಾಗಿ ಅರ್ಥವಾಗುತ್ತದೆ.
ಕೋರೆಲ್ ಡ್ರಾದಲ್ಲಿ ಒಂದು ಅಕ್ಷರವನ್ನು  ಟೈಪ್ ಮಾಡಲಾಗಿದೆ ಎಂದುಕೊಳ್ಳೋಣ. ಈ ಅಕ್ಷರವನ್ನು ದೊಡ್ಡದು ಮಾಡಬೇಕು ಎಂದಾದರೆ ಸಾಮಾನ್ಯ ತಂತ್ರಾಂಶಗಳಲ್ಲಿ ಅದನ್ನು ಆಯ್ಕೆ ಮಾಡಿಕೊಂಡು ಗಾತ್ರವನ್ನು ಹಿಗ್ಗಿಸುವ ಆಯ್ಕೆಯನ್ನು ತೆರೆದು ಬೇಕಾದ ಗಾತ್ರವನ್ನು ನಮೂದಿಸಬೇಕು. ಆದರೆ ಕೋರೆಲ್ ಡ್ರಾದಲ್ಲಿ ಇದೆಲ್ಲ ತೀರಾ ಸುಲಭ. ಬಾಣದ ಗುರುತಿನ ಸಾಧನವನ್ನು ಆಯ್ಕೆ ಮಾಡಿಕೊಂಡು ಅಕ್ಷರವನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಆಗ ಅಕ್ಷರದ ನಾಲ್ಕೂ ತುದಿಗಳು ಕಾಣಿಸುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ತುದಿಯನ್ನು ಹಿಡಿದು ಎಳೆದರೆ ಅಕ್ಷರವು ಹಿಗ್ಗುತ್ತದೆ. ಅದು ಸಮ ಪ್ರಮಾಣದಲ್ಲಿ ಹಿಗ್ಗಬೇಕು ಎಂದಾದರೆ ಶಿಫ್ಟ್ ಕೀಲಿಯನ್ನು ಎಡಗೈಯಿಂದ ಹಿಡಿದುಕೊಂಡಿದ್ದರೆ ಸಾಕು.
ಕೋರೆಲ್ ಡ್ರಾದಲ್ಲಿ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಒಟ್ಟೊಟ್ಟಿಗೆ ಜೋಡಿಸುವುದು ಸುಲಭ. ಆದ್ದರಿಂದ ಜಾಹೀರಾತು ಸಂಸ್ಥೆಗಳಲ್ಲಿ, ವಿವಿಧ  ಬಗೆಯ ಚಿತ್ರ – ಪಠ್ಯ ಹೊಂದಿರುವ  ಜಾಹೀರಾತುಗಳನ್ನು ರೂಪಿಸಲು ಕೋರೆಲ್‌ಡ್ರಾವನ್ನೇ ಹೆಚ್ಚಾಗಿ ಬಳಸುತ್ತಾರೆ.
ಕೋರೆಲ್ ವೆಂಚುರಾ
ಇದು ಅಡೋಬ್ ಸಂಸ್ಥೆಯ ಇನ್ ಡಿಸೈನ್ ತಂತ್ರಾಂಶವನ್ನು ಹೋಲುವ ಪಠ್ಯವೇ ಮುಖ್ಯವಾಗಿರುವ ತಂತ್ರಾಂಶ. ಆದರೆ ಇತ್ತೀಚೆಗೆ ಈ ತಂತ್ರಾಂಶವು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ.
ಇದು ಕೇವಲ ಒಂದು ದಿಕ್ಸೂಚಿ ಬರಹ. ನೀವು ಒಮ್ಮೆ ಈ ತಂತ್ರಾಂಶಗಳನ್ನು ಬಳಸಿದರೆ ಇವುಗಳ ಹತ್ತು ಹಲವು ವಿಶೇಷಗಳು ತಿಳಿಯುತ್ತವೆ. ಒಮ್ಮೆ ಬಳಸಿ ನೋಡಿ.
ಇವೆಲ್ಲ ಯಜಮಾನಿಕೆ ತಂತ್ರಾಂಶಗಳು. ಒಂದೋ ಇವನ್ನೆಲ್ಲ ಕದಿಯಬೇಕು. ಅಥವಾ ಇದಕ್ಕಾಗಿ ಹಣ ಕಕ್ಕಬೇಕು. ಇವಲ್ಲದೆ ವಿಂಡೋಸ್ ಆಪರೇಟಿಂಗ್ ತಂತ್ರಾಂಶದ ಮೇಲೆ ಕೆಲಸ ಮಾಡುವ ಮುಕ್ತ ತಂತ್ರಾಂಶಗಳೂ ಇವೆ. ಪೇಜ್‌ಮೇಕರ್ ಬದಲಿಗೆ ಸ್ಕ್ರೈಬಸ್ ಇದೆ. ಕೋರೆಲ್‌ಡ್ರಾ ಬದಲಿಗೆ ಇಂಕ್‌ಸ್ಕೇಪ್ ಇದೆ.
ಚಿತ್ರಗಳನ್ನು ಸಂಪಾದಿಸಲು ಫೋಟೋಶಾಪ್ ಎಂಬ ಅತಿಶ್ರೇಷ್ಠ ತಂತ್ರಾಂಶವಿದೆ. ಇದನ್ನು ಪಡೆಯಲಾಗದಿದ್ದರೆ ನೀವು ಗಿಂಪ್ ಎಂಬ ತಂತ್ರಾಂಶವನ್ನು ಉಚಿತವಾಗಿ ಪಡೆಯಬಹುದು.
ಡೆಸ್ಕ್‌ಟಾಪ್ ತಂತ್ರಾಂಶಗಳನ್ನು ಬಳಸುವುದು ನಿಜಕ್ಕೂ ಒಂದು ತಮಾಶೆಯ ಮತ್ತು ಕುತೂಹಲದ ಕಲಿಕೆ.ನೀವು ಊಹಿಸಿಕೊಂಡ ಎಲ್ಲ ವಿನ್ಯಾಸಗಳನ್ನೂ ಇಲ್ಲಿ ಮಾಡುವ ಅವಕಾಶವಿದೆ.
ಬಾರ್ಬೀ ಗರ್ಲ್ ಹಾಡಿನಲ್ಲಿ ಹೇಳುವಂತೆ ನಿಮ್ಮದೇ ಇಮ್ಯಾಜಿನೇಶನ್!

Share.
Leave A Reply Cancel Reply
Exit mobile version