ಜೀವಬಿಡಾರ

ಚರ್ಮ ಗುಡಾರವ ಹೊದ್ದು ಮಲಗಿರುವ ಜೀವಬಿಡಾರ
ಚಳಿಯಾವರಣಕೆ ಚಿಲ್ಲರೆಯಾದವ ಸ್ವರ್ಗದ ಸ್ವಾಗತಕಾರ.

ಬರಿಹೂವುಗಳೇ ಭಾವನೆಯಾದವು ಹನಿಗನಸೇ ಹೊಸದಿಕ್ಕು
ರಸ್ತೆಗಂಟಿರುವ ಕಾಲುದಾರಿಗೆ ಹವಾಯಿ ಜತೆಗಳು ಪಕ್ಕು

ಪಡೆದುಬಂದ ಸಂಬಂಧಗಳಲ್ಲಿ ಕೆಡದ ರಕ್ತವೆಷ್ಟು ?
ಸ್ನೇಹ ಸೌಭಾಗ್ಯ – ಪ್ರೀತಿ ದೌರ್ಭಾಗ್ಯ ಕಡೆದ ಬೆಣ್ಣೆಯೆಷ್ಟು ?

ಊರು ಮನೆಗಳೇ ಮನದಂಗಳದಲ್ಲಿ ನಿಲ್ಲಬಾರದಯ್ಯಾ
ಗೆಳೆಯನ ಮಾತೂ ವೈರಿಯ ಮಸೆತ ನಿಲ್ಲಲಾರದಯ್ಯಾ

ದೇಹಸಮಾಧಿಗೆ ಜೀವ ಚಡಪಡಿಸಿ ಜಿಗಿದು ನಿಲ್ಲುವುದ ಅರಿಯೆ.
ಸುಡುಬೂದಿಯ ಜತೆಗೇ ನಶ್ವರವಾಗುವ ನೆನಪುಗಳೂ ಸರಿಯೆ ?

ಈ ಜಗತ್ತಿನಲಿ ಜೀವಿಯಾಗಲಿಕೆ ಕೋಶ ಪವಿತ್ರತೆ ಬೇಕು.
ಅಮೃತ ನಯನದ ನವದೃಶ್ಯಗಳು ಹೊಳವಾಗಲೇ ಬೇಕು.

Share.
Leave A Reply Cancel Reply
Exit mobile version