ಹೊಸ ಭ್ರಮೆ
ನಾನು ಒಂದೂ ಮುಕ್ಕಾಲು ನಿಮಿಷ ಸುಮ್ಮನೆ
ಕಿಟಕಿ ನೋಡಿದೆ
ಟೈಟಾನಿಕ್ ಹಡಗು ತೇಲುವುದು ಕಾಣುತ್ತದೆ
ಕೇಟ್ ವಿನ್ಸ್‌ಲೆಟ್ ಕೊಡುತ್ತಾಳೆ ಒಂದು ಬಿಸಿಯಾದ ಮುತ್ತು
ನಮ್ಮ ಡಿ ಕ್ಯಾಪ್ರಿಯೋಗೆ ಹೇಗೆ ತೇಲುತ್ತ ಮುಳುಗುವುದೂ
ಒಂದು ಕಲೆಯಾಗಿ ಮಾರ್ಪಟ್ಟು ಅಲೆ ಅಲೆಯಾಗಿ
ಇಳಿದುಹೋಗುತ್ತಾನೆ ಸಮುದ್ರದ ಒಳಗೆ
ನಾನು ಸುಮ್ಮನೇ ಟಿವಿಯಲ್ಲಿ ಒಂದು ಕೆಟ್ಟ ಜಾಹೀರಾತನ್ನು
ನೋಡಿದೆ
ಮಳೆ ಧೋ ಎಂದು ಸುರಿಯುತ್ತದೆ.
ಪ್ರೇಮಿಗಳು ಒಬ್ಬರನ್ನೊಬ್ಬರು ಹಿಡಿದು ನಡೆಯುವುದು
ದೂರದೂರ ಕಳೆದುಹೋಗುವುದು ಕಣ್ಣು ಕಟ್ಟುತ್ತದೆ.
ಸ್ಟೆಫಿ ಗ್ರಾಫ್ ಹೀಗೆ ಕೈಗಳನ್ನು ಎತ್ತಿ ದಿವ್ಯ ಚಿಂತನೆಯಲ್ಲಿ ಮೈಮರೆತ ದೃಶ್ಯವೂ
ಇಲ್ಲಿ ಮತ್ತೆ ಮತ್ತೆ ಬಂದು ಮರೆಯಾಗುತ್ತದೆ.
ಕಟ್ಟಡಗಳು ಏಳುತ್ತವೆ. ಕಾರು,ಬಸ್ಸು, ವಿಮಾನಗಳು
ಅತ್ತ ಇತ್ತ ಚಲಿಸುತ್ತವೆ.
ಸಮುದ್ರಜೀವಿಗಳು ಈಜುತ್ತ ಸುಖ ಕೊಡುತ್ತವೆ.
ನಾನು ಬಯಸಿದರೆ ಇಲ್ಲಿ ನನ್ನದೇ ಚಿತ್ರ ಮೂಡಿ
ಮಿಂಚಬಹುದು ಎಂಬ ಸತ್ಯವೂ ನನಗೆ ಗೊತ್ತಿರುವಂತೆ
ಇವೆಲ್ಲ ಭ್ರಮೆ ಎಂಬ ವಾಸ್ತವದ ಅರಿವೂ ನನಗಿದೆ.
ನಾನು ಕಾಣುತ್ತಿರುವ ನೋಟಗಳು ನಿಜವೂ ಹೌದು,
ಸುಳ್ಳೂ ಹೌದು ಎಂಬ ಮೋಜಿನ ಮಾತು ನನ್ನೊಳಗೆ ಮರಳುತ್ತಿದೆ.
ನಾನು ಒಮ್ಮೆ ಕೈಬೆರಳುಗಳನ್ನು ಅದುರಿದರೂ ಸಾಕು
ನಾನು ಒಮ್ಮೆ ಮೈಕೊಡವಿದರೂ ಸಾಕು
ನಾನು ಒಮ್ಮೆ ಕಾಲು ನೀಡಿದರೂ
ಸಾಕು….
ಎಲ್ಲವೂ ಫಟ್ ಎಂದು ಮಾಯವಾಗುತ್ತದೆ.
ಯಾಂತ್ರಿಕವಾಗಿ ಹರಡಿಕೊಳ್ಳುತ್ತದೆ
ಕನಸುಗಳು ಕಳಚಿ ಬೀಳುತ್ತವೆ.
ಮಾನಿಟರ್ ಪರದೆಯೇ ವಾಸ್ತವವಾಗುತ್ತದೆ.