ಒಂದು ಹಸಿರು ಎಲೆ ನನ್ನ ಹಳೆ ಡೈರಿಯ ಒಳಗೆ ಕೂತಿದೆ.
ನಿಮ್ಮ ಡೈರಿಯಲ್ಲೂ ಅಂಥ ಒಂದು ಎಲೆಯೋ, ಹೂವೋ, ಕಾಗದವೋ. ನಾನು ನಿಮ್ಮನ್ನು ನೋಡಿಲ್ಲ. ನಿಮ್ಮ ನೆನಪುಗಳನ್ನು ತಿಳಿದಿಲ್ಲ. ನನ್ನನ್ನು ಕ್ಷಮಿಸಿ. ನಾನು ಬರೆದಿರೋದನ್ನ ನೀವು ಓದುತ್ತೀರಿ. ಅಷ್ಟೆ. ಅದಕ್ಕಾಗಿ ನಾನು ಆ ಹಸಿರು ಎಲೆಯ ಕಥೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.
ನನಗೂ ಈಗ ಆ ಹಸಿರೆಲೆ ಎಲ್ಲಿದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ನನ್ನ ಎಲ್ಲಾ ವರ್ಷಗಳ ಡೈರಿಗಳನ್ನೂ ಜತನದಿಂದ ಇಟ್ಟುಕೊಂಡು ಬಂದಿದ್ದೇನೆ, ಅವು ನಾಗಂದಿಗೆಯ ಮೇಲೆ ಸಾಲಾಗಿ ಪೇರಿಸಿರುವ ಪುಸ್ತಕದ ಯಾವುದೋ ಬಾಕ್ಸಿನಲ್ಲಿ ಇದೆ. ಅಷ್ಟೆ. ಇಷ್ಟಾಗಿಯೂ ನನಗೆ ನನ್ನ ಆ ಹಸಿರೆಲೆ ಎಲ್ಲಿದೆ ಗೊತ್ತಿಲ್ಲ. ತಲೆ ಎತ್ತಿ ನೋಡಿದರೆ, ಡೈರಿಯ ಪುಟಗಳು ಕಾಣುತ್ತವೆ.“ನನ್ನ ನಿನ್ನ ಭೇಟಿ ಶೀಘ್ರದಲ್ಲಾಗಲಿ” ಎಂದು ಬರೆದ ಸಾಲುಗಳು.
ಎಷ್ಟು ಮಜಾ ನೋಡಿ. ನನಗೆ ಹಸಿರೆಲೆ ಕಾಣುತ್ತದೆ ; ಕಾಣುವುದೂ ಇಲ್ಲ!
ಆ ಹಸಿರೆಲೆ ಈಗಲೂ ಹಸಿರಾಗಿಯೇ ಇದೆ. ಹಸಿರಿನಲ್ಲಿ ಬಗೆ ಬಗೆ ಇದೆಯಲ್ಲ, ಹಾಗೆ. ಮೊದಲು ನಾನು ಅದನ್ನು ಎತ್ತಿಕೊಂಡಾಗ ಹಚ್ಚ ಹಸಿರು. ಈಗ ಮದರಂಗಿಯ ಹಾಗೆ ಪಾಚಿ. ಅದರ ಒಳತಂತುಗಳು ಮೊದಲು ಕಾಣಿಸುತ್ತಲೇ ಇರಲಿಲ್ಲ. ಈಗ ನೋಡಿ, ಅದರ ಎಲ್ಲಾ ತಂತುಗಳೂ ಎಲೆಯ ಪದರದಿಂದ ಮೇಲೆದ್ದಿವೆ. ಸ್ಪಷ್ಟವಾಗಿ ಕಾಣುತ್ತವೆ. ಹಣೆಯ ಗೆರೆಗಳಂತೆ ಅಂತ ಹೇಳಿಬಿಡಬಹುದು. ಅದಕ್ಕಿಂತ ಹೆಚ್ಚು ಸ್ಫುಟ ಎಂದೇ ಅನ್ನಿಸುತ್ತದೆ. ಬರೆದ ಸಾಲುಗಳು ಇರುವ ಹಾಳೆಗಳ ನಡುವೆಯೇ ಆ ಹಸಿರೆಲೆಯನ್ನು ಇಟ್ಟಿದ್ದೆ. ಈಗಲೂ. ಪುಸ್ತಕದ ಎರಡೂ ಬದಿಗಳಲ್ಲಿ ಹಸಿರೆಲೆಯ ಮುದ್ರೆ ಕಾಣಿಸುತ್ತದೆ.
ಈ ಹಸಿರೆಲೆ ನನಗೆ ಹೇಗೆ ಸಿಕ್ಕಿತು ಎಂದು ನೆನಪಿಸಿಕೊಂಡರೆ,ಹೌದು, ನೆನಪಾಗುತ್ತಿದೆ. ಆಗುವುದೇನು, ನೆನಪು ಇದ್ದೇ ಇದೆ.
ಆ ಹಸಿರೆಲೆಯನ್ನು ನಾನೇ ಹುಡುಕಿದ್ದು. ಒಂದು ದಿನ ಸಂಜೆ ನಾನು ಆ ಹಾದಿಯಲ್ಲಿ ಹೋಗುತ್ತಿದ್ದೆ. ಅದು ಅನಾಥವಾಗಿ ಬಿದ್ದಿತ್ತು. ಅಥವಾ ನನಗೆ ಹಾಗೆ, ಅದು ಅನಾಥವಾಗಿ ಬಿದ್ದಂತೆ ಕಾಣಿಸಿತು. ಎಲೆಗೆ ಮಾತು ಬರುತ್ತ? ಸುಮ್ಮನೆ ಬಿದ್ದಿತ್ತು. ಆ ಹಾದಿಯಲ್ಲಿ ಇನ್ನೂ ನೂರಾರು ಎಲೆಗಳು ಬಿದ್ದಿದ್ದವು. ಎಲ್ಲವೂ ಮುರುಟಿಹೋಗಿದ್ದ ಎಲೆಗಳು. ಒಣಗಿದ ಎಲೆಗಳು. ತುಂಡಾದ ಎಲೆಗಳು. ಇದೊಂದೇ ಹೀಗೆ ಯಾರೋ ಈಗ ತಾನೇ ಕತ್ತರಿಸಿ ಎಸೆದಂತೆ. ಅದರ ತೊಟ್ಟಿನಿಂದ ಕಂಡೂ ಕಾಣದಂತೆ ಒಸರುತ್ತಿದ್ದ ಜೀವರಸ . ನಾನು ಆಗ ತಾನೇ ಆ ಹಾದಿಯಲ್ಲಿ ನಡೆಯುತ್ತಿದ್ದವ. ನನಗೆ ಆ ಹಾದಿ ತುಂಬಾ ಇಷ್ಟ. ತುಂಬಾ ಮುಖ್ಯವೂ . ಹಾದಿಯನ್ನೇ ಹೆಚ್ಚು ಪ್ರೀತಿಯಿಂದ ನೋಡುತ್ತಾ ಹೋಗುತ್ತಿದ್ದೆ. ಈ ಎಲೆ ಕಂಡಿತು. ಎತ್ತಿಕೊಂಡೆ. ನನ್ನ ಹರುಕು ಚೀಲದೊಳಗೆ ಇದ್ದ ಡೈರಿಯನ್ನು ತೆಗೆದೆ. ಡಿಸೆಂಬರ್ ೨೪-೨೫ ರ ಪುಟವನ್ನು ತೆಗೆದೆ. ಎಲೆಯನ್ನು ಹಾಗೆಯೇ ಇಟ್ಟೆ. ನನಗೆ ನೆನಪಾಗಿದ್ದು ನನ್ನ ಶಾಲೆ . ತುದಿಯಿಂದ ಬೇರು ಬಿಡುವ ಎಲೆಗಳನ್ನು ಹೀಗೆಯೇ ಗಿಡದಿಂದ ಕತ್ತರಿಸಿ ಎಕ್ಸರ್‌ಸೈಜ್ ಪುಸ್ತಕದಲ್ಲಿ ಇಡುತ್ತಿದ್ದೆ . ಈಗ ನನಗೆ ವರ್ತಮಾನವೇ ಮುಖ್ಯ. ಆಗ ತಾನೇ ಸೂರ್ಯ ಮುಳುಗುತ್ತಿದ್ದ. ಹಾದಿ ಬದಿಯ ಮರಗಳ ನಡುವೆಯಿಂದ ಅವನ ಕಿರಣಗಳು ತೂರಿ ಬಂದಿದ್ದವು.
ಒಂದು ಎಲೆ ನನ್ನೊಳಗೆ ಇಷ್ಟೆಲ್ಲ ನೆನಪುಗಳಿಗೆ ಹಾದಿ ಮಾಡಿಬಿಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಾನು ಒಂದು ಎಲೆಯ ಮಾತ್ರಕ್ಕೆ ಹೀಗೆ ದಾವಣಗೆರೆಯ ಹೈಸ್ಕೂಲು ಬಯಲಿನಲ್ಲಿ ಬಿಕ್ಕುತ್ತ ಕೂರಬೇಕಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಒಂದೇ ಒಂದು ಎಲೆಗಾಗಿ ನಾನು ಆ ಐದನೆಯ ಮಹಡಿಯ ಶ್ಯಾಂಡೆಲಿಯರ್ ಬೆಳಕಿನಲ್ಲಿ ಮಲಗಿ ಕಣ್ಣೀರು ಹನಿಸಬೇಕಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಅತ್ತೆ. ಹಸಿರೆಲೆ ಡೈರಿಯೊಳಗೆ ಬೆಚ್ಚಗೆ ಕೂತಿತ್ತು.
*******
ಟಿಕ್ ಟಿಕ್ ಎಂದರೆ ಮಾತ್ರ ಗಡಿಯಾರ ಎಂಬ ಭ್ರಮೆ ನಿಮ್ಮದು. ಗಡಿಯಾರ ಎಂದರೆ ಬರೀ ಗಂಟೆಗಳನ್ನು ಬಜಾಯಿಸುವ ಯಂತ್ರ್ರವಲ್ಲ. ಉದಾಹರಣೆಗೆ ನಾನು ಅವತ್ತು ಹೋಗುತ್ತಿದ್ದ ಬಸ್ಸಿನಲ್ಲಿ ಅವಳ ತೊಡೆಯ ಮೇಲೆ ಸುಮ್ಮನೆ ಕುಳಿತಿದ್ದ ಆ ಗಡಿಯಾರ . ಇನೊಬ್ಬರ ಕಣ್ಣಿಗೆ ಕಾಣಿಸುತ್ತಲೂ ಇರಲಿಲ್ಲ. ಮುಟ್ಟಿದರೆ ಮಾತ್ ಟಿಕ್ ಟಿಕ್‌ನ ಬಡಿತದ ಸಂವೇದನೆ. ಒಂದು ಸಲ ಮಾತ್ರ ಆ ಗಡಿಯಾರವನ್ನು ಮುಟ್ಟಿದೆ. ನೋಡು ಈ ಗಡಿಯಾರ ಅಂತ ಅವಳೇ ಹೇಳಿದ್ದಳು. ಬಹುಮಾನವಾಗಿ ಬಂದದ್ದು.
ಆಮೇಲೆ ನನಗೆ ಗಡಿಯಾರದ ಬಗ್ಗೆ ನೆನಪಾಗಿದ್ದು ಅವಳ ಮನೆಗೆ ಹೋದಾಗಲೇ. ಅಲ್ಲಿ ಇದ್ದ ಗಡಿಯಾರ ತುಂಬಾ ಹಳೆಯದು. ಅಷ್ಟಭುಜದ್ದು. ರೋಮನ್ ಅಂಕಿಗಳು. ಕಪ್ಪನೆಯ ಮುಳ್ಳುಗಳು. ಕಪ್ಪನೆಯ ಚೌಕಟ್ಟು. ವಯಲಿನ್ ಬಾರಿಸಿದಂತೆ ಗಂಟೆ . ನಾನು ಇದ್ದ ಮೂರೂ ದಿನಗಳ ಕಾಲ ಆ ಗಡಿಯಾರ ಒಮ್ಮೆಯೂ ನಿಂತದ್ದಿಲ್ಲ. ಅವಳ ಅಪ್ಪ ರಾತ್ರಿ ಸರಿಯಾಗಿ ಎಂಟು ಗಂಟೆ ಆಗುತ್ತಲೇ ಆ ಗಡಿಯಾರಕ್ಕೆ ಕೀಲಿ ಕೊಡುತ್ತಿದ್ದರು. ಅಂದಮೇಲೆ ಅದು ಸುಮ್ಮನಿರುವುದಾದರೂ ಹೇಗೆ? ನನಗೆ ಮಲಗಲಿಕ್ಕೆ ಅಪ್ಪನ ರೂಮೇ. ಅದು ಇರುವುದೇ ಜಗಲಿಯ ಪಕ್ಕದಲ್ಲಿ. ರಾತ್ರಿಯ ನೀರವತೆಯಲ್ಲಿ ಜೀರುಂಡೆಗಳ ಜೀರವ ಬಿಟ್ಟರೆ ಈ ಗಡಿಯಾರದ್ದೇ ಸದ್ದು. ನಾನು ಕಂಬಳಿ ಹೊದ್ದು ಚಳಿಯನ್ನು ಹೊರಗೇ ಇಟ್ಟೂ ಅನುಭವಿಸುತ್ತಿದ್ದೆ. ಮುಖ ಮಾತ್ರ ಗಾಳಿಗೆ. ಸಿಟಿ ಹಾಗಲ್ಲ. ಇಲ್ಲಿ ಕತ್ತಲು ಎಂದರೆ ಕತ್ತಲೇ. ನನಗೆ ಭಯವಾಗಿದ್ದು ಟಿಕ್ ಟಿಕ್ ನಿಂದ. ಒಂಥರ ಹೆದರಿಕೆ. ನಿದ್ದೆ ಬಂದು ರಾತ್ರಿ ಎಚ್ಚರಾದರೆ ಅದೇ ಟಿಕ್ ಟಿಕ್
ಹಗಲು ಅವಳ ಜೊತೆ ಚೆಸ್ ಆಡುವಾಗಲೂ ಟಿಕ್ ಟಿಕ್. ಕಾಫಿ ಕುಡಿಯುವಾಗಲೂ. ಕಟ್ಟೆಯ ಮೇಲೆ ರೇಡಿಯೋ ಹಚ್ಚಿ ಮಂಗಳೂರು ಸ್ಟೇಶನ್‌ಗೆ ಕಿವಿ ಹಚ್ಚಿದಾಗಲೂ. ಸುಮ್ಮನೆ ಕೂತು ಹಳೆ ಮ್ಯಾಗಜಿನ್‌ಗಳ ಪುಟ ತಿರುಗಿಸುವಾಗಲೂ. ಸ್ನಾನ ಮಾಡಿ ಬಂದು ತಲೆ ಬಾಚಿಕೊಳ್ಳುವಾಗಲೂ. ಈ ಗಡಿಯಾರ ನಿಂತದ್ದೇ ಇಲ್ಲ.
ಕೊನೆಗೆ ಒಂದು ದಿನ ಮಧ್ಯಾಹ್ನ. ನನ್ನ ಅವಳ ಮಾತು. ಮಾತು ಮಾತು ಬೆಳೆಯುತ್ತ ಹೋಯಿತು. ನಾನು ಅವಳ ಕಥೆಯನ್ನೇ ಬರೆಯವುದಾಗಿದ್ದರೆ ಬಿಡಿ, ಗಡಿಯಾರ ಬೇಕಾಗಿರಲಿಲ್ಲ. ಆದರೆ ನೋಡಿ ಎಷ್ಟು ವಿಚಿತ್ರ ! ನಾನು ಅವಳಿಗೆ ಹತ್ತಿರವಾಗುತ್ತ ಹೋದೆ. ಅಕ್ಟೋಬರ್ ೨೭ ರಿಂದ ಡಿಸೆಂಬರ್ ೨೪ ರ ನಡುವೆ ಎಷ್ಟು ಘಟನೆಗಳು ನಡೆದಿದ್ದವು ಎಂದರೆ ನಾವು ಈ ಡಿಸೆಂಬರ್ ೨೭ ರಂದು ಹತ್ತಿರ ಬರಲೇಬೇಕಾಗಿತ್ತು. ಅವತ್ತು ಆದದ್ದೂ ಅಷ್ಟೆ. ನಾನು ಮಾತನಾಡುತ್ತಿದ್ದೆ. ಅವಳ ಬೆರಳುಗಳನ್ನು ಹಿಡಿದಿದ್ದೆ. ಪ್ರತಿಯೊಂದೂ ಗಂಟನ್ನು ಒತ್ತಿ ಒತ್ತಿ ಉಗುರಿನಿಂದ ಅವಳ ಬೆರಳನ್ನು ಗೀರುತ್ತಿದ್ದೆ. ಎದುರಿಗೆ ಇದ್ದ ಅಲ್ಮೆರಾವನ್ನು ನೋಡುತ್ತಿದ್ದೆ. ಅಮ್ಮ ಬಂದು ಬಿಡಬಹುದೇ ಎಂದು ಎಂಬ ಹುಡುಗುಭಯ. ಹಾಗಂತ ಬಾಗಿಲು ತೆರೆದೇ ಇತ್ತು. ಕೇಳುತ್ತಲೇ ಇದ್ದ ಟಿಕ್ ಟಿಕ್. ಅವಳು ಹಾಗೆಯೇ ನನಗೆ ಒರಗಿಕೊಂಡಳು. ನಾನು ಮಾತ್ರ ಟಿಕ್ ಟಿಕ್ ಎಂಬ ಗಡಿಯಾರಕ್ಕೆ ಸೋತಿದ್ದೆ. ಅವಳಿಗೆ ಒಂದು ಮುತ್ತು ಕೊಡಬೇಕೆನ್ನಿಸಿ ಬಲವಂತವಾಗಿ ಗಡಿಯಾರವನ್ನು ಮರೆತೆ. ಮುತ್ತು ಕೊಟ್ಟ ಮೇಲೆ ಕಿವಿಗೆ ರಾಚಿದ್ದು ಅದೇ ಗಡಿಯಾರದ ಸದ್ದು . ಈ ಮಧ್ಯೆ ಎಷ್ಟು ಸಮಯ ಆಗಿತ್ತು ಎಂದರೆ ಗಡಿಯಾರ ಪಿಟೀಲು ಬಾರಿಸಿದ್ದೂ ಇದೆ. ನಾನು ಗಡಿಯಾರದ ಟಿಕ್ ಟಿಕ್ ಕೇಳುತ್ತಾ ಕುಳಿತೆ. ಯಾವುದು ನಿಜ, ಯಾವುದು ಸಮಯ, ಯಾವುದು ಕಾಲ ಎಲ್ಲವೂ ನನಗೆ ಅಯೋಮಯ. ರಾತ್ರಿಯ ಗಾಢ ಕತ್ತಲಿನ ಹಾಗೆ. ರಾತ್ರಿಯೆಲ್ಲ ಟಿಕ್ ಟಿಕ್ ಕೇಳುತ್ತಲೇ ಕಳೆದೆ.
ಒಂದು ಕ್ಷಣ ಟಿಕ್ ಟಿಕ್ ಮರೆತಿದ್ದಕ್ಕೆ ರಾತ್ರಿಯೆಲ್ಲ ಶಿಕ್ಷೆ!
ಆ ಗಡಿಯಾರ ಈಗಲೂ ಅಲ್ಲಿಯೇ ಇರಬಹುದು ಎಂದುಕೊಳ್ಳುತ್ತೇನೆ. ಅಪ್ಪ ಅದಕ್ಕೆ ದಿನವೂ ಕೀಲಿ ಕೊಡುತ್ತಾರೇನೋ. ನಿಜ, ಅದಿಲ್ಲದಿದ್ದರೆ ದಿನ ನಡೆಯುತ್ತದೆ. ಆದರೆ ಅವಳು ಇಲ್ಲ. ಅಮ್ಮನಿಗೆ ಕೆಲಸದ ನಡುವೆ ಗಡಿಯಾರದ ಟಿಕ್ ಟಿಕ್ ಗೆ ಕಿವಿ ಹಚ್ಚುವುದು ಸಾಧ್ಯವಾಗಲಿಕ್ಕಿಲ್ಲ. ಅರೆ, ಅವರಿಗೆ ಯಾಕಾದರೂ ಟಿಕ್ ಟಿಕ್ ಬೇಕು? ನನಗೇನೋ ಬೇರೆ ಕೆಲಸ ಇರಲಿಲ್ಲ. ಅವಳ ಮಾತು ಮೌನದ ನಡುವೆ ನನಗೆ ಕೇಳಲು ಇದ್ದಿದ್ದೆಂದರೆ ಅದೊಂದೇ ಶಬ್ದ. ಈಗ ನೋಡಿ, ಈ ಕಂಪ್ಯೂಟರಿನಲ್ಲಿ ಇದನ್ನೆಲ್ಲ ಬರೆಯುವಾಗ ಇದರೊಳಗೆ ಇರುವ ಗಡಿಯಾರ ಸೋತು ಹೋಗಿದೆ! ಇದಕ್ಕೆ ಕೀಲಿ ಕೊಡಲಿಕ್ಕೆ ಬರಲ್ಲ. ೫೦ ರೂಪಾಯಿ ಕೊಟ್ಟು ಬ್ಯಾಟರಿ ಹಾಕಬೇಕು. ಇಲ್ಲಿ ನನಗೆ ಆ ಗಡಿಯಾರ ಈಗಲೂ ಎಂಥ ಅದ್ಭುತ ವಸ್ತು ಎಂದೆನಿಸುತ್ತದೆ. ನನಗೆ ಅದರ ಟಿಕ್ ಟಿಕ್ ಕೇಳಿಸುತ್ತೆ. ಬಸ್ಸು, ಲಾರಿ,ಕಾರುಗಳ ಭರಾಟೆಯ ನಡುವೆಯೂ ನನಗೆ ಟಿಕ್ ಟಿಕ್ ಕೇಳುತ್ತ್ತದೆ. ನಾನು ಅಷ್ಟರ ಮಟ್ಟಿಗೆ ಭಯಗ್ರಸ್ತ.
ಅಥವಾ ಅದೃಷ್ಟವಂತ!
ನಾನು ಪಾಪಿನ್ಸ್ ಪ್ರಿಯ. ಹಸಿರು ಬಿಳಿ ಕೆಂಪು ಬಣ್ಣಗಳ ಆ ಪೆಪ್ಪರುಮೆಂಟು ಹತ್ತು ವರ್ಷಗಳ ಕಾಲ ನನ್ನ ಆಪ್ತ ವಸ್ತು. ಪಾಪಿನ್ಸ್ ಇದ್ದರೆ ಸಾಕು, ನಾನು ದಾವಣಗೆರೆಯ ಗೋಡೆಯಲ್ಲೆಲ್ಲ ಕ್ರಾಂತಿಯ ಘೋಷಣೆಗಳನ್ನು ಬರೆದು ಬಿಸಾಕುತ್ತಿದ್ದೆ. ಪಾಪಿನ್ಸ್ ಇದ್ದರೆ ಸಾಕು, ನಾನು ನೂರಾರು ಪ್ಲಕಾರ್ಡುಗಳ ಮೇಲೆ ದೇಶೋದ್ಧಾರದ ವಾಕ್ಯಗಳನ್ನು ಅಂದವಾಗಿ ಗೀಚುತ್ತಿದ್ದೆ. ಪಾಪಿನ್ಸ್ ಇದ್ದರೆ ಸಾಕು, ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಳೆ ಕಾಯುತ್ತಿದ್ದೆ. ಪಾಪಿನ್ಸ್ ಇದ್ದರೆ ನಾನು ವಿಜಯಲಕ್ಷ್ಮಿ ಥಿಯೇಟರಿನಲ್ಲಿ ಅಲ್ಲಾಡದೆ ಸಿನಿಮಾ ನೋಡುತ್ತಿದ್ದೆ. ಹತ್ತಾರು ಮೈಲು ಸೈಕಲ್ ಹೊಡೆದು ಬರುತ್ತಿದ್ದೆ.
ಪಾಪಿನ್ಸ್ ಇದ್ದರೆ ಸಾಕು, ನಾನು ಕವನವನ್ನೂ ಬರೆಯುತ್ತಿದ್ದೆ. ಕಾಟನ್‌ಪೇಟೆಯ ಟೆರೇಸಿನಲ್ಲಿ ಕೂತು ಗಂಟೆಗಟ್ಟಳೆ ನಿಯಾನ್ ದೀಪವನ್ನೇ ನೋಡುತ್ತಿದ್ದೆ. ಹೆಬ್ಬಾಳದಿಂದ ಮೆಜಿಸ್ಟಿಕ್ಕಿಗೆ ನಡೆದು ಬರುತ್ತಿದ್ದೆ. ಆಮ್ಲೆಟ್, ಚಿತ್ರಾನ್ನ ಸಿಗದಿದ್ದರೂ ಸಾಕು, ರಾತ್ರಿ ಪಾಪಿನ್ಸ್ ತಿನ್ನುತ್ತ ಮಲಗಿದ ದಿನಗಳೂ ಇದ್ದವು. ನೀವು ಇದನ್ನು ನಂಬಲೇ ಬೇಕೆಂದೇನೂ ಇಲ್ಲ. ಬರೆದದ್ದನ್ನೆಲ್ಲ ನಂಬುವುದಕ್ಕಾಗುತ್ತ?
ಉದಾಹರಣೆಗೆ “ನನ್ನ ನಿನ್ನ ಭೇಟಿ ಶೀಘ್ರದಲ್ಲಾಗಲಿ” ಅಂತ ಅವಳು ಬರೆದದ್ದನ್ನು ನಾನು ನಂಬಿದ್ದೆ!
ಅವತ್ತು ಕೂಡಾ ಪಾಪಿನ್ಸ್ ಜರಿ ಕಿತ್ತು ಅವಳಿಗೂ ಒಂದೆರಡು ಪಾಪಿನ್ಸ್ ಕೊಟ್ಟಿದ್ದೆ. ಅವಳಿಗೆ ನನ್ನ ಈ ಚಟ ಗೊತ್ತಿತ್ತು. ಅವಳಿಗೆ ನನ್ನ ಬಯಕೆಗಳು ಗೊತ್ತಿದ್ದವು. ನನಗೆ ಮುತ್ತು ಕೊಡಬೇಕೆಂದು ಅವಳಿಗೆ ಅರಿವಿತ್ತು. ಕೊಡುವಾಗಲೂ. ಮರುದಿನ ಕಾಫಿ ಕೊಡುವಾಗ “ಈ ಕಾಫಿಗಿಂತ ನಿನ್ನೆ ಕೊಟ್ಟ ಮುತ್ತೇ ಬಿಸಿಯಾಗಿತ್ತ್ತು” ಎಂದು ನಾನು ಹೇಳಿದ್ದನ್ನು ಕೇಳಿ ಮೆದುವಾಗಿ ನಕ್ಕಿದ್ದಳು ಕೂಡಾ. ಅವಳಿಗೆ ನನ್ನ, ಅವಳ ಮತ್ತು ಪಾಪಿನ್ಸಿನ ನಡುವಣ ಸಂಬಂಧದ ಚಿತ್ರಣ ಸಿಕ್ಕಿತ್ತು.
ಪಾಪಿನ್ಸಿನ ರುಚಿ ಯಾರನ್ನು ಬಿಡುತ್ತೆ?
ನಾನು ಮನೆಗೆ ತೆಗೆದುಕೊಂಡು ಹೋಗಿದ್ದು ನಾಲ್ಕಾರು ಪ್ಯಾಕು ಪಾಪಿನ್ಸ್ಸ್. ಎಲ್ಲವೂ ಖಾಲಿಯಾಗುವ ಹೊತ್ತಿಗೆ ನಾನು ಹಿಂದಿರುಗುವ ದಿನ. ದಿನಗಳೂ ಖಾಲಿಯಾದಂತೆ! ಟಿಕ್ ಟಿಕ್ ಮುಂದುವರೆದಿತ್ತು. ಅಪ್ಪ ಅಮ್ಮನಿಗೆ ವಿದಾಯ ಹೇಳಿದೆ.
ಆ ಹಾದಿಯಲ್ಲಿ ವಾಪಸು ನಡೆದೆ. ನೇರಳೆ ಬಣ್ಣದ ಕನ್ನಡಕ ಹಾಕಿದ ಅವಳು ಬಸ್ ಬರುವವರೆಗೆ ಕಾದಿದ್ದಳು. ಏನೇನೋ ಮಾತಾಡುತ್ತಿದ್ದಳು.
****
ನಾನು ಅವಳ ಮನೆಗೆ ಹೋಗುವಾಗಲೇ ಈ ಹಸಿರೆಲೆ ಸಿಕ್ಕಿದ್ದು ಅಂತ ಊಹೆ ಮಾಡಿರ್‍ತೀರ ನೀವು, ನನಗೆ ಗೊತ್ತ್ತು. ನಿಜ.ಅದರ ಬಗ್ಗೆ ಯಾರಿಗೂ ಹೇಳಲಿಲ್ಲವಾಗಿ ನನ್ನ ಜೊತೆಗೇ ಉಳಿದುಕೊಂಡಿದೆ.ನೀವು ನನ್ನ ಮನೆಗೆ ಬಂದರೆ ತೋರಿಸುತ್ತೇನೆ. ಒಂದೇ ವಿನಂತಿ : ಏನಾಯಿತು ಎಂದು ಮಾತ್ರ ಕೇಳಬೇಡಿ.
ನನ್ನ ನಿಮ್ಮ ಭೇಟಿ ಶೀಘ್ರದಲ್ಲಾಗಲಿ.
೧೧.೫.೨೦೦೧