ಹಣ ತರದ ಶಿಕ್ಷಣ ನೀಡುವ ಹಂಪಿ ಕನ್ನಡ ವಿವಿ


ಈಗ ಇಲ್ಲಿ ಅಸಾಂಪ್ರದಾಯಿಕ ಶಿಕ್ಷಣವನ್ನೇ ಬಳ್ಳದಿಂದ ಅಳೆದು ಕೊಡಲಾಗುತ್ತಿದೆ!
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಇದೀಗ ವಾಣಿಜ್ಯೇತರ ಉದ್ದೇಶದ ಹಲವು ಅಧ್ಯಯನಗಳನ್ನು ಆರಂಭಿಸುವುದರ ಮೂಲಕ ಶಿಕ್ಷಣದ ವಾಣಿಜ್ಯೀಕರಣದ ಪ್ರವಾಹದ ವಿರುದ್ಧ  ಈಜಹೊರಟಿದೆ. ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಭಾಷಾಂತರ ಅಧ್ಯಯನ, ಶಾಸನಶಾಸ್ತ್ರ, ಮಹಿಳಾ ಅಧ್ಯಯನ, ಪುರಾತತ್ತ್ವ – ಹೀಗೆ ಹಲವು ಸಾಂಪ್ರದಾಯಿಕವಲ್ಲದ ಅಧ್ಯಯನಗಳ ಮೇಲೆ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್‌ಗಳನ್ನು  ವಿಶ್ವವಿದ್ಯಾಲಯದ ದೂರಶಿಕ್ಷಣ  ಕೇಂದ್ರವು ಆರಂಭಿಸಿ ರಚನಾತ್ಮಕ ಅಧ್ಯಯನದ ಹೊಸ ಮಾದರಿಗಳನ್ನು ಮುಂದಿಟ್ಟಿದೆ.
ಇತಿಹಾಸ, ಕನ್ನಡ ಸಾಹಿತ್ಯ, ದಲಿತ ಅಧ್ಯಯನ, ಮಾಹಿತಿ ಮತ್ತು ಸಂವಹನ ತಂತ್ರeನ ಮುಂತಾದ ಕೋರ್ಸ್‌ಗಳೂ ಈಗ ಕನ್ನಡ ವಿಶ್ವವಿದ್ಯಾಲಯದಿಂದ ಲಭ್ಯ. ಸಮಕಾಲೀನ ಮಾಹಿತಿಗಳು ಹಾಗೂ ಸಂಶೋಧನೆಗಳನ್ನು ಆಧರಿಸಿಯೇ ಈ ಎಲ್ಲಾ ಪಠ್ಯಗಳನ್ನು ಹೊಸದಾಗಿ  ರಚಿಸಲಾಗಿದೆ. ಅದರಲ್ಲೂ ಪತ್ರಿಕೋದ್ಯಮ ಅಧ್ಯಯನವನ್ನು ಇಂಗ್ಲಿಶೇತರ ಭಾಷೆಗಳಲ್ಲಿ ತಂದಿರುವುದು ದೇಶದಲ್ಲೇ ಪ್ರಪ್ರಥಮ ಎಂಬುದು ವಿಶ್ವವಿದ್ಯಾಲಯದ ಹೆಮ್ಮೆಯ ಹೇಳಿಕೆ.  ಕನ್ನಡದಲ್ಲೇ ಇನ್ನೂ ಯಾವುದೇ ವಿದ್ವತ್ಪೂರ್ಣ ಗ್ರಂಥಗಳು ಇಲ್ಲದೇ ಇರುವ  `ತಾಂತ್ರಿಕ ಬರವಣಿಗೆ ಮತ್ತು ಸಂಪಾದನೆ' ಎಂಬ ವಿಷಯವನ್ನು ಈ ಸ್ನಾತಕೋತ್ತರ ತರಗತಿಯಲ್ಲಿ ಅಳವಡಿಸಿರುವುದು ಇನ್ನೊಂದು ವಿಶೇಷ. ಸಮಕಾಲೀನ ಭಾಷೆಯ ಬೆಳವಣಿಗೆಗಳಿಗೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸುವಲ್ಲಿ ಕನ್ನಡ ವಿಶ್ವವಿದ್ಯಾಲಯವು ಮಾದರಿಯಾಗಿದೆ.
ಈ ವರ್ಷದ  ತರಗತಿಗಳಿಗಾಗಿ ಇದೇ ಜೂನ್ ೨೪ರಿಂದ ಜುಲೈ ೨ರವರೆಗೆ ನಡೆದ ಸಂಪರ್ಕ ತರಗತಿಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿರುವುದು ವಿವಿಯ ಅಕಾರಿಗಳಿಗೆ ಸಂತಸ ತಂದಿದೆ.  ಪುತ್ತೂರು, ಬೆಂಗಳೂರು, ಬೀದರ, ಬಳ್ಳಾರಿಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿರುವ ವಿವಿಯು ಸದ್ಯದಲ್ಲ&am
p;#327
1; ಬಿಜಾಪುರ, ಗುಲಬರ್ಗಾ, ಚಿತ್ರದುರ್ಗ, ಅಂಕೋಲಾ, ಸಿದ್ದಾಪುರ, ದೇವದುರ್ಗ, ಬಸವನ ಬಾಗೇವಾಡಿ ಮುಂತಾದೆಡೆ ತನ್ನ ಕೇಂದ್ರಗಳನ್ನು ತೆರೆಯಲಿದೆ.
`ನೋಡಿ, ದಕ್ಷಿಣ ಭಾರತದ ಇತಿಹಾಸವೇ ನಮ್ಮ ಪಠ್ಯಗಳಲ್ಲಿ ಕಾಣಸಿಗುವುದಿಲ್ಲ. ಇಂಥ ಸ್ಥಿತಿಯಲ್ಲಿ ನಮ್ಮ ಪಠ್ಯಕ್ರಮದಲ್ಲಿ ದಕ್ಷಿಣ ಭಾರತದ ಇತಿಹಾಸವನ್ನೇ ಮುಖ್ಯವಾಗಿ ತಿಳಿಸಿದ್ದೇವೆ. ಸುಮ್ಮನೆ ಚರ್ವಿತ ಚರ್ವಣ ಇತಿಹಾಸ ಪಠ್ಯವನ್ನೇ ಅನುಕರಿಸಲು ನಾವು ಹೋಗಿಲ್ಲ. ಈ ಪಠ್ಯಪುಸ್ತಕಗಳನ್ನು ಬರೆದವರೆಲ್ಲ ತಂತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಿದವರೇ' ಎನ್ನುತ್ತಾರೆ ದೂರ ಶಿಕ್ಷಣ ಕೇಂದ್ರದ ನಿರ್ದೇಶಕ ಡಾ|| ಟಿ. ವಿಜಯ್ ಪೂಣಚ್ಚ. ಮೂಲತಃ ಇತಿಹಾಸ ಪ್ರಾಧ್ಯಾಪಕರಾದ ವಿಜಯ್ ಇತ್ತೀಚೆಗೆ ಕೊಡಗಿನ ಪ್ರತ್ಯೇಕತಾ ಹೋರಾಟದ ಬಗ್ಗೆ ವಿಶ್ಲೇಷಣಾತ್ಮಕ ಕೃತಿ ರಚಿಸಿದ್ದಾರೆ.
`ಸದ್ಯದಲ್ಲೇ ನಾವು ಇಂಟರ್‌ನೆಟ್ ಮೂಲಕ ಇ-ಎಜುಕೇಶನ್ ಆರಂಭಿಸುವ ಇರಾದೆ ಹೊಂದಿದ್ದೇವೆ. ಇಲ್ಲಿ ಹೊರನಾಡಿನವರಿಗಾಗಿ ಮತ್ತು ಕನ್ನಡೇತರರಿಗಾಗಿ ಕರ್ನಾಟಕ ಸ್ಟಡೀಸ್ ಎಂಬ ವಿನೂತನ ಕೋರ್ಸನ್ನು ಮುಂದಿನ ವರ್ಷದಿಂದ ನೀಡಲಿದ್ದೇವೆ. ಕರ್ನಾಟಕದ ಬಗ್ಗೆ  ತಿಳಿವಳಿಕೆ ಹೊಂದಲು ಆಸಕ್ತಿ ಇರುವವರಿಗೆ ಈ ಕೋರ್ಸು ತುಂಬಾ ಉಪಯುಕ್ತವಾಗಲಿದೆ' ಎನ್ನುತ್ತಾರೆ ಡಾ|| ವಿಜಯ್.
ಈ ಸ್ನಾತಕೋತ್ತರ ತರಗತಿಗಳಿಗಾಗಿ ಕನಿಷ್ಠ ೫೦೦ರಿಂದ ಹಿಡಿದು ೧೨೦೦ ಪುಟಗಳವರೆಗೆ ಪಠ್ಯಪುಸ್ತಕಗಳು ಈಗಾಗಲೇ ಸಿದ್ಧವಾಗಿ ವಿದ್ಯಾರ್ಥಿಗಳ ಕೈ ಸೇರಿವೆ.
ಈ ಮಧ್ಯೆ ತನ್ನ ವಿವಿಧ ಕೋರ್ಸ್‌ಗಳನ್ನು ವಿವಿಧ ಶಿಕ್ಷಣಸಂಸ್ಥೆಗಳ ಮೂಲಕ ರಾಜ್ಯದ ಎಲ್ಲಡೆಯ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡುವುದಕ್ಕೂ ದೂರಶಿಕ್ಷಣ ಕೇಂದ್ರವು ಚಿಂತನೆ ನಡೆಸಿದೆ.
ಕೆಲವು ಬಾರಿ ಒಳ್ಳೆಯ ಹಾಗೂ ಕೆಲವು ಬಾರಿ ವಿವಾದಾಸ್ಪದ ಸಂಗತಿಗಳಿಗಾಗಿ ಸುದ್ದಿ ಮಾಡುತ್ತಿದ್ದ ಕನ್ನಡ ವಿಶ್ವವಿದ್ಯಾಲಯವು ಈಗ ಸಾಂಪ್ರದಾಯಿಕ ಅಧ್ಯಯನಗಳ ಜೊತೆಗೇ  ಸಾಂಪ್ರದಾಯಿಕವಲ್ಲದ ವಿಷಯಗಳನ್ನೂ ಕಲಿಸಹೊರಟಿರುವುದು ಸದ್ಯಕ್ಕಂತೂ ನಮ್ಮ ದೇಶದಲ್ಲೇ ಒಂದು ಭರವ&a
mp;#
3256;ೆಯ ವಿಚಾರ. ವ್ಯಕ್ತಿಗತ ಇಸಂಗಳಿಗೆ ಬಲಿಬೀಳದೆ, ನಾಡಿನ ಕ್ಷುಲ್ಲಕ ಭಾಷಾರಾಜಕೀಯದಲ್ಲೂ ಮಧ್ಯಪ್ರವೇಶ ಮಾಡದೆ ಇಂಥ ರಚನಾತ್ಮಕ ಸಂಗತಿಗಳನ್ನೇ  ಗಟ್ಟಿಯಾಗಿ ಹಿಡಿದುಕೊಂಡರೆ ಬಹುಶಃ ಕನ್ನಡ ವಿಶ್ವವಿದ್ಯಾಲಯವು ಸಂಸ್ಕೃತಿ ಉಳಿಸುವ ಕಾಯಕದಲ್ಲಿ ಹೆಸರು ಮಾಡೀತು; ನಾಡಿಗೂ ಹಿರಿಮೆ ತಂದೀತು.
ವಿಶ್ವವಿದ್ಯಾಲಯವನ್ನು ನೀವು ೦೮೩೯೪ – ೨೪೧೯೮೧ ದೂರವಾಣಿಯಲ್ಲಿ ಸಂಪರ್ಕಿಸಬಹುದು. ಡಾ|| ವಿಜಯ್‌ರನ್ನು ನೀವು ೯೮೪೫೨೩೧೧೭೬ ಮೊಬೈಲ್  ಮೂಲಕ ಸಂಪರ್ಕಿಸಬಹುದು.

Share.
Leave A Reply Cancel Reply
Exit mobile version