ಹಳೆಹಾಡು
ನದಿಹರಿದು ಬರಿದಾಗಲಿಕ್ಕಿಲ್ಲ
ನನ್ನ ಜೀವದ ನಾಡಿ
ನನ್ನುಸಿರಿಗೆರವಾಗಲಿಕ್ಕಿಲ್ಲ
ನೀರಗುಳ್ಳೆಗಳನೊದ್ದು
ಗಾಳಿಗುಳ್ಳೆಗಳು ಹಾರಿ
ನಮ್ಮಗಳ ನಿಟ್ಟಿಸುತ
ಆಕಾಶದುದ್ದಕ್ಕಾಗಿ
ವಿಕಟ ನಗೆಯಳುವನ್ನು
ಎತ್ತಲಿಕ್ಕಿಲ್ಲ
ಮೂಳೆಗಳ ಖಣಿಲಾಟ
ಕೇಳಿಬರಲಿಕ್ಕಿಲ್ಲ
ಆಸೆಗಳು ನೀರಾಗಿ
ಬಿಕ್ಕಲಿಕ್ಕಿಲ್ಲ
ಕೊನೆಯಲ್ಲಿ ಕಾಗೆ ಗೂಬೆಯ,
ಬೇರ ಬೀಜವ ತಲೆಮೇಲೆ
ಬಿತ್ತಲಿಕ್ಕಿಲ್ಲ
ಅದಕೆಂದೆ, ಗೆಳತಿ
ಹುಸಿಯಾದ ಹಸಿರಾದ
ಹುಸಿಹುಲ್ಲು ಒಣಗದನಕ,
ಬಸಿರು ಕುಸುರಾಗಿ
ಹೊಸಕಾಲ ಹುಟ್ಟಿ ತನ್ನಿರುವ
ಉಸುರುವತನಕ,
– ಕಾವು ಭಾವಗಳ ನೋವೆಲ್ಲ ಬೇಕು
ಇದು ನನ್ನ ಆಸೆ.
(ಆಸೆ ನೀರಾಗಿ ಕರಗಲಿಕ್ಕಿಲ್ಲ)
………………………..