ಹಾಗಿದ್ದರೇ ಚಂದ
ಹದಬಿದ್ದ ಮೇಲೆ ಎದೆಯ ಪೆಟ್ಟಿಗೆಯನ್ನು
ಒಡೆದೆ. ಎರಡು ಹನಿ ಬೆವರುದುರಿ
ಹಠ ಕೊರಗಿ ಹೂವಾಗಿ ಒಣಗಿತು
ನನ್ನ ಕನಸುಗಳೆಲ್ಲ ನೆಲಕೆ ಜಾರಿ
ಹೊರಗೆ ಬಿಸಿಲಿದೆ ಒಳಗೆ ತಪ್ತರಾಗಗಳೀಗ
ದನಿತೆರೆದ ಸಮಯ ಕತ್ತಲ ಹೊತ್ತೊಣಗಿ
ಅರೆ ಬಂದೆಯಾ, ಆರಾಮಿದೀಯಾ ಎಂಬ
ವಿಚಾರಣಾ ಸ್ಥಳವಿದಲ್ಲ ಕ್ಷಮಿಸು.
ನಿನ್ನೆ ನಡೆದದ್ದಿಷ್ಟು ಓಡಿದ್ದಿಷ್ಟು ದುಃಖ
ಹರಡಿದ್ದಿಷ್ಟು ಲೆಕ್ಕ ಬರೆದಿದ್ದಿಷ್ಟು ಮರೆತಿದ್ದೇನೆ
ಹೆಬ್ಬೆರಳ ನೋವು ; ಕರೆದಿದ್ದೇನೆ ಹುಡುಗಾ
ಒಂದು ಚಾ ತಗೊಂಡು ಬಾ ಮಾರಾಯಾ….
ಎಂಬೀ ಪ್ರವರ ಸುಖ ನನಗಿರಲಿ, ಸುಖವೇ ಹೊತ್ತ
ಮೈ-ಮನಸ್ಸು-ಮನೆಗಳೇ ನಿನ್ನದಾಗಿರಲಿ ಹರಸುವೆ
ಹೃದಯ ತುಂಬಿ…. ತುಟಿಯಲ್ಲಿ ತಾವರೆ ಹೊತ್ತ
ಮಹಾನ್ ಪುತ್ರನಿಗಾಗಿ…. ಹಣೆಕುಂಕುಮ ಹಾಗಿದ್ದರೇ ಚಂದ ಬಿಡು
ಬೆನ್ನಹಿಂದಿನ ನೆರಳು ಸರಿಯುವ ದಿಕ್ಕು
ಸೂರ್ಯನಿಗೆ ವಿರುದ್ಧ ಚಂದ್ರನಿಗೆ ವಿರುದ್ಧ
ಎದುರಿಗಿರೋ ಪ್ರಖರ ಲಾಟೀನಿಗೂ ವಿರುದ್ಧ
ಸತ್ಯದೆದುರಿನ ಲೋಕ ಹೀಗೆಯೇ ಸಹಜ.
ನಾಲಿಗೆಗೆ ರುಚಿ ಬದಲಾಗುವಾಗ
ಪ್ರವಾಹವೇ ನನ್ನೊಳಗಿಳಿದು ಬರಬೇಕಿದೆ.
ಬದಲಾವಣೆಗೆ ನನ್ನ ಒಪ್ಪಿಗೆ ಪಡೆದಿಲ್ಲ. ನಾನೂ
ಶುದ್ಧ ಮೂರ್ಖ – ಗೊತ್ತಾಗದಂತೆ ಮರ
ಬೆಳೆಯುತ್ತದೆಂದು ತಿಳಿಯದವ
ಬೇರಿನ ಪರೀಕ್ಷೆ ಮಾಡಹೊರಟಿದ್ದೆ. ಈಗೆಲ್ಲ ನಿಚ್ಚಳ.
ನನ್ನ ಹಾದಿಯನ್ನು ಕಂಡಿದ್ದೇನೆ
ನಿನಗೆ ಶುಭ ಕೋರಿದ್ದೇನೆ.