ಡಾ|| ಪ್ರಸನ್ನ ನರಹರಿಯವರ `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು ಕಾಣುವುದೇ ಮಾಂಸ – ಮಜ್ಜೆಗಳ ರಚನೆಯ ಹಾಗೆ ಎಂದು ಅನ್ನಿಸುವುದಕ್ಕೆ ಇಂಥ ಪುಸ್ತಕಗಳೂ ಕಾರಣ ಇರಬಹುದು!
ಯಾಕೆಂದರೆ ಪುಸ್ತಕವನ್ನು ತೆರೆದ ಕೂಡಲೇ ಕಣ್ಣಿಗೆ ರಾಚುವುದು ಚರ್ಮರೋಗದ ಹತ್ತಾರು ಚಿತ್ರಗಳು. ಆಮೇಲೆ ಹೆಂಗಸರ ಸಾಮಾನ್ಯ ಲೈಂಗಿಕ ಕಾಯಿಲೆಗಳ ಬಗ್ಗೆ ಲೇಖನಗಳಿವೆ. ಮಧ್ಯದಲ್ಲಿ `ಮಕ್ಕಳು ಬೆಳೆದಾಗ’ ಎಂಬ ಪ್ರಬಂಧ ಕಾಣಿಸಿಕೊಳ್ಳುತ್ತದೆ. ಆಮೇಲೆ `ಗಂಡ ಹೆಂಡಿರ ನಡುವೆ ಲೈಂಗಿಕ ಅಸಮತೋಲಗಳು’ ಎಂಬ ಇನ್ನೊಂದು ದೊಡ್ಡ ಲೇಖನವನ್ನು ಕಾಣಬಹುದು. ನಂತರದ ಪುಟಗಳು ಚರ್ಮರೋಗಕ್ಕೆ ಮೀಸಲಾಗಿವೆ.
ಹಾಗಿದ್ದರೆ ಈ ಪುಸ್ತಕಕ್ಕೆ `ಗಂಡ ಹೆಂಡಿರ ನಡುವೆ’ ಎಂಬ ಪ್ರಚೋದನಾತ್ಮಕ ಶೀರ್ಷಿಕೆ ಕೊಟ್ಟಿದ್ದು ಯಾಕೆ ಎಂದು ಅರ್ಥವಾಗುವುದಿಲ್ಲ. `ಗಂಡ ಹೆಂಡಿರ ನಡುವೆ ಎಂಬ ಮಾತು ಬಂದರೆ ಸಾಮಾನ್ಯವಾಗಿ ಲೈಂಗಿಕ ಮತ್ತು ಮಾನಸಿಕ ಸಂಬಂಧಗಳ ಬಗ್ಗೆ ಇರಬಹುದಾದ ಪುಸ್ತಕ ಎಂದು ಸಾಮಾನ್ಯವಾಗಿ ಊಹಿಸಬಹುದೇನೋ. ಆದರೆ ಇಲ್ಲಿರುವುದು ಹೆಂಗಸರ ಜನನಾಂಗ ಸಂಬಂಧಿತ ಕಾಯಿಲೆಗಳ ವಿವರಣೆಗಳು. ನಿಜಕ್ಕೂ ಈ ವಿವರಣೆಗಳು ಭಯ ಹುಟ್ಟಿಸುತ್ತವೆ. ಪ್ರತಿಯೊಂದು ಪುಟದಲ್ಲೂ ಈ ಕಾಯಿಲೆಗಳನ್ನು ಸವಿವರವಾಗಿ ಬಣ್ಣಿಸಲಾಗಿದೆ. ಒಂದು ರೀತಿಯಲ್ಲಿ ಇದು ಸ್ತ್ರೀ ಜನನಾಂಗ ಕಾಯಿಲೆಗಳ ಪುಟ್ಟ ನಿಘಂಟುವಿನಂತೆಯೇ ಇದೆ.
ಮಕ್ಕಳು ಬೆಳೆದಾಗ ಎಂಬ ಲೇಖನ ಮಾತ್ರ ತೀರಾ ಬಾಲಿಶವಾಗಿದೆ. ಯಾವುದೋ ಅವಸರಕ್ಕಾಗಿ ಆಕಾಶವಾಣಿಗೆ ಬರೆದ ಅರ್ಧ ಗಂಟೆ ಭಾಷಣದ ಹಾಗಿರುವ ಈ ಲೇಖನವನ್ನು ಯಾರಾದರೂ ಬರೆಯಬಹುದು. ಈ ಪುಸ್ತಕದಲ್ಲಿ ಈ ಬಗೆಯ ಲೇಖನ ಇರದಿದ್ದರೂ ಪರವಾಗಿರಲಿಲ್ಲ!
ಗಂಡಸರಲ್ಲಿ ಕಾಣಬಹುದಾದ ಲೈಂಗಿಕ ಸಮಸ್ಯೆಗಳ ಬಗ್ಗೆ ಇರುವ ಲೇಖನವೂ ಹಾಗೆಯೇ ಅರ್ಧಂಬರ್ಧ ವಿಚಾರಗಳ ಕಂತೆಯಾಗಿದೆ. ಪುರುಷ ಜನನಾಂಗದ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಕೇವಲ ಎರಡೆರಡು ಪ್ಯಾರಾಗಳಲ್ಲಿ ಬರೆದು ಪೂರೈಸಬಹುದೆಂದು ಲೇಖಕಿ ಭಾವಿಸಿರುವುದು ಅಚ್ಚರಿ ಹುಟ್ಟಿಸುತ್ತದೆ. ಶಿಶ್ನ ನಿಮಿರದೆ ಇರುವುದು, ಶೀಘ್ರಸ್ಖಲನ, ಲೈಂಗಿಕ ನಿರಾಸಕ್ತಿ, ತಪ್ಪು ತಿಳಿವಳಿಕೆ – ಇವೆಲ್ಲವನ್ನೂ ಲೇಖಕಿ ಗಡಿಬಿಡಿಯಿಂದ ಬರೆದಿದ್ದಾರೆ.
ಲೈಂಗಿಕ ಸಂಗತಿಗಳ ಬಗ್ಗೆ ಬರೆಯುವಾಗ ನಮ್ಮ ಲೇಖಕರು ಒಮ್ಮೆಗೇ ಸಂಕೋಚ ಪ್ರಕಟಿಸುವುದೇಕೆ? ಈ ಪುಸ್ತಕದಲ್ಲಿ ಯಾಕೆ ಕೇವಲ ಚರ್ಮರೋಗದ ಚಿತ್ರಗಳಿವೆ? ಸ್ತ್ರೀಯರ ಜನನಾಂಗದ ಬಗ್ಗೆ ಮೂರು ಲೇಖನಗಳಿದ್ದರೂ ಇಲ್ಲಿ ವಿವರಣಾತ್ಮಕ ಚಿತ್ರಗಳಿಲ್ಲವೇಕೆ? ಹತ್ತಾರು ರೋಗಗಳ ಬಗ್ಗೆ ಹೆಣ್ಣುಮಕ್ಕಳು ಕೇವಲ ಪಠ್ಯವನ್ನೇ ಓದಿದರೆ ಗೊಂದಲ ಹೆಚ್ಚಾಗುವುದಿಲ್ಲವೆ?
ಚರ್ಮರೋಗಗಳು, ಸಮಸ್ಯೆಗಳ ಬಗ್ಗೆ ಲೇಖಕಿ ಬರೆದಿರುವುದು ಮಾತ್ರ ನಿಜಕ್ಕೂ ಉಪಯುಕ್ತವಾಗಿದೆ.
ಈ ಪುಸ್ತಕದ ಬಗ್ಗೆ ಒಂದು ಶ್ಲಾಘನೆಯ ಮಾತನ್ನಂತೂ ಹೇಳಲೇಬೇಕು. ಕನ್ನಡದಲ್ಲಿ ಮಹಾನ್ ಎಂಬಂಥ ಲೈಂಗಿಕ ಸಾಹಿತ್ಯ ಬಂದೇ ಇಲ್ಲ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಲೌಕಿಕತೆ ಹೆಚ್ಚಾಗಿದ್ದರಿಂದಲೋ ಏನೋ, ಲೈಂಗಿಕತೆ, ಲೈಂಗಿಕ ಸಂಬಂಧಗಳ ಬಗ್ಗೆ ಅಲ್ಲಿಂದ ಸಾವಿರಾರು ವಿವರಣಾತ್ಮಕ, ಸಚಿತ್ರ ಪುಸ್ತಕಗಳು ಪ್ರಕಟವಾಗಿವೆ. `ಕಾಮಸೂತ್ರ’ ಹುಟ್ಟಿದ ಭಾರತದಲ್ಲಿ ಮಾತ್ರ ಇನ್ನೂ ಲೈಂಗಿಕ ಶಿಕ್ಷಣ ಬೇಕೇ ಬೇಡವೇ ಎಂಬ ಒಣಚರ್ಚೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ನಮ್ಮ ಬುದ್ಧಿಜೀವಿಗಳೆಲ್ಲರೂ ಲೈಂಗಿಕ ಶಿಕ್ಷಣವೊಂದೇ ಭಾರತದ ಅತಿದೊಡ್ಡ ಚರ್ಚಾತ್ಮಕ ಸಂಗತಿ ಎಂದೇ ಸಾಬೀತುಪಡಿಸುತ್ತಾರೆ! ಲೈಂಗಿಕತೆ ಬದುಕಿನ ಒಂದು ಭಾಗವೇ ಹೊರತು ಅದೇ ಬದುಕಲ್ಲ ಎಂಬುದನ್ನು ಈ ಚರ್ಚೆ ಮಾಡುವವರೆಲ್ಲರೂ ಮರತಿದ್ದಾರೆ (ಈ ಬಗ್ಗೆ ಸದ್ಯದಲ್ಲೇ ನಾನೊಂದು ಲೇಖನವನ್ನು ಬರೆಯಲಿದ್ದೇನೆ ಎಚ್ಚರಿಕೆ!!). ಇಂಥ ಹೊತ್ತಿನಲ್ಲಿ ಲೈಂಗಿಕತೆಯ ಆಚೀಚೆ ಅಲ್ಲವಾದರೂ, ಕೆಲವೊಂದು ರೋಗಗಳ ಬಗ್ಗೆ, ಕೆಲವು ಸಾಮಾನ್ಯ ಎಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿರುವ ಲೇಖಕಿ ನಿಜಕ್ಕೂ ಅಭಿನಂದನಾರ್ಹರು. ನನ್ನ ಮುಖ್ಯ ಟೀಕೆ ಇರುವುದು ಈ ಪುಸ್ತಕದ ವಸ್ತುವಿಷಯವನ್ನು ಸರಿಯಾಗಿ ಜೋಡಿಸಿಲ್ಲ ಮತ್ತು ಕೆಲವೊಮ್ಮೆ ವಿಷಯಗಳನ್ನು ತೀರಾ ಜಾಳುಜಾಳಾಗಿ ಮೂಡಿಸಿದ್ದಾರೆ ಎಂಬ ಬಗ್ಗೆ.
ಅಂಕಿತ ಪುಸ್ತಕವು ಪ್ರಕಟಿಸಿರುವ ಈ ಪುಸ್ತಕದ ಬೆಲೆ ೭೦ ರೂಪಾಯಿಗಳು. ಅಂಕಿತದ ಉಳಿದ ಪುಸ್ತಕಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಾಯಿತು. ಶೀರ್ಷಿಕೆ ಅವಲಂಬಿತ ದರ ಎನ್ನಬಹುದೆ?