ಗಾಳಿ

ನಾನು ಮತ್ತೆ ಹೊಸಮನುಷ್ಯನಾಗಿ
ಒಳಗೆ ಖುಷಿಯೇ ವಿರಾಜಮಾನವಾಗಿ
ಇರಬೇಕೆಂದು ಬಯಸಿದೆ.

ಎದುರು ಬಂದವರ ಮುಖಕ್ಕೆ
ಬಲೆಯಾಗಿ ಹರಡಿದೆ
ಎದೆಗಳಲ್ಲಿ ಕೀಟವಾಗಿ ಹಾರಿದೆ.
ಕಣ್ಣುಗಳಲ್ಲಿ ರಕ್ತಸಮುದ್ರವಾಗಿ
ಕಾಣಿಸಿಕೊಂಡೆ
ಧ್ವನಿಪೆಟ್ಟಿಗೆಯಲ್ಲಿ
ಕಠಿಣ ಪದವಾದೆ.

ನಾನು ಬದಲಾದೆ
ಹೊಸದಿಕ್ಕಿನಿಂದ ಬೀಸಿದ ಗಾಳಿಯಾಗಿ
ನಾನು ಬದಲಾದೆ.

ಬಲೆ ಸೀಳಿ ಮುಖವೆತ್ತಿಕೊಂಡು ಬಂದವರು
ಕೀಟವನ್ನು ಹಿಡಿದಿಟ್ಟ ಕ್ಷುದ್ರರು
ಸಮುದ್ರವನ್ನು ಸಲೀಸಾಗಿ ಒರೆಸಿಟ್ಟವರು
ಪದಗಳನ್ನು ಒಡೆದವರು
ಗಹಗಹಿಸಿದರು.

ಗಾಳಿಯಲ್ಲಿ ತರಂಗಗಳು
ಸಂವಹಿಸುತ್ತವೆಯಂತೆ

ನಾನು ಬದಲಾದೆ
ಅವರೂ.

Share.
Leave A Reply Cancel Reply
Exit mobile version