ಸ್ನೇಹಪೂರ್ವಕವಾಗಿ
೧೪-೭-೧೯೮೮ 
ಬೆಂಗಳೂರು

ಹೊಸ ಮಾತುಗಳ ಕರೆದು ಮನಸಿನೊಳಗಿಟ್ಟವನೆ
ಹಳೆಯ ಮಳೆಹನಿಗಳನಿನಿತು ಗೌರವಿಸು
ಮರೆ ದುಷ್ಟ ನೆನಪುಗಳ ದರಿದ್ರ ಭಾವಗಳ ಕಡೆಗೆ
ಏನು ಎಂತೆಂದರಿತು ದಿನಗಳನುಭವಿಸು

ಹೆಜ್ಜೆಗೂ ಹಾದಿಗೂ ಸ್ನೇಹವಿರಲಿ.

ಶತಮಾನದಿಂದಷ್ಟು ಗಳಿಗೆ ಕಿತ್ತೊಗೆದದ್ದು ಸರಿ
ಇರಬಹುದು ನಿನ್ನುಸಿರು ಭವಿಯ ಹಾಗೆ
ಕಾಲ ದೇಶ ವಾಯುಮಾನ ಬದಲಾಗುತ್ತೆ ಮಗೂ
ಬರೆದ ಹಾಳೆ ಬದುಕಿತಾ ಬೆಂಕಿಯೊಳಗೆ?

ಹಾಳೆಗೂ ಬೆಂಕಿಗೂ ಸ್ನೇಹವಿರಲಿ.

ಗೆಳೆತನದ ಬೆಳೆತೆಗೆದು ಸಮೃದ್ಧನಾಗಿರುವ
ಆಕಾಂಕ್ಷೆಗಳ ಹಾಗೆಯೇ ಅಡಗಿಸದಿರು
ದಾಟಿಹೋಗುವೆನೆಂದ ಮಹನೀಯರನ್ನು
ಬೀಳ್ಕೊಡು, ತಲೆಯೆತ್ತು: ಸೂರ್ಯನಿದ್ದಾನಾ?

ಬರಕ್ಕೂ ಭಾವಕ್ಕೂ ಸ್ನೇಹವಿರಲಿ.

ಕನಸುಗಳ ಹೊರ ತೆಗೆದು ಹೊದ್ದುಕೋ ಮಾರಾಯ
ಹಕ್ಕಿ ಚಿಲಿಪಿಲಿ ಶಬ್ದ ಮರೆಯಬೇಡ.
ಮನಸುಗಳ ಮುತ್ತಿಕೋ ಅಥವಾ ಹೊತ್ತುಕೋ
ಮುಸ್ಸಂಜೆಗಳ ಮಾತ್ರ ತಡೆಯಬೇಡ.

ಮನಸಿಗೂ ಕನಸಿಗೂ ಸ್ನೇಹವಿರಲಿ.

ಮುಖದ ಲಕ್ಷಣದಲ್ಲಿ  ಮಾತು ಸೇರಿದೆಯಂತೆ
ಮೌನವೂ ಒಳಗೊಳಗೆ ಬೇಯುವಂತೆ
ನಗೂ ನೋವು ದುಃಖ ಮತ್ತಿನ್ನಿಷ್ಟು ಧೈರ್ಯ
ಹಣೆಗೆರೆಗಳುದ್ದಕ್ಕೂ ಕಾಯುವಂತೆ

ಮಾತಿಗೂ ನೋವಿಗೂ ಸ್ನೇಹವಿರಲಿ.

ಪುಸ್ತಕದ ಅಕ್ಷರಗಳೆಲ್ಲ ಕಲೆಸಿವೆ ಪದ
ಪದಗಳೂ ವಿಚಿತ್ರಾರ್ಥ ಕೊಟ್ಟು ಹೊರಟಿವೆ
ಕರೆ ನಿನ್ನ ಅಸಾಮಾನ್ಯ ದೇವತೆಯ
ಅನಾಥನನ್ನು ಅಪ್ಪುವ ಒಂದೇ ಒಂದು ಹೃದಯ

ಅಕ್ಷರಕ್ಕೂ ಅರ್ಥಕ್ಕೂ ಸ್ನೇಹವಿರಲಿ.

Share.
Leave A Reply Cancel Reply
Exit mobile version