ಹಾವೇರಿಯ ಗಲಭೆಯಲ್ಲಿ ನಮ್ಮ ಅನ್ನದಾತ ಸಿದ್ದಲಿಂಗಪ್ಪ ಚೂರಿ ಮೃತರಾದರು. ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಸಿದ್ದಲಿಂಗಪ್ಪನವರು ಪ್ರಾಣ ತೆರಬೇಕಾಯಿತು. ನಿಮಗೆ ಗೊತ್ತಿದೆಯೋ ಇಲ್ಲವೋ…. ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದ ವೆಬ್‌ಸೈಟಿನಲ್ಲಿ ರಸಗೊಬ್ಬರ ಇಲಾಖೆಯು ದೇಶದ ಎಲ್ಲ ರೈತರಿಗೆ ರಸಗೊಬ್ಬರವನ್ನು ಪೂರೈಸುವುದು ತನ್ನ ಹೊಣೆಗಾರಿಕೆ ಎಂದು ಸಾರ್ವಜನಿಕವಾಗಿ ಘೋಷಿಸಿದೆ. Making available fertilizers to farmers at the door steps on affordable prices(ರೈತರಿಗೆ ಅವರ ಮನೆಬಾಗಿಲಿಗೆ ಕೈಗೆ ಎಟಕುವ ದರದಲ್ಲಿ ರಸಗೊಬ್ಬರವನ್ನು ಪೂರೈಸುವುದು) ತನ್ನ ಒಂದು ಬದ್ಧತೆ ಎಂದು ಸಚಿವಾಲಯವು ಹೇಳಿಕೊಂಡಿದೆ. ಆದರೆ ರಸಗೊಬ್ಬರದಲ್ಲಿ ರಾಜಕೀಯ ಬೆರೆತುಹೋಯಿತು. ನಿಂತಮೆಟ್ಟಿನಲ್ಲೇ ರಾಜ್ಯ ಸರ್ಕಾರವು ಸಮಸ್ಯೆಯನ್ನು ಬಗೆಹರಿಸಬೇಕೆಂದು ಎಲ್ಲರೂ ಪಟ್ಟು ಹಿಡಿದರು.
ಅದಿರಲಿ, ಬೆಂಗಳೂರಿಗೆ ಧಾವಿಸಿದ ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿಯವರು ತಮ್ಮ ಇಲಾಖೆಯ ಜಾಲತಾಣದಲ್ಲಿ ಎಲ್ಲ ಪೂರೈಕೆ ವಿವರಗಳನ್ನೂ ಪ್ರಕಟಿಸುತ್ತಿರುವುದಾಗಿ ಹೇಳಿದರು. ಇಲಾಖೆಯ ಪತ್ರಿಕಾಹೇಳಿಕೆ ವಿಭಾಗದಲ್ಲಿ ಇರುವ ತಾಜಾ ಹೇಳಿಕೆ ೨೦೦೪ನೇ ಇಸವಿಯ ಮೇ ತಿಂಗಳಿನದು! ಈ ಪ್ರಕಟಣೆಯನ್ನು ಒಮ್ಮೆ ನೀವೆಲ್ಲ ಓದಬೇಕು: ಇವತ್ತಿನ ಸಮಸ್ಯೆಯನ್ನೇ ೨೦೦೪ರಲ್ಲಿ ಚರ್ಚಿಸಿದ ಹಾಗೆ ಕಾಣುತ್ತದೆ. ಯಾಕೆಂದರೆ ಅಂದೂ ಇದೇ ಬಗೆಯ ಸಮಸ್ಯೆ ಇತ್ತು.
In order to address problems faced by farmers, a Public Grievance Cells is also set up in the Minister’s Office and all complaints/problems received will be addressed expeditiously. Besides, a Control Room already functional in the Department will also continue to monitor the availability position in all the States. The Minister also directed the departmental officers to ensure that the fertilizers are available to the farmers in time and middle men, if any, are removed from the distribution system.
ಗೊತ್ತಾಯಿತಲ್ಲ, ನಮ್ಮ ಯು ಪಿ ಎ ಕೇಂದ್ರ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ರೈತರಿಗೆ ಭರವಸೆಗಳನ್ನು ನೀಡುತ್ತಲೇ ಬಂದಿದೆ. ಈಗ ಮಾತ್ರ ಪ್ರತಿಭಟನೆ ನಡೆಯಿತು; ಹಿಂಸಾಚಾರಕ್ಕೆ ಅಮಾಯಕ ಜೀವವೊಂದು ಬಲಿಯಾಯಿತು. ಈ ವರ್ಷವೂ ಕೇಂದ್ರಸರ್ಕಾರ ಇಂಥದೇ ಹಗುರ ಭರವಸೆ ನೀಡಿಲ್ಲ; ನಿಜಕ್ಕೂ ರಆಜ್ಯದ ರಸಗೊಬ್ಬರ ಬೇಡಿಕೆಯನ್ನು ಪೂರೈಸುತ್ತದೆ ಎಂದು ಆಶಿಸೋಣ.
ನನ್ನ ಅಂಕಣದಲ್ಲಿ ರಾಜಕೀಯ ಚರ್ಚೆಯನ್ನು ಮಾಡುವುದಿಲ್ಲ ಎಂದಿದ್ದೆ. ನಾನು ಬರೆಯುತ್ತಿರುವುದು ರಾಜಕೀಯವಲ್ಲ; ರಾಜಕೀಯ ಬದ್ಧತೆಯು ಪೊಳ್ಳುಘೋಷಣೆಯಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಆಡಳಿತ ನಡೆಸುವಾಗ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದಾಗಬಾರದು.
ಕೊನೆಗೆ ಕಷ್ಟಪಟ್ಟು ಜಾಲತಾಣದ ಒಳಗೆಲ್ಲ ಹುಡುಕಾಡಿದ ಮೇಲೆ ರಸಗೊಬ್ಬರದ ಉತ್ಪಾದನೆಯ ತಾಜಾ ವಿವರಗಳು ಸಿಗುತ್ತವೆ: ಅವರ ಪ್ರಕಾರ ರಸಗೊಬ್ಬರ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲೇ ಇದೆಯೇ ಹೊರತು ಯಾವುದೇ ಕೊರತೆ ಇಲ್ಲ! ಹಾಗಾದರೆ ರೈತರಿಗೆ ಯಾಕೆ ಅದನ್ನು ತಲುಪಿಸಿಲ್ಲ ಎಂಬುದಕ್ಕೆ ಜಾಲತಾಣದಲ್ಲಿ ಎಲ್ಲೂ ಉತ್ತರ ಸಿಗುವುದಿಲ್ಲ.
ಫರ್ಟಿಲೈಸರ್ ಅಸೋಸಿಯೇಶನ್ ಆಫ್ ಇಂಡಿಯಾ ಎಂಬ ಇನ್ನೊಂದು ವೆಬ್‌ಸೈಟನ್ನು ಉಪಯುಕ್ತ ಲಿಂಕ್ ಎಂದು ರಸಗೊಬ್ಬರ ಇಲಾಖೆ ಹೇಳಿತ್ತು. ಸರಿ, ಅದನ್ನೂ ನೋಡೋಣ ಎಂದರೆ ಈ ವೆಬ್‌ಸೈಟ್ (www.faidelhi.org)ಸಿಗುವುದೇ ಇಲ್ಲ. ಕೊನೆಗೆ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ದಾಖಲಾದ ಪುಟಗಳ ಮೂಲಕ ಈ ಜಾಲತಾಣವನ್ನು ವೀಕ್ಷಿಸಿದಾಗ ಕೆಲವು ಸಂಗತಿಗಳು ಗೊತ್ತಾದವು:
ಈ ಜಾಲತಾಣದಲ್ಲಿ ಪಟ್ಟಿಯಾಗಿರುವ ರಸಗೊಬ್ಬರ ಉತ್ಪಾದನೆಯ ವಿವರಗಳು ಕೇವಲ ನೋಂದಾವಣೆಯಾದವರಿಗೆ ಮಾತ್ರ ದೊರಕುತ್ತದೆ. ಇಲ್ಲವಾದರೆ ಈ ಮಾಹಿತಿಗಳು ಸಿಗುವುದೇ ಇಲ್ಲ.
ಇಲ್ಲಿ ಸರ್ಕಾರದಿಂದ ಹೊರಟ ಹಲವು ಸುತ್ತೋಲೆಗಳಿವೆ. ಅವೂ ಪುಕ್ಕಟೆ ಸಿಗುವುದಿಲ್ಲ; ನೀವು ದುಡ್ಡು ಬಿಚ್ಚುವುದು ಅನಿವಾರ್ಯ.
ಸರಿ ಎಂದು ಮತ್ತೆ ರಸಗೊಬ್ಬರ ಇಲಾಖೆಗೆ ಬಂದರೆ ಅಲ್ಲಿ ಸುತ್ತೋಲೆಗಳೇ ಸಿಗುವುದಿಲ್ಲ. ವಾರ್ಷಿಕ ವರದಿಯನ್ನು ನೋಡೋಣ ಎಂದರೆ ೨೦೦೬-೦೭ರದ್ದು ಸಿಗುತ್ತದೆಯೇ ಹೊರತು ೨೦೦೭-೦೮ರದ್ದಲ್ಲ. ರಸಗೊಬ್ಬರ ಉತ್ಪಾದನೆ ಪ್ರಮಾಣದ ವಿವರಗಳು ೨೦೦೬ಕ್ಕೇ ಕೊನೆಗೊಳ್ಳುತ್ತವೆ.
ರಸಗೊಬ್ಬರದಂಥ ಸಮಸ್ಯೆಗಳು ಬಂದಾಗ ಇಂಥ ಮಾಹಿತಿಗಳನ್ನು ಹುಡುಕಲು ಪತ್ರಕರ್ತರು ಹೊರಡುವುದು ಸಾಮಾನ್ಯ. ಯಾವಾಗಲೂ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ಪಡೆಯಲು ಆಗುವುದೂ ಇಲ್ಲ. ಇದಕ್ಕೇ ವೆಬ್‌ಸೈಟ್‌ಗಳನ್ನು ಯಾವಾಗಲೂ ತಾಜಾ ಮಾಹಿತಿಯಿಂದ ತುಂಬಿಸಿರಬೇಕು. ದೇಶದ ಯಾವುದೇ ಮೂಲೆಯಲ್ಲಿ ಇರುವವರು ಇನ್ನಾವುದೇ ಮೂಲೆಯ ಸಮಸ್ಯೆಯ ಬಗ್ಗೆ ಮೂಲಮಾಹಿತಿ ಪಡೆಯಲು ವೆಬ್‌ಸೈಟ್‌ಗಳು ಅತ್ಯಂತ ಪ್ರಯೋಜನಕಾರಿ.
ಇದನ್ನೇ ಈ ಗವರ್ನೆನ್ಸ್‌ನ ಭಾಗವಾಗಿ ತೆಗೆದುಕೊಂಡು ನಮ್ಮ ಎಲ್ಲ ಸರ್ಕಾರಿ ಜಾಲತಾಣಗಳನ್ನು ತಾಜಾ ಮಾಹಿತಿಗಳಿಂದ ಸಮೃದ್ಧಗೊಳಿಸಿದರೆ ಹೇಗಿರುತ್ತದೆ ಯೋಚಿಸಿ. ರಾಜ್ಯ ಸರ್ಕಾರಗಳಾಗಲೀ, ಕೇಂದ್ರವೇ ಆಗಲಿ, ಈ ಗವರ್ನೆನ್ಸ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಬರೀ ಮಾಹಿತಿಯಷ್ಟೇ ಅಲ್ಲ, ಹಲವು ಕಾಮಗಾರಿಗಳೂ ಪಾರದರ್ಶಕವಾಗಿ ಅಭಿವೃದ್ಧಿಯ ಹಾದಿ ಸುಗಮವಾಗುತ್ತದೆ. ಹಾವೇರಿಯ ಜಿಲ್ಲಾಧಿಕಾರಿಗಳ ದೂರವಾಣಿ ಸಂಖ್ಯೆಯಿಂದ ಹಿಡಿದು ಸಿದ್ದಲಿಂಗಪ್ಪ ಚೂರಿಯವರ ಗುರುತಿನ ಚೀಟಿವರೆಗೆ ಈ ಗವರ್ನೆನ್ಸ್‌ನ ಸಮರ್ಥ ಬಳಕೆ ಸಾಧ್ಯವಿದೆ.
ಏನೇ ಇರಲಿ, ಸಿದ್ದಲಿಂಗಪ್ಪ ನಮ್ಮ ನಡುವೆ ಇಲ್ಲ; ಅವರ ನೆನಪಿನಲ್ಲಿ ನಾವು ಮತ್ತಷ್ಟು ಎಚ್ಚರಿಕೆ ವಹಿಸೋಣ. ರೈತರನ್ನು ಸದಾ ಗೌರವಿಸೋಣ. ಅವರಿಗೆ ಉಪಯೋಗವಾಗಲೆಂದು ತಂತ್ರಜ್ಞಾನವನ್ನು ಬಳಸೋಣ.
ರೈತರಿಗೆ ರಸಗೊಬ್ಬರ ಕೊಡುವುದಕ್ಕೆ, ಪತ್ರಕರ್ತರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ.