ಸಿ. ಅಶ್ವಥ್ ಸರ್, ಈ ಉದ್ಧಟತನಕ್ಕೆ ನನ್ನನ್ನು ಮನ್ನಿಸಿ!

ಯಾಕೆಂದರೆ ನನಗೆ ನಮ್ಮೆಲ್ಲರ ಮೆಚ್ಚಿನ ಗಾಯಕ ಸಿ. ಅಶ್ವಥ್ ಮೇಲೆ ತುಂಬಾ ಸಿಟ್ಟು ಬಂದಿದೆ. ಹಾಗಂತ ಈ ಅಂಕಣ ಓದಿ ಅವರಿಗೆ ಸಿಟ್ಟು ಬರದಿದ್ದರೆ ಸಾಕು! ಈ ಲೇಖನದಲ್ಲಿ ಎತ್ತಿರುವ ಲೋಪಗಳು ಕೇವಲ ಸಂಗೀತ ವಿದ್ಯಾರ್ಥಿಗಳಿಗೆ ಮಾತ್ರವೇ ಅರ್ಥವಾಗುತ್ತವೆ ಎಂಬುದು ನನಗೆ ಗೊತ್ತಿದೆ. ಆದರೆ `ಕಲಿ – ಯುಗ' ಅಂಕಣದಲ್ಲಿ ಕಲಿಕೆಯ ಈ ತೊಡಕುಗಳನ್ನು ಹೇಳಿಕೊಂಡರೆ ತಪ್ಪಿಲ್ಲ ಎನ್ನಿಸಿ ಬರೆದಿದ್ದೇನೆ.

 

೧೯೯೭ರಲ್ಲಿ ಅವರು `ಸ್ವರ ಮಾಧುರಿ' ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಅವರೇ ಸಂಗೀತ ನೀಡಿದ ೧೫೫ ಹಾಡುಗಳಿಗೆ ಸ್ವರ ಪ್ರಸ್ತಾರ ಹಾಕಿದ್ದ ಒಂದು ಅಚ್ಚುಕಟ್ಟಾದ ಮತ್ತು ಸುಗಮ ಸಂಗೀತಾರ್ಥಿಗಳಿಗೆ ತುಂಬಾ ಪ್ರಯೋಜನವಾಗಿದ್ದ ಪುಸ್ತಕವದು. ಇದೇ ಪುಸ್ತಕದ ಪರಿಷ್ಕೃತ ಆವೃತ್ತಿಯನ್ನು ಅವರು ೨೦೦೭ರಲ್ಲಿ ತಂದಿದ್ದಾರೆ , ೨೪೦ ಹಾಡುಗಳೊಂದಿಗೆ. ಹತ್ತು ವರ್ಷಗಳಲ್ಲಿ ಎಷ್ಟು ಬದಲಾವಣೆಯಾಗಿದೆ ಎಂzರೆ ಹೊಸ ಪುಸ್ತಕವು ಹಳೆ ಪುಸ್ತಕದ ಎದುರು ಪೂರಾ ಮಾಸಿಹೋಗಿದೆ!
ಸಾಮಾನ್ಯವಾಗಿ ಎರಡನೇ ಮುದ್ರಣ, ಎರಡನೇ ಆವೃತ್ತಿ ಎಂದಕೂಡಲೇ ನಾವು ಹಿಂದಿನ ಪ್ರಕಟಣೆಗಿಂತ ಹೆಚ್ಚಿನದನ್ನೇನೋ ನಿರೀಕ್ಷಿಸುತ್ತೇವೆ. ಒಂದಷ್ಟು ತಪ್ಪುಗಳ ತಿದ್ದುಪಡಿ, ಹೆಚ್ಚು ಮಾಹಿತಿಗಳು, ಹೀಗೆ ಹೊಸ ಪುಸ್ತಕದಲ್ಲಿ ಏನಾದರೂ ಹೊಸತು ಸಿಗಬಹುದು ಎಂದು ಕಣ್ಣು ಹಾಯಿಸುತ್ತೇವೆ. ಆದರೆ ಅಶ್ವತ್ಥರ ಈ ಹೊಸ ಪ್ರಕಟಣೆಯಲ್ಲಿ ಹೆಚ್ಚು ಹಾಡುಗಳಿದ್ದರೂ, ಹೆಚ್ಚು ಲೋಪಗಳು, ಅನುಮಾನಗಳು ನುಸುಳಿವೆ.
ಉದಾಹರಣೆಗೆಂದು ಕೆಲವನ್ನು ಹೇಳಬಯಸುತ್ತೇನೆ: `ಎಲ್ಲೋ ಹುಡುಕಿದೆ ಇಲ್ಲದ ದೇವರ' – ಈ ಹಾಡಿಗೆ ಕೋಮಲ ಧೈವತ ಇದ್ದರೇಚೆಂದ ಎಂದು ನನಗೆ ಅನ್ನಿಸಿತ್ತು. ಆದರೆ ಹೊಸ ಪುಸ್ತಕದಲ್ಲಿ ಶುದ್ಧ ಧೈವತವಿದೆ. `ಯಾವುದೀ ಹೊಸ ಸಂಚು' ಹಾಡಿನಲ್ಲಿ `ದೀಪವುರಿದು' ಸ್ವರ ಪ್ರಸ್ತಾಪ ಬದಲಾಗಿದೆ. `ದೀಪವೂ ನಿನ್ನದೆ' ಹಾಡಿನ ತಾಳವೇ ಬದಲಾಗಿದೆ. `ದಾರಿ ಯಾವುದಯ್ಯಾ' ಹಾಡಿನ ಶ್ರೇಣಿ ಬ&#3238
;&
#3250;ಾಗಿದೆ. `ಹಾವು ತುಳಿದೇನೇ' ಹಾಡಿನಲ್ಲಿ `ಮಾನಿನಿ' ಪದಕ್ಕೆ `ದಾಪಪ' ಬದಲು `ದಪಪಾ' ಬಂದಿದೆ. `ಕೂ ಕೂ ಎನುತಿದೆ' ಹಾಡಿನಲ್ಲಿ 'ವರವು' ಪದದ ಪ್ರಸ್ತಾರ ಬದಲಾಗಿದೆ. `ಕೋಳೀಯೇ ನೀನು ಕೋಳೀಯೇ' ಹಾಡಿನಲ್ಲಿ `ಬಲ್ಲಿದ ಯಜ್ಞಕ್ಕೆ' ಪ್ರಸ್ತಾರದಲ್ಲಿ ಅನಗತ್ಯವಾಗಿ ತಾರ ಸಪ್ತಕದ `ನಿ' ನುಗ್ಗಿದೆ. `ಶಿವಸುಂದರ ಸಮ' ಹಾಡಿನಲ್ಲಿ ಕೋಮಲ ಋಷಭದ ಬದಲಿಗೆ ಶುದ್ಧ ಋಷಭ ಬಳಕೆ ಸರಿಯೆ?
`ಶ್ರಾವಣಾ ಬಂತು ಶ್ರಾವಣಾ' ಹಾಡಿನಲ್ಲಿ `ಬನ'ದ ಪ್ರಸ್ತಾರ `ನಿಸ'ವೊ? ಅಥವಾ `ಸನಿ'ಯೊ? `ಸಿರಿಗೆರೆಯ ನೀರಲ್ಲಿ' ಹಾಡಿನಲ್ಲಿ ಅನ್ಯಸ್ವರ `ಶುದ್ಧ ಮ'ದ ಉಲ್ಲೇಖ ಎರಡೂ ಆವೃತ್ತಿಗಳಲ್ಲಿ ಇಲ್ಲ. `ಮೊದಲ ದಿನ ಮೌನ' ಹಾಡಿನ ಎರಡನೇ ಪ್ಯಾರಾದಲ್ಲಿ ಅನ್ಯಸ್ವರ `ರಿ' ನಾಪತ್ತೆಯಾಗಿದೆ. `ದೀಪವೂ ನಿನ್ನದೆ' ಹಾಡಿನ ಅವರೋಹದಲ್ಲಿ ಕೋಮಲ ಧೈವತದ ಬದಲು ಶುದ್ಧ ಧೈವತ ಬಳಕೆ ಸರಿಯೆ? `ನಿಜದ ಸಂತಸದಲ್ಲಿ' ಹಾಡಿನ ಕೊನೆಯ ಪ್ಯಾರಾದಲ್ಲಿ ತಾರಕ ಪ್ರಸ್ತಾರಗಳಿರುವುದು ಹೊಂದುವುದೆ? `ಇಂದು ಕೆಂದಾವರೆಯ' ಹಾಡಿನ ಮೊದಲ ಚರಣದಲ್ಲಿ ತಾರಕ ಸರಿಯೆ? `ಮೌನ ತಬ್ಬಿತು ನೆಲವ' ಹಾಡಿನಲ್ಲಿ ಅನ್ಯಸ್ವರ `ನಿ' ಬಳಕೆಯೇ ಇಲ್ಲವಲ್ಲ? `ಎದೆಯು ಮರಳಿ ತೊಳಲುತಿದೆ' ಹಾಡಿನಲ್ಲಿ ಅನ್ಯಸ್ವರ ಕೋಮಲ ನಿಷಾದದ ಉಲ್ಲೇಖವಿದ್ದರೂ ಬಳಕೆಯೇ ಆಗಿಲ್ಲ. `ನೀನು ಮುಗಿಲು, ನಾನು ನೆಲ' ಹಾಡಿನಲ್ಲಿ ಕೊನೆಯ ಸಾಲಿನ `ಗ' ಯಾವುದು? ಯಾಕೆ ಅದು ದಪ್ಪ ಅಕ್ಷರದಲ್ಲಿದೆ?
`ಯಾರವರು ಯಾರವರು' ಹಾಡಿನಲ್ಲಿ ಅನ್ಯಸ್ವರಗಳೆಂದು ನಮೂದಿತವಾದ ಕೋಮಲ ಋಷಭ ಮತ್ತು ಕೋಮಲ ನಿಷಾದಗಳು ಎಲ್ಲಿ ಬಳಕೆಯಾಗಿವೆ? ಮೊದಲ ಆವೃತ್ತಿಯಲ್ಲಿ ಈ ಹಾಡು ಶುದ್ಧ 'ಹಂಸಧ್ವನಿ' ರಾಗದಲ್ಲೇ ಇದ್ದರೆ ಚೆನ್ನಾಗಿತ್ತಲ್ಲವೆ? `ಮುಂಗಾರಿನ ಅಭಿಷೇಕಕೆ' ಹಾಡಿನಲ್ಲಿ ಅನ್ಯಸ್ವರದ ಉಲ್ಲೇಖವೇ ಆಗಿಲ್ಲವಲ್ಲ? `ಏಕೆ ಹೀಗೆ' ಹಾಡಿನಲ್ಲಿ ಶುದ್ಧ ಮತ್ತು ಕೋಮಲ ನಿಷಾದಗಳನ್ನು ಗುರುತಿಸುವುದು ಹೇಗೆ? `ಬನ್ನಿ ಭಾವಗಳೆ' ಮತ್ತು `ನನ್ನ ಇನಿಯನ ನೆಲೆಯ' ಹಾಡುಗಳ ಸ್ವರಸಂಚರಣ ವಿವರದ ಅವರೋಹಣದ `ರಿ' ಇಲ್ಲವಲ್ಲ, ಹಾಡಿನಲ್ಲಿ ಇದೆಯಲ್ಲ, ಕಾರಣ? `ನಿನ್ನ ನೀತಿ ಅದಾವ ದೇವರಿಗ

ೆ ಪ್ರೀತಿ' ಹಾಡಿನಲ್ಲಿ ಗಾಂಧಾರ ಇಲ್ಲವಲ್ಲ? `ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಹಾಗೂ `ಅಮ್ಮ ಅಮ್ಮ' ಹಾಡುಗಳಲ್ಲಿ ಅನ್ಯಸ್ವರಗಳ ಗೊಂದಲ ಏಕಿದೆ?
ನಾನು ಕೇವಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ, ಕಟಕಿಯಾಡುತ್ತಿದ್ದೇನೆ ಎಂದು ಭಾವಿಸಬೇಡಿ. ಸಂಗೀತವನ್ನು ಕಲಿಯುವಾಗ ನನಗೆ ಸ್ವರಗಳು ಬದಲಾದರೆ, ಶ್ರುತಿ ಬದಲಾದರೆ, ಯಾಕೆ ಹಾಗಾಯಿತು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಮೊದಲ ಆವೃತ್ತಿಯಲ್ಲಿ ಯಾವ ಹಾಡಿಗೆ ಯಾವ ರಾಗವನ್ನು ಯಾಕೆ ಬಳಸಲಾಗಿದೆ ಎಂದು ತಿಳಿಸಿದ ಅಶ್ವತ್ಥರು ದ್ವಿತೀಯ ಮುದ್ರಣದಲ್ಲಿ ಹಾಡುಗಳನ್ನು ಹೆಚ್ಚಿಸಿ ರಾಗದ ಹಿನ್ನೆಲೆ ಕೊಡುವುದನ್ನೇ ಮರೆತಿದ್ದಾರೆ. ಅಲ್ಲದೆ ಈ ಹೊಸ ಪುಸ್ತಕದ ಅಕ್ಷರಗಳೂ ಚಿಕ್ಕದಾಗಿವೆ. ದಪ್ಪ ಅಕ್ಷರಗಳನ್ನು ಗುರುತಿಸುವುದೇ ತ್ರಾಸು.
ಮುಖ್ಯವಾಗಿ ಪುಸ್ತಕದಲ್ಲಿ ದಪ್ಪ ಅಕ್ಷರಗಳನ್ನು ಬಳಸಿದಾಗ ಅನ್ಯಸ್ವರ ಎಂದು ಭಾವಿಸಬೇಕು ಎಂಬ ಟಿಪ್ಪಣಿಯನ್ನೇ ಈ ಪುಸ್ತಕದಲ್ಲಿ ನೀಡಿಲ್ಲ; ಮೊದಲ ಪುಸ್ತಕದಲ್ಲಿ ಈ ಟಿಪ್ಪಣಿ ಇತ್ತಲ್ಲವೆ? ಅದಲ್ಲದೆ ತಾಳಗಳಿಗೂ ಮೊದಲ ಪುಸ್ತಕದಲ್ಲಿ ಸಂಕ್ಷಿಪ್ತ ವಿವರಣೆಗಳಿದ್ದವು. ಐನೂರು ಪುಟದ ಪುಸ್ತಕಕ್ಕೆ ಇನ್ನು ಹತ್ತಾರು ಪುಟಗಳು ಹೆಚ್ಚಾದವೆ? ಎರಡನೇ ಆವೃತ್ತಿಯ ಪುಟಗಳು ಹೆಚ್ಚಿದಂತೆ ಬೆಲೆಯೂ ಹೆಚ್ಚಿದೆ, ಒಪ್ಪೋಣ. ಆದರೆ ಮೊದಲ ಆವೃತ್ತಿಯ ಹಲವು ವಿಶೇಷ ಮಾಹಿತಿಪುಟಗಳನ್ನು ಹೀಗೆ ಕತ್ತರಿಸಿದ್ದು ಸರಿಯೆ?
ಸಿ. ಅಶ್ವತ್ಥರು ಕನ್ನಡದ ಮೇರುಗಾಯಕರು. ಅವರು `ಕನ್ನಡವೇ ಸತ್ಯ' ಯೋಜನೆ ಹಾಕಿಕೊಂಡಾಗ ನಾನೂ ಅರಮನೆ ಮೈದಾನಕ್ಕೆ ಹೋಗಿ ಅವರ ರಾಗತಾಳಗಳಿಗೆ ಕುಣಿದಿದ್ದೆ. ಆಮೇಲೆ `ಕನ್ನಡವೇ ಸತ್ಯ'ದ ಬಗ್ಗೆ ವಿವಾದಗಳು ಎದ್ದಾಗ ಸುಮ್ಮನೆ ವೀಕ್ಷಿಸಿದ್ದೆ. ಒಟ್ಟಾರೆಯಾಗಿ ಅವರ ಕನ್ನಡ ಪ್ರೀತಿ ಮತ್ತು ಕನ್ನಡದ ಹಾಡುಗಳಿಗೆ ತಂದ ಹೊಸ ಗೌರವಗಳು ನನ್ನನ್ನು ಸುಮ್ಮನಾಗಿಸಿದ್ದವು.
ಐದು ವರ್ಷಗಳಿಂದ ಅವರ `ಸ್ವರ ಮಾಧುರಿ'ಯ ಮೊದಲ ಆವೃತ್ತಿಯನ್ನು ಓದುತ್ತ ಬಂದಿದ್ದ ನನಗೆ ಅವರ ಎರಡನೇ ಆವೃತ್ತಿ ಆಘಾತ ನೀಡಿದೆ. ಹಾಗಾದರೆ ಈ ಬದ&
amp;
#3250;ಾವಣೆಗಳಿಗೆ ಸೂಕ್ತ ಕಾರಣಗಳಿದ್ದರೆ ಅವನ್ನಾದರೂ ನಮೂದಿಸಬಹುದಾಗಿತ್ತು. ಕೊನೇಪಕ್ಷ ಹಿಂದಿನ ಆವೃತ್ತಿಯ ಲೋಪಗಳನ್ನು ತಿದ್ದಲಾಗಿದೆ ಎಂಬ ಒಂದು ಸಾಲಿನ ಪ್ರಕಟಣೆಯಾದರೂ ಇರಬಹುದಿತ್ತು. ಅದೂ ಇಲ್ಲ.
ನನ್ನ ಉದ್ದೇಶ ಅಶ್ವತ್ಥರನ್ನು ರೇಗಿಸುವುದೂ ಅಲ್ಲ; ಟೀಕಿಸುವುದೂ ಅಲ್ಲ; ಕಲಿಕೆಯ ಪುಸ್ತಕ ಎಂದು ಕರೆದ ಪುಸ್ತಕದ ಎರಡು ಆವೃತ್ತಿಗಳಲ್ಲಿ ಹೀಗೆ ಭಾರೀ ವ್ಯತ್ಯಾಸಗಳಿದ್ದರೆ ಶಿಕ್ಷಾರ್ಥಿಗಳಿಗೆ ಸಂಶಯ ಬರುವುದಿಲ್ಲವೆ? ಅಥವಾ ಆದ ಬದಲಾವಣೆಗಳನ್ನೆಲ್ಲ ಕಣ್ಣುಮುಚ್ಚಿ ಸ್ವೀಕರಿಸಬೇಕೆ?
ಸಂಗೀತ ಕಲಿಯುವಾಗ ಪ್ರಶ್ನೆಗಳೇ ಹುಟ್ಟದಿದ್ದರೆ ಸಂಗೀತದ ಗುರುಗಳಿಗೆ ವಿದ್ಯಾರ್ಥಿಯ ಬಗ್ಗೆ ಸಂಶಯ ಹುಟ್ಟುತ್ತದೆಯಂತೆ. ನಾನೇನು ಈ ಪ್ರಶ್ನೆಗಳನ್ನು ಕೃತಕವಾಗಿ ಹುಟ್ಟಿಸಿಲ್ಲ ಎಂಬ ವಿಶ್ವಾಸ ನನಗಿದೆ. ಇದೆಲ್ಲ ಉದ್ಧಟತನದ್ದು ಎಂದು ಅಶ್ವತ್ಥರು ಹೇಳಿದರೆ ತುಂಬಾ ಸಂತೋಷದಿಂದ ಸ್ವೀಕರಿಸುವೆ. ಮತ್ತೆ ಮತ್ತೆ ಚರ್ಚೆ ಮಾಡುವ, ಕೆಣಕುವ ಹುಂಬತನ ನನಗಿಲ್ಲ.
ಆರುನೂರು ರೂಪಾಯಿ ಕೊಟ್ಟು ಖರೀದಿಸಿದ ಪುಸ್ತಕವನ್ನು ಸೂಕ್ತವಾಗಿ ಬಳಸುವುದಕ್ಕೇ ಆಗದೆ ಉಂಟಾದ ಬೇಸರ ಮತ್ತು ಹತಾಶೆಯಿಂದ ಈ ಮಾತುಗಳನ್ನು ಬರೆದಿದ್ದೇನೆ. ಅವರು ಕೊಟ್ಟ ಹೆಚ್ಚುವರಿ ಹಾಡುಗಳು ಚೆನ್ನಾಗಿದ್ದರೂ ಯಾಕೋ.. ಕಡಿಮೆ ಹಾಡುಗಳೇ ಇದ್ದರೆ ಚೆನ್ನು ಅನ್ನಿಸುತ್ತಿದೆ…. ಅಶ್ವತ್ಥರು ಯಾಕೆ ಹೀಗೆ ಮಾಡಿದರು ಎಂದೇ ಪ್ರತಿದಿನ ಪುಸ್ತಕ ನೋಡಿದಾಗೆಲ್ಲ ಅನ್ನಿಸುತ್ತಿರುತ್ತದೆ.

Share.
Leave A Reply Cancel Reply
Exit mobile version