‘ನೀನೂ ಕಲಾವಿದ; ನಾನೂ ಕಲಾವಿದ. ಚೌಕಾಶಿ ಯಾಕೆ ಮಾಡ್ತೀಯ? ಕೊಡು ನಾನೂರಾಐವತ್ತು ’ ಬಲಬೀರ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಾಗ ನಾನು ಮಾತಾಡಲಾಗಲಿಲ್ಲ. ಬಾನ್ಸುರಿ ಏನೆಂದು ಗೊತ್ತಿಲ್ಲದೇ ಪೀಪಿ ಥರ ಊದಬೇಕೆಂದು ಯಾವುದೋ ಭಾಷೆಯ ಯಾವುದೋ ಯುವಕ ಅವನ ಬಳಿ ವಾದಿಸುತ್ತಿದ್ದ. ಅವನ ಗೆಳತಿಯಂತೂ ಹೇಗಾದರೂ ತನ್ನ ಹುಡುಗ ಬಾನ್ಸುರಿ ಬಾರಿಸಿಯೇ ಬಾರಿಸುತ್ತಾನೆ ಎಂಬ ಹುಮ್ಮಸ್ಸಿನಲ್ಲಿ ಪರ್ಸ್ ಬಿಚ್ಚುತ್ತಿದ್ದಳು. ಸಂಜೆಯ ಬಣ್ಣಗಳನ್ನು ಹೊದ್ದುಕೊಂಡ ಕನಾಟ್‌ಪ್ಲೇಸ್ ದಿಲ್ಲಿಯ ನರ-ನಾರಿಯರ ಏಕೈಕ ಶಾಪಿಂಗ್ ಏರಿಯಾ ಎಂಬಂತೆ ಬಳುಕುತ್ತಿತ್ತು.

ನಾವು – ಅಂದರೆ ನಾನು ಮತ್ತು ಬಿಲಾಸ – ಮಾತ್ರ ಒಂದಷ್ಟು ವಿಂಡೋ ಶಾಪಿಂಗ್ ಮಾಡುತ್ತ, ಸೆಖೆಯಾದಾಗೆಲ್ಲ ಎಸಿ ಅಂಗಡಿಗಳನ್ನು ಹೊಕ್ಕು ಬರುತ್ತ ದಿಲ್ಲಿಯ ಮಾನ್ಸೂನ್ ಧಗೆಯನ್ನು ಎದುರಿಸುತ್ತಿದ್ದೆವು.

ಚೆನ್ನಾಗಿ ವಾರ್ನಿಶ್ ಮಾಡಿದ ಆ ಒಂದೂವರೆ ಅಡಿ ಬಾನ್ಸುರಿಗಳು ಅಭ್ಯಂಜನಕ್ಕೆ ತಯಾರಾದ ಮಾಣಿಗಳ ತಲೆಯ ಥರವೇ ಮಿಂಚುತ್ತಿದ್ದವು. ಊದಿದರೆ ಥೇಟ್ ನಾಗರ್‌ಕೊಯಿಲ್ ಕೊಳಲಿನಂಥ ಮೆಟಲಿಕ್ ನಾದ.

ಬಲಬೀರ್‌ನ ಅಜ್ಜ ಈ ಕೊಳಲು ತಯಾರಿಸುತ್ತಾನಂತೆ. ಬೇಕಾದರೆ ಮುಂದಿನ ಸಲ ಬಂದ ಮೊದಲ ದಿನವೇ ಬಿ ಬ್ಲಾಕಿಗೆ ಬಂದು ಹೇಳಿದರೆ ಮರುದಿನವೇ ನನಗೆ ಬೇಕಾದ ವೈಟ್ ಥ್ರೀ ಬಾನ್ಸುರಿಯನ್ನು ನನ್ನೆದುರೇ ತಯಾರಿಸಿ ಕೊಡುತ್ತಾನಂತೆ. ಮೊಬೈಲ್ ಮಾತ್ರ ಇಲ್ಲವಂತೆ.

ಎರಡೇ ತಾಸುಗಳ ಮುಂಚೆ ರಾಮ್‌ಗಲಿಯನ್ನು ಹೇಗೋ ಹುಡುಕಿ ಅಲ್ಲಿದ್ದ ಬಾನ್ಸುರಿ ಕಲಾವಿದ ಕಂ ಮಾರಾಟಗಾರನನ್ನು ಕಂಡು ನಿರಾಶೆಗೆ ಪಕ್ಕಾಗಿ ಬಂದ ನನ್ನ ಮನಸ್ಸಿನಲ್ಲಿ ಇನ್ನಾವ ನಿರೀಕ್ಷೆಯೂ ಇರಲಿಲ್ಲ.

ಬಿಲಾಸ ಮಾತ್ರ ನಗುತ್ತಲೇ ಇದ್ದ.  ಸರಿ ಇದನ್ನಾದ್ರೂ ತಗೊಂಡು ಬಿಡು ಎಂದು ಒತ್ತಾಯಿಸಿದ. ಕಾಸು ಬಿಚ್ಚಿ ಎರಡೂ ಬಾನ್ಸುರಿಗಳನ್ನು ಬ್ಯಾಗಿಗೆ ಏರಿಸಿಕೊಂಡೆ.

ಎದುರಿಗೇ ಪಾಲಿಕಾ ಬಜಾರಿನ ತಲೆಯ ಮೇಲೆ ಯಾವುದೋ ವೇದಿಕೆಯಿಂದ ಮತ್ತೇರುವ ಬೀಟ್‌ಗಳು ತೂರಿಬಂದವು.  ಸರಿ ಹೋಗುವಾ ಎಂದು ಬಿಲಾಸ ಹೇಳಿದ.

ಆ ಆಂಫಿಥಿಯೇಟರಿನಲ್ಲಿ ರಾಜಸ್ಥಾನಿ ತಂಡವೊಂದು ಜಾನಪದ ಫ್ಯೂಜನ್ ಸಂಗೀತ ನೀಡುತ್ತಿದೆ. ದಿಲ್ಲಿಯ ಮುಖ್ಯಮಂತ್ರಿಯೂ ಅಲ್ಲಿ ಕೂತು ಆನಂದದಿಂದ ಮೈ ಮರೆತಿದ್ದಾರೆ. ಜನ ತಮ್ಮ ಇಷ್ಟಬಂಧುಗಳ ಜೊತೆಗೆ ಕೈ ತಟ್ಟುತ್ತ ಮೈ ಮರೆತಿದ್ದಾರೆ.

ನಾನು, ಬಿಲಾಸ  ಅಲ್ಲಿಯೇ ಜಾಗ ಮಾಡಿಕೊಂಡು ಕೂತೆವು. ಮುದ ತಂದಿದ್ದಂತೂ ನಿಜ. ತಾಳ ತಟ್ಟುವವನ ಕೈಗಳು ಹೇಗೆ ಸುಲಲಿತವಾಗಿ ಪದ ಹೇಳುವಂತೆ ಅಡ್ಡಾಡುತ್ತಿದ್ದವು… ರಾಜಸ್ಥಾನಿ ನೃತ್ಯಗಾತಿಯರು ತಮ್ಮ ಲಂಗವನ್ನು ಲಯಬದ್ಧವಾಗಿ ಏರಿಳಿಸುತ್ತ, ಅತ್ತ ಏಕತಾರಿ ಹಿಡಿದ ಸಂತ ಏರುದನಿಯಲ್ಲಿ ಹಾಡುತ್ತ, ಇತ್ತ ನುಸ್ರತ್ ಫತೇ ಅಲಿ ಖಾನ್ ನೆನಪಿಸುವ ಕಲಾವಿದ ಆಲಾಪವನ್ನೇ ಇಡೀ ಸಭಾಂಗಣದಲ್ಲಿ ಗುಂಜಿಸುತ್ತ…..

ಸಂಗೀತದ ಮದ ಎಂದರೆ ಇದು. ಈ ದಿಲ್ಲಿಯ ಈ ಬಜಾರಿನ ಈ ಗುಂಭದಲ್ಲಿ ಕೂತು, ಪಕ್ಕದಲ್ಲಿ ಬಲಬೀರನ ಕೊಳಲನ್ನು ಮುಟ್ಟಿಕೊಳ್ಳುತ್ತ ರಾಜಸ್ಥಾನದ ನಾದದಲ್ಲಿ ಮೀಯುವುದು.

ಮತ್ತೆ ಬಿಲಾಸನ ಮಂದಸ್ಮಿತ ನಗು. ಹಾಡಿನ ಹೊಡೆತಕ್ಕೆ ಸಿಕ್ಕವನ ಹಾಗೆ ಕಂಪಿಸುತ್ತಿದ್ದಾನೆ.

ಮಧ್ಯಾಹ್ನ ರಾಮಗಲಿಯ ಪ್ರೈಮರಿ ಶಾಲೆಯ ಪಕ್ಕದ ಆ ಮನೆಯನ್ನು ಹುಡುಕುತ್ತ ತಿರುಗುತ್ತಿದ್ದಾಗ ಬಿಲಾಸನ ಮುಖದಲ್ಲಿ ಬೆವರಿಳಿಯುತ್ತಿತ್ತು.  ಇಷ್ಟಾಗಿಯೂ ದಿಲ್ಲಿಗೆ ಬಂದಿದ್ದು ಈ ಮನೆಯನ್ನು ಹುಡುಕಲಿಕ್ಕೇ  ತಾನೆ? ಇಲ್ಲಿ ನನ್ನ ಕನಸಿನ ಬಾನ್ಸುರಿ ಇರಬಹುದು, ಇದ್ದೇ ಇರುತ್ತದೆ ಎಂದು ಬೆಂಗಳೂರು ಬಿಟ್ಟಾಗಲೂ ಅಂದುಕೊಂಡಿದ್ದೆ. ಆ ಕಲಾವಿದರ ವೆಬ್‌ಸೈಟಿಗೆ ಹೋಗಿ ರಾಮಗಲಿಯ ನಕಾಶೆಯನ್ನೂ ಪ್ರಿಂಟ್ ಮಾಡಿಕೊಂಡಿದ್ದೆ.

ಮೊದಲನೇ ಮಹಡಿಯಲ್ಲಿ ಇದ್ದ ಕೋಣೆಯೊಳಗೆ ಹೋದರೆ ಬಿಳಿಯ ಹಾಸಿನ ಮೇಲೆ  ಕಲಾವಿದರು ರಿಯಾಜ್ ಮಾಡುತ್ತಿದ್ದರು. ನಮ್ಮನ್ನು ನಗುಮೊಗದಿಂದ ಬರಮಾಡಿಕೊಂಡರು. ಅವರ ಕೆಲಸದಾಳು ಕೂಡಲೇ ಗಾಜಿನ ಲೋಟಗಳಲ್ಲಿ ಠಂಡೀ ಪಾನಿ ತಂದಿಟ್ಟ.

ನಾನು ಕಲಾವಿದರ ಎಡಭಾಗದಲ್ಲಿ ಕೂತೆ. ಅಲ್ಲೇ ಬಾನ್ಸುರಿಗಳನ್ನು ಸುರಕ್ಷಿತವಾಗಿಡುವ ಸಂದೂಕ ಕಾಣಿಸಿತು. ಇದರೊಳಗೇ ನನ್ನ ಬಾನ್ಸುರಿ ಇದೆ ಎಂದು ಬಲವಾಗಿ ಅನ್ನಿಸತೊಡಗಿತು.

ತಮ್ಮ ಅಸ್ಖಲಿತ ಹಿಂದಿಯಲ್ಲಿ ಕಲಾವಿದರು ನಮ್ಮನ್ನು ವಿಚಾರಿಸಿಕೊಳ್ಳುತ್ತಲೇ ಸಂದೂಕವನ್ನು ತೆರೆದರು. ಅದರಲ್ಲಿ ಸುಮಾರು ಮೂವತ್ತು ಬಾನ್ಸುರಿಗಳಿದ್ದವು.

ಎರಡು ಬಾನ್ಸುರಿಗಳನ್ನು ಹೊರತೆಗೆದ ಕಲಾವಿದರು ‘ನೋಡಿ, ಇವನ್ನು ರಾಕೇಶ್ ಚೌರಾಸಿಯಾಗೆ ಎಂದೇ ರೆಡಿ ಮಾಡಿ ಇಟ್ಟಿದ್ದೆ. ಕಳೆದ ವಾರ ನೀವು ಫೋನ್ ಮಾಡಿದ ಮೇಲೆ ನಿಮಗೇ ಕೊಟ್ಟುಬಿಡೋಣ ಎಂದು ಇಟ್ಟಿದ್ದೇನೆ’ ಎಂದು ನನ್ನ ಕೈಗೆ ಅವುಗಳನ್ನು ದಾಟಿಸಿ ‘ಬಾರಿಸಿ’ ಎಂದರು. ಹಾಗೆಂದವರೇ ತಮ್ಮ  ಕಾರ್ಡ್‌ಲೆಸ್ ಬೋರ್ಡ್ ಮತ್ತು ಮೌಸ್‌ಗಳನ್ನು ಆಡಿಸತೊಡಗಿದರು. ಅವರ ಎದುರಿಗಿದ್ದ ಕಿರು ಮೇಜಿನ ಮೇಲೆ ಎಲ್ ಸಿ ಡಿ ಮಾನಿಟರಿನಲ್ಲಿ ಎಲೆಕ್ಟ್ರಾನಿಕ್ ತಂಬೂರದ ವಿವಿಧ ಅವಕಾಶಗಳು ತೆರೆದುಕೊಳ್ಳತೊಡಗಿದವು. ಯಾವ್ಯಾವುದೋ ಫ್ರಿಕ್ವೆನ್ಸಿಗಳನ್ನು ಏರಿಳಿಸುತ್ತ, ತಂಬೂರಿಯ ನಾದವನ್ನು ಹಾಗೇ ಹಾಗೇ ಮೆದುವಾಗಿ ಬದಲಿಸುತ್ತ ಹೋದರು. ನಾನು ಗಡಬಡೆ ಮಾಡಿಕೊಂಡು ಬಾನ್ಸುರಿ ಹಿಡಿದು ಸುರ್ ಹೊರಡಿಸುವ ಯತ್ನಕ್ಕೆ ತೊಡಗಿದ್ದೆ.

ಏನು ಮಾಡಿದರೂ ತಾರ ಷಡ್ಜದಲ್ಲಿ ನನಗೆ ನಿಲ್ಲಲಾಗಲಿಲ್ಲ. ಉಸಿರೇ ಬರಲಿಲ್ಲವೋ, ಬಾನ್ಸುರಿಯೇ ಸರಿಯಿಲ್ಲವೋ ಗೊತ್ತಾಗಲಿಲ್ಲ. ಅದಿರಲಿ, ಬಾನ್ಸುರಿಗೆ ಬಳಸಿದ ಬಿದಿರಿನ ಮೇಲೇ ನನ್ನ ಅನುಮಾನಗಳು ಹೆಚ್ಚಾಗಿದ್ದವು. ನನ್ನ ಹತ್ತಿರ ಇರೋ ಅಸಾಮಿನ ಬಾನ್ಸುರಿ ಇದಕ್ಕಿಂತ ಛಂದ ಇಲ್ಲವೇ…… ಗುರುಗಳು ಕೊಟ್ಟಿರೋ ಶಿರಸಿ ಮೇಕ್ ಬಾನ್ಸುರಿಯ ನಾದ ಎಷ್ಟು ಖುಷಿ ಕೊಟ್ಟಿತ್ತು…. ನಾನು ಮನಸ್ಸಿನಲ್ಲೇ ಹೋಲಿಕೆಗಳಲ್ಲಿ ಮುಳುಗಿದ್ದೆ. ಹೋಗಲಿ, ಗುರುಗಳ ಜೊತೆ ಅಭ್ಯಾಸ ಮಾಡುವಾಗ ಬಳಸೋ ಬಾನ್ಸುರಿಯೂ ಇದೇ ಥರ ಪಚ್ಚಬಾಳೆ ಕಚ್ಚುಗಳನ್ನು ಹೊಂದಿದ್ದರೂ ಎಂಥ ಗುಂಜನ ನೀಡುತ್ತದಲ್ಲ…..

ಸರ್, ಯಾಕೋ ತಾರ ಷಡ್ಜ ಬರುತ್ತಿಲ್ಲ ಸರ್ ಎಂದು ಹೇಳುವಾಗ ಎಸಿ ರೂಮಿನಲ್ಲೂ ಬೆವರಿದ್ದೆ. ಆ ಕಲಾವಿದರು ಕಣ್ಣು ಕಿರಿದು ಮಾಡಿ ನನ್ನಿಂದ ಬಾನ್ಸುರಿಯನ್ನು ಕಸಿದುಕೊಂಡರು. ಅವರೇ ಬಾನ್ಸುರಿಯನ್ನು ಹಿಡಿದು ನಾದ ಹೊಮ್ಮಿಸಲು ಶುರು ಮಾಡಿದರು. ಅವರಿಗೂ ತಾರ ಷಡ್ಜದಲ್ಲಿ ತುಂಬಾ ಹೊತ್ತು ನಿಲ್ಲಲಾಗಲಿಲ್ಲ. ಅದನ್ನು ಬಿಟ್ಟು ಇನ್ನೂ ಮೇಲಿನ ಸಪ್ತಕಕ್ಕೆ ಹೊರಟರು. ಅತ್ತ ಕರ್ನಾಟಕಿಯೂ ಅಲ್ಲದ, ಇತ್ತ ಹಿಂದುಸ್ತಾನಿಯೂ ಅಲ್ಲದ ಧ್ವನಿ ಹೊಮ್ಮತೊಡಗಿತ್ತು. ಅರೇಬಿಯನ್ ಫ್ಲೂಟ್‌ಗಳಿಂದಲೂ, ಜಪಾನೀ ಫ್ಲೂಟ್‌ಗಳಿಂದಲೂ, ಚೀನೀ ಕೊಳಲುಗಳಿಂದಲೂ ಇಂಥ ನಾದ ಹೊಮ್ಮಿಸುವುದಕ್ಕೆ ಸಾಧ್ಯವೇ ಇಲ್ಲ  ಎಂಬಂಥ ವಿಚಿತ್ರ ಸ್ವರಗಳು ಬಂದವು.

ಕಲಿಯುವುದರಲ್ಲಿ ಇನ್ನೂ ಬಚ್ಚಾ ಆಗಿದ್ದ ನಾನು ಹೆಚ್ಚು ಮಾತನಾಡುವಂತಿರಲಿಲ್ಲ. ಈ ಬಾನ್ಸುರಿಯನ್ನೇ ಕೊಂಡುಬಿಡಬೇಕು, ನನ್ನ ಹೊಸ ಮಿತ್ರರ ಮನೆಯಲ್ಲಿ ಬೈಠಕ್ ಮಾಡಿ ಅಶ್ವತ್ಥರು ಹೇಳಿಕೊಟ್ಟಂತೆ ‘ಕಾಣದಾ ಕನಸಿಗೇ…. ಹಂಬಲಿಸಿದೆ ಮನ’ ಹಾಡನ್ನು ಹೇಗಾದರೂ ತಾಳಕ್ಕೆ ತರಬೇಕು ಎಂದೆಲ್ಲ ನಾನು ನಿರ್ಧರಿಸಿಯೇ ಬೆಂಗಳೂರಿನಿಂದ ವಿಮಾನ ಹತ್ತಿ ಇಲ್ಲಿಗೆ ಬಂದಿದ್ದು…..

ಕಲಾವಿದರು ತಮ್ಮ ಕೊಳಲು ತಯಾರಿ ಸಾಧನಗಳ ಪುಟ್ಟ ಪೆಟ್ಟಿಗೆಯನ್ನು ತೆರೆದು ಷಡ್ಜದ ರಂಧ್ರವನ್ನು ಉಜ್ಜಲು ಶುರುಮಾಡಿದರು.  ನಿಷಾದವನ್ನೂ ಬಿಡಲಿಲ್ಲ. ಕೊನೆಗೆ ಪಂಚಮಕ್ಕೂ ಬಂದರು.  ಮತ್ತೆ ತುಟಿ ಹಚ್ಚಿದರು. ಉಹು. ಸರಿಯಾಗಲೇ ಇಲ್ಲ.

ನಾನು ಸೋಮವಾರ ಬರ್‍ತೇನೆ ಸರ್ ಎಂದು ನಮಸ್ಕರಿಸಿ ಹೊರಬಂದಾಗ ಬಿಲಾಸ ಮತ್ತೆ ನಸುನಗುತ್ತಿದ್ದ.

‘ಖನ್ನಾ ಮಾರ್ಕೆಟಿನಲ್ಲಿ ಒಂದೇ ಒಂದು ಮ್ಯೂಸಿಕ್ ಶಾಪ್ ಇದೆ. ನೀವು ಅಲ್ಲಿಗೆ ಹೋಗಿ ಹುಡುಕಿ; ನಾನು ಅಲ್ಲೇ ಲೋಧಿ ಗಾರ್ಡನ್‌ಗೆ  ವಾಕಿಂಗ್  ಬರುತ್ತೇನೆ’ ಎಂದು ದಿಲ್ಲಿಯ ಹಳೆ ಗೆಳೆಯ ರಮೇಶ ಫೋನಾಯಿಸಿ ಅಲ್ಲಿಗೂ ಹೋಗಿ ನಿರಾಶೆ ಅನುಭವಿಸಿದ್ದೆ. ಆ ಅಂಗಡಿಯಲ್ಲಿದ್ದ ಒಂದೇ ಒಂದು ಸುಮಾರಿನ ಕೊಳಲನ್ನು ಇಷ್ಟವಿಲ್ಲದೇ ಕೊಂಡಿದ್ದೆ.

ಕೊನೆಗೆ ದರಿಯಾ ಗಂಜ್‌ಗೆ ಹೋಗಿ ಹುಡುಕಿದೆ. ಸ್ವಾತಂತ್ರ್ಯ ದಿನದ ಭದ್ರತೆ ಹಿನ್ನೆಲೆಯಲ್ಲಿ ಎಲ್ಲ ಮ್ಯೂಸಿಕ್ ಅಂಗಡಿಗಳು, ಪುಸ್ತಕಸಂತೆ ಬಂದ್ ಆಗಿದ್ದವು. ‘ಮ್ಯೂಸಿಕ್ ಶಾಪ್’ ಭಾಗೀರಥಿ ಮಾರ್ಕೆಟಿನಲ್ಲಿ ಇದೆ ಎಂದು ಟ್ಯಾಕ್ಸಿ ಡ್ರೈವರ್ ತಂದು ಬಿಟ್ಟ. ಅಲ್ಲಿ ಇದ್ದದ್ದೆಲ್ಲ ಮ್ಯೂಸಿಕ್ ಸಿಡಿಗಳ ಬಜಾರ್.

ಈ ರಾಣಾ ಹೀಗೆಯೇ. ನಿನ್ನೆಯಷ್ಟೇ ಚಹಾ ಕುಡಿಯಬೇಕು ಎಂದಾಗ ಎನ್ ಎಚ್ ಬಿ ಎಂಬ ಚಹಾ ಪುಡಿ ಅಂಗಡಿಗೆ ನಮ್ಮನ್ನು ಕರೆದೊಯ್ದಿದ್ದ. ಅಲ್ಲಿ ಇದ್ದದ್ದೆಲ್ಲ ವಿಶೇಷ ಚಹಾ ಪುಡಿಗಳು. ಒಂದಕ್ಕಿಂತ ಒಂದು ಘಮಘಮ ಎನ್ನುತ್ತಿದ್ದವು. ನೂರು ಗ್ರಾಮಿಗೂ ಎರಡು ಸಾವಿರ ರೂಪಾಯಿ ಇರಬಹುದು ಎಂದು ನಮಗೆ ಅಲ್ಲೇ ಗೊತ್ತಾಗಿತ್ತು. ನಾನು – ಬಿಲಾಸ ಅಲ್ಲೇ ಮಸಾಲಾ ಚಹಾ ಕುಡಿದು ಹೊರಬಂದಿದ್ದೆವು.

ಬಿಲಾಸ ಎಲ್ಲ ಮೂರು ದಿನವೂ ನನ್ನ ಜೊತೆಗೆ ನಸುನಗುತ್ತಲೇ ತಿರುಗಿದ. ದೇಸಿ ತುಪ್ಪದಿಂದ ಮಾಡಿದ ರಾಜಾ ಕಚೋರಿಯನ್ನು ತಿನ್ನುವಾಗ, ಅಕ್ಷರಧಾಮದಲ್ಲಿ ಚೋಲಾ ಬತೂರಾವನ್ನು ಕತ್ತರಿಸುವಾಗ, ಶರವಣ ಹೋಟೆಲಿನಲ್ಲಿ ಅಪ್ಪಟ ತಮಿಳು ಸಾರನ್ನು ಹೀರುವಾಗ, ರೂಮಿಗೆ ಬಂದು ಬಲಬೀರ ಕೊಟ್ಟ ಕೊಳಲಿನಲ್ಲಿ ಯಾವುದೋ ಭಾವಗೀತೆಯನ್ನು ದಿಕ್ಕುದೆಸೆ ಇಲ್ಲದವನಂತೆ ಬಾರಿಸಿದಾಗ, ಬಿಲಾಸ ಪಕ್ಕದಲ್ಲೇ ಕೂತು ನಸುನಗುತ್ತಿದ್ದ.

ಎಷ್ಟು ಸಲ ನಾನು ಬಿಲಾಸನ ನಗುವಿನಲ್ಲಿ ಇರುವ ಅರ್ಥ ಏನೆಂದು ಹುಡುಕಲು ಹೋಗಿದ್ದೇನೆ; ಅರ್ಥವಾಗಿಲ್ಲ.

ಈ ಥರ ಯಾಕೆ ನನಗೆ ಬಿಲಾಸನ ಬಗ್ಗೆ ಫ್ಲಾಶ್‌ಬ್ಯಾಕ್ ಯೋಚನೆಗಳು ಮುತ್ತಿಕೊಳ್ಳುತ್ತವೆ ಎಂದು ಎಷ್ಟೋ ಸಲ ಯೋಚಿಸಿದ್ದೇನೆ. ಕಾರಿನಲ್ಲಿ ಬೆಂಗಳೂರು ತಿರುಗುವಾಗ ಬಿಲಾಸ ಮುತ್ತಿಕೊಳ್ಳುತ್ತಾನೆ. ಬೈಕಿನಲ್ಲಿ ಕ್ಲಾಸಿಗೆ ಹೋಗುವಾಗ ಸಿಗ್ನಲ್ಲಿಗೆ ಸಿಕ್ಕಿಕೊಂಡರೂ ಬಿಲಾಸ ಮತ್ತೆ ಮತ್ತೆ ನೆನಪಾಗುತ್ತಾನೆ. ಕೆಲಸವೇ ಇಲ್ಲದ ಆಫೀಸಿಗೆ ಹೋದರೆ ಬಿಲಾಸನ ದನಿ ಕೇಳಿಸುತ್ತದೆ.

ನನ್ನ ಕ್ಯಾಸೆಟ್ಟುಗಳಲ್ಲಿ ಯಾವ ಯಾವ ಯಾವ ರಾಗಗಳ ಚೀಸ್‌ಗಳಿವೆ ಎಂದು ಹುಡುಕುವಾಗೆಲ್ಲ ಬಿಲಾಸನ ಮುಖ ಮಸಕು ಮಸುಕಾಗಿ ಕಾಣುತ್ತದೆ.

‘ನೀನು ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ’ ಎಂದು ಬಿಲಾಸ ಹೇಳಿದಂತೆ  ಅನ್ನಿಸುತ್ತದೆ. ತಂಬೂರಿ ಹಾಕದೆ, ಶ್ರುತಿ ಬಾಕ್ಸನ್ನೂ  ಆನ್ ಮಾಡದೆ ಕೊಳಲು ಹಿಡಿಯುವ ದುಷ್ಟ ಬುದ್ಧಿ ಬಂದಾಗೆಲ್ಲ ಬಿಲಾಸ ನನ್ನನ್ನು ಎಚ್ಚರಿಸಿದ್ದಾನೆ.

ಒಂದು ಸಲ ಬಿಲಾಸ ನನ್ನನ್ನು ಹದವಾಗಿಯೇ ಬೆದರಿಸಿದ್ದ. ಅವತ್ತು ನಾನು ನನ್ನ ನಾಗರ್‌ಕೊಯಿಲ್ ಕೊಳಿನಿಂದ ಭೂಪಾಲಿ ರಾಗವನ್ನು ಹಾಡುತ್ತಿದ್ದೆ. ಹೇಗೋ ಗೊತ್ತಿಲ್ಲ….. ಈ ಕೊಳಲಿನ ಷಡ್ಜವೂ, ನಿತ್ಯ ಅಭ್ಯಾಸದ ಕೊಳಲಿನ ಕೋಮಲ ಋಷಭವೂ ಒಂದೇ ಇದೆಯಲ್ಲ ಅನ್ನಿಸಿದ್ದೇ ತಡ….. ಅದನ್ನೇ ಹಿಡಿದು ಏನೇನೋ ಪ್ರಯೋಗ ಮಾಡುತ್ತ ಹೊರಟೆ. ಅಭ್ಯಾಸದ ಶ್ರುತಿಯಲ್ಲೇ ನಾಗರ್‌ಕೊಯಿಲ್ ಬಿದಿರಿನ ಕೊಳಲಿನ ಸ್ವರ ಸ್ಥಾನಗಳನ್ನು ಬದಲಿಸುತ್ತ ಹೋದೆ.

ಆಗ ಬಿಲಾಸ ಹಠಾತ್ತನೆ ಬಂದಿದ್ದ.

‘ಬೇಕಾದರೆ ಭೂಪಾಲಿಯೋ, ಹಂಸಧ್ವನಿಯೋ, ಅಭ್ಯಾಸ ಮಾಡು. ಸುಮ್ಮನೆ ಈ ಉಸಾಬರಿ ಬೇಡ’ ಎಂದು ಬಿರುಗಣ್ಣಿಂದ ನೋಡಿ ಸರಸರ ಹೊರಟುಹೋಗಿದ್ದ.

ನನಗೆ ಬಿಲಾಸನನ್ನು ನಿಯಂತ್ರಿಸಲು ಆಗಲೇ ಇಲ್ಲ. ಆತ ಹೊರಟುಹೋದ ಬಾಗಿಲನ್ನೇ ನೋಡುತ್ತ ಕುಳಿತಿದ್ದೆ.

ವಾರಾಣಸಿಯ ಹಾಥರಸ ಪ್ರಕಾಶನದ ವತಿಯಿಂದ ಪ್ರಕಟವಾದ ಅಭಿನವ ಗೀತಾಂಜಲಿ ಪುಸ್ತಕ ತೆಗೆದೆ. ರಾಮಾಶ್ರಯ ರಾಮರಂಗ್ ಖಡಕ್ಕಾಗಿ ಬರೆದಿದ್ದರು.

ಸಂಗೀತದ ಹೆಸರಿನಲ್ಲಿ ಏನೇನೋ ನಖರಾ ಮಾಡಬೇಡಿ. ಬೇಕಾದರೆ ಸರಿಯಾಗಿ, ನಿಯಮ ತಿಳಿದುಕೊಂಡು ಗುರುಮುಖೇನ ಅಭ್ಯಾಸ ಮಾಡಿ. ಇಲ್ಲವಾದರೆ ತೆಪ್ಪಗೆ ಕೂತುಗೊಳ್ಳಿ ಎಂದು ಅವರು ಕಟುವಾಗಿಯೇ ಬರೆದ ಆ ಸಾಲುಗಳನ್ನು ಮತ್ತೆ ಮತ್ತೆ ಓದಿದೆ.

ಶುದ್ಧ ಮಧ್ಯಮದಿಂದ ಪಂಚಮಕ್ಕೆ ಎಂದೂ ಬರಬಾರದು; ಕೋಮಲ ಧೈವತದಿಂದ ಪಂಚಮಕ್ಕೆ ಬರಬಾರದು; ಸೀದಾ ಶುದ್ಧ ಮಧ್ಯಮಕ್ಕೇ ಬರಬೇಕು. ಕೋಮಲ ಗಾಂಧಾರದಿಂದ ಶುದ್ಧ ಮಧ್ಯಮಕ್ಕೆ ಹೋದ ಮೇಲೆ ಪಂಚಮಕ್ಕೆ  ಹೋಗುವಂತಿಲ್ಲ. ಬೇಕಾದರೆ ಶುದ್ಧ ಮಧ್ಯಮಕ್ಕೆ ಹೋಗಿ ಅವರೋಹಣ ಮಾಡಬಹುದು…. ಕೋಮಲ ಗಾಂಧಾರದಿಂದಲೇ  ಪಂಚಮಕ್ಕೆ ಬಂದು ಆಮೇಲೆ ಕೋಮಲ ಧೈವತ. ಷಡ್ಜದಿಂದ ಕೋಮಲ ನಿಷಾದಕ್ಕೆ ಬಂದ ಕೂಡಲೇ ಕೋಮಲ ಧೈವತಕ್ಕೆ ಜಾರಿ ಷಡ್ಜಕ್ಕೆ ಮತ್ತೆ ಮೀಂಡ್ ಮಾಡುತ್ತ ಏರಬೇಕು. ಕೋಮಲ ಋಷಭದಿಂದ ಷಡ್ಜಕ್ಕೆ ಬರುವ ಬದಲು ಕೋಮಲ ನಿಷಾದ, ಕೋಮಲ ಧೈವತಕ್ಕೆ ಬಂದು ಷಡ್ಜಕ್ಕೆ ಏರುವುದೇ ಸರಿ. ಎಲ್ಲಾ ಕಡೆಯೂ ಮೀಂಡ್ ಮುಖ್ಯ. ಅದಿಲ್ಲದೇ ಹೋದರೆ ಭೈರವಿಯಲ್ಲಿ ಸಿಕ್ಕಿಕೊಳ್ಳುತ್ತೀರಿ. ಭೈರವಿ ರಾಗದ ಸ್ವರಗಳನ್ನೇ ನೀವು ಬಳಸ್ತಾ ಇದೀರಿ ಅನ್ನೋದನ್ನ ನೆನಪಿನಲ್ಲಿಡಿ. ಇದೆಲ್ಲ ಗೊತ್ತಾಗದೇ ಹೋದರೆ ಸುಮ್ಮನೆ ಇರಿ. ಸಂಗೀತವನ್ನು ಹಾಳು ಮಾಡಬೇಡಿ.

ಬಿಲಾಸನೂ ನನಗೆ ಇದನ್ನೇ ಹೇಳುತ್ತಿದ್ದ. ಬೆಳಗ್ಗೆ ಏಳದೇ ಹೋದರೆ ಈಜಲೇಬೇಡಿ. ಇದು ಒಲಿಂಪಿಕ್ಸ್ ಎಂದು ಡಜನ್ನುಗಟ್ಟಳೆ ಚಿನ್ನ ಬಾಚುತ್ತಲೇ ಇರುವ ಈಜುಗಾರ ಫೆಲ್ಪ್ಸ್ ಹೇಳಿದ್ದಾನೆ ಎಂದು ಬಿಲಾಸ ಮತ್ತೆ ಮತ್ತೆ ಉಲ್ಲೇಖಿಸಿದ್ದ.

ನಾನು ಬೆಂಗಳೂರಿಗೆ ಬಂದಿದ್ದೇನೆ. ‘ಕ್ಲಾಸಿಕಲ್ ಮ್ಯೂಸಿಕ್ ಈಗ ಮಾಸಿಕಲ್ ಮ್ಯೂಸಿಕ್ ಆಗುತ್ತಿದೆ. ಇಂಥ ಬೇಡಿಕೆಗೆ ನಾನೂ ಬಲಿಯಾಗುತ್ತಿದ್ದೇನೆ’ ಎಂದು ಅರವಿಂದ ಪಾರಿಖ್ ಹೇಳುತ್ತಿದ್ದಾರೆ. ಗುರುವಿಗೆ ಗ್ಯಾನ್, ವಿಜ್ಞಾನ್ ಇರಬೇಕು. ಶಿಷ್ಯನಿಗೆ ಡಿವೋಶನ್, ಸಿನ್ಸಿಯಾರಿಟಿ, ಲಾಯಲ್ಟಿ, ಗುರುವಿನ ಮೇಲೆ ರೆಸ್ಪೆಕ್ಟ್ ಇರಬೇಕು ಎಂದು ಅವರು ಸ್ವಾತಂತ್ರ್ಯ ದಿನದಂದು ಯಾವುದೋ ರೇಡಿಯೋದಲ್ಲಿ ಸಂದರ್ಶನ ಕೊಡುತ್ತಿದ್ದಾರೆ. ಅದನ್ನೆಲ್ಲ ನಾನು ಹೆಡ್‌ಪೋನಿನಲ್ಲಿ ಕೇಳುತ್ತಿರೋದನ್ನು ಕಂಡು ಬಿಲಾಸ ಮತ್ತೆ ನಸುನಗುತ್ತಿದ್ದಾನೆ.

ಮಿಯಾ ತಾನ್‌ಸೆನ್ ಸಮಾಧಿಯಲ್ಲಿ ಮಲಗಿಯೂ ಹಸನ್ಮುಖನಾಗಿದ್ದಾನೆ. ಕೊನೆಗೂ ಮಗ ಬಿಲಾಸಖಾನ್ ಒಂದು ಹೊಸ ರಾಗವನ್ನು ಮೂಡಿಸಿದನಲ್ಲ ಎಂಬ ಸಮಾಧಾನ. ಬಿಲಾಸಖಾನ್ ಯಾವುದೇ ಪರಿವೆ ಇಲ್ಲದೆ ಭೈರವಿಯನ್ನೇ ಅತ್ತಿತ್ತ ಬದಲಿಸಿ ಹೊಸ ರಾಗವನ್ನು ಝಳಪಿಸಿದ್ದಾನೆ. ಮುಖದಲ್ಲಿ ಅಪ್ಪನನ್ನು ಕಳೆದುಕೊಂಡ ವ್ಯಾಕುಲತೆ. ಅದೇ ಅವನಲ್ಲಿ ಈ ಏರುಪೇರು ಮೂಡಿಸಿದೆ. ಬಿಲಾಸ….. ನನ್ನ ಪ್ರಿಯ ಬಿಲಾಸ…… ಒಂದಲ್ಲ ಒಂದು ದಿನ ನಾನು ನಿನ್ನ ಹಸನ್ಮುಖತೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ನನ್ನ ಸುಖ, ದುಃಖ ಎಲ್ಲದರಲ್ಲೂ ನೀನು ಜತೆಗಿರುತ್ತೀಯ ಎಂಬ ಸೌಖ್ಯಭಾವ ನನ್ನೊಳಗಿದೆ. ಒಮ್ಮೆಯಾದರೂ ನನ್ನೊಳಗೆ ಹರಿದುಬಿಡು ಬಾ…

ಬೆಂಗಳೂರಿನಲ್ಲಿ ಮಳೆ ಹೊಯ್ಯುತ್ತಿದೆ. ಸರಭರ ವಾಹನಗಳು ಚಲಿಸುತ್ತಿವೆ. ನನ್ನ ಈ ರೂಮಿನಲ್ಲಿ ಇರುವ ಹಾಡುಗಳಿಗೆ ಭಂಗ ತರಲು ಯಾರ್‍ಯಾರೋ ಯತ್ನಿಸುತ್ತಿದ್ದಾರಾ ಅನ್ನಿಸುತ್ತಿದೆ. ಇಂಟರ್‌ನೆಟ್‌ನಲ್ಲಿ ಮತ್ತೆ ಮತ್ತೆ ಬಿಲಾಸಖಾನ್ ತೋಡಿಯನ್ನು ಹುಡುಕುತ್ತೇನೆ. ಸಿಕ್ಕಿದ್ದೇ ಪುಟಗಳು ಪುನರಾವರ್ತನೆಯಾಗುತ್ತಿವೆ.

ಈಗಲೂ ಬಿಲಾಸ ತಟಕ್ಕನೆ ಕಾಣಿಸಿಕೊಳ್ಳುತ್ತಾನೆ. ತುಂಟತನದಿಂದ ನಗುತ್ತಾನೆ.

ಇವತ್ತಷ್ಟೇ ಬಿಲಾಸ ಬಂದು ಮಂಚದ ಮೇಲೆ ಕೂತು ‘ಏನು ಇನ್ನೂ ನನ್ನ ದೋಸ್ತಿಗೆ ಫಾರ್ಮುಲಾ ಸಿಗಲಿಲ್ವಾ ?’ ಎಂದು ಕೇಳಿದ್ದ.

ನಾನು ವಿಷಾದವೂ ಅಲ್ಲದ, ಸುಖವನ್ನೂ ಕೊಡದ ನಗು ಅರಳಿಸಲು ಯತ್ನಿಸಿದೆ.

ಶಿರಸಿಗೆ ಫೋನು ಹಚ್ಚುತ್ತೇನೆ. ಕರಾವಳಿ, ಮಲೆನಾಡಿನಲ್ಲಿ ಮಳೆ ಹೊಯ್ಯುತ್ತಿದೆಯಂತೆ. ಮಂಗಳೂರಿನಲ್ಲಿ ಮಕ್ಕಳು ಕೊಚ್ಚಿಹೋಗಿದ್ದಾರಂತೆ. ವಾಟೆ ಬೆಳೆಗೆ ಹೂ ಬಂದು ಕೊಳಲಿಗೆ ಬೇಕಾದ ವಾಟೆ ಸಿಗ್ತಾನೇ ಇಲ್ಲವಂತೆ. ಫಾರೆಸ್ಟಿನವರ ಕಾಟವಂತೆ.

‘ಬಾ ಬಿಲಾಸ. ನಾವು ಶಿರಸಿಗೋ, ಹೊನ್ನಾವರಕ್ಕೋ ಹೋಗೋಣ; ಬೇಕಾದ ಬಾನ್ಸುರಿಯನ್ನು ಮಾಡಿಸಿಕೊಂಡೇ ಬರೋಣ. ಅಥವಾ ದಿಲ್ಲಿಯಲ್ಲಿ ರಾಮ್ ಅಶೀಶ್ ಮಾಡೋ ಬಾನ್ಸುರಿಗಾಗಿ ಮತ್ತೆ ದಿಲ್ಲಿಗೆ ಹೋಗುವಾ’ ಎಂದೆ.

ಬಿಲಾಸ ಕೊಡೆ ಬಿಚ್ಚಿದ. ಮಳೆಯಲ್ಲೇ ರಸ್ತೆಗಿಳಿದು ಕರಗಿಹೋದ.

ನಾನು ಬಿಲಾಸನನ್ನು ಧ್ಯಾನಿಸುತ್ತ ಬಾನ್ಸುರಿ ಎತ್ತಿಕೊಂಡೆ. ಮತ್ತೊಮ್ಮೆ ‘ಅಭಿನವ ಗೀತಾಂಜಲಿ’ಯ ಪುಟಗಳನ್ನು ತೆರೆದೆ.

ಇಪ್ಪತ್ತೇ ನಿಮಿಷಗಳಲ್ಲಿ ಬಾನ್ಸುರಿಯ ಯಾವುದೋ ಒಳಬಿಂದುವಿಗೆ ಬಿಲಾಸ ಮರಳಿದ್ದಾನೆ, ನಸುನಗುತ್ತಿದ್ದಾನೆ ಅನ್ನಿಸುತ್ತಿದೆ. ಏನು ಮಾಡಿದರೂ ಅವನನ್ನು ಮುಟ್ಟಲಾಗುತ್ತಿಲ್ಲ. ಹೊರಗೆ ಹೋಗಿ ಬಿಲಾಸನನ್ನು ಕರೆಯಲೂ ಆಗುತ್ತಿಲ್ಲ.

ನಾನು ನಡುಗಿದೆ. ಬಿಲಾಸ ಇದ್ದದ್ದೇ ನಿಜವಾಗಿದ್ದರೆ ನನ್ನ ಬೆನ್ನು ತಟ್ಟಿ ಸಮಾಧಾನ ಹೇಳುತ್ತಿದ್ದ. ಅವನೊಂದು ರಾಗವಾಗಿದ್ದಾನೆ; ಅವನೊಂದು ಭಾವವಾಗಿದ್ದಾನೆ; ಅದಕ್ಕೇ ಅವನು ಬರೀ ನಸುನಗುತ್ತಿದ್ದಾನೆ.

ನಾನು ಆ ನಸುನಗುವನ್ನು ಅರ್ಥ ಮಾಡಿಕೊಳ್ಳಲಾಗದೆ ಬಿಕ್ಕುತ್ತಿದ್ದೇನೆ.

———————–

Published in Karmaveera Deepavali issue 2008

Share.
Leave A Reply Cancel Reply
Exit mobile version