ಬೆವರು

ಹೌದಾ ಮತ್ತೆ  ಬನ್ನಿ ಇಲ್ಲಿಗೆ ಕಿತ್ತು ತಿನ್ನಬಹುದು
ಬೆವರು ಎಂದವಳ ಹಣೆ ಕೆನ್ನೆ ಗಲ್ಲಗಳಲ್ಲಿ ಹನಿ
ಸಾಲು ಒರೆಸಿದರೆ ನೀರು ಗೀರು. ಕೈಚಾಚಿದರೆ
ಗಾಜಿನ ಗೋಡೆ ದಾಟಿ ಅವರು ಇವರು ನಡೆಯುತ್ತಿರೋ
ಹೆಜ್ಜೆಗಳ ದನಿ ಮೆಲ್ಲಗೆ ಬಲಗಿವಿಯಲ್ಲಿ ತೂರಿ
ಇವ ಮಾತಾಡಿದ ಹಾಗೆ ಕಣ್ಣು ಜಾರಿ

ಕೆಳಗೆ ಕಾಲ್ಬೆರಳು ಹುಡುಕಿದ ನೆನಪು
ಇನ್ನೂರಾ ನಲ್ವತ್ತಾರು ಸೆಕೆಂಡುಗಳ ಅವಿರತ ಮಾತು
ಕತೆ ಪ್ರಶ್ನೆ ಉತ್ತರ ಎಷ್ಟಾದರೂ ಅಂಕ ಕೊಡಬಹುದು
ಪ್ರೀತಿಸುವ ಬಗೆಗೆ ಅಥವಾ ಹೀಗೊಂದು
ರಿವಾಜು ಮರೆತ ಗಳಿಗೆಗೆ ಯಾವ ಹೆಸರೂ ಪರವಾ ಇಲ್ಲ

ಗೊತ್ತಿಲ್ಲದ ಮುಖ ಕಣ್ಣು ತುಟಿಗಳ ಚಲನೆ
ಅನೂಹ್ಯ ಭಾವಗಳ ಕೈಸನ್ನೆ
ಇವ ಸುಮ್ಮನೇ ಟೇಬಲ್ಲು ಗೀಚುತ್ತಿದ್ದಾನೆ
ಕಡಿದ ಜಾಲಗಳ ಅರ್ಧ ಪರದೆಯ ಮೇಲೆ
ಕಣ್ಣಾಡಿಸುತ್ತ ಕುಳಿತಿದ್ದಾನೆ ಅವಳ ಮಾತಿಗೆ
ಬೆಲೆ ಕೊಟ್ಟು.

ಹೀಗೇ ಇರಲಿ ಬಿಡಿ ಅವರಿಬ್ಬರ ಪ್ರೀತಿ
ಸದಾ ಕಾಣದೇ ಕಂಡುಕೊಳ್ಳುವ ರೀತಿ.

೨೪.೩.೨೦೦೨
ಬೆಂಗಳೂರು

Share.
Leave A Reply Cancel Reply
Exit mobile version