ಅವರು

ಹಣೆಯಲ್ಲಿ ಸುಖದಮುದ್ರೆ ಪಡೆದವರು
ಹೇಗೆ ಅಂಗಾಂಗಗಳಲ್ಲಿ ನಗು ತುಂಬಿಕೊಂಡು
ನರಳುತ್ತಾರೆ ಹೇಗೆ ಗಂಟಲಿಗೆ
ಹೊಸ ಶಬ್ದಗಳನ್ನು ಕಲಿಸುತ್ತಾರೆ
ಜೀವಿತವನ್ನುಈಸಿಯಾಗಿ ಕಳೆಯುತ್ತಾರೆ
ನನಗೆ ವಿಸ್ಮಯವಾಗಿದೆ.

ಅವರು
ಚಂದ್ರನಿಂದ ಚಾ ತರಿಸಿಕೊಂಡರು,
ಸೂರ್ಯನಿಂದ ಮೈ ಒರೆಸಿಕೊಂಡರು.
ಸಮುದ್ರದಲ್ಲಿ ಕಾಲು ತೊಳೆದು
ನೆಲ ಹೊದ್ದು ಮಲಗಿದರು, ನಕ್ಷತ್ರಗಳಿಗೆ
ಕನಸು ಕೊಡಲು ಆಜ್ಞಾಪಿಸಿದರು.

ಜಲಚರಗಳಿಗೆ ನೋಟೀಸು ಕೊಟ್ಟು
ಬಲೆ ಬೀಸಿದರು.
ಪಶುಪಕ್ಷಿಗಳಿಗೆ ನಿಂತಲ್ಲೆ ತೀರ್ಪು ಕೊಟ್ಟು
ಗುಂಡಿಟ್ಟರು.
ಅವರವರಲ್ಲಿ ಮನಸ್ಸುಗಳನ್ನೂ
ಹಂಚಿಕೊಂಡರು, ದ್ವೇಷವನ್ನೂ ಬಿತ್ತಿಕೊಂಡರು.
ಪ್ರೀತಿಯನ್ನು ನಾಜೂಕಿನಿಂದ ಬಳಸಲು
ಮರೆತು
ನರಮನುಷ್ಯರಾದರು.

ನಾನು ನೋಡುತ್ತಿದ್ದೆ
ಬಂದವರ ಸ್ವಾಗತಿಸಿ
ಹಲ್ಲುಕಿರಿದೆ
ಅವರಿಗೆ ಯಾವುದಿಷ್ಟವೋ
ಅಷ್ಟನ್ನೂ ಕೊಟ್ಟೆ
ಹಾಗೆಂದುಕೊಂಡೆ
ನಾನು ಅವರ ದಾರಿಯಾಗಿದ್ದೆ
ನಾನು ಅವರ ಸೇತುವೆಯಾಗಿದ್ದೆ
ಗೋಡೆ ಗಡಿಯಾರ, ಕನ್ನಡಕ
ಚಿನ್ನ, ಬೆಳ್ಳಿ ವಜ್ರವಾಗಿದ್ದೆ.
ಅವರು ನೆಕ್ಕುವ ಚಮಚಾವಾಗಿದ್ದೆ
ಉಗಿದ ಪೀಕುದಾನಿಯಾಗಿದ್ದೆ.

ವಿಶಾಲ ಹೃದಯವಾದ ನಾನು
ಸೋಲುಗೆಲುವುಗಳ ಹೊತ್ತ
ಸಮರ್ಥ ಪಾಪಿಯಾಗಿ
ಬದುಕಿದೆ.

ಅವರು ಹೊರಟು ಹೋದರು
ನಾನು ಮಾತ್ರ
ಚಿರಂತನವಾಗಿ ಬೆಳಗಿದೆ.

Share.
Leave A Reply Cancel Reply
Exit mobile version