ದೇವರಾಜ್ : ಬೆಂಗಳೂರಿನ ಪ್ರಮುಖ ಹಾರ್ಟ್ ಸ್ಪಾಟ್.
ಆತ ನಾಲ್ಕು ವರ್ಷ ಕೆಂಪೇಗೌಡ ನಗರದಲ್ಲಿ ಟೋನರ್ ಮಾರಿದ. ಆಮೇಲೆ ಚಾಮರಾಜಪೇಟೆಯಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಸಹಾಯಕನಾಗಿ ದುಡಿದ. ಅದೇ ಹೊತ್ತಿಗೆ ವಿದ್ಯಾರ್ಥಿ ಚಳವಳಿಯಲ್ಲಿ ಆಸಕ್ತಿ ಹುಟ್ಟಿದ್ದರಿಂದ ರಾತ್ರಿ ಬೆಂಗಳೂರಿನ ಕಾಂಪೌಂಡ್‌ಗಳ ಮೇಲೆ ರೆಡ್ ಆಕ್ಸೈಡ್‌ನಿಂದ ಗೋಡೆಬರಹಗಳನ್ನೂ ಮಾಡಿದ. ಮಧ್ಯರಾತ್ರಿ ಚಾಮರಾಜಪೇಟೆಯ ಮಿತ್ರ ಬೇಕರಿಯಲ್ಲೋ, ಗಾಂಧಿಬಜಾರಿನ ಗಣೇಶ ಬೇಕರಿಯಲ್ಲೋ ಹಾಲು ಬ್ರೆಡ್ ಇಳಿಸಿ, ದಿನಚರಿ ಮುಗಿಸುತ್ತಿದ್ದ. ಬೇಜಾರಾದಾಗ ಇದ್ದಬದ್ದ ಚಿಲ್ಲರೆ ಹಣದಲ್ಲಿ ಸಿನೆಮಾ ನೋಡುವ ಚಟವೇ ದಿನಚರಿಯಾಗಿದ್ದ ಗೆಳೆಯರ ಜೊತೆ ಹೊಸ – ಹಳೆ ಇಂಗ್ಲಿಶ್ ಸಿನಿಮಾ ನೋಡಲು ನುಗ್ಗುತ್ತಿದ್ದ. ಬೆಳಗ್ಗೆ ಇಡ್ಲಿ ವಡೆಯಾದರೂ ಸಾಕು, ಹೇಗೋ ಈ ಬೆಂಗಳೂರಿನಲ್ಲಿ ಇದ್ದದ್ದಕ್ಕೆ ಹೊಟ್ಟೆ ತುಂಬಿಸಿಕೊಳ್ಳುವುದು; ರಾತ್ರಿ ಸೀದಾ ಮಾಗಡಿ ರಸ್ತೆಯಲ್ಲಿರೋ ಚನ್ನೇನಹಳ್ಳಿಯ ಬಸ್ಸು ಹಿಡಿಯುವುದು.
ಇದೇ ಡಿಸೆಂಬರ್ ೭ರಂದು ಆತ ಲಖ್ನೋಗೆ ಹೋಗುತ್ತಿದ್ದಾನೆ. ಡಿ. ೧೧ರಿಂದ ಅಲ್ಲಿ ನಡೆಯುವ ರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾಗವಹಿಸಲಿಕ್ಕೆ. ಮುಖ್ಯವಾಗಿ… ಕೇಂದ್ರ ಲಲಿತಕಲಾ ಅಕಾಡೆಮಿಯಿಂದ ಈ ವರ್ಷ ಘೋಷಿತವಾದ ಕೆಲವೇ ರಾಷ್ಟ್ರೀಯ ಕಲಾ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬನಾಗಿ ಸಮ್ಮಾನ ಪಡೆಯುವುದಕ್ಕೆ.
ಬಿ. ದೇವರಾಜ್ ಸಾಗಿ ಬಂದ ಹಾದಿಗೆ ಅಸಂಖ್ಯ ಬಣ್ಣಗಳಿವೆ. ಬದುಕಿನ ವರ್ಣ-ಛಾಯೆಗಳಿಗೆ, ನೆಳಲು – ಬೆಳಕುಗಳಿಗೆ, ದೇವರಾಜ್ ಪಕ್ಕಾದ ಬಗೆಯೇ ನಮ್ಮ ನಗರದ ಬದುಕಿನ ವೈರುಧ್ಯ ಮತ್ತು ವೈವಿಧ್ಯ – ಎರಡಕ್ಕೂ ನಿದರ್ಶನ.
೭೦೦೦ ಕಲಾಕೃತಿಗಳಲ್ಲಿ ಆಯ್ಕೆಯಾದದ್ದೇ ೨೫೦. ಅದರಲ್ಲೂ ರಾಷ್ಟ್ರೀಯ ಕಲಾ ಪ್ರಶಸ್ತಿಗೆ ಪಾತ್ರವಾಗಿದ್ದು ವಿವಿಧ ಮಾಧ್ಯಮಗಳ (ಪೇಂಟಿಂಗ್, ಗ್ರಾಫಿಕ್ಸ್, ಛಾಯಾಗ್ರಹಣ ಇತ್ಯಾದಿ) ಕೇವಲ ಹದಿನೈದು ಕೃತಿಗಳು. ದೇವರಾಜ್ ಇದೇ ಮೊದಲ ಸಲ ತನ್ನ ಕೃತಿಯನ್ನು ಸ್ಪರ್ಧೆಗೆ ಕಳಿಸಿದ್ದಂತೆ (ಶೀರ್ಷಿಕೆ: ಬ್ಲಾಕ್ ಎಂಡ್ ವೈಟ್ ಟೆಲಿವ
;&
#3263;ಜನ್).
`೧೯೯೩ರಲ್ಲಿ ನನ್ನ `ಸಸಿ' ಕೃತಿಗೆ ರಾಜ್ಯ ಲಲಿತಕಲಾ ಅಕಾಡೆಮಿಯ ಲಿಥೋಗ್ರಾಫ್ ವಿಭಾಗದ ಬಹುಮಾನ ಸಿಕ್ಕದಾಗಲೂ ಹೀಗೆಯೇ ಆಗಿದ್ದು: ಮೊದಲ ಸಲ ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ.' ದೇವರಾಜ್‌ಗೆ ಈ ಮೊದಲ ಸ್ಪರ್ಧೆಗಳೇ ಹೀಗೆ ಬಹುಮಾನ ತಂದುಕೊಟ್ಟಿವೆ.
ಇನ್ನೂ ಒಂದು `ಮೊದಲು' ಇಲ್ಲಿದೆ: ಈ ಎರಡೂ ಕೃತಿಗಳು ಕಪ್ಪು ಬಣ್ಣದವು. ಲಿಥೋಗ್ರಾಫ್ ಆಗಲೀ, ಪೇಂಟಿಂಗ್ ಆಗಲೀ, ಬಹುಬಣ್ಣಗಳಲ್ಲಿ ಕಾಣಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ ದೇವರಾಜ್‌ಗೆ ಯಾಕೋ ಕಪ್ಪು ತುಂಬಾ ಪ್ರಿಯ.
`ಹಾಗೇನಿಲ್ಲ. ಕೆಲ ವರ್ಷಗಳ ಹಿಂದೆ ನನ್ನ ಕಲಾಪ್ರದರ್ಶನ ಇದ್ದಾಗ ನೀವು ನೋಡಿದ್ದರೆ ನೀಲಾಕಾಶವೂ ಕೆಂಪು ಕೆಂಪಾಗಿತ್ತು. ಯಾವಾಗಲೂ ಕೆಂಪನ್ನೇ ಬಳಸುತ್ತಿದ್ದೆ. ರೆಡ್ ಆಕ್ಸೈಡ್‌ನಲ್ಲೇ ವಾಲ್ ರೈಟಿಂಗ್ ಮಾಡ್ತಿದ್ನಲ್ಲ ಹಾಗೆ. ಒಂಥರ ರೆಬೆಲ್ ಮಾನಸಿಕತೆ. ಕ್ರಾಂತಿ ಆಗಿಬಿಡಬೇಕು ಅನ್ನೋ ತಹತಹ. ಈಗ ಒಂದು ಹದಕ್ಕೆ ಬಂದಿದ್ದೇನೆ. ಪ್ರಶಸ್ತಿ ಬಂದ ಕೃತಿಯ ಮುಂದುವರಿಕೆ ಎನ್ನಬಹುದಾದ ಇನ್ನೊಂದು ಕೃತಿಯಲ್ಲಿ ಇದ್ದ ಹೆಚ್ಚುವರಿ ಬಣ್ಣಗಳನ್ನೂ ತೆಗೆದು ಕೃಷ್ಣವರ್ಣದ ಜೊತೆ ನೀಲಿ, ಹಳದಿ ಮಾತ್ರ ಬಳಸಿದ್ದೇನೆ.'
ದೇವರಾಜ್ ಕಳೆದ ಎರಡು ವರ್ಷಗಳಲ್ಲಿ ಬರೆದ ಡ್ರಾಯಿಂಗ್‌ಗಳನ್ನು ನೋಡಿದರೆ ಕಪ್ಪು ಬಣ್ಣದ ಮೇಲೆ ಇರೋ ಹಿಡಿತ ಗೊತ್ತಾಗುತ್ತದೆ. ಚಾರ್‌ಕೋಲ್, ಇಂಕ್, ಯಾವುದೇ ಇರಲಿ, ಆಯಾಮಗಳು, ಭಾವಗಳು, – ಎಲ್ಲವೂ ಸ್ಪಷ್ಟ.
`ನಾವೇನೋ ದಢಕ್ ಅಂತ ಇಲ್ಲಿಗೆ ಬಂದು ಕ್ರಾಂತಿ ಮಾತಾಡಬಹುದು. ಆದರೆ ಸಮಾಜದಲ್ಲಿ ಇಷ್ಟೆಲ್ಲ ಘಟಿಸೋದಕ್ಕೆ ಎಷ್ಟೋ ಸಮಯ ಹಿಡಿದಿರುತ್ತೆ. ಅದು ಬದಲಾಗಲೂ ಸಾಕಷ್ಟು ಸಮಯ ಬೇಕು. ಅದಕ್ಕೇ ಬಹುಶಃ ನಾನು ಹೀಗೆ ಬದಲಾಗಿದೀನಿ ಅನ್ಸುತ್ತೆ. ಇಷ್ಟಕ್ಕೂ ನೀವು ಈಗ ಕೇಳಿದ್ರಿಂದ್ಲೇ ನನಗೆ ನನ್ನ ಕೃತಿಗಳ ಬಗ್ಗೆ ಇಷ್ಟು ಹೇಳಬಹುದು ಅನ್ನುಸ್ತು. ಅದಿಲ್ಲದೆ ಹೋದರೆ ಇವನ್ನೆಲ್ಲ ಹೀಗೇ ಅಂತ ವ್ಯಾಖ್ಯಾನ ಕೊಡಕ್ಕಾಗಲ್ಲ. ಈ ವರ್ಕ್ ನೋಡಿ. ಇಲ್ಲಿ ಗೆರೆ ಎಳೆದ ಹಾಗೇ ಅಲ್ಲಲ್ಲಿ ಉಜ್ಜಿ ಒಂದು ಎಫೆಕ್ಟ್ ಕೊಡೋದಕ್ಕೆ ಪ್ರಯತ್ನಿಸಿದೇ&am
p;#3
240;ೆ.'
ಕಲಾವಿದರಿಗೆ ಅಕಡೆಮಿಕ್ ತಿಳಿವಳಿಕೆಯ ಜೊತೆಗೇ ಕೌಶಲ್ಯವೂ ಇರಬೇಕು. ಹಾಗಾದಾಗ ಬೇರೆ ಬೇರೆ ಬಗೆಯ ಪ್ಯಾಟರ್ನ್‌ಗಳು ಹೊಳೆಯುತ್ತವೆ ಎನ್ನುವ ದೇವರಾಜ್‌ಗೆ ಇಂಥದೇ ಕಲಾಪಂಥ ಎಂಬುದಿಲ್ಲ.
`ಹಿಂದೇನೋ ಪಿಕಾಸೋನಂಥ ವ್ಯಕ್ತಿಗಳೇ ಒಂದು ಕಲಾಮಾರ್ಗವಾಗಿ ಬೆಳೆದರು. ಆದರೆ ಈಗ ಅಂಥವರು ಕಡಿಮೆ. ವೈಯಕ್ತಿಕತೆಗೇ (ಇಂಡಿವಿಜುಯಲಿಸಮ್) ಹೆಚ್ಚು ಒತ್ತು. ಪೋಸ್ಟ್ ಮಾಡರ್ನಿಸಮ್‌ನ ಈ ಎರಡು ದಶಕಗಳಲ್ಲಿ ಕಲಾಮಾರ್ಗ ಆಲ್‌ಮೋಸ್ಟ್ ಪಂಥರಹಿತವಾಗಿದ್ದೇ ಈಗಿನ ಬೆಳವಣಿಗೆ.'
ಹಾಗಾದರೆ ಕಲಾಕೃತಿಯ ರಚನೆಯಲ್ಲಿ ಒಂದು ಇಮೇಜ್, ಒಂದು ಛಾಯೆ ಮನಸ್ಸಿನಲ್ಲಿ ಕೂರೋದು ಹ್ಯಾಗೆ ಎಂದು ಕೇಳಿದರೆ ದೇವರಾಜ್ ಉತ್ತರ ಇದು: `ಅನುಭವ ಇರುತ್ತಲ್ಲ, ಅದು ಎಲ್ಲೋ ಕೊರೀತಿರುತ್ತೆ. ಯಾವುದೋ ದೃಶ್ಯ ನೋಡಿದಾಗ ಅದರ ಯಾವುದೋ ಭಾಗ ನಮ್ಮನ್ನು ಹಿಡಿದಿಟ್ಟಿರುತ್ತೆ. ದೇವರಾಯನದುರ್ಗಕ್ಕೆ ಹೋದಾಗ ಭಾರೀ ಮೋಡಗಳು. ಒಂದು ಕಪ್ಪು ಮೋಡದ ಹಿಂದೆ ಬಿಳಿಮೋಡಗಳು. ಒಂದೇ ಕ್ಷಣ ಆ ಚಿತ್ರ ನನ್ನೆದುರು ಅನಾವರಣವಾಗಿತ್ತು. ನನ್ನ ಪ್ರಶಸ್ತಿವಿಜೇತ ಕೃತಿಯಲ್ಲಿ ಈ ಮೋಡವನ್ನೂ ಕಾಣಬಹುದು ಅನ್ಸುತ್ತೆ.'
`ಚಿತ್ರಕಲಾ ಪ್ರದರ್ಶನದಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಬಂದವರಿಗೆ ಕಲಾಕೃತಿಗಳು ಎಷ್ಟೇ ಮಾಡರ್ನ್ ಆಗಿದ್ದರೂ ಯಾವುದೋ ಹಂತದಲ್ಲಿ ಒಂದಷ್ಟು ಪ್ರಮಾಣದಲ್ಲಿ ಮನಸ್ಸಿಗೆ ಹತ್ತಿರವಾಗುತ್ತವೆ. ಕಲಾಕೃತಿಯಲ್ಲಿ ಇದು ಇರಲೇಬೇಕು ಅಂತ ಹುಡುಕೋರಿಗೆ ಇವೆಲ್ಲ ಸಿಗಲ್ಲ!' ಎಂಬುದು ದೇವರಾಜ್ ಅನುಭವ.
ದೇವರಾಜ್ ಸಂಗೀತಪ್ರಿಯ. ಹಾಗಂತ ರಾಗಗಳನ್ನು ಗುರುತಿಸೇ ಬಿಡುತ್ತಾರೆ ಎಂದೇನಿಲ್ಲ. ನೂರಾರು ಸಿ.ಡಿ.ಗಳಲ್ಲಿ ಹಾಡು ತುಂಬಿಟ್ಟುಕೊಂಡಿದ್ದಾರೆ. ಕಪ್ಪು ಬಿಳುಪು ಛಾಯಾಗ್ರಹಣದಲ್ಲೂ ಅವರಿಗೆ ಹೆಚ್ಚು ಆಸಕ್ತಿ. ವೃತ್ತಿಯಾಗಿ ಮ್ಯೂರಲ್‌ಗಳನ್ನು ಮಾಡಿದ್ದಾರೆ. ಈಗ ಶೇಷಾದ್ರಿಪುರಂ ಕಾಲೇಜಿನಲ್ಲಿ ಒಂದು ಮ್ಯೂರಲ್ ರಚನೆ ನಡೆದಿದೆ. ತುಮಕೂರಿನ ……. ಕಾಲೇಜಿನಲ್ಲಿ ಒಂದು ದೊಡ್ಡ ಮ್ಯೂರಲ್ ಇದೆ. ಪ್ರಶಸ್ತಿ ಪಡೆದ ಅವರ ಕೃತಿಯೇ ಆರಡಿ, ನಾಲ್ಕಡಿ ಪೇ&am
p;#3
202;ಟಿಂಗ್!
ಪಿಯುಸಿಯಲ್ಲಿ ಫೇಲಾಗಿ ಟೋನರ್ ಮಾರುವುದೇ ಜೀವನದ ಪರಮೋದ್ದೇಶವಾಗುವ ಭಯವನ್ನು ಮೆಟ್ಟಿ ಚಿತ್ರಕಲಾ ಪರಿಷತ್ತಿಗೆ ಸೇರಿದಾಗ ದೇವರಾಜ್‌ಗೆ ಗೆಳೆಯರು ನೆರವಾದರು, ಹಣ ಜೋಡಿಸಿಕೊಟ್ಟರು ; ರೇಷ್ಮೆ ಬೆಳೆಯುತ್ತಲೇ ಮಗನ ಬಗ್ಗೆ ಪುಟ್ಟ ಕನಸುಗಳನ್ನೂ ನೇಯ್ದ ಮನೆಯವರೆಲ್ಲ ಕೊಂಚ ಸಿಟ್ಟಾಗಿದ್ದೂ ಇದೆ. ಈಗ ಎಲ್ಲ ಹೊಳವಾಗಿದೆ. ಫ್ರೀಲಾನ್ಸ್ ಕಲಾವೃತ್ತಿಯಲ್ಲಿ ದೇವರಾಜ್ ಈಗ `ಸಸಿ'ಯಲ್ಲ, ವೃಕ್ಷ! ಕಟುನಿರ್ಧಾರಗಳ ಬದುಕಿನಲ್ಲಿ ದೇವರಾಜ್‌ರ ಏಕಾಂಗಿ ಬದುಕಿಗೆ ಪೂರ್ಣವಿರಾಮ ಹಾಕಿದವರು ಪತ್ನಿ ಬಿಂದು ; ಆಕೆಯೂ ಕಲಾವಿದೆ. ಬದುಕಿನ ಹೊಸ ಮಾಯೆಯಾಗಿ ಮಗ ಸಿದ್ಧಾರ್ಥ!
ಇನ್ನು ವರ್ಷದ ಅತ್ಯುತ್ತಮ ಯುವ ಕಲಾವಿದ ಪ್ರಶಸ್ತಿಯನ್ನೂ ದೇವರಾಜ್ ಪಡೆದಿದ್ದರು ಎಂಬುದೆಲ್ಲ ನಿಮ್ಮ ಕುತೂಹಲವನ್ನು ತಣಿಸಲು ಇರುವ ಒಂದಷ್ಟು ಹೆಚ್ಚುವರಿ ಮಾಹಿತಿಗಳಷ್ಟೆ. ಬೆಂಗಳೂರು ಕಂಡ ಅಪರೂಪದ ಕಲಾಜೀವಿ ದೇವರಾಜ್ ಎಂದು ಈಗ ಹೇಳಬಹುದಷ್ಟೆ?
ಮಾತುಕತೆ ಮುಗಿಸುವಷ್ಟರಲ್ಲಿ ಈ ವಾರವಷ್ಟೇ ಅಂಗೈ ಅಗಲದ ಚೌಕಗಳಲ್ಲಿ ಚಕಚಕನೆ ಮೂಡಿದ ಪೇಂಟಿಂಗ್‌ಗಳು ಕೈಗೆ ಬಂದವು. ನೀಲಿ ಕಪ್ಪು ಚಿತ್ರಗಳು.
ಬದುಕನ್ನು ಸರಳ ಬಣ್ಣಗಳಲ್ಲಿ ನೋಡುವ ದೇವರಾಜ್ ಬೆಂಗಳೂರಿನ ಪ್ರಮುಖ ಹಾರ್ಟ್ ಸ್ಪಾಟ್.