I wrote this poem as a small reaction in Apara’s blog stanzas of Madyasaara. Those poems are now a book… 

ಅಪಾರ, ನಿನ್ನ ಜೊತೆ ಕೆಲವೊಮ್ಮ್ಮೆ 

ನಾನೂ ಕೂತಿದ್ದೆ 

ಖಾಸಾ ಖಾಸ್ ಮಾತುಗಳನ್ನು ಎಗ್ಗಿಲ್ಲದೆ ಕಿರುಚುತ್ತ

ಮಾತ್ರ ಎಗ್ ಬೋಂಡಾಗಳನ್ನು ಕಚಕಚ ಜಗಿಯುತ್ತ! 

ಖಂಡವಿದೆಕೋ ಎಂದು ಕತ್ತರಿಸಿಕೊಂಡ 

ಅಂಜಲ್ ಮೀನಿನ ತುಂಡನ್ನು ಕೊಂಚ ಖಂಡಿಸುತ್ತ…..

 

ನಮ್ಮ ಜತೆ ತೂರಾಡಬಾರದೆಂದು ಕುರ್ಚಿಗಳನ್ನು 

ಮೇಜಿನ ಕಾಲುಗಳನ್ನು 

ಹುಗಿದೇ ಬಿಟ್ಟಿದ್ದರು ಆ ಬಾರಿನಲ್ಲಿ ಎಂಬುದು 

ಅಂಥ ಕತ್ತಲೆಂಬ ಬೆಳ್ಳಂಬೆಳಕಿನಲ್ಲೂ ಗೊತ್ತಾಗಿ 

ನಮಗೆ ನಗು ಬಂದಿತ್ತಲ್ಲ? 

 

ಹೊರಗೆ ಮಳೆಯೆ, ಬಿಸಿಲೆ, ವಿಷಾದದ ಬಿಸಿ ಅಲೆಯೆ

ಅಥವಾ ನಿಟ್ಟುಸಿರಿನ ಬಿರುಗಾಳಿಯೆ

ಮೌನದ ಬರಸಿಡಿಲೆ, 

ಮಾತಿಲ್ಲದ ಗರವೆ…..

ಗೊತ್ತಾಗದ ಹಾಗೆ ಬಣ್ಣ ಕಲಸಿದ ದೀಪಗಳಲ್ಲಿ 

ಹಾಗೇ ಜೋತಾಡಿದ್ದೆವು ನೆನಪುಗಳನ್ನು ಹೇಗೋ ಎಳೆದುಕೊಂಡು….

 

ಅಲ್ಲಿ ಕೆಲವರು ನಮ್ಮಂತೆಯೇ ಖಾಸಗಿಯಾಗಿ ಗೋಳಿಟ್ಟುಕೊಳ್ಳುತ್ತಿದ್ದರು

ಹೊಸ ಹೊಸ ಸ್ಕೀಮುಗಳನ್ನು ಕೆಮ್ಮುತ್ತಿದ್ದರು 

ಸಾಲ ಕೊಡೆಂದು ಗೋಗರೆಯುತ್ತಿದ್ದರು 

ಹೆಂಡತಿಯರನ್ನು ಜರೆಯುತ್ತಿದ್ದರು

ಪ್ರೇಯಸಿಯರನ್ನು ಸೀಳುತ್ತಿದ್ದರು 

ಮಾತಿನ ಕತ್ತಿ ಝಳಪಿಸುತ್ತಲೇ 

ತಮ್ಮನ್ನೇ ತಾವು ಶ್ಲಾಘಿಸಿಕೊಂಡು 

ಹಳೆ ಗ್ಲಾಸ್‌ಮೇಟ್‌ಗಳನ್ನು ಹಗೂರಾಗಿ ತಬ್ಬಿಕೊಂಡು 

ಏನೇನೋ ಸಂಬಂಧಗಳ ಕೊಲಾಜ್ ರಚಿಸಿ 

ಇಡೀ ಬಾರಿನ ಸೌಂದರ್ಯವನ್ನು 

ಎಷ್ಟೋ ಪಟ್ಟು ಹೆಚ್ಚಿಸುತ್ತಿದ್ದರು. 

ತಮ್ಮನ್ನೇ ತಾವು ಮರೆಯುವುದಲ್ಲದೆ

ಕೆಲವೊಮ್ಮೆ ತಿಂದ ಐಟಮ್ಮುಗಳ ಲೆಕ್ಕವನ್ನೂ ಮರೆತು 

ನಿರ್ಲಿಪ್ತರಾಗಿ ನಡೆಯುತ್ತಿದ್ದರು

ಟಾಯ್ಲೆಟ್ಟಿನ ಕಡೆಗೆ! 

 

ನಾವು ಕೊನೆಗೆ ವಿದಾಯ ಹೇಳುವ ಬದಲು

ಏನೋ ತೊದಲುತ್ತಿದ್ದೆವು ಎಂದು ಈಗ ನೆನಪಾಗುತ್ತಿದೆ! 

ಇರಲಿ ಬಿಡು… ನಿನ್ನ ಮದ್ಯಸಾರದಲ್ಲಿ 

ನಿನ್ನ ಚಿಂತನೆಯೆಲ್ಲ ಭಟ್ಟಿ ಇಳಿದ ಮೇಲೆ 

ನನ್ನಲ್ಲೇನೂ ಸ್ವಾರಸ್ಯ ಉಳಿದಿಲ್ಲ. 

 

ಎಲ್ಲವೂ ಡ್ರೈ

 

ಸಾರ ಇಳಿಸಿದ ಮದ್ಯವನ್ನೇ ಕುಡಿದ ಮೇಲೆ ಅದರ ಸಾರ ಏನೆಂದು 

ಒಂದಷ್ಟು ಕಟು ಬದುಕನ್ನೇ ಕಂಡ ಮೇಲೆ ಅದರೊಳಗೆ ಕಾಣುವುದೇನೆಂದು 

ಮೆಟ್ಟಿಲಿಳಿದ ಮೇಲೆ ಯಾವ ಬಸ್ ಹತ್ತಬೇಕೆಂದು, ಹತ್ತಬಾರದೆಂದು

ತಿಳಿಯುವುದ ನೀನು ಮಾತ್ರ ಬಲ್ಲೆ. 

 

ನನಗೆ ಗೊತ್ತಿರೋದಿಷ್ಟೆ: 

ಅ ಪುಸ್ತಕದಂಗಡಿಯಲ್ಲಿ ನಿನಗಾಗಿ ಕಾಯುವುದು 

ನೀನು ಬಂದ ಮೇಲೆ ನಿನ್ನ ಮಾತನ್ನು ಕಾಯುವುದು.

 

ಮದ್ಯಸಾರ ಚಿರಾಯುವಾಗಲಿ ಮೈ ಡಿಯರ್ ಫ್ರೆಂಡ್ !

Share.
Leave A Reply Cancel Reply
Exit mobile version