ಅನುಭವವೇ ನುಡಿಚಿತ್ರ

ಅನುಭವವೇ ನುಡಿಚಿತ್ರ

ಫೆಬ್ರುವರಿ ತಿಂಗಳ ಒಂದು ದಿನ. ಹಂಪಿಯಿಂದ ನನ್ನ ಮೊಬೈಲ್‌ಗೆ ಫೋನ್ ಬಂದಿದೆ. ಡೇವಿಡ್ ನೆಲ್ಸನ್ ಗಿಂಬೆಲ್ ಕರೆದಿದ್ದಾನೆ. ಮುಂದಿನ ತಿಂಗಳಿನ ಯಾವುದಾದರೂ ದಿನ ನಾನು ಹಂಪಿಗೆ ಹೋಗಬಹುದು. ಅವನ ಜೊತೆ ಹಂಪಿಯಲ್ಲಿ ತಿರುಗಬಹುದು. ನಾನು ಬಳ್ಳಾರಿಗೆ ಹೋಗಿ ಗೆಳೆಯ ಮಾಲತೀಶನನ್ನು ಕರೆದುಕೊಂಡು ಕಾರಿನಲ್ಲಿ ಹೊರಟಿದ್ದೇನೆ. ದಾರಿಯಲ್ಲಿ ಕಾರ್ಟೂನಿಸ್ಟ್ ಸೃಜನ್‌ನನ್ನೂ ಹತ್ತಿಸಿಕೊಂಡು ಭರ್ರೆಂದು ಸಾಗಿದ್ದೇವೆ. ಸಾಹಿತ್ಯ, ಕಥೆ, ಕವನ ಹೀಗೇ ಮಾತು ಸಾಗಿದೆ.
ಹಂಪಿಯಲ್ಲಿ ಗಿಂಬೆಲ್ ಡೇರೆ ಹಾಕಿದ್ದಾನೆ. ಅವನ ಫಿಯಾನ್ಸಿ , ಸಹಾಯಕಿ ಜೆಸಿಕಾ ಗ್ಲಾಸ್ ಕೈ ಕುಲುಕುತ್ತಾಳೆ. ಅವನ ಹಿರಿಯ ಸಹೋದ್ಯೋಗಿ ಗಂಭೀರವಾಗಿ ಕಂಪ್ಯೂಟರಿನಲ್ಲಿ ಟಕಾಯಿಸುತ್ತಿದ್ದಾನೆ. ನಾವು ಅಲ್ಲಿ ಫೋಲ್ಡಿಂಗ್ ಕುರ್ಚಿಗಳನ್ನು ಹಾಕಿ ಕುಳಿತಿದ್ದೇವೆ. ಗಿಂಬೆಲ್‌ಗೆ ಎಲ್ಲಿಲ್ಲದ ಉತ್ಸಾಹ. ಮಾತು ಹರಿಯುತ್ತಿದೆ. ಕೊನೆಗೆ ಸೀದಾ ಹಂಪಿಯ ನಾರ್ಥ್ ರಿಜ್ ಎಂದು ಕರೆವ ಗುಡ್ಡಸಾಲಿಗೆ ನಮ್ಮನ್ನು ಕರೆಯುತ್ತಾನೆ ಗಿಂಬೆಲ್. ಅಲ್ಲಿನ ಪ್ರತಿಯೊಂದೂ ಕಲ್ಲನ್ನೂ ಇದು ಹೀಗೆಯೇ ಬದುಕಿತ್ತು ಎಂದು ಕಥೆ ಹೇಳುತ್ತಾನೆ. ಜೆಸಿಕಾ ದೂರದಲ್ಲಿ ನಮ್ಮ ಓಡಾಟವನ್ನೇ ವಿಡಿಯೋಗ್ರಾಫ್ ಮಾಡುತ್ತಿದ್ದಾಳೆ.
ಗಿಂಬೆಲ್ ನಮಗೆ ನಾವು ಕಾಣದ ಹಂಪಿಯನ್ನು ತೋರಿಸಿದ್ದಾನೆ. ವರ್ಷಕ್ಕೆ ನಾಲ್ಕೈದು ಸಲ ಹಂಪಿಗೆ ಬಂದು ಉಳಿಯುವ, ಹಂಪಿಯ ವಿಚಿತ್ರಗಳನ್ನೆಲ್ಲ ಅನುಭವಿಸುವ ಮಾಲತೀಶನೂ ಕಾಣದ ಹಲವು ಸತ್ಯಗಳನ್ನು ಗಿಂಬೆಲ್ ಬಿಸಿಲಿನಲ್ಲಿ ತೋರಿಸಿದ್ದಾನೆ.
ನಮಗೆ ಹಂಪಿಯ ಕುರಿತು ಹೊಸ ಅನುಭವ ಆಗುತ್ತಿದೆ.
ಆಮೇಲೆ ನಾನು ಗಿಂಬೆಲ್ ಬಗ್ಗೆ ಲೇಖನ ಬರೆದಿದ್ದೇನೆ.
ಗಿಂಬೆಲ್ ಬಗ್ಗೆ ನಾನು ಇಂಟರ್‌ನೆಟ್‌ನಲ್ಲೇ ತಿಳಿದಿದ್ದೆ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಅವ ಮಾಡುತ್ತಿರೋ ಕೆಲಸಗಳನ್ನು ತಿಳಿದಿದ್ದೆ. ಜೆಸಿಕಾ ಗ್ಲಾಸ್ ಒಂದು ವಿಡಿಯೋ ಟೇಪನ್ನು ನನಗೆ ಕಳಿಸಿ ಒಂದು ವರ್ಷವೇ ಆಗಿತ್ತು. ನನ್ನಲ್ಲಿ ಗಿಂಬೆಲ್ ಸ&#3202
;&
#3254;ೋಧನೆಯ ಹಲವು ಚಿತ್ರಗಳಿದ್ದವು.
ಆದರೂ, ಹಂಪಿಯಲ್ಲಿ ಗಿಂಬೆಲ್ ಜತೆ ನಡೆದಾಗಲೇ ನನಗೆ `ಅವನ' ಅನುಭವ ಆಯಿತು.
ನುಡಿಚಿತ್ರ ಬರೆದದ್ದು ಆಮೇಲೆ. ಅದೇ `ಗಿಂಬೆಲ್ ಕಂಡ ಬಾಳು ಹಂಪಿ'.
ನೆನಪಿಡಿ, ಹಾಳು ಹಂಪಿಯಲ್ಲ, ಬಾಳು ಹಂಪಿ.

ನುಡಿಚಿತ್ರ ಎಂದರೆ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದೆ? ಯಾರಿಗೂ ಸಿಗದ ವಿಷಯ ಸಿಕ್ಕಿದ ಕೂಡಲೇ ರೋಚಕವಾಗಿ ಬರೆಯುವುದೆ? `ನಾವು ಕಂಡ' ಅಚ್ಚರಿಯನ್ನು ಭರ್ಜರಿ ಇಂಟ್ರೋದೊಂದಿಗೆ ಓದುಗರ ಎದೆಗೆ  ತೂರಿಬಿಡುವುದೆ? ಒಳ್ಳೇ ಚಿತ್ರಗಳು ಸಿಕ್ಕಿದ ಕೂಡಲೇ ಒಳ್ಳೆಯ ಶೀರ್ಷಿಕೆ ಹೊಳೆದ ಕೂಡಲೇ ಅದಕ್ಕೆ ತಕ್ಕಂತೆ ನಮ್ಮ ಮಾಹಿತಿಯನ್ನು ಪೋಣಿಸುವುದೆ?
ಎಲ್ಲವೂ ಇರಬಹುದು. ಅಥವಾ ಯಾವುದೋ ಒಂದೂ ಇರಬಹುದು. ಆದರೆ ಅನುಭವಕ್ಕೆ ದಕ್ಕಿದ ನುಡಿಚಿತ್ರದ ಹೊಳಹುಗಳೇ ಬೇರೆ. ಅದರ ಸುಖವೇ ಬೇರೆ. ಅದರ ಮಜವೇ ಬೇರೆ.
ಮಾಧ್ಯಮ ಕೇಂದ್ರದ ಕೆಲಸದಲ್ಲಿ ತೊಡಗಿರುವ ಪತ್ರಕರ್ತರ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ನರೇಂದ್ರ ರೈ ದೇರ್ಲ ಈಗ ಬರೆಯುತ್ತಿರುವುದು ಅಚ್ಚ ನೀರಿನ ಕಥೆಗಳನ್ನು. ಶಾಲೆಯೊಂದರಲ್ಲಿ ಕಂಡ ನೀರಿಂಗಿಸುವ ಪರಿಯನ್ನು ಅವರು ಅನುಭವಿಸಿ ಮಳೆಗಾಲದ ದಿನದಲ್ಲಿ ಅವರು ಬರೆವ ನುಡಿಚಿತ್ರದ ಬಿಸಿ ಎಲ್ಲ ಶಾಲೆಗಳನ್ನೂ ತಟ್ಟುತ್ತದೆ. ನದಿಜೋಡಣೆಯ ಬಗ್ಗೆ ಅವರು ಬರೆದ ಲೇಖನವೂ ಅಷ್ಟೆ. ಅವರು ಕಂಡ ನದಿಗಳ ಬಗ್ಗೆ ಮಾತ್ರವೇ ಬರೆದಿದ್ದಾರೆ. ದೇಶದ ನದಿಜೋಡಣೆಯ ಅಂಕಿಅಂಶಗಳನ್ನು `ತುರುಕುವ' ಕೆಲಸ ಮಾಡಿಲ್ಲ.
ಶಿವಾನಂದ ಕಳವೆಯವರೂ ಅಷ್ಟೆ. ಅವರಿಗೂ ನೀರೇ ಅನುಭವ. ಹಾಗೇ ಕಾಡಿನ ಝೇಂಕಾರಗಳನ್ನೆಲ್ಲ ಮೊದಲು ಅನುಭವಿಸುತ್ತಾರೆ. ಆಮೇಲೆ ಅವನ್ನೆಲ್ಲ ವರ್ಗೀಕರಿಸಿ ಬರೆಯುತ್ತಾರೆ. ಅವರ ಅನುಭವವೇ ಮುದ್ರಿತ ಹಾಳೆಗಳಿಂದ ಎದ್ದುಬಂದು ನಮ್ಮನ್ನು ತಟ್ಟುತ್ತದೆ.
`ಶ್ರೀ` ಪಡ್ರೆಯವರಂತೂ ನೀರಿನಲ್ಲೇ ಮುಳುಗಿಹೋಗಿದ್ದಾರೆ. ಅಲ್ಲಿ ಅವರು ಅನುಭವದ ಹವಳಗಳನ್ನೇ ಎತ್ತಿ ತರುತ್ತಿದ್ದಾರೆ.ಅವರ ಅನುಭವದ ಹನಿಗಳು ನಮಗೆ. ಅವನ್ನು ಸಂಗ್ರಹಿಸಲು ಅವರು ಅನುಭವಿಸಿದ ಪಾಡು ಮಾತ್ರ ಅವರಿಗೇ!
ಯಾಕೆ ನೀರು ಈಗ

`ಅನುಭವ'ವಾಗಿದೆ? ಸರಳ. ಇವರೆಲ್ಲರಿಗೂ ನೀರಿನ ಬಿಸಿ ತಟ್ಟಿದೆ. ಮುಂದಿನ ದಿನಗಳ ಸಂಭಾವ್ಯ ಅನುಭವ ಅವರ ಕಣ್ಣ ಮುಂದಿದೆ. ಅನುಭವವೇ ನುಡಿಚಿತ್ರ ಅಲ್ಲವೇ ಎಂದು ಅವರನ್ನೇ ಕೇಳಿನೋಡಿ.

ನನ್ನ ಅನುಭವವೂ ಇದೇ. ಸಿಂಧನೂರಿನ ನೀರಿನ ಸಮಸ್ಯೆಯ ನುಡಿಚಿತ್ರ (ಸುಧಾ) ಬರೆಯುವ ಮುನ್ನ, ಆರು ತಿಂಗಳುಗಳಿಂದ ನಾನು ಸಿಂಧನೂರಿಗೆ ಹೋಗಿ ಗಾಡಿ, ಬಂಡಿ, ಸೈಕಲ್ಲು, ಲೂನಾ, ಟ್ರಾಕ್ಟರ್, ಲಾರಿ,  – ಹೀಗೆ ಕಂಡ ಕಂಡ ವಾಹನಗಳಲ್ಲಿ ಕೊಡಗಳ ಜಾತ್ರೆಯ ದೃಶ್ಯಗಳನ್ನೇ ಹೀರುತ್ತ ಹೀರುತ್ತ ನಡೆಯುತ್ತಿದ್ದೆ. ಮಾಹಿತಿ ಮೂಲ ಮನೋಹರ ಮಸ್ಕಿಯವರ ಜೊತೆ ಹರಟುತ್ತಿದ್ದೆ. ಅವರ ಗೆಳೆಯರ ಜೊತೆಗೆ ಚಾ ಕುಡಿಯುತ್ತ ಚರ್ಚಿಸುತ್ತಿದ್ದೆ. ಆಮೇಲೆ ಒಂದು ದಿನ ಫೋಟೋಗ್ರಾಫರ್ ಜತೆ ಅಡ್ಡಾಡಿ ಚಿತ್ರ ತೆಗೆದಾಗ…. ಅಚ್ಚರಿ! ಅವೆಲ್ಲ ನನ್ನ ಅನುಭವಗಳನ್ನೇ ಬಿಂಬಿಸುತ್ತಿದ್ದವು. ಕ್ಯಾಮೆರಾ ಯಾರದ್ದೂ ಆಗಿರಬಹುದು. ಆದರೆ ನಮ್ಮ ಅನುಭವವನ್ನೇ ಅದರಲ್ಲೂ ಮೂಡಿಸಬಹುದು ಅನ್ನೋದಕ್ಕೆ ಇದು ಉದಾಹರಣೆ.
ರಾಜ್ಯದ ಪಾಲಿಟೆಕ್ನಿಕ್‌ಗಳ ಕಥೆ, ವ್ಯಥೆ ಬರೆಯುವಾಗ (ಸುಧಾ) ನಾನು ಹಿಂದಿನ ಮೂರು ವರ್ಷಗಳಿಂದ ಅನುಭವಿಸಿದ ಶಿಕ್ಷಣ ರಂಗದ ಬದಲಾವಣೆಗಳ ತಿಳಿವಳಿಕೆಯೇ ಪ್ರಯೋಜನಕ್ಕೆ ಬಂತು. ನನ್ನ ಮೊಟ್ಟ ಮೊದಲ ನುಡಿಚಿತ್ರ ಅದು. ಸುಧಾದಲ್ಲಿ ಮುಖಪುಟ ಲೇಖನವಾಯಿತು. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಅನುಭವಿಸುವ ನೋವು ನನ್ನ ಅನುಭವಕ್ಕೆ ದಕ್ಕಿತ್ತು. ನಾನೇ ಒಂದು ದರಿದ್ರ ವ್ಯವಸ್ಥೆಗಳ ಪಾಲಿಟೆಕ್ನಿಕ್‌ನನ್ನು ಮುಚ್ಚಿಸುವ ಸೆಕ್‌ನಲ್ಲಿ ಪಾಲ್ಗೊಂಡಿದ್ದೆ. ದೂರದ ನಾಗಾಲ್ಯಾಂಡ್‌ನಿಂದ ಬಂದ ಹುಡುಗರು ಅಳುತ್ತಿದ್ದರು. ಅವರಲ್ಲಿ ಒಬ್ಬ ದಿಮಾಪುರದವನು.
೧೯೮೯ರಲ್ಲಿ ನಾನು ಪೂರ್ವಾಂಚಲ ರಾಜ್ಯವಾದ ಮಣಿಪುರಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗಿ ಹಿಂದಿರುಗುವಾಗ ಮಧ್ಯರಾತ್ರಿ ದಿಮಾಪುರದಲ್ಲಿ ಎರಡು ತಾಸು ರೈಲಿಗೆ ಕಾಯಬೇಕಿತ್ತು. ಸೀದಾ ಈ ಹುಡುಗನ ಮನೆ ಹುಡುಕಿಕೊಂಡು ಹೋದೆ. ನಡುರಾತ್ರಿ ನನ್ನನ್ನು ಕಂಡು ಬೆಚ್ಚಿಬಿದ್ದ ಆತ ಕೊನೆಗೆ ಬೈಕಿನಲ್ಲಿ ದಿಮಾಪುರವನ್ನು ಸುತ್&
amp;
#3236;ಿಸಿದ. ಮತ್ತೆ ಮತ್ತೆ ನನ್ನ ಕೈ ಹಿಡಿದು ಪ್ರೀತಿಯ ಬುಗ್ಗೆ ಚಿಮ್ಮಿಸಿದ. ಇರು, ನಾಗಾಲ್ಯಾಂಡ್ ಸುತ್ತೋಣ ಎಂದ.
ಇದು ಅನುಭವ. ಇದು ನುಡಿಚಿತ್ರ.
ಮಣಿಪುರಕ್ಕೆ ಹೋಗಿ ಬಂದಮೇಲೆ ಅದೇ ಅನುಭವಗಳನ್ನೇನೂ ಬರೆಯಲಿಲ್ಲ. ಅಲ್ಲಿ ಹೆರಾಯಿನ್ ಕಳ್ಳಸಾಗಾಣಿಕೆದಾರರನ್ನೇ ಭೇಟಿಯಾಗಿ ಬಂದರೂ ಈವರೆಗೂ ಆ ಬಗ್ಗೆ ಬರೆದಿಲ್ಲ. ಯಾಕೋ ಇನ್ನೂ ಅನುಭವ ಆಗಬೇಕು ಅನ್ನಿಸಿದೆ.
ಹದಿನಾಲ್ಕು ವರ್ಷಗಳಿಂದ ಆ ನುಡಿಚಿತ್ರ ಅನುಭವಕ್ಕಾಗಿ ಕಾಯುತ್ತಿದೆ. ಬಂದಕೂಡಲೇ ಬರೆದ ನುಡಿಚಿತ್ರ ಈಗಲೂ ನನ್ನ ಕಡತದಲ್ಲಿದೆ.
ನನ್ನ ಗೆಳೆಯ ದೇವಯ್ಯ (ಕರ್ಮವೀರ) ಕಲಾವಿದ. ನನಗೆ ಸುಮಾರು ೧೯೮೫ರಿಂದ ಪರಿಚಯ. ಅವನ ವ್ಯಕ್ತಿಚಿತ್ರ ಬರೆದದ್ದು ೧೯೯೩ರಲ್ಲಿ. ಪುಟ್ಟ ಲೇಖನ. ಅವನ ಬಗ್ಗೆ ಪತ್ರಿಕೆಯಲ್ಲಿ ಬಂದ ಮೊದಲನೇ ನುಡಿಚಿತ್ರ. ದೇವಯ್ಯ ಹೇಗೆ ಸ್ಕ್ರೀನ್‌ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದವ ಹೇಗೆ ಚಿತ್ರಕಲಾ ಪರಿಷತ್ತು ಸೇರಿ ಕಲಾವಿದನಾಗಿ ರಾಜ್ಯಪ್ರಶಸ್ತಿ ಪಡೆದ ಎಂದೆಲ್ಲ ನಾನು ಬರೆದದ್ದು ಅನುಭವಿಸಿಯೇ.
`ಸಂಕಲ್ಪವಿರೆ ಬೇಕೆ ಬೇರೆ ಕಾಲು?' (ಕರ್ಮವೀರ) ನುಡಿಚಿತ್ರದ ಹೀರೋ ಎಂ.ಕೆ.ಶ್ರೀಧರ್‌ರನ್ನು ನಾನು  ಪರಿಚಯ ಮಾಡಿಕೊಂಡ ೧೨ ವರ್ಷಗಳ ನಂತರ ಬರೆದೆ. ಎಷ್ಟೋ ಸಲ ಅನ್ನಿಸಿತ್ತು, ತೀರಾ ತಡವಾಯಿತು ಎಂದು. ಆದರೆ ಲೇಖನ ಪ್ರಕಟವಾದಾಗ ನನಗಂತೂ ಅನ್ನಿಸಿತು: ಇಲ್ಲ, ಈ ಅನುಭವ ಇಲ್ಲದೇ ಇದ್ದಿದ್ದರೆ ಲೇಖನ ಚೆನ್ನಾಗಿ ಬರುತ್ತಿರಲಿಲ್ಲ.
`ಬಸ್ತಾರ್ ಮಕ್ಕಳಿಗೆ ಬೆಂಗಳೂರಿನ ಸಿಂಪ್ಯೂಟರ್' (ವಿಜಯ ಕರ್ನಾಟಕ) ಕೇವಲ ಒಂದು ಆಧುನಿಕ, ಕೈಬಳಕೆಯ ಕಂಪ್ಯೂಟರ್ ಬಗೆಗಿನ ನುಡಿಚಿತ್ರವಷ್ಟೇ ಅಲ್ಲ. ಅದನ್ನು ನಾನು ಮೊದಲಿನಿಂದಲೂ ಗಮನಿಸಿದ್ದೆ. ಅದರ ಸಂಶೋಧಕ ವಿಜ್ಞಾನಿಗಳನ್ನು ಭೇಟಿಯಾಗಿದ್ದೆ. ಸಿಂಪ್ಯೂಟರ್ ಮಾರುಕಟ್ಟೆಗೆ ಬರಲು ನಾನೂ ಕೈಗೂಡಿಸಬೇಕು ಎಂದು ಓಡಾಡಿದ್ದು ನನ್ನ ಅನುಭವ. ಈಗ ಸಿಂಪ್ಯೂಟರ್ ಉಳ್ಳದವರ ಕೈಗೆಟುಕದ ಬೆಲೆಗೆ ತಯಾರಾಗುತ್ತಿದೆ ಎಂಬ ಲೇಖನವನ್ನು ಓದಿ ಸಂಕಟಪಡುತ್ತಿದ್ದೇನೆ. ತಂತ್ರಜ್ಞಾನಗಳು ಚೆನ್ನಾಗಿದ್ದರೂ ಯಾಕೆ ವಿಫಲವಾಗುತ್&
amp;
#3236;ವೆ ಎಂದು ಹತಾಶೆಯಿಂದ ಕೈ ಚೆಲ್ಲುತ್ತೇನೆ.
ಐ – ಸ್ಟೇಶನ್ ಎಂಬ ಈಮೇಲ್ ಕಳಿಸುವ `ಪುಟ್ಟ, ಅಗ್ಗದ' ಸಾಧನವನ್ನು ನನ್ನ ಗೆಳೆಯರೇ ತಯಾರಿಸಿದ್ದರು. ಅದನ್ನು ನಾನೂ ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲು ಹಲವು ತಿಂಗಳುಗಳ ಕಾಲ ಪರೀಕ್ಷಾರ್ಥ ಬಳಸಿದೆ.  ಅಷ್ಟುಹೊತ್ತಿಗೆ ನಾನು ಟೆಲಿವಿಜನ್ ಚಾನೆಲ್ ಸೇರಿದ್ದೆ. ಅಲ್ಲೂ ಒಂದು ಸುದ್ದಿ ಮಾಡಿದೆ. ಅದನ್ನು ಬ್ಯಾಂಕಿಂಗ್‌ಗೆ ಬಳಸಬಹುದು ಎಂದು ತಜ್ಞರೊಬ್ಬರನ್ನು ಕರೆದುಕೊಂಡು ಹೋಗಿ ತೋರಿಸಿ ಬೈಸಿಕೊಂಡೆ. ಕೊನೆಗೆ ಅದು ಮಾರುಕಟ್ಟೆಗೆ ಬಂತು. ವಿಫಲವಾಯಿತು. ಇಡೀ ಸಂಸ್ಥೆಯೇ ಮುಚ್ಚಿಹೋಯಿತು. ನಿಶ್ಚಿತಾರ್ಥದ ಮರುದಿನವೇ  ಅದರಲ್ಲಿದ್ದ ನನ್ನ ಗೆಳೆಯನೊಬ್ಬ ಕೆಲಸ ಕಳೆದುಕೊಂಡ. ಈ ಅನುಭವ ನನ್ನನ್ನು ತಂತ್ರಜ್ಞಾನಗಳ ಬಗ್ಗೆ ಬೆಚ್ಚಿಬೀಳುವಂತೆ ಮಾಡಿದೆ. ನುಡಿಚಿತ್ರಗಳು ಈ ಅನುಭವಗಳನ್ನು ಹೇಗೆ ಹೇಳಬಹುದು ಎಂದು ನಾನು ಯೋಚಿಸುತ್ತಿದ್ದೇನೆ.
ಕ್ಲೋನಿಂಗ್, ಪ್ರತಿಮಾನವನ ಸೃಷ್ಟಿ ಈಗ ಸುದ್ದಿ ತಾನೆ? ಅದರಲ್ಲೂ ರೇಲಿಯನ್ ಎಂಬ ಮತಪಂಥಕ್ಕೆ ಸೇರಿದವರು ಕ್ಲೋನಾಯ್ಡ್ ಎಂಬ ಸಂಸ್ಥೆ ತೆರೆದು ಐವರು ಶಿಶುಗಳು ಕ್ಲೋನಿಂಗ್ ಮೂಲಕ ಹುಟ್ಟಿವೆ ಎಂದರು. ಎಲ್ಲ ಪ್ರಮುಖ ಪತ್ರಿಕೆ,ಮ್ಯಾಗಜಿನ್‌ಗಳಲ್ಲಿ ಸುದ್ದಿ, ನುಡಿಚಿತ್ರಗಳು ಬಂದವು. ಅವೆಲ್ಲ ಸುದ್ದಿಯಾಗುವ ಒಂದು ವರ್ಷ ಮುಂಚೆಯೇ ನಾನು ಆ ಸಂಸ್ಥೆಯ ಜೊತೆ ಸಂಪರ್ಕ ಸಾಧಿಸಿದ್ದೆ. ಸಂದರ್ಶನಕ್ಕೂ ಸಜ್ಜಾಗಿದ್ದೆ. ಯಾಕೋ ಇಲ್ಲಿ ಅನುಭವ ಸಾಲದು ಎನ್ನಿಸಿತು. ಈಗ ನನಗೆ ಈ ಸಂಸ್ಥೆಯ ದಿಲ್ಲಿ ಕಚೇರಿಯ ವಿಳಾಸ ಸಿಕ್ಕಿದೆ. ಬಹುಶಃ ಆ ವ್ಯಕ್ತಿ ಬೋಗಸ್ ಎಂದು ನನ್ನ ಸುದ್ದಿಮೂಗಿಗೆ ವಾಸನೆ ಬಂದಿದೆ. ಅನುಭವ ಇನ್ನುಮುಂದಷ್ಟೇ ಅಗಬೇಕು.

ನಾನು ಅನುಭವವೇ ನುಡಿಚಿತ್ರ ಎನ್ನಲು ಇನ್ನೂ ಕಾರಣಗಳಿವೆ. ನೀವು ಒಂದು  ನುಡಿಚಿತ್ರಕ್ಕೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿದ್ದೀರಿ. ಮಾಹಿತಿ ಇದೆ. ಚಿತ್ರಗಳಿವೆ. ಸಂದರ್ಶನಗಳನ್ನು ಮಾಡಿ ಆಗಿದೆ. ಯಾವ ಪತ್ರಿಕೆಗೆ ಕಳಿಸಬೇಕು ಎಂದೂ ನಿರ್ಧರಿಸಿ ಆಗಿದೆ. ಶೀರ್ಷಿಕೆ ಸಿಕ್ಕಿದೆ. ಇಂಟ್ರೋ ತುಂಬಾ ಚ&#
3270
;ನ್ನಾಗಿ ಮೂಡಿದೆ. ನುಡಿಚಿತ್ರದ ಥೀಮ್ ಕೂಡಾ ನಿಮಗೆ ಗೊತ್ತು. ಅಂದರೆ ಈ ನುಡಿಚಿತ್ರದ ಉದ್ದಿಶ್ಯ ಏನು ಎಂಬುದನ್ನು ನೀವು ನಿರೂಪಿಸಲು ಬಲ್ಲವರು. ಇಷ್ಟಾಗಿಯೂ ಅನುಭವದ ದ್ರವ್ಯವನ್ನು ಅದರಲ್ಲಿ ತುಂಬದಿದ್ದರೆ ಅದರ ಜೀವಂತಿಕೆ ಅಷ್ಟು ಕಡಿಮೆಯಾಗುತ್ತದೆ ಅನ್ನೋದು ನನ್ನ ಅನುಭವ! ಈ ನುಡಿಚಿತ್ರದ ಮಟ್ಟಿಗೆ ನಿಮ್ಮ `ಅನುಭವ' ಏನು? ನಿಮ್ಮನ್ನು ಈ ನುಡಿಚಿತ್ರ ಭಾವುಕವಾಗಿಸಿದ ಸಂದರ್ಭ ಯಾವುದಾದರೂ ಇದೆಯೆ?
ಒಂದು ಸಿನಿಮಾ ನೋಡಿದಾಗ ಯಾವುದೋ ಭಾವ  ನಮ್ಮನ್ನು ಆವರಿಸಿಕೊಳ್ಳುತ್ತೆ. ಯಾವುದೋ ದೃಶ್ಯವನ್ನು ನೋಡಿ ನಾವು ಆರ್ದ್ರರಾಗಿರುತ್ತೇವೆ. ಮನಕಲಕುವ ಭಾವಗಳೇ ಮುಂದೆ ಯಾವುದೋ ಹೊತ್ತು ಮತ್ತೆ ಮರುಕಳಿಸಿ ನಾವು ಭಾವುಕವಾಗುತ್ತೇವೆ. ಪುಟ್ಟಣ್ಣ ಕಣಗಾಲ್ ಸಿನಿಮಾ ನೋಡಿದವರಿಗೆ ಈ ಭಾವುಕತೆ ಹೆಚ್ಚು ಅರಿವಾಗುತ್ತೆ. ಅವರು ಪ್ರೇಕ್ಷಕರಲ್ಲಿ ಮೂಡಿಸುವ ಭಾವ ಎಲ್ಲಿತ್ತು? ಖಂಡಿತ ಅವರಲ್ಲಿತ್ತು. ಅದನ್ನೇ ಅವರು ನಮಗೂ ದಾಟಿಸಿದರು.
ರಜತ ಪರದೆಯ ಮೇಲೆ ಚಲಿಸುವ ದೃಶ್ಯಗಳು ಉಂಟುಮಾಡುವ ಪ್ರಭಾವವನ್ನೇ ನುಡಿಚಿತ್ರಗಳು ಉಂಟುಮಾಡಬೇಕು ಎಂದು ನಾನು ಅಪೇಕ್ಷಿಸುವುದು ಮಹತ್ತ್ವಾಕಾಂಕ್ಷೆಯ ಮಾತಿರಬಹುದು. ಆದರೆ ಅದು ಸಾಧ್ಯವೂ ಹೌದು.

ನೀವು ಬರೆದ ನುಡಿಚಿತ್ರದ ಬಗ್ಗೆ ನಿಮ್ಮದೊಂದು `ನಿಲುವು' ಇದೆಯೆ?
ಪತ್ರಕರ್ತನಿಗೆ ನಿಲುವು ಇರಬಾರದು ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ನಮಗೆ ದಕ್ಕಿದ ಮಾಹಿತಿಗಳ ಆಧಾರದಲ್ಲಿ ನಾವೊಂದು ನಿಲುವು ಹೊಂದಿದರೆ ತಪ್ಪಿಲ್ಲ. ಆದರೆ ಹೊಸ ಮಾಹಿತಿ ಸಿಕ್ಕಿದಾಗ ಅದನ್ನೂ ಒಪ್ಪಿಕೊಳ್ಳುವ ಮನಸ್ಸು ನಮಗೆ ಬೇಕು ಅಷ್ಟೆ.
ಇಲ್ಲಿ ನನ್ನ ಇನ್ನೊಂದು ಅನುಭವವನ್ನೇ ಹೇಳುತ್ತೇನೆ.
ಸಿಂಧೂ ಕಣಿವೆ ನಾಗರಿಕತೆ ಗೊತ್ತಲ್ಲ, ಅಲ್ಲಿ ಸಾವಿರಾರು ಮುದ್ರಿಕೆಗಳು ಸಿಕ್ಕಿವೆ. ಅವುಗಳಲ್ಲಿ ಇರುವ ಸಂಕೇತಗಳು ಏನು? ಭಾಷೆಯೆ? ಗಣಿತವೆ? ಯಾವ ಭಾಷೆ? – ಪ್ರಶ್ನೆಗಳು ಇತಿಹಾಸಕಾರರಲ್ಲಿ ಬಿಸಿ ಬಿಸಿ ಚರ್ಚೆಯನ್ನೇ ಹುಟ್ಟಿಸಿ ದಶಕಗಳಾಗಿವೆ.
ನನಗೆ ಒಬ್ಬ ಇತಿಹಾಸಕಾರರು `ಇದು ಗಣಿತ ಶಾಸ್ತ್ರದ, ವ್ಯ&amp
;#32
62;ಪಾರದ, ಬೆಳೆಗಳ ಚಿಹ್ನೆಗಳು' ಎಂದರು. ಸರಿ, ನನ್ನ ಅನುಭವವೇ ಇಲ್ಲದ, ನಿಲುವೂ ಇಲ್ಲದ ನುಡಿಚಿತ್ರಕ್ಕಾಗಿ ಮಾಹಿತಿ ಸಂಗ್ರಹಿಸಿ ಗೆಳೆಯರೊಬ್ಬರಿಂದ ಲೇಖನ ಬರೆಸಿದೆ (ಸುಧಾ).
ಆದರೆ ೧೯೯೬ರಲ್ಲಿ ನನಗೆ ದಕ್ಕಿದ ಮಾಹಿತಿಗಳು ಬೇರೆ ಸಂಗತಿಗಳನ್ನೇ ಹೇಳಿದವು. ಸಿಂಧೂ ಮುದ್ರಿಕೆಗಳು ಸಂಸ್ಕೃತ ಭಾಷೆಯವು ಎಂದು ಪಶ್ಚಿಮ ಬಂಗಾಳದ ಪಂಡಿತ ನಟವರ್ ಝಾ  ಸಂಪೂರ್ಣ ಅಕ್ಷರ ಪಟ್ಟಿಯೊಂದಿಗೆ ಸಾಬೀತುಪಡಿಸಿದ್ದನ್ನು  ಬೆಂಗಳೂರಿನಲ್ಲಿರುವ ನವರತ್ನ ರಾಜಾರಾಮ್ ವಿವರಿಸಿದರು. ನಾನು ಈಗ ಮಾಹಿತಿಯ ಜೊತೆಗೆ ನಿಲುವನ್ನೂ ಹೊಂದಿದ್ದೆ. ಸಿಂಧೂ ನಾಗರಿಕತೆ ಬಗ್ಗೆ ಇನ್ನಷ್ಟು ಓದಿದ್ದೆ. ಹಲವು ಸಂಶೋಧನ ಲೇಖನಗಳನ್ನು ಸಂಗ್ರಹಿಸಿದ್ದೆ. ನನ್ನದೇ ಅಧ್ಯಯನದ ಅನುಭವ ಮತ್ತು ನಿಲುವುಗಳಿಂದ ನಾನು ಬದಲಾದೆ. ಮತ್ತೊಂದು ಲೇಖನ ಬರೆದೆ (ಸುಧಾ). ಒಂದು ಪುಸ್ತಕವನ್ನೂ ಬರೆದೆ.
ಇತ್ತೀಚೆಗೆ ನಾನು `ಹುಲ್ಲಿನ ಸಾರು' ಅನ್ನೋ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದೆ. ಅದರ ಲೇಖಕನನ್ನು ನಾನು ಎರಡು ವರ್ಷಗಳ ಕಾಲ ಹುಡುಕಿದ್ದು ನಿಜಕ್ಕೂ ಅನುಭವವಷ್ಟೇ ಅಲ್ಲ, ಒಂದು ನುಡಿಚಿತ್ರ. ಅದರ ಕೊನೆಯ ಭಾಗವಾಗಿ ಅವನನ್ನು ಸಂದರ್ಶಿಸುವ ಕಾಲ ಒದಗುತ್ತಿದೆ. ಖಂಡಿತ ಅವನ ಬಗ್ಗೆಯೇ ಒಂದು ನುಡಿಚಿತ್ರಬರೆಯುವ ಉತ್ಸಾಹ ನನ್ನನ್ನು ಕಾಡುತ್ತಿದೆ.

ಎಲ್ಲ ಸಲವೂ ಅನುಭವವೇ ನುಡಿಚಿತ್ರ ಆಗುವುದಿಲ್ಲ ಎಂಬುದು ನನಗೂ ಗೊತ್ತು. ಆದರೆ ಅನುಭವ ಎಂದರೆ ನನ್ನ ಹಾಗೆ ವರ್ಷಗಟ್ಟಳೆ  ಅನುಭವವೇ ಆಗಬೇಕಿಲ್ಲ. ವಾರದ ಅನುಭವವೂ ನುಡಿಚಿತ್ರವಾಗಬಹುದು. ಒಂದು ಕ್ಷಣದ ಅನುಭವವೂ ನುಡಿಚಿತ್ರವಾಗಬಹುದು.
ಈ ಅನುಭವ ನೋಡಲಿಕ್ಕೆ ಹ್ಯಾಗಿರುತ್ತೆ? ಯೋಚಿಸಿ. ನಾನೂ ನನ್ನ ಲೇಖನಗಳನ್ನು ಓದುಗರು ಹ್ಯಾಗೆ ಅನುಭವಿಸುತ್ತಾರೆ ಎಂಬ ಕಾತರದಲ್ಲಿರುತ್ತೇನೆ. ನನಗೆ ನುಡಿಚಿತ್ರದಲ್ಲಿ ಮಾಹಿತಿಗಳನ್ನು ತಿಳಿಸಿದ್ದಕ್ಕಿಂತ ನನ್ನೊಳಗಿನ ಅಭಿಮತ, ಅಭಿಪ್ರಾಯಗಳ ಒಳಗುದಿಯನ್ನು ಓದುಗರೆದುರು ಮಂಡಿಸಿದ ಸಮಾಧಾನ. 
ಹಾಗಾದರೆ ಅನುಭವ ಇಲ್ಲದೆ ನುಡಿಚಿತ್ರ ಪೂರ್ಣವಾಗುವುದಲ್ಲವ&amp
;#32
70;? ಖಂಡಿತ ಇಲ್ಲ. ಹಾಗೆ ಬರೆದ ನುಡಿಚಿತ್ರಗಳು ಸಾಮಾನ್ಯವಾಗಿ ಚರ್ವಿತಚರ್ವಣ ವ್ಯಕ್ತಿಚಿತ್ರಗಳಂತೆ (ಬಹುಮುಖ ಪ್ರತಿಭೆಯ….., ಎಲ್ಲರಂತಲ್ಲ ಇವರು, ಅಪರೂಪದ ಕಲಾವಿದ, ಎಲೆಮರೆಯ ಕಾಯಿ), ನೀರಸ ಲೇಖನಗಳಂತೆ (ಅಪರೂಪದ ಪ್ರವಾಸಿ ತಾಣ…….. , ಸುಂದರ ಪ್ರವರ್ಧಮಾನ ರಾಷ್ಟ್ರ……., ) ಕಾಣಿಸುತ್ತವೆ.
ಹಾಗಂತ ಸದರಿ ನುಡಿಚಿತ್ರದಲ್ಲಿ `ನಾನು' ಎಂದೆಲ್ಲ ಬರೆಯಬೇಕೆಂದಿಲ್ಲ. ಇಲ್ಲಿ `ನಾನು' ಬದಲಿಗೆ ಅನುಭವವೇ ಚಿತ್ರವಾಗುತ್ತದೆ. ಮೈಸೂರಿನ ದಸರಾ ಬಗ್ಗೆ ಲೇಖನ ಬರೆಯುವುದಾದರೆ ನಿಮಗೆ ಅನುಭವ ಬೇಡವೆ? ಕನಿಷ್ಠಪಕ್ಷ ಅದರ ಈಗಿನ ವೈಭವವಾದರೂ ಗೊತ್ತಿರಬೇಕು. ಹಿಂದಿನ ವೈಭವ ಬಲ್ಲವರನ್ನು ನೀವು ಕಾಣಬೇಕು. ಛಾಯಾಚಿತ್ರಗಳನ್ನು ನೀವು ಸಂಗ್ರಹಿಸಬೇಕು. ಇಷ್ಟಾಗಿಯೂ…
ಮೈಸೂರಿನ ಬಗ್ಗೆ ನಿಮ್ಮದೇ ಆದ ಅನುಭವ ಇಲ್ಲದಿದ್ದರೆ ಅದು ಪೇಲವವಾಗುತ್ತದೆ.

ಹಾಗಾದರೆ ಅನುಭವ ಹೊಂದಲಿಕ್ಕೆ ಸಮಯ ಬೇಕು. ಅದಕ್ಕಾಗಿ ಕಾಯುವವರು ಯಾರು? ಆಗ ನುಡಿಚಿತ್ರದ ಗತಿ ಏನು? ಬೇರೆಯವರು ಬರೆದುಬಿಟ್ಟರೆ?
ಹಾಗಾಗದು. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನುಡಿಚಿತ್ರ ಮೂಡಿದಾಗ ಅದರ ಚಹರೆ ವಿಭಿನ್ನವಾಗಿರುತ್ತದೆ. `ಸಿರಿಭೂವಲಯ'ದ ಬಗ್ಗೆ ಲೇಖನ ಬರೆಯಬೇಕೆಂಬ ನನ್ನ ತುಡಿತಕ್ಕೆ ಈಗಾಗಲೇ ೫೦,೦೦೦ ರೂ. ಖರ್ಚು ಮಾಡಿದ್ದೇನೆ. ಆದರೆ ಈಗ ಪ್ರಜಾವಾಣಿಯಲ್ಲೇ ಅದರ ಬಗ್ಗೆ ಮುಖ್ಯ ಲೇಖನ ಬಂದಾಯಿತು. ನನಗೆ ಬೇಜಾರಿಲ್ಲ. ನನ್ನ ಅನುಭವದ ದ್ರವ್ಯ ಹರಳುಗಟ್ಟಿ ನುಡಿಚಿತ್ರವಾದಾಗ ಖಂಡಿತ ಅದಕ್ಕೆ ಓದುಗರು ಸಿಗುತ್ತಾರೆ. ಆದರೆ ಅದನ್ನು ದಶಕಗಳ ಕಾಲ ಮುಂದೂಡಬಾರದು, ಅಷ್ಟೆ!
ನೋಡಿ, ನನ್ನ ಈವರೆಗಿನ ಮಾತುಗಳಲ್ಲಿ ಈ ನಿಲುವುಗಳನ್ನು ನೀವು ಗುರುತಿಸಬಹುದು:
೧) ನುಡಿಚಿತ್ರವೆಂದರೆ ಅನುಭವದ ಬಿಂಬ.
೨) ನುಡಿಚಿತ್ರವೆಂದರೆ ಲೇಖಕನ ಬದ್ಧತೆಯ ನಿದರ್ಶನ.
ಈ ಮೂಲಕ ನಾವು ನುಡಿಚಿತ್ರವನ್ನು ಬರೆದಾಗ ಅದು ಖಂಡಿತವಾಗಿಯೂ ಓದುಗನಿಗೂ ಅನುಭವ ನೀಡುತ್ತದೆ. ಹಾಗೆಯೇ ಅವನಲ್ಲಿ ಇರಬಹುದಾದ ಬದ್ಧತೆಯ ಅಂಶಗಳಿಗೂ ಜೀವ ಬರುತ್ತದೆ.
ಕೇವಲ ಮಾಹಿತಿಯೇ ಹೂರಣವಾದ ನುಡಿಚಿತ್ರಗಳು ತಿಳಿಸುತ್&#
3236
;ವೆ. ಕಲಿಸುವುದಿಲ್ಲ. ಬದ್ಧ, ಅನುಭವಪೂರಿತ ನುಡಿಚಿತ್ರಗಳು ಕಲಿಸುತ್ತವೆ, ಪ್ರಚೋದಿಸುತ್ತವೆ. ಅವರ ದಿನಚರಿಯನ್ನು ಬದಲಿಸಲೂಬಹುದು. ಅವರು ಬೆಳಗಾಗೆದ್ದ ಕೂಡಲೇ ಕಣ್ಣುಗಳ ಮುಂದೆ ನಿಮ್ಮ ಲೇಖನವೇ ಮೂಡಿ ಅದೇ ಅವರ ನಿಲುವುಗಳನ್ನು ಪ್ರಶ್ನಿಸಬಹುದು. ಪ್ಲಾಸ್ಟಿಕ್ ಬಳಕೆ ಕುರಿತ ಪ್ರಭಾವಿ ಲೇಖನವನ್ನು ಓದಿದವರು ಖಂಡಿತ ಹಾಲಿನ ತೊಟ್ಟೆಯನ್ನು ನೋಡುವ ಬಗೆ ಬೇರೆಯಾಗಿರುತ್ತೆ. ಹಂದಿಗೋಡು ಖಾಯಿಲೆ ಬಗ್ಗೆ, ಬೆಂಗಳೂರಿನ ಕಸಾಯಿಖಾನೆಗಳ ಬಗ್ಗೆ ನಾಗೇಶ್ ಹೆಗಡೆಯವರು ನುಡಿಚಿತ್ರ ಬರೆದಾಗ ನಮ್ಮ ಅನುಭವಕ್ಕೆ ಎಲ್ಲ ಮಾಹಿತಿಗಳೂ ಹೇಗೆ ದಕ್ಕುತ್ತವೆ ಎಂಬುದನ್ನು ಗಮನಿಸಿ. ಆ ನುಡಿಚಿತ್ರಗಳನ್ನು ನಾಗೇಶ್ ಹೆಗಡೆಯವರು ಅನುಭವಿಸದಿದ್ದರೆ ಅವು ನಮ್ಮನ್ನೂ ಹಾಗೆ ತಟ್ಟುತ್ತಿರಲಿಲ್ಲ ಎಂದೇ ನನಗನ್ನಿಸುತ್ತೆ. ಅವು ಹೀಗೆ ನನಗೆ ಅಚಾನಕವಾಗಿ ನೆನಪಾಗಿದ್ದೂ ಈ ಅನುಭವದ ಕಾರಣದಿಂದಲೇ.
ನಾನು ಗಮನಿಸಿದ ಹಾಗೆ, ಕನ್ನಡದ ದಿನಪತ್ರಿಕೆಗಳಲ್ಲಿಅನುಭವದ ದರ್ಶನವನ್ನೇ ನೀಡುವ ಲೇಖನಗಳನ್ನು ರೂಪಿಸುವ ಲೇಖಕರು ಕಡಮೆ. ಪ್ರಜಾವಾಣಿಯ `ಕರ್ನಾಟಕ ದರ್ಶನ'ದಲ್ಲಿ ಬರುವ ಎಷ್ಟೋ ಲೇಖನಗಳು ನಾಗೇಶ್ ಹೆಗಡೆಯವರ ಅನುಭವದ ಹರಳುಗಳನ್ನು ಪೋಣಿಸಿಕೊಳ್ಳುತ್ತವೆ ಎಂಬುದು ರಹಸ್ಯವಾಗಿರಬೇಕಿಲ್ಲ. ಅವರ ನುಡಿಚಿತ್ರದ ಹಾದಿಯನ್ನು ಅನುಸರಿಸುವುದು ತಪ್ಪೂ ಅಲ್ಲ. ಆದರೆ ಕ್ರಮೇಣ ಸ್ವಂತಿಕೆಯನ್ನು ರೂಢಿಸಿಕೊಳ್ಳುವುದನ್ನು ಮರೆಯಬಾರದು. ಹಾಗೆ ಮರೆತರೆ ನಿಮ್ಮ ಅನುಭವಗಳು ಓದುಗರನ್ನು ತಲುಪುವುದಿಲ್ಲ.
ನುಡಿಚಿತ್ರ ಬರೆದಾಗ ಅದರ ತಕ್ಷಣದ ಪ್ರಕಟಣೆಯೇ ಪ್ರಧಾನ ಗುರಿಯಾಗಿದ್ದಾಗ ನಮಗೆ ಅನುಭವಗಳನ್ನು ದಾಖಲಿಸುವುದು ಮರೆತುಹೋಗುತ್ತದೆ. ನಾನೂ ಈ ಲೋಪಗಳಿಂದ ಹೊರತೇನೂ ಅಲ್ಲ. `ವಿಜಯ ಕರ್ನಾಟಕ'ದ ಮ್ಯಾಗಜಿನ್ ಸಂಪಾದಕನಾಗಿದ್ದಾಗ ಬರೆದ ಕೆಲವು ಲೇಖನಗಳು ಅವಸರದ್ದು ಎಂದು ನನಗೆ ಗೊತ್ತು. ಆದರೆ ಕೊನೇಪಕ್ಷ ನಮಗೆ ಈ ಅರಿವು ಇರಬೇಕು, ಅಲ್ಲವೆ? ಅಲ್ಲದೆ, ಹಾಗೆ ತುರ್ತು ಪ್ರಕಟಣೆಗೆ ಬರೆದ ಮೇಲೆ ಮತ್ತೆ ಅನುಭವದ ಮೊರೆ ಹೋಗದಿದ್ದರೆ… ನ&amp
;#32
65;ಡಿಚಿತ್ರದ ಹಾದಿ ತಪ್ಪುತ್ತದೆ.
ಪ್ರಿಯರೆ, ಈ ಕೆಳಗಿನ ಚೆಕ್‌ಲಿಸ್ಟನ್ನು ನನ್ನ ಅನುಭವದಿಂದ ತಯಾರಿಸಿದ್ದೇನೆ. ನಿಮಗೆ ಅನುಕೂಲವಾಗಬಹುದು ಎಂದು ಭಾವಿಸಿದ್ದೇನೆ:
  ನೀವು ಯಾವ ನುಡಿಚಿತ್ರ ಬರೆಯಲು ಹೊರಟಿದ್ದೀರಿ?
  ವಿಷಯದ ಪ್ರಾಥಮಿಕ ಜ್ಞಾನ. ಮಾಹಿತಿ ನಿಮ್ಮಲ್ಲಿ ಇದೆಯೆ?
  ವಿಷಯದ ಕುರಿತು ಹೆಚ್ಚಿನ ಬೆಳಕು ಚೆಲ್ಲುವವರು ಗೊತ್ತಿದ್ದಾರೆಯೆ? ಅವರು ಕೂಡಲೇ ಸಿಗುತ್ತಾರೆಯೆ?
  ವಿಷಯ ನಿಜಕ್ಕೂ ಜನಸಮುದಾಯಕ್ಕೆ ಮಾಹಿತಿಯ ಜೊತೆಗೆ ಶಿಕ್ಷಣವನ್ನೂ ನೀಡುತ್ತದೆಯೆ? ಅಂದರೆ, ನುಡಿಚಿತ್ರವು ಜನಪರ ಕಾಳಜಿಯನ್ನು ಹೊಂದಿದೆಯೆ? ಈ ಕಾಳಜಿಯನ್ನು ನೀವು ಒಪ್ಪಿದ್ದೀರ / ಒಪ್ಪುತ್ತೀರ?
  ಈ ವಿಷಯದ ಬಗ್ಗೆ ಬರೆಯುವಾಗ ನಿಮ್ಮನ್ನು ಇತರೆ ಪ್ರಶ್ನೆಗಳು ಕಾಡಿವೆಯೆ? ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದೀರ?
  ನುಡಿಚಿತ್ರದ ವಿಷಯದ ಅನುಭವ ನಿಮಗೆಷ್ಟಾಗಿದೆ? ಅದು ಭೌತಿಕ ಅನುಭವ ಆಗಿರಬಹುದು, ಅಥವಾ ಮಾನಸಿಕ ನಿಲುವಿನ ಅನುಭವವೂ ಆಗಿರಬಹುದು (ಕಸಾಯಿ ಖಾನೆ ಬಗ್ಗೆ ಲೇಖನ ಬರೆಯುವಾಗ ನೀವು ಮಚ್ಚು ಹಿಡಿದೇ ಅನುಭ ಪಡೆಯಬೇಕೆಂದಿಲ್ಲ. ಅಲ್ಲಿಗೆ ಹೋದಾಗ ಆಗುವ ಅನುಭವವೇ ಸಾಕು. ಅಥವಾ ವಿದ್ಯುತ್ ಚಿತಾಗಾರದಲ್ಲಿ ನೀವೇನೂ ಶವ ದಹನದ ಸ್ವಿಚ್ ಅದುಮಬೇಕಿಲ್ಲ.).
  ನುಡಿಚಿತ್ರದ ಆಶಯವನ್ನು ಬಿಂಬಿಸುವ ಚಿತ್ರಗಳನ್ನು ಸಂಗ್ರಹಿಸಿದ್ದೀರ? ಅಥವಾ ನೀವೇ ಸ್ವತಃ ಕ್ಲಿಕ್ಕಿಸಿದ್ದೀರ?
  ನುಡಿಚಿತ್ರವು ಒಟ್ಟಾರೆಯಾಗಿ ಕಟ್ಟಿಕೊಡುವ ಅನುಭವ ಏನಾಗಿರಬೇಕು ಎಂದು ನಿಮಗನ್ನಿಸಿದೆ? ಅದನ್ನು ನಿರೂಪಿಸುವ ಬಗೆಯ ಬಗ್ಗೆ ನಿರ್ಧರಿಸಿದ್ದೀರ? ನೆನಪಿಡಿ: ಇದು ನಿಮ್ಮ ನುಡಿಚಿತ್ರದ ವಿಷಯದ ನಿರೂಪಣೆ ಮತ್ತು ನಿಲುವಿನ ಪ್ರತಿಪಾದನೆ ಮಾತ್ರವಲ್ಲ, ಓದುಗರ ಮನಸ್ಸಿನಲ್ಲಿ ಕೊಟ್ಟಕೊನೆಯದಾಗಿ ಉಳಿಯುವ ಅನುಭವ.
  ನುಡಿಚಿತ್ರ ಬರೆದ ನಂತರವೂ ಆ ಬಗ್ಗೆ ಅನುವರ್ತನೆ (ಪಾಲೋ ಅಪ್) ಮಾಡುತ್ತಿದ್ದೀರ? ನಿಮ್ಮ ಅನುಭವ ಬದಲಾಗುತ್ತಿದೆಯೆ?
  ನುಡಿಚಿತ್ರ ಬರೆಯಲು ತೆಗೆದುಕೊಂಡ ಕಾಲಾವಧಿ ಎಷ್ಟು ಎಂದು ಲೆಕ್ಕ ಇಟ್ಟಿದ್ದೀರ? ಹಾ&amp
;#32
23;ೆಯೇ ಅದಕ್ಕೆ ತಗುಲಿದ ವೆಚ್ಚದ ಲೆಕ್ಕ ಹಾಕಿದ್ದೀರ? ನೆನಪಿಡಿ: ನೀವು ಮಾಡಿದ ಖರ್ಚಿಗೂ, ನಿಮಗೆ ಅಕಸ್ಮಾತ್ ಬರಬಹುದಾದ ಸಂಭಾವನೆಗೂ ಸಂಬಂಧಕಲ್ಪಿಸುವುದು ಆರಂಭಿಕ ಹಂತದಲ್ಲಂತೂ ತುಂಬಾ ಕಷ್ಟ.
ಅನುಭವ, ಮಾಹಿತಿಯ ಆಧಾರದಲ್ಲಿ ನುಡಿಚಿತ್ರ ಬರೆದ ಹಾಗೆಲ್ಲ ನಮ್ಮ ಮಾಹಿತಿ ವಿಸ್ತಾರವಾಗುತ್ತದೆ. ನಾವು ಪಡೆಯಬೇಕಾದ ಮಾಹಿತಿಯ ಪ್ರಮಾಣ ಹೆಚ್ಚುತ್ತದೆ. ಹಾಗೆಯೇ ನಮ್ಮ ಸಮಯ ಸಂಕುಚಿತವಾಗುತ್ತದೆ. ಅವಸರದಲ್ಲಿ ಕೆಲಸ ಮಾಡಬೇಕಾದ ಒತ್ತಡ ಹುಟ್ಟುತ್ತದೆ. ಇಷ್ಟಾಗಿಯೂ ನೀವು ಅನುಭವವನ್ನು ಹಾಗೆಯೇ ಓದುಗರಿಗೆ ದಾಟಿಸಿದಿರಿ ಎಂದರೆ,
ಅಭಿನಂದನೆಗಳು!

(ಮುಗಿಯಿತು)

Share.

1 Comment

  1. Sudhindra Gargesa on

    ಶ್ರೀ ಸುದರ್ಶನ್ ಅವರೇ, ನನಗೆ ಈ ಸಿರಿಭೂವಲಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ತಮ್ಮ ಬಳಿ ಇರುವ ಮಾಹಿತಿಯನ್ನು ಷೇರ್ ಮಾಡಲು ಸಾಧ್ಯವೇ. ತಮ್ಮನ್ನು ಸಂಪರ್ಕಿಸುವುದು ಹೇಗೆ?
    ಗಾರ್ಗೇಶ, ಬೆಂಗಳೂರು

Leave A Reply Cancel Reply
Exit mobile version