ಅಳಿದ ಮೇಲೆ

ಅಳಿದ ಮೇಲೆ ಅಳುವವರು ಹೆಣಕ್ಕೆ
ಬೋರ್ ಹೊಡೆಸುವರು ; ಒಳಗೆ ನಿತ್ರಾಣ ಕೂಸುಮರಿ
ಮೊಟ್ಟೆಯಾಗುವುದು

ಅಳಿದ ಮೇಲೆ ಬೂದಿ ನೀರಿಗೆ ಚೆಲ್ಲಿ
ಕರಗುವಿಕೆಯ ಟೆಸ್ಟ್ ಮಾಡುವರು (ಬೂದಿ
ಒಳಗೆ ನಾಟಕ ಮಾಡಿ ಹೊರಗೆ ನೆನೆಯುವುದು)

ಅಳಿದ ಮೇಲೆ ಮಂಚ ಮೇಲುಹಾಸಿಗೆಗಳ
ಕಾದಿರಿಸುವರು, ಹಾಫ್‌ಲೈಫ್ ಪೀರಿಯಡ್
ಮೊಳಗುವುದು, ಯಾರಿಗೂ ಕೇಳಿಸದು

ಅಳಿದ ಮೇಲೆ ಅವರವರ ಹಣೆಗೆ ಅವರೇ
ಕೈ ಹಚ್ಚುವರು, ಚಚ್ಚುವರು. ನೆನಪುಗಳು ಪಡ್ಚವಾಗದೆ
ನೆರಿಗೆಗಳಾಗುವವು.

ಅಳಿದ ಮೇಲೆ ಕೆಲವರು ಕೆಲವರಿಗೆ
ಪ್ರತಿಷ್ಠಾನದ ಕೆಲಸ ಕೊಡಿಸುವರು. ತದನಂತರದಲ್ಲಿ
ಪ್ಯೂರ್ ಮಾರ್ಬಲ್ ವಿಗ್ರಹವಾಗುವರು.

ಅಳಿದ ಮೇಲೆ ಬಡಬೋರೇಗೌಡ ತನ್ನ
ಹೈದರಿಗೆ ಚಳಿ ಬಿಡಿಸುವನು. ಅವರು ತನ್ಮಯರಾಗಿ
ಜೀತದ ಬಳ್ಳಿಗೆ ದಿನಾಲು ನೀರೆರೆಯುವರು.

ಅಳಿದ ಮೇಲೆ ಪುಸ್ತಕಗಳಲ್ಲಿ ಅಚ್ಚಾಗುವ,
ಅಳಿದ ಮೇಲೆ ಪಾಣಿ ಪತ್ರಗಳಲ್ಲಿ ರಿಕಾರ್ಡಾಗುವ,
ಅಳಿದ ಮೇಲೆ ಅಳಿಸಿಯೇ ಹೋಗುವ
ಜನರಿದ್ದಾರೆನ್ನುವುದು ಅಳಿದಷ್ಟೇ ಸತ್ಯ.
ಕಾಲವೂ ಅಳಿಯುವುದು.

ಆದರೆ ಪ್ರಿಯ ಅರಸಿಕ ಓದುಗ,
ಅಳಿದ ಮೇಲೆ ಜೀವಂತ ಜನ ಮಾತ್ರ
ಅಳಿಯುವುದಿಲ್ಲ ಎಂಬ ಅನುಮಾನವಿದೆ.

ಜೀವಂತಿಕೆ ಉಳಿಯುವುದು.

Share.
Leave A Reply Cancel Reply
Exit mobile version