ಅಕಿಯಾಮಾ ಆಕಾಶಯಾನ
(ಸ್ವಂತ ಸುದ್ದಿ)
೧೪-೧೨-೧೯೯೦ 
ಬೆಂಗಳೂರು

ಆಕಾಶಕ್ಕೆ ಹಾರಿದ ಅಕಿಯಾಮಾ
ಎಂಟು ದಿನ ಮಜವಾಗಿ ಸುಖ ಉಡಾಯಿಸಿದ
ಚಾ ಕುಡಿದ, ಅಂತರಿಕ್ಷದಲಿ ಆರಾಮಾಗಿ ನಿದ್ರಿಸಿದ
ಮ್ಯಾಗಜಿನ್ ಓದಿದ; ಮನಕೊವ್
ಮತ್ತು ಸ್ಟ್ರೆಕಲೊವ್ ಜತೆಗೆ
ಸಮತಾವಾದ ಹರಟಿದ ವರದಿಗಳನ್ನು
ಜಪಾನಿಗೆ ಕಳಿಸಿದ. ನೌಕೆಯಲ್ಲಿ ಯಾವ ಯಾವ
ಚಿಪ್‌ಗಳು ತನ್ನ ದೇಶದ್ದೆಂದು ಹುಡುಕಿದ
`ಸೂಪ್' ಮಾಡಿ `ಸ್ಕೂಪ್'! ಎಂದರಚಿದ
ರೇಡಿಯೋ – ದೂರದರ್ಶನಗಳಿಗೆ ಸುದ್ದಿ ಕೊಟ್ಟ.

ಭೂಮಿಯನ್ನು ನೋಡಿದ
ದೊರೆಯ ಪಟ್ಟಾಭಿಷೇಕ ಸಹಾ
ಕಣ್ಣಮೂಲೆಗೆ ಸರಿದು
ಅಮೆರಿಕಾ – ವಿಕರಾಳ ರೊಟ್ಟಿಯಂತೆ
ಡೆನ್ಮಾರ್ಕ್ – ದನದ ಹಟ್ಟಿಯಂತೆ
ಇಂಗ್ಲೆಂಡ್ – ಚದುರಿದ ಚುಕ್ಕೆಯಂತೆ
ಕೊರಿಯಾ – ತೇಲುತ್ತಿರುವ ದಿಮ್ಮಿಯಂತೆ
ಉಳಿದವುಗಳೂ ಹಾಗೆ ಹೀಗೆ ಕ್ಷುಲ್ಲಕವಾಗಿ
ವಿನಾಕಾರಣ ರಾರಾಜಿಸಿದಂತೆ
ಅಕಿಯಾಮಾ ಕೊಳವೆಯಲ್ಲಿ ನಿಟ್ಟುಸಿರಿಟ್ಟ.

“ಇಲ್ಲಿ ಸಿಗರೇಟಿಗೂ ಬರ" – ಮನಕೊವ್
ವೋಡ್ಕಾ ಹೀರಿ ಗೊಣಗಿದ
“ರಾತ್ರಿ ಹಗಲು ಒಂದೇ ಥರ,
ಎಲ್ಲೂ ಇಲ್ಲ ಒಂದೂ ಮರ"
ಸ್ಟ್ರೆಕಲೊವ್ ಬೇಸತ್ತ.
`ಮುಗಿದ ಶೀತಲ ಯುದ್ಧ'
`ಸದ್ದಾಂ ಈಗ ನಿಜ ಬುದ್ಧ'
ಎಂದೆಲ್ಲ ಗಣಕಯಂತ್ರಕ್ಕೆ ತುಂಬಿದ ನಮ್ಮ
ನಿರ್ಲಿಪ್ತ, ನಿರ್ಗುಣ ಅಕಿಯಾಮಾ
ಮತ್ತೆ ಮತ್ತೆ ಕನಸು ಗುಟುಕರಿಸುತ್ತ ಹಾರಿದ.
ನೆಲಕ್ಕಿಳಿದ ಸಹಾ.
*
ಎಂಬೀ ಮಹಾನ್ ಘಟನೆಯನ್ನು
ಅಕಿರೋ ಕುರಸಾವ ಚಲಚ್ಚಿತ್ರ ಮಾಡಿದರೆ
ಒಂದು ವಾರ ಓಡಿದರೆ
ನಾವೆಲ್ಲ ನೋಡಬಹುದು.
ಕಾಗೆ-ಗುಬ್ಬಕ್ಕರ ಬದಲಿಗೆ ತಾಜಾ
ವರ್ತಮಾನ ವಿವರಿಸಬಹುದು
ಅಲ್ವೇನ್ರೀ?

Share.
Leave A Reply Cancel Reply
Exit mobile version