ಆಘ್ರಾಣಿಸೋ ಹಾಗೆ

ಹೂವು ಮುಟ್ಟಿದ ಬೆರಳುಗಳೆ ಬಂದುಬಿಡಿ
ನನಗೆ ಬೇಕಿದೆ ನಿಮ್ಮ ಮಧುರ ಸ್ಪರ್ಶ.
ಅರಳಬೇಕಿದೆ ನಾನು ಈಗಲಾದರೂ
ಆಘ್ರಾಣಿಸೋ ಹಾಗೆ ಒಬ್ಬಳು.

ದುಗುಡ ತುಂಬಿದ ಕಣ್ಣುಗಳ ಒರೆಸುವಿರ
ನನಗೆ ಬೇಕಿದೆ ನಿಮ್ಮ ಸಹಾಯ.
ಅಳಬೇಕು ನಾನು ಜತೆಗಿರಲಿ ಸದಾ
ಸಂತೈಸೋ ಹಾಗೆ ಒಬ್ಬಳು.

ತೊಯ್ದುಹೋಗಿರೋ ನೆನಪುಗಳ ಕೊಡುವಿರಾ
ನನಗೆ ಬೇಕಿದೆ ನಿಮ್ಮ ತಂಪು ನೆಳಲು.
ಕಣ್ಣುಜ್ಜಿದರೆ ಅದೇ ಕನಸು ಮೂಡುತ್ತೆ
ಭುಜ ಹಿಡಿದ ಹಾಗೆ ಒಬ್ಬಳು.

ಆ ಕಣಿವೆಯೊಳಗೊಂದು ಹಾದಿ ಹುಡುಕಿದ್ದೇನೆ
ನನಗೆ ಹೇಳಬೇಕಿದೆ ವಿದಾಯ.
ಕೊಳಲೂದಿ ಕರೆದರೂ ಬರಲಿಲ್ಲ
ಅವಳು, ಅವಳು, ಅವಳು.

ನಿಮ್ಮ ಜೊತೆ ಅವಳ ಕಥೆ ಹೇಳಿಬಿಡುವಾಸೆ
ಅವಳ ಉಸಿರಿನ ಹಾಗೆ ನಿಶ್ಶಬ್ದವಾಗಿ.
ಕೊನೆಗೆ ಕೆರೆಗುಂಟ ನಡೆದು ಬಿಡುವೆ
ಗೊತ್ತು ಬಿಡಿ, ಜತೆಗಿಲ್ಲ ಅವಳು.

ಒಂದು ಸಲ ಗಾಳಿ ಎತ್ತಿಕೊಂಡರೆ ನನ್ನ
ಹಗುರವಾಗುವೆ ಅವಳ ಸ್ಮರಣೆಯಲ್ಲಿ
ಈ ಜನುಮವೂ ಹೀಗೆಯೇ ಕಳೆದುಹೋದರೆ
ಸಾಕು ದೇವಾ, ಬರಲಿಲ್ಲ ಅವಳು.

ಅಲ್ಲಿ ಮುಳುಗುವ ಸೂರ್ಯ ಎಷ್ಟು ಮುದ
ಕೊಡುತ್ತಾನೆ, ಗೊತ್ತಿಲ್ಲ ನಿಮಗೆ
ಅವನ ಹತ್ತಿರ ಸಾಗಿದ ಹಾಗೆ ನಾನೂ
ಬೆಳಕಾಗಿ ಕರಗುವೆ. ಇಲ್ಲಿ ಅವಳು.

Share.
Leave A Reply Cancel Reply
Exit mobile version