ನಿನ್ನ ಹುಡುಕಿದ ಮೇಲೆ
ನಿನ್ನ ಹುಡುಕಿದ ಮೇಲೆ ನನಗೆಷ್ಟೋ ಸಮಾಧಾನ.
ನನ್ನನ್ನೆ ನಾನು ಹುಡುಕಿದ ಹಾಗೆ.
ನಿನ್ನನ್ನೇ ನಿನಗೆ ತೋರಿಸಿದ ಹಾಗೆ.
ನಾನೇನಂಥ ಕನ್ನಡಿಯಲ್ಲ ಬಿಡು ಬಿಂಬ
ಕೆಲವೊಮ್ಮೆ ಮಸಕಾಗುವುದು ಸಹಜ ಕಣೆ
ನಮ್ಮೊಳಗೆ ಹೊರಗೆ ಕಾಣಿಸೋ ಧೂಳು
ಬಿಸಿಲಿಲ್ಲದೆಯೆ ಬಿದ್ದ ನೆರಳು. ಎಷ್ಟು ಸಲ
ಕಣ್ಣೊಳಗೆ ಬಿದ್ದ ಛಾಯೆಗಳಲ್ಲಿ
ಕಾಣಲೇ ಇಲ್ಲ ಅನಾಥ ನೋವು.
ನಿನ್ನ ಅಂಗೈಯಲ್ಲಿ ಕಂಡ ಗೆರೆಗಳ ಹಾಗೆ
ನಾನೂ ತಿರುಗಿದ್ದೇನೆ ಎಲ್ಲ ಕಡೆ
ಕೊನೆಗೆ ಮಸಕಾಗಿ ಹೋದ ದಾರಿಗಳ
ತುದಿಯಲ್ಲಿ ನಿಂತು ಅತ್ತಿದ್ದೂ ಇದೆ ಬಿಡು
ತೋಳಂಚಿನಿಂದ ಒರೆಸಿಕೊಂಡೇ ನಡೆದಿದ್ದೇನೆ
ಫುಟ್‌ಪಾತಿನಲ್ಲಿ ಹಗಲು,ರಾತ್ರಿ.
ನಿನ್ನ ಭುಜ ಹಿಡಿದು ನಡೆವ ಈ ಹೊತ್ತಿನಲ್ಲಿ
ಎಲ್ಲವೂ ನೆನಪಾಗಿ ವಿಷಾದದ ಮಳೆ ಹೊಳವಾಗಿ
ಅರೆ, ಎಲ್ಲಿದ್ದೀಯ ಹೇಳೆ…
ನಮಗೆ ಬೇಡ ವಿದಾಯದ ಕ್ಷಣ
ಬಾರೆ ಈ ಹೊತ್ತು ನಾವಿಬ್ಬರೂ
ಕಂಡುಕೊಳ್ಳೋಣ
ಗೊತ್ತಿಲ್ಲದೆಯೆ ಪ್ರೀತಿಸುವ ರೀತಿ.
ನಮಗೆ ಬೇಕು
ನಮ್ಮದೇ ಹೊರಳು.
2 Comments
nimma kavana super
ತುಂಬಾ ಸುಂದರ ಕವಿತೆ.. ಇಷ್ಟವಾಯಿತು.