ನತದೃಷ್ಟ ವೀರನ ಒಂದು ಕ್ಷಣ…
೨೨-೧೦-೮೮
ಬೆಂಗಳೂರು
ನಾನು ದುಃಖಿತ
ನಾಮಾಂಕಿತ ನತದೃಷ್ಟ ವೀರ.
ರಣರಂಗದಲ್ಲಿ ಏಕಾಂಗಿ
ಬಿಕ್ಕುತ್ತಿರುವ ವೀರ.
ನನ್ನ ದೇಶಪ್ರೇಮ ಅಪಾರವಾಗಿ
ಮರಕತದಂತೆ ಹೊಳೆದಿದೆ.
ನನ್ನ ಜನಾನುರಾಗದಲ್ಲಿ
ಕಾರ್ಮೋಡಗಳೂ ಮಿಂಚಾಗಿ ಸರಿದಾಡಿವೆ.
ರಕ್ತರಂಜಿತ ಕನಸುಗಳು
ಪುನರ್‌ಪ್ರಸರಣಗೊಂಡು
ನಾನೀಗ ಪ್ರಜ್ವಲಿಸಿರುವೆ
ಆದರಯ್ಯೋ…
ಅಯೋಗ್ಯ ಅಸ್ತ್ರಗಳ ದುರಂತನಾಯಕ ನಾನು…
ಅಬ್ಬರಿಸುವ ಮಂಜು
ಮುಸುಕಿರುವ
ಅನಾಥ… ಬಾನು…
ಮನೆಯಲ್ಲಿ ಅಂಗಳ ಬಿಕ್ಕುತ್ತಿದೆ
ದಾಸವಾಳ ಮುದುಡುತ್ತಿದೆ
ಕಟಾಂಜನವೇ ಕುರುಡಾಗಿದೆ
ನಾನೊಬ್ಬ ವಿಷಪೂರಿತ ಸೈನಿಕನಾಗಿ
ಬಾಗಿಲು ತಟ್ಟಿ ತಟ್ಟಿ ಕರೆದೆ :
“ಅಮ್ಮಾ… ನಿನ್ನ ಪುತ್ರ
ಅವಲಕ್ಷಣಗಳ ಮಹಾಪಾತ್ರ ಬಂದಿದ್ದಾನೆ…"
ರೇಡಿಯೋ ಕಿರುಚಿದೆ
ಬೆಕ್ಕು ಕಠೋರವಾಗಿ ದಿಟ್ಟಿಸಿದೆ
ಮೇಜಿನಲ್ಲಿ ಬೆಳಕಿನ ರುದ್ರ ನರ್ತಿಸಿದ್ದಾನೆ…
ಇಲ್ಲ… ನಾನು ಈ ಮನೆಯಲ್ಲಿ ಇರುವುದಿಲ್ಲ
ಮುಖೇಡಿಯಾಗಿ ಬರುವುದಿಲ್ಲ.
ನಾನು ದುಃಖಿತ ನಾಮಾಂಕಿತ
ಆದರೂ ಭವಿಷ್ಯತ್ತನ್ನು ಬೆಂಬಿಡದ
ಭೂತ