ಅಕ್ಕನಿಗೊಂದು ಪತ್ರ
ಗೀರಿದ್ದೀಯ ನನ್ನೆದೆಯ ತುಂಬ
ಅಕ್ಕ, ನಿನ್ನ ನೆನಪುಗಳ, ಅಲ್ಲವಾ ಹೇಳು
ಹೀರಿದ್ದೀಯ ನನ್ನ ಮೋಹಕ ಪ್ರೀತಿ ಸೆಳವುಗಳ ?
ಯಾಕೋ ನೆನಪಾಗಿ ನಿನ್ನೆದೆಯ ನೋವುಗಳು
ಯಾಕೋ ಉಸಿರಾಗಿ ನಿನ್ನ ಹಾಲ್ಗನಸುಗಳು
ಏನೋ ಬರೆದಿದ್ದೇನೆ, ಸುಮ್ಮನೇ, ನೆನಪುಗಳು
ಅಳುತ್ತೀಯ ಅಕ್ಕ ? ಬದುಕಿನ್ನೂ ಬದುಕಿದೆ !
ನಿನ್ನ ಮಾತುಗಳ, ನೋಟಗಳ ಅಷ್ಟಿಷ್ಟು ಉಂಡಿದ್ದೇನೆ
ನಿನ್ನ ಜತೆ ಕಣ್ಣುಗಳ ಕೂಡಿಸಿ ಎಳೆಹನಿಗಳುದುರಿಸಿದ್ದೇನೆ.
ನೀನು ನಕ್ಕಾಗ ಹೂವ ಚಂದವ ನೆನೆದು ನಾನೂ ನಕ್ಕಿದ್ದೇನೆ.
ಹಲವಾರು ಬಾರಿ ನೀ ಗೀರಿ ಹೋದ ನೆನಪುಗಳ
ಈಗ
ಯಾಕೋ ಗೊತ್ತಿಲ್ಲ ಅಕ್ಕಾ, ನೆನಪಿಸುತ್ತಿದ್ದೇನೆ ನಿನಗೆ.
ಮೊನ್ನೆ ಬಂದಿದ್ದಾಗ
ಹಸಿರು ಹುಲ್ಲಿನ ಮೇಲೆ
ಕಟ್ಟಿರುವೆಗಳ ಸಾಲು ಮೆಟ್ಟಿ
ನೆತ್ತಿ ಮೇಲಿನ ನೀಲಿಗಟ್ಟಿದ ಚಪ್ಪರದ ಕೆಳಗೆ
ನಿಂತು ನೀರಾಗಿದ್ದೆವು ನೆನಪಿದೆಯ ಅಕ್ಕಾ
ಮಾತು – ಕನಸುಗಳ ಅಲೆಯಲ್ಲಿ ?
ನಿನಗೆ ಏನೆಲ್ಲಾ ಹೇಳಿ ಅಳಬೇಕೆಂದಿದ್ದೆ
ನಿನ್ನಿಂದ ಏನೆಲ್ಲಾ ಕೇಳಿ ಅಳಬೇಕೆಂದಿದ್ದೆ
ಎಲ್ಲಾ ಮುಗಿದಾಗ ಅಕ್ಕಾ, ಏನೂ ಆಗಿರಲಿಲ್ಲ –
ಸ್ನೇಹ ಬೆಳೆದದ್ದು ಮತ್ತು ಮೋಹ ಮುಸುಕಿದ್ದು ಬಿಟ್ಟು.
ಕೆನೆಗಟ್ಟುತ್ತಿರುತ್ತವೆ ಆಸೆಗಳು
ನಿನ್ನ ನೆನಪಾದಾಗ ಎದೆಕಟ್ಟಿ ಉಸಿರು
ನಿಂತಂತಾಗಿ
ನೋವುಗಳ ಆಘಾತ
ನೆನಪುಗಳ ಪಾತ
ಎಲ್ಲದರ ಮಧ್ಯೆ
ಬದುಕುತ್ತಿದ್ದೇನೆ ಅಕ್ಕಾ
ನಿನ್ನ ಪ್ರೀತಿಯ ಸೆಲೆಯೊಳಗೆ
ಆಸೆ – ಒಡಲೊಳಗೆ